IPL 2024: ಸನ್‌ರೈಸರ್ಸ್ ಹೈದರಾಬಾದ್ ನೂತನ ನಾಯಕನಾಗಿ ಪ್ಯಾಟ್ ಕಮಿನ್ಸ್ ನೇಮಕ; ಐಡೆನ್ ಮಾರ್ಕ್ರಮ್‌ಗೆ ಗೇಟ್‌ಪಾಸ್
ಐಪಿಎಲ್ ಮಿನಿ ಹರಾಜಿನಲ್ಲಿ ಬರೋಬ್ಬರಿ 20.50 ಕೋಟಿ ರೂಪಾಯಿಗೆ ಎಸ್‌ಆರ್‌ಎಚ್ ಫ್ರಾಂಚೈಸಿ ಪಾಲಾಗಿದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ.
ಐಪಿಎಲ್ 2024ರ ಆವೃತ್ತಿಗೆ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವು ನೂತನ ನಾಯಕನನ್ನು ಹೆಸರಿಸಿದೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಬಲಿಷ್ಠ ಭಾರತವನ್ನೇ ಮಣಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಅವರನ್ನು ಎಸ್‌ಆರ್‌ಎಚ್ (SRH) ತಂಡ ನಿರೀಕ್ಷೆಯಂತೆಯೇ ನಾಯಕನಾಗಿ ಘೋಷಿಸಿದೆ. 2023ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್ ಐಡೆನ್ ಮಾರ್ಕ್ರಮ್ ನೇತೃತ್ವದಲ್ಲಿ ಆಡಿದ್ದ ಸನ್‌ರೈಸರ್ಸ್, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಹೀಗಾಗಿ ಈ ಬಾರಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಏಕದಿನ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲೂ, ಆಸೀಸ್ ತಂಡವನ್ನು ಕಮಿನ್ಸ್ ಮುನ್ನಡೆಸಿದ್ದರು. ಅಲ್ಲಿಯೂ ಭಾರತ ವಿರುದ್ಧ ಅಬ್ಬರಿಸಿದ್ದ ಕಾಂಗರೂಗಳು ಟ್ರೋಫಿ ಜಯಿಸಿದ್ದರು. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಯಶಸ್ವಿ ನಾಯಕನಿಗೆ ಇದೀಗ ಕಾವಿಯಾ ಮಾರನ್ ಮಾಲಕತ್ವದ ಹೈದರಾಬಾದ್ ತಂಡವು ನಾಯಕನಾಗಿ ಘೋಷಿಸಿದೆ.
ಒಂದು ವರ್ಷದ ವಿರಾಮದ ನಂತರ ಮಿಲಿಯನ್ ಡಾಲರ್ ಟೂರ್ನಿಗೆ ಮರಳಿರುವ ಕಮಿನ್ಸ್, ಕಳೆದ ವರ್ಷದ ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಆರೇಂಜ್ ಆರ್ಮಿ ಸೇರಿಕೊಂಡಿದ್ದರು. ಬರೋಬ್ಬರಿ 20.50 ಕೋಟಿ ರೂಪಾಯಿ ಕೊಟ್ಟು ಎಸ್‌ಆರ್‌ಎಚ್ ಫ್ರಾಂಚೈಸಿಯು ಅವರನ್ನು ಖರೀದಿಸಿತು. ಆ ಮೂಲಕ ಐಪಿಎಲ್ ಹರಾಜು ಇತಿಹಾಸದಲ್ಲಿಯೇ 20 ಕೋಟಿ ರೂಪಾಯಿಗಿಂತ ಅಧಿಕ ಬೆಲೆ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಆಸೀಸ್ ನಾಯಕ ಪಾತ್ರರಾಗಿದ್ದರು.
ಇದನ್ನೂ ಓದಿ | ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಗೆಲ್ಲೋರು ಯಾರೆಂದು ಭವಿಷ್ಯ ನುಡಿದ ಚಹಲ್; ಕೊಹ್ಲಿ-ಗಿಲ್ ಅಲ್ಲ!
ಐಪಿಎಲ್‌ನಲ್ಲಿ ಪ್ರಸಕ್ತ ಆವೃತ್ತಿಯು ಕಮಿನ್ಸ್ ಅವರ ಏಳನೇ ಋತುವಾಗಿದೆ. ಈ ಹಿಂದೆ ಅವರು ಕೆಕೆಆರ್ ತಂಡದ ಭಾಗವಾಗಿದ್ದರು. ಬರೋಬ್ಬರಿ 15.50 ಕೋಟಿ ರೂಪಾಯಿ ಪಡೆದು ಮಾಜಿ ಚಾಂಪಿಯನ್ ತಂಡದ ಪರ ಅವರು ಆಡಿದ್ದರು. ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ್ದ ಕಮಿನ್ಸ್, 2022ರ ಐಪಿಎಲ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಕೇವಲ ಐದು ಪಂದ್ಯಗಳಲ್ಲಿ ಆಡಿದ್ದ ಆಸೀಸ್ ನಾಯಕ, ಏಳು ವಿಕೆಟ್ ಪಡೆದು, 63 ರನ್ ಗಳಿಸಿದ್ದರು. ಇದೀಗ ನಾಯಕನಾಗಿ ಮತ್ತಷ್ಟು ದಾಖಲೆ ನಿರ್ಮಿಸಲು ಕಮಿನ್ಸ್ ಸಜ್ಜಾಗಿದ್ದಾರೆ.
ನಾಯಕನಾಗಿ ಕಮಿನ್ಸ್ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ಆದರೆ, ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ಇದು ಅವರ ಮೊದಲ ಋತುವಾಗಲಿದೆ. ಕಳೆದ ಒಂಬತ್ತು ತಿಂಗಳಲ್ಲಿ, ಅವರು ಭಾರತದ ವಿರುದ್ಧವೇ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದ ದಾಖಲೆ ನಿರ್ಮಿಸಿದ್ದಾರೆ. ಅಲ್ಲ ಪ್ರತಿಷ್ಠಿತ ಆಶಸ್ ಸರಣಿಯನ್ನು ಕೂಡಾ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವರ್ಷದ ಐಸಿಸಿ ಟೆಸ್ಟ್ ತಂಡದ ನಾಯಕನಾಗಿ ಹೆಸರಿಸಲ್ಪ ಅವರು, 2023ರಲ್ಲಿ ನೀಡಿದ ಅಮೋಘ ಪ್ರದರ್ಶನದಿಂದಾಗಿ ಐಸಿಸಿ ಪುರುಷರ ವರ್ಷದ ಕ್ರಿಕೆಟಿಗನಾಗಿ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಪಡೆದರು.
ಇದನ್ನೂ ಓದಿ | WPL: ಗುಜರಾತ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ಗೆ 25 ರನ್ಗಳ ಗೆಲುವು; ಸತತ 4 ಸೋಲು ಕಂಡ ಜೈಂಟ್ಸ್ ಪ್ಲೇಆಫ್ನಿಂದ ಬಹುತೇಕ ಹೊರಕ್ಕೆ
(This copy first appeared in Hindustan Times Kannada website. To read more like this please logon to kannada.hindustantimes.com)