ಸೂರ್ಯಕುಮಾರ್ ಇನ್-ಮೂವರು ಔಟ್, ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೇಜರ್ ಸರ್ಜರಿ; ಹಾರ್ದಿಕ್ ಪಡೆಯ ಪ್ಲೇಯಿಂಗ್ ಇಲೆವೆನ್
MI vs DC: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯಕ್ಕೂ ಮುನ್ನ, ಮುಂಬೈ ಇಂಡಿಯನ್ಸ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಟಿ20 ಕ್ರಿಕೆಟ್‌ನ ನಂಬರ್ ವನ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಂಡ ಸೇರಿಕೊಂಡಿದ್ದು, ಮುಂದಿನ ಪಂದ್ಯದಲ್ಲಿ ಅಬ್ಬರಿಸುವ ಸಾಧ್ಯತೆ ಇದೆ.

ಐಪಿಎಲ್ 2024ರ ಆವೃತ್ತಿಯು ರೋಚಕವಾಗಿ ಸಾಗುತ್ತಿದೆ. ಪಂದ್ಯಾವಳಿಯಲ್ಲಿ ಏಪ್ರಿಲ್ 7ರ ಭಾನುವಾರ ಡಬಲ್ ಧಮಾಕಾ. ವಾರಾಂತ್ಯದಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (MI vs DC) ಸವಾಲು ಹಾಕಲು ಸಜ್ಜಾಗಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಎಂಐ ತಂಡವು, ಟೂರ್ನಿಯಲ್ಲಿ ಇನ್ನೂ ಜಯದ ರುಚಿ ಕಂಡಿಲ್ಲ. ಆಡಿರುವ ಮೂರೂ ಪಂದ್ಯಗಳಲ್ಲಿ ಸೋತಿರುವ ಪಾಂಡ್ಯ ಬಳಗ, ನಾಲ್ಕನೇ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳುವ ಗುರಿ ಹಾಕಿಕೊಂಡಿದೆ.
ತವರಿನ ಅಭಿಮಾನಿಗಳ ಮುಂದೆ ಆಡಿದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಗ್ಗರಿಸಿತ್ತು. ಇದೀಗ ಮತ್ತೆ ಹೊಸ ಹುರುಪಿನೊಂದಿಗೆ ಪುಟಿದೆದ್ದು ಆಡುವ ಉತ್ಸಾಹದಲ್ಲಿದೆ. ಈ ಉತ್ಸಾಹಕ್ಕೆ ಕಾರಣವೂ ಇದೆ. ವಿಶ್ವದ ನಂಬರ್ ವನ್ ಟಿ20 ಆಟಗಾರ ಸೂರ್ಯಕುಮಾರ್ ಯಾದವ್ ತಂಡಕ್ಕೆ ಮರಳಿದ್ದು, ಡೆಲ್ಲಿ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಹ್ಯಾಟ್ರಿಕ್ ಸೋಲಿನ ಬಳಿಕೆ ಮುಂಬೈಗೆ ಈ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಹೀಗಾಗಿ ಆಡುವ ಬಳಗದಲ್ಲಿ ಬದಲಾವಣೆ ಮಾಡಬೇಕಾಗಿದೆ. ತಂಡ ಸೇರಿಕೊಂಡಿರುವ ಸೂರ್ಯ, ನೇರವಾಗಿ ಆಡುವ ಬಳಗಕ್ಕೆ ಎಂಟ್ರಿ ಕೊಡಲಿದ್ದಾರೆ. ಅವರ ಆಗಮನಕ್ಕಾಗಿ ಅಭಿಮಾನಿಗಳು ಮಾತ್ರವಲ್ಲದೆ ಫ್ರಾಂಚೈಸ್ ಕೂಡಾ ಚಾತಕ ಪಕ್ಷಿಯಂತೆ ಕಾಯುತ್ತಿತ್ತು.
ಇದನ್ನೂ ಓದಿ | ಮತ್ತೊಬ್ಬ ನಟಿ ಮೇಲೆ ಕಣ್ಣಾಕಿದ ಶೋಯೆಬ್ ಮಲಿಕ್; ಹೆಂಡ್ತಿನಾ ಬಟ್ಟೆ ಚೇಂಜ್ ಮಾಡ್ದಂಗೆ ಮಾಡ್ತೀಯಲ್ಲ ಗುರು ಎಂದ ನೆಟ್ಟಿಗರು
2023ರ ಐಪಿಎಲ್ ಆವೃತ್ತಿಯಲ್ಲಿ ಆಡಿದ 16 ಪಂದ್ಯಗಳಲ್ಲಿ ಬರೋಬ್ಬರಿ 605 ರನ್ ಗಳಿಸಿದ್ದ ಸೂರ್ಯ, ಈ ಆವೃತ್ತಿಯಲ್ಲಿ ಮೊದಲ ಮೂರು ಪಂದ್ಯಗಳಿಂದ ಹೊರಬಿದ್ದಿದ್ದರು. ವಿಶ್ವದ ನಂಬರ್ 1 ಟಿ20 ಬ್ಯಾಟರ್ ಫಿಟ್‌ನೆಸ್ ಸಮಸ್ಯೆಯಿಂದಾಗಿ ತಡವಾಗ ತಂಡ ಸೇರಿಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ ಬೆಂಗಳೂರಿನ ಎನ್‌ಸಿಎ ಸೂರ್ಯ ಅವರನ್ನು ಫಿಟ್ ಎಂದು ಘೋಷಿಸಿದೆ. ಅದರ ಬೆನ್ನಲ್ಲೇ ಏಪ್ರಿಲ್ 5ರ ಶುಕ್ರವಾರ ಅವರು ತಂಡದ ಕ್ಯಾಂಪ್ ಸೇರಿಕೊಂಡಿದ್ದಾರೆ.
ಸೂರ್ಯಕುಮಾರ್ ನೇರವಾಗಿ ಆಡುವ ಬಳಗಕ್ಕೆ
ಇದೀಗ ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಸೂರ್ಯ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ಹೀಗಾಗಿ ಯುವ ಆಟಗಾರ ನಮನ್ ಧೀರ್ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಅತ್ತ ಧೀರ್ ಜೊತೆಗೆ ದಕ್ಷಿಣ ಆಫ್ರಿಕಾದ 17ರ ಹರೆಯದ ಯುವ ವೇಗಿ ಕ್ವೆನಾ ಮಫಕಾ ಕೂಡ ಆಡುವ ಬಳಗದಿಂದ ಹೊರಬೀಳುವ ಸಾಧ್ಯತೆ ಇದೆ. ಹೀಗಾಗಿ ಕಳೆದ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರರ ಪಟ್ಟಿಯಲ್ಲಿದ್ದ ನುವಾನ್ ತುಷಾರ ಆಡುವ ಸಾಧ್ಯತೆ ಇದೆ.
ಎಂದಿನಂತೆ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದರೆ, ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ತಿಲಕ್ ವರ್ಮಾ ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಟಿಮ್ ಡೇವಿಡ್ ಬದಲಿಗೆ ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಮೊಹಮ್ಮದ್ ನಬಿ ಅಥವಾ ರೊಮಾರಿಯೋ ಶೆಫರ್ಡ್ ಆಡುವ ಬಳಗ ಸೇರಿಕೊಳ್ಳುವ ಸಾಧ್ಯತೆಯೂ ಇದೆ. ಟೂರ್ನಿಯಲ್ಲಿ ನಬಿ ಇದುವರೆಗೂ ಆಡಿಲ್ಲ. ಹೀಗಾಗಿ ಡೇವಿಡ್ ಬದಲಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.
ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ
ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ನಬಿ/ರೊಮಾರಿಯೋ ಶೆಫರ್ಡ್, ಜೆರಾಲ್ಡ್ ಕೋಯೆಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ, ಆಕಾಶ್ ಮಧ್ವಾಲ್
ಇಂಪ್ಯಾಕ್ಟ್ ಆಟಗಾರರು: ಟಿಮ್ ಡೇವಿಡ್, ಡೆವಾಲ್ಡ್ ಬ್ರೆವಿಸ್, ರೊಮಾರಿಯೋ ಶೆಫರ್ಡ್/ಮೊಹಮ್ಮದ್ ನಬಿ, ಶಮ್ಸ್ ಮುಲಾನಿ, ನೆಹಾಲ್ ವಧೇರಾ.
ಐಪಿಎಲ್ 2024 ಟೀಮ್ ಸ್ಟಾಟ್
ಐಪಿಎಲ್ 2024 ಪಾಯಿಂಟ್ಸ್ ಟೇಬಲ್
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
