ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024: ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್; ವಾಂಖೆಡೆ ಮೈದಾನ ಪಿಚ್, ಹವಾಮಾನ ವರದಿ ಹೀಗಿದೆ

IPL 2024: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್; ವಾಂಖೆಡೆ ಮೈದಾನ ಪಿಚ್, ಹವಾಮಾನ ವರದಿ ಹೀಗಿದೆ

MI vs DC: ಏಪ್ರಿಲ್ 7ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದ್ದು, ಮುಂಬೈ ಹವಾಮಾನ ಹಾಗೂ ಪಿಚ್‌ ವರದಿ ಇಲ್ಲಿದೆ.

ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್
ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್

ಪ್ರಸಕ್ತ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್‌ ತಂಡವು, ತವರು ಮೈದಾನ ವಾಂಖೆಡೆ ಸ್ಟೇಡಿಯಂನಲ್ಲಿ ಗೆಲುವಿನ ರುಚಿ ನೋಡುವ ಕಾತರದಲ್ಲಿದೆ. ಮುಂಬೈನಲ್ಲಿ ಸತತ ಎರಡನೇ ಪಂದ್ಯವನ್ನಾಡಲು ಸಜ್ಜಾಗಿರುವ ಹಾರ್ದಿಕ್‌ ಪಾಂಡ್ಯ ಬಳಗವು, ಏಪ್ರಿಲ್ 7ರ ಭಾನುವಾರ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುತ್ತಿದೆ. ಐಪಿಎಲ್‌ನಲ್ಲಿ ಭಾನುವಾರ ಎರಡು ಪಂದ್ಯಗಳು ನಡೆಯುತ್ತಿದ್ದು, ಮಧ್ಯಾಹ್ನ 3:30ಕ್ಕೆ ಆರಂಭವಾಗಲಿರುವ ದಿನದ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಕಣಕ್ಕಿಳಿಯುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಟೂರ್ನಿಯಲ್ಲಿ ಮುಂಬೈ ತಂಡವು ಈವರೆಗೆ 3 ಪಂದ್ಯಗಳಲ್ಲಿ ಆಡಿದ್ದು, ಮೂರೂ ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಸೋಲು ಒಂದೆಡೆಯಾದರೆ, ನೂತನ ನಾಯಕ ಹಾರ್ದಿಕ್ ಪಾಂಡ್ಯ ಕೂಡಾ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ.

ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌, ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಆದರೂ, ಈ ಎರಡೂ ತಂಡಗಳು ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿವೆ. ಮುಂಬೈ 10ನೇ ಸ್ಥಾನದಲ್ಲಿದ್ದರೆ, ಡೆಲ್ಲಿ 9ನೇ ಸ್ಥಾನದಲ್ಲಿದೆ.

ಮುಂಬೈ vs ಡೆಲ್ಲಿ ಮುಖಾಮುಖಿ ದಾಖಲೆ

ಮುಂಬೈ ಮತ್ತು ಡೆಲ್ಲಿ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 33 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅವುಗಳಲ್ಲಿ ಎಂಐ 18 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಡಿಸಿ 15 ಪಂದ್ಯಗಳಲ್ಲಿ ಗೆದ್ದಿದೆ. ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಡೆಲ್ಲಿ ವಿರುದ್ಧ ಮುಂಬೈ ಗರಿಷ್ಠ 218 ರನ್ ಗಳಿಸಿದ್ದರೆ, ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಗಳಿಸಿದ ಗರಿಷ್ಠ ಸ್ಕೋರ್ 213 ರನ್. 2023ರ ಆವೃತ್ತಿಯಲ್ಲಿ ಉಭಯ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಮುಂಬೈ 6 ವಿಕೆಟ್‌ಗಳ ಜಯ ಸಾಧಿಸಿತ್ತು. 45 ಎಸೆತಗಳಲ್ಲಿ 65 ರನ್ ಗಳಿಸಿದ್ದ‌ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ವಾಂಖೆಡೆ ಸ್ಟೇಡಿಯಂ ಪಿಚ್ ವರದಿ

ಉತ್ತಮ ಪಿಚ್ ಹಾಗೂ ಸಣ್ಣ ಬೌಂಡರಿಗಳಿಂದಾಗಿ ವಾಂಖೆಡೆ ಮೈದಾನವು ಸಂಪ್ರದಾಯಿಕವಾಗಿ ಹೆಚ್ಚು ರನ್‌ ಗಳಿಸಬಹುದಾದ ಮೈದಾನವಾಗಿದೆ. ಇಲ್ಲಿ ಟಾಸ್ ಗೆಲ್ಲುವ ತಂಡಗಳು ಹೆಚ್ಚಾಗಿ ಮೊದಲು ಬೌಲಿಂಗ್ ಆಯ್ಕೆ ಮಾಡುತ್ತವೆ. ಇಲ್ಲಿ ಆಡಿರುವ 112 ಐಪಿಎಲ್ ಪಂದ್ಯಗಳಲ್ಲಿ 62ರಲ್ಲಿ ಚೇಸಿಂಗ್‌ ಮಾಡಿದ ತಂಡಗಳು ಗೆಲುವು ಸಾಧಿಸಿವೆ. ಈ ಮೈದಾನದಲ್ಲಿ ವೇಗಿಗಳು 70.61 ಪ್ರತಿಶತ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಪಿಚ್‌ ವೇಗಿಗಳ ಕರಾರುವಕ್‌ ದಾಳಿಗೆ ಹೇಳಿ ಮಾಡಿಸಿದಂತಿದೆ.

ಮುಂಬೈ ಹವಾಮಾನ

ಪಂದ್ಯ ಆರಂಭದ ವೇಳೆ ಮುಂಬೈನಲ್ಲಿ ತಾಪಮಾನವು ಸುಮಾರು 35 ಡಿಗ್ರಿಗಳಷ್ಟಿರುವ ಸಾಧ್ಯತೆ ಇದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಸಂಪೂರ್ಣ ಪಂದ್ಯ ನಡೆಯಲಿದೆ.

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ

ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್‌ ನಬಿ/ರೊಮಾರಿಯೋ ಶೆಫರ್ಡ್, ಜೆರಾಲ್ಡ್ ಕೋಯೆಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ, ಆಕಾಶ್ ಮಧ್ವಾಲ್.

ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ

ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಬ್ ಪಂತ್ (ನಾಯಕ ಮತ್ತು ವಿಕೆಟ್‌ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ರಸಿಖ್ ದಾರ್ ಸಲಾಂ, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

IPL_Entry_Point