ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು; ವಾಂಖೆಡೆ ಮೈದಾನ ಪಿಚ್ ಹಾಗೂ ಹವಾಮಾನ ವರದಿ
MI vs RCB: ಐಪಿಎಲ್‌ನಲ್ಲಿ ಏಪ್ರಿಲ್ 11ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಎದುರಾಗುತ್ತಿವೆ. ಉಭಯ ತಂಡಗಳು ಟೂರ್ನಿಯಲ್ಲಿ ಎರಡನೇ ಜಯದ ನಿರೀಕ್ಷೆಯಲ್ಲಿವೆ.
ಐಪಿಎಲ್ 2024ರಲ್ಲಿ (IPL 2024) ಏಪ್ರಿಲ್ 11ರ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡಗಳು ಮುಖಾಮುಖಿಯಾಗುತ್ತಿವೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಎಂಐ ತವರು ಮೈದಾನ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ತಂಡವು ಕೊನೆಯ ಪಂದ್ಯದಲ್ಲಿ ಕಂಡ ಜಯದ ಲಯವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ. ಮೊದಲ ಮೂರು ಪಂದ್ಯಗಳನ್ನು ಸೋತಿದ್ದ ಮುಂಬೈ, ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿತ್ತು. ಅತ್ತ ಸತತ ಮೂರು ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿ ಗೆಲುವಿನ ಅನಿವಾರ್ಯದಲ್ಲಿದೆ. ಫಾಫ್ ಡುಪ್ಲೆಸಿಸ್ ಪಡೆಯು ಈವರೆಗೆ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಟೂರ್ನಿಯಲ್ಲಿ ಉಭಯ ತಂಡಗಳು ಕೂಡಾ ಸ್ಥಿರ ಪ್ರದರ್ಶನ ನೀಡಲು ಸಂಪೂರ್ಣ ವಿಫಲವಾಗಿದೆ. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಫಾರ್ಮ್ ಸಮಸ್ಯೆಯಿಂದ ಬ್ಯಾಟ್ ಬೀಸಲು ಪರದಾಡುತ್ತಿದ್ದಾರೆ. ಬೌಲರ್‌ಗಳು ಉತ್ತಮ ಲಯದಲ್ಲಿಲ್ಲ. ಅತ್ತ ನೂತನ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮುಂಬೈ ತಂಡದ ತಂತ್ರಗಳು ಫಲ ಕೊಡುತ್ತಿಲ್ಲ.
ಪಂದ್ಯ: ಮುಂಬೈ ಇಂಡಿಯನ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು,
ಸ್ಥಳ : ವಾಂಖೆಡೆ ಸ್ಟೇಡಿಯಂ, ಮುಂಬೈ
ದಿನಾಂಕ ಮತ್ತು ಸಮಯ : ಏಪ್ರಿಲ್ 11ರ ಗುರುವಾರ, ಸಂಜೆ 7:30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳು
ಲೈವ್ ಸ್ಟ್ರೀಮಿಂಗ್ : ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್
ಮುಂಬೈ ಇಂಡಿಯನ್ಸ್ vs ಆರ್‌ಸಿಬಿ ಮುಖಾಮುಖಿ ದಾಖಲೆ
ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈವರೆಗೆ 32 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ ತಂಡವು 14 ಪಂದ್ಯಗಳಲ್ಲಿ ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 18 ಪಂದ್ಯಗಳನ್ನು ಗೆದ್ದು ಮುನ್ನಡೆ ಕಾಯ್ದುಕೊಂಡಿದೆ. ಉಭಯ ತಂಡಗಳ ನಡುವಣ ಕೊನೆಯ ಐದು ಪಂದ್ಯಗಳಲ್ಲಿ ಆರ್‌ಸಿಬಿ ತಂಡವು ನಾಲ್ಕರಲ್ಲಿ ಗೆದ್ದಿದೆ. ಕಳೆದೆರಡು ಆವೃತ್ತಿಗಳಲ್ಲಿ ಮುಂಬೈ ಉತ್ತಮ ಫಾರ್ಮ್‌ನಲ್ಲಿ ಇಲ್ಲ.
ಇದನ್ನೂ ಓದಿ | ಭಾರತ ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿ ಹೊರಗುಳಿಯಲ್ಲ; ವಿಕೆಟ್ ಕೀಪರ್ ರೇಸ್‌ನಲ್ಲಿ ರಿಷಭ್ ಪಂತ್
ವಾಂಖೆಡೆ ಸ್ಟೇಡಿಯಂ ಪಿಚ್ ವರದಿ
ವಾಂಖೆಡೆ ಕ್ರೀಡಾಂಗಣವು ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ದೊಡ್ಡ ಮೊತ್ತ ಕಲೆಹಾಕಲು ನೆರವಾಗುತ್ತದೆ. ಮೈದಾನದ ಬೌಂಡರಿಗಳು ಚಿಕ್ಕದಾಗಿದ್ದು, ಬ್ಯಾಟರ್‌ಗಳು ದೊಡ್ಡ ಹೊಡೆತಕ್ಕೆ ಕೈ ಹಾಕುತ್ತಾರೆ. ಪಂದ್ಯ ಮುಂದುವರೆದಂತೆ ಇಬ್ಬನಿ ಬ್ಯಾಟರ್‌ಗಳಿಗೆ ನೆರವಾಗುತ್ತದೆ. ಹೀಗಾಗಿ ಚೇಸಿಂಗ್ ಮಾಡುವ ತಂಡಗಳಿಗೆ ಅನುಕೂಲ ಜಾಸ್ತಿ. ಇದೇ ಕಾರಣದಿಂದ ಇಲ್ಲಿ ಟಾಸ್ ಗೆಲ್ಲುವ ತಂಡಗಳು ಸಾಮಾನ್ಯವಾಗಿ ಚೇಸಿಂಗ್ ಆಯ್ಕೆ ಮಾಡುತ್ತವೆ. ಮೈದಾನದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಸರಾಸರಿ ಸ್ಕೋರ್ 169 ರನ್. ವೇಗಿಗಳು ಈವರೆಗೆ 887 ವಿಕೆಟ್ ಪಡೆದಿದ್ದಾರೆ. ಸ್ಪಿನ್ನರ್‌ಗಳು 367 ವಿಕೆಟ್ ಕಬಳಿಸಿದ್ದಾರೆ.
ವಾಣಿಜ್ಯ ನಗರಿ ಮುಂಬೈ ಹವಾಮಾನ
ಕಡಲ ತಡಿ ಮುಂಬೈ ನಗರದಲ್ಲಿ ಪಂದ್ಯ ಆರಂಭದ ಸಮಯದಲ್ಲಿ ತಾಪಮಾನವು ಸುಮಾರು 30 ಡಿಗ್ರಿಗಳಷ್ಟಿರುವ ಸಾಧ್ಯತೆ ಇದೆ. ಪಂದ್ಯದ ಅಂತ್ಯದ ವೇಳೆಗೆ ಇದು 28 ಡಿಗ್ರಿಗಳಿಗೆ ಇಳಿಯಬಹುದು. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಮುನ್ಸೂಚನೆ ಇಲ್ಲ.