ಬೆಂಗಳೂರು ಜೀವಜಲ ಬಿಕ್ಕಟ್ಟು: ನೀರಿನ ಬಳಕೆ ಕುರಿತು ಕೆಎಸ್‌ಸಿಎ ವರದಿ ಕೇಳಿದ ಹಸಿರು ನ್ಯಾಯಮಂಡಳಿ, ಆರ್‌ಸಿಬಿ ಪಂದ್ಯಗಳಿಗೆ ಕಂಟಕ
ಕನ್ನಡ ಸುದ್ದಿ  /  ಕ್ರಿಕೆಟ್  /  ಬೆಂಗಳೂರು ಜೀವಜಲ ಬಿಕ್ಕಟ್ಟು: ನೀರಿನ ಬಳಕೆ ಕುರಿತು ಕೆಎಸ್‌ಸಿಎ ವರದಿ ಕೇಳಿದ ಹಸಿರು ನ್ಯಾಯಮಂಡಳಿ, ಆರ್‌ಸಿಬಿ ಪಂದ್ಯಗಳಿಗೆ ಕಂಟಕ

ಬೆಂಗಳೂರು ಜೀವಜಲ ಬಿಕ್ಕಟ್ಟು: ನೀರಿನ ಬಳಕೆ ಕುರಿತು ಕೆಎಸ್‌ಸಿಎ ವರದಿ ಕೇಳಿದ ಹಸಿರು ನ್ಯಾಯಮಂಡಳಿ, ಆರ್‌ಸಿಬಿ ಪಂದ್ಯಗಳಿಗೆ ಕಂಟಕ

ಐಪಿಎಲ್ ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಬಳಸಲಾಗುತ್ತಿದೆ ಎಂಬ ವರದಿಗಳು ಹೊರಬಂದ ನಂತರ ರಾಷ್ಟ್ರೀಯ ಹಸಿರು ನ್ಯಾಮಂಡಳಿಯು ಸ್ವಯಂಪ್ರೇರಿತ ಕ್ರಮ ಕೈಗೊಂಡಿದೆ. ಮೈದಾನದಲ್ಲಿ ನೀರಿನ ಬಳಕೆ ಕುರಿತು ವರದಿ ಕೇಳಿದೆ.

ನೀರಿನ ಬಳಕೆ ಕುರಿತು ಕೆಎಸ್‌ಸಿಎ ವರದಿ ಕೇಳಿದ ಹಸಿರು ನ್ಯಾಯಮಂಡಳಿ
ನೀರಿನ ಬಳಕೆ ಕುರಿತು ಕೆಎಸ್‌ಸಿಎ ವರದಿ ಕೇಳಿದ ಹಸಿರು ನ್ಯಾಯಮಂಡಳಿ (AFP)

ಉದ್ಯಾನ ನಗರಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಜೀವಜಲದ ಅಭಾವದಿಂದ ನಗರದಲ್ಲಿ ನೀರನ್ನು ಹಿತಮಿತವಾಗಿ ಬಳಸುವಂತೆ ಜನರಿಗೆ ಸೂಚಿಸಲಾಗಿದೆ. ಈ ನಡುವೆ ದೇಶದಲ್ಲಿ ಸದ್ಯ ಐಪಿಎಲ್‌ ಸಂಭ್ರಮ ಜೋರಾಗಿದ್ದು, ಸಿಲಿಕಾನ್‌ ಸಿಟಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ತಂಡದ ಐಪಿಎಲ್‌ ಪಂದ್ಯಗಳು ಸ್ಥಳಾಂತರಗೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ, ಇಂಥಾ ಸಾಧ್ಯತೆಗಳನ್ನು ಕೆಎಸ್‌ಸಿಎ ತಳ್ಳಿಹಾಕಿದೆ.

ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ವೇಳೆ ಬಳಸಲಾಗುವ ನೀರಿನ ವಿವರಗಳನ್ನು ಸಲ್ಲಿಸುವಂತೆ (National Green Tribunal -NGT) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ರಾಜ್ಯದ ಇತರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ನೀರಿನ ಅಭಾವದಿಂದಾಗಿ, ಈ ಹಿಂದೆಯೂ ನಗರದಲ್ಲಿ ಐಪಿಎಲ್‌ ಪಂದ್ಯಗಳನ್ನು ನಡೆಸದಂತೆ ಒತ್ತಾಯ ಕೇಳಿಬಂದಿತ್ತು. ಆದರೆ, ಮೈದಾದ ಬಳಕೆಗೆ ಬೇಕಾದ ನೀರಿಗೆ ಯಾವುದೇ ಅಭಾವವಿಲ್ಲ ಎಂಬುದನ್ನು ಕೆಎಸ್‌ಸಿಎ ಸಾಬೀತುಪಡಿಸಿದ ಬಳಿಕ, ಸಮಸ್ಯೆ ಬಗೆಹರಿದಿತ್ತು. ಇದೀಗ ಮತ್ತೆ ನಗರದಲ್ಲಿ ನಡೆಯಲಿರುವ ಪಂದ್ಯಗಳು ಬೇರೆ ಕಡೆಗೆ ಸ್ಥಳಾಂತರವಾಗುವ ಸಂಭಾವ್ಯತೆ ಹೆಚ್ಚಿದೆ.

ಹಸಿರು ನ್ಯಾಯಮಂಡಳಿಯು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಮೂಲಕ ಈ ವಿಷಯದ ಕುರಿತು ಮೇ 2ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಕೆಎಸ್‌ಸಿಎ ವಿಶ್ವಾಸ

ಆದರೆ, ನೀರಿನ ಕುರಿತ ಯಾವುದೇ ಸಮಸ್ಯೆ ಇಲ್ಲ ಎಂದು ಕೆಎಸ್‌ಸಿಎ ಸ್ಪಷ್ಟನೆ ನೀಡಿದೆ. ಅಲ್ಲದೆ ಪಂದ್ಯಗಳು ಚಿನ್ನಸ್ವಾಮಿ ಮೈದಾನ ಬಿಟ್ಟು ಬೇರೆಡೆ ಸ್ಥಳಾಂತರಗೊಳ್ಳುವ ಸಂಭವ ಇಲ್ಲ ಎಂಬ ವಿಶ್ವಾಸದಲ್ಲಿದೆ. “ನಾವು ನೋಟಿಸ್ ಅನ್ನು ಅಧ್ಯಯನ ಮಾಡುತ್ತಿದ್ದೇವೆ. ಚಿನ್ನಸ್ವಾಮಿ ಕ್ರೀಡಾಂಗಣವು ಎನ್‌ಜಿಟಿ ಮಾನದಂಡಗಳನ್ನು ಅನುಸರಿಸುತ್ತದೆ. ಹೀಗಾಗಿ, ಪಂದ್ಯಗಳನ್ನು ಚಿನ್ನಸ್ವಾಮಿ ಮೈದಾನದಲ್ಲೇ ನಡೆಸುವ ವಿಶ್ವಾಸವಿದೆ” ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಿಇಒ ಶುಭೇಂದು ಘೋಷ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಮೈದಾನಕ್ಕೆ ಸಂಸ್ಕರಿಸಿದ ನೀರು ಬಳಕೆ?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಸರಬರಾಜು ಮಾಡಲಾಗುತ್ತಿದೆ ಎಂಬ ವರದಿಗಳು ಹೊರಬಂದ ಹಿನ್ನೆಲೆಯಲ್ಲಿ, ಎನ್‌ಜಿಟಿ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡಿದೆ. ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ಡಾ.ಎ ಸೆಂಥಿಲ್ ವೇಲ್ (ತಜ್ಞ ಸದಸ್ಯ) ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ | ಜೋಸ್ ಬಟ್ಲರ್ ಗೆಲುವಿನ ಸೆಂಚುರಿ ಮುಂದೆ ಕೊಹ್ಲಿ ಶತಕ ವ್ಯರ್ಥ; ರಾಜಸ್ಥಾನ್​ಗೆ ಸತತ 4ನೇ ಜಯ, ಆರ್​​ಸಿಬಿ ಹ್ಯಾಟ್ರಿಕ್​ ಸೋಲು

ವರದಿಗಳ ಪ್ರಕಾರ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಮೂರು ಪಂದ್ಯಗಳ ಸಂದರ್ಭದಲ್ಲಿ, ಮೈದಾನದ ಹುಲ್ಲುಹಾಸು ಮತ್ತು ಪಿಚ್ ಸಿದ್ಧಪಡಿಸಲು 75,000 ಲೀಟರ್ ಸಂಸ್ಕರಿಸಿದ ನೀರನ್ನು ಬಳಸಲಾಗಿದೆ. ಮೈದಾನದಲ್ಲಿ ಮುಂದೆ, ಏಪ್ರಿಲ್ 15, ಮೇ 4, ಮೇ 12 ಮತ್ತು ಮೇ 18ರಂದು ಇನ್ನೂ ನಾಲ್ಕು ಪಂದ್ಯಗಳು ನಡೆಯಲಿವೆ. ಆ ವೇಳೆಗೆ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ.

ಒಂದು ಪಂದ್ಯ ನಡೆಸಲು ಸುಮಾರು 15000 ಲೀಟರ್ ನೀರು ಬೇಕಾಗುತ್ತದೆ ಎಂದು ಘೋಷ್ ಈ ಹಿಂದೆ ಹೇಳಿದ್ದರು. ಇದನ್ನು ಮೈದಾನದಲ್ಲೇ ಇರುವ ಆಂತರಿಕ ಎಸ್‌ಟಿಪಿ ಸ್ಥಾವರದಿಂದ ಉತ್ಪಾದಿಸಬುದಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿದ್ದು, ನೀರಿನ ಬಳಕೆಗೆ ಹೆಚ್ಚು ಸಮಸ್ಯೆ ಇಲ್ಲ ಎಂಬುದು ಗಮನಾರ್ಹ ಸಂಗತಿ.

Whats_app_banner