Explainer: ಡೆಲ್ಲಿ ಗೆಲುವಿನ ಬಳಿಕ ಐಪಿಎಲ್ ಪ್ಲೇಆಪ್‌ ರೇಸ್‌ ಹೇಗಿದೆ; ಆರ್‌ಸಿಬಿ-ಸಿಎಸ್‌ಕೆ ಸೇರಿ ಯಾವ ತಂಡಕ್ಕಿದೆ ಹೆಚ್ಚು ಅವಕಾಶ?‌
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಡೆಲ್ಲಿ ಗೆಲುವಿನ ಬಳಿಕ ಐಪಿಎಲ್ ಪ್ಲೇಆಪ್‌ ರೇಸ್‌ ಹೇಗಿದೆ; ಆರ್‌ಸಿಬಿ-ಸಿಎಸ್‌ಕೆ ಸೇರಿ ಯಾವ ತಂಡಕ್ಕಿದೆ ಹೆಚ್ಚು ಅವಕಾಶ?‌

Explainer: ಡೆಲ್ಲಿ ಗೆಲುವಿನ ಬಳಿಕ ಐಪಿಎಲ್ ಪ್ಲೇಆಪ್‌ ರೇಸ್‌ ಹೇಗಿದೆ; ಆರ್‌ಸಿಬಿ-ಸಿಎಸ್‌ಕೆ ಸೇರಿ ಯಾವ ತಂಡಕ್ಕಿದೆ ಹೆಚ್ಚು ಅವಕಾಶ?‌

ಎಲ್‌ಎಸ್‌ಜಿ ವಿರುದ್ಧ ಡಿಸಿ ಗೆಲುವಿನೊಂದಿಗೆ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ಖುಷಿ ಹೆಚ್ಚಿದೆ. ಐಪಿಎಲ್‌ 2024ರ ಪ್ಲೇಆಫ್‌ ರೇಸ್‌ನಲ್ಲಿರುವ ಉಭಯ ತಂಡಗಳು ಮೇ 18ರಂದು ಮುಖಾಮುಖಿಯಾಗಲು ಸಜ್ಜಾಗಿವೆ. ಇದೀಗ ಟೂರ್ನಿಯ ಪ್ಲೇಆಫ್‌ ರೇಸ್‌ ಹೇಗಿದೆ ಎಂಬುದನ್ನು ವಿವರವಾಗಿ ನೋಡೋಣ.

ಡೆಲ್ಲಿ ಗೆಲುವಿನ ಬಳಿಕ ಐಪಿಎಲ್ ಪ್ಲೇಆಪ್‌ ರೇಸ್‌ ಹೇಗಿದೆ
ಡೆಲ್ಲಿ ಗೆಲುವಿನ ಬಳಿಕ ಐಪಿಎಲ್ ಪ್ಲೇಆಪ್‌ ರೇಸ್‌ ಹೇಗಿದೆ

ಐಪಿಎಲ್‌ 2024 ಕುತೂಹಲಕಾರಿ ಹಂತಕ್ಕೆ ಬರುತ್ತಿದೆ. ಆರ್‌ಸಿಬಿ ತಂಡವು ಸತತ ಐದು ಪಂದ್ಯಗಳಲ್ಲಿ ಗೆಲ್ಲುತ್ತಿದ್ದಂತೆಯೇ ಟೂರ್ನಿಯ ಜೋಶ್‌ ಹೆಚ್ಚಿದೆ. ಅತ್ತ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರೋಚಕ ಜಯ ಸಾಧಿಸುವುದರೊಂದಿಗೆ ಪಂದ್ಯಾವಳಿಯ ಚಿತ್ರಣ ಮತ್ತಷ್ಟು ಭಿನ್ನವಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಎರಡನೇ ತಂಡವಾಗಿ ಪ್ಲೇಆಫ್‌ ಪ್ರವೇಶಿಸಿದೆ (ಮೊದಲ ತಂಡ ಕೆಕೆಆರ್). ಇನ್ನು ಉಳಿದ ಎರಡು ಪ್ಲೇಆಫ್ ಸ್ಥಾನಗಳಿಗಾಗಿ ಹೆಚ್ಚು ಕಡಿಮೆ ಮೂರು ತಂಡಗಳ ನಡುವೆ ಪೈಪೋಟಿ ಶುರುವಾಗಿದೆ. ಅಧಿಕೃತವಾಗಿ ಐದು ತಂಡಗಳಿಗೆ ಅವಕಾಶವಿದ್ದರೂ, ವಾಸ್ತವದಲ್ಲಿ ಎರಡು ತಂಡಗಳಿಗೆ ಆ ಅವಕಾಶ ತುಂಬಾ ಕಡಿಮೆ ಇದೆ. ಇದೀಗ ಯಾವ ತಂಡಕ್ಕೆ ಪ್ಳೇಆಫ್ ಪ್ರವೇಶಿಸುವ ಅವಕಾಶ ಎಷ್ಟಿದೆ ಎಂಬುದನ್ನು ವಿವರವಾಗಿ ನೋಡುತ್ತಾ ಹೋಗೋಣ.

ಡೆಲ್ಲಿ ಕ್ಯಾಪಿಟಲ್ಸ್

ರಿಷಬ್‌ ಪಂತ್‌ ಪಡೆಯು ಆಡಿದ 14 ಪಂದ್ಯಗಳಿಂದ 14 ಅಂಕಗಳನ್ನು ಪಡೆದಿದೆ. ತಂಡದ NRR: -0.377.

ಲಕ್ನೋ ವಿರುದ್ಧದ ಗೆಲುವಿನೊಂದಿಗೆ ಡಿಸಿ ಐಪಿಎಲ್‌ 2024ರ ಅಭಿಯಾನವನ್ನು 14 ಅಂಕಗಳೊಂದಿಗೆ ಮುಗಿಸಿದೆ. ತಂಡದ ನಿವ್ವಳ ರನ್ ರೇಟ್ ತೀರಾ ಕಳಪೆ ಇದೆ(-0.377). ಇದರರ್ಥ ಪಂತ್‌ ಪಡೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ. ಒಂದು ವೇಳೆ ಇದು ಸಾಧ್ಯವಾಗಬೇಕಿದ್ದರೆ, ಸಿಎಸ್‌ಕೆ ತಂಡ ಆರ್‌ಸಿಬಿಯನ್ನು ಸೋಲಿಸಬೇಕು. ಇದೇ ವೇಳೆ ಎಸ್‌ಆರ್‌ಎಚ್‌ ತನ್ನ ಕೊನೆಯ ಎರಡೂ ಪಂದ್ಯಗಳಲ್ಲಿ ಭಾರಿ ಅಂತರದಿಂದ ಸೋಲಬೇಕು. ಆಗ ಮಾತ್ರ ಡಿಸಿಯ ನಿವ್ವಳ ರನ್ ರೇಟ್ ಹೈದರಾಬಾದ್‌ಗಿಂತ ಹೆಚ್ಚಬಹುದು. ಇದು ಬಹುತೇಕ ಅಸಾಧ್ಯ ಲೆಕ್ಕಾಚಾರ.

ಲಕ್ನೋ ಸೂಪರ್ ಜೈಂಟ್ಸ್

ಕೆಎಲ್‌ ರಾಹುಲ್‌ ನೇತೃತ್ವದ ಎಲ್‌ಎಸ್‌ಜಿ ಆಡಿದ 13 ಪಂದ್ಯಗಳಿಂದ 12 ಅಂಕಗಳನ್ನು ಪಡೆದಿದೆ. ತಂಡದ NRR: -0.787. ತಂಡವು ಮುಂದೆ ಮುಂಬೈ ಇಂಡಿಯನ್ಸ್‌ ವಿರುದ್ಧ ಒಂದು ಪಂದ್ಯ ಆಡಲಿದೆ.

ಇದನ್ನೂ ಓದಿ | ಸತತ 5 ಪಂದ್ಯಗಳಲ್ಲಿ ಗೆದ್ದ ಆರ್‌ಸಿಬಿ; ಈ ಹಿಂದೆ ‌2 ಬಾರಿ ಹೀಗಾಗಿದ್ದಾಗ ರನ್ನರ್‌ ಅಪ್‌ ಆಗಿತ್ತು, ಆದರೆ ಈ ಬಾರಿ…

ಎಂಐ ವಿರುದ್ಧ ಗೆದ್ದರೆ‌, ತಂಡ 14 ಅಂಕಗಳನ್ನು ಮಾತ್ರ ಗಳಿಸಬಹುದು. ಆದರೆ ನೆಟ್‌ ರನ್ ರೇಟ್‌ ಏರಿಸುವುದು ಭಾರಿ ಕಷ್ಟ. ಹಾರ್ದಿಕ್‌ ಪಾಂಡ್ಯ ಬಳಗದ ವಿರುದ್ಧ ಭಾರಿ ಅಂತರದಿಂದ ಗೆದ್ದರೂ, ರನ್‌ ರೇಟ್‌ ಹೆಚ್ಚೇನೂ ಸುಧಾರಿಸಲು ಸಾಧ್ಯವಿಲ್ಲ. ಸದ್ಯಕ್ಕೆ ಡೆಲ್ಲಿ ಹಾಗೂ ಲಕ್ನೋ ಒಂದೇ ರೀತಿಯ ಪರಿಸ್ಥಿತಿಯಲ್ಲಿದೆ. ತಂಡ ಹೊರಬೀಳುವುದು ಬಹುತೇಕ ಖಚಿತ.

ಸನ್‌ರೈಸರ್ಸ್ ಹೈದರಾಬಾದ್

ಹೈದರಾಬಾದ್‌ ಆಡಿದ 12 ಪಂದ್ಯಗಳಲ್ಲಿ 14 ಅಂಕ ಪಡೆದಿದೆ. ತಂಡದ NRR 0.406 ಆಗಿದ್ದು, ಮುಂದೆ ಜಿಟಿ ಹಾಗೂ ಪಂಜಾಬ್‌ ವಿರುದ್ಧ ತವರಿನ್ಲಲೇ ಎರಡು ಪಂದ್ಯಗಳನ್ನಾಡುತ್ತಿದೆ.

ಪ್ಲೇಆಪ್‌ ಸ್ಥಾನ ಖಚಿತಪಡಿಸಿಕೊಳ್ಳಲು ಸನ್‌ರೈಸರ್ಸ್‌ಗೆ ಕೇವಲ ಒಂದು ಅಂಕದ ಅಗತ್ಯವಿದೆ. ಇದು ಒಂದರಲ್ಲಿ ಸೋತು ಇನ್ನೊಂದು ಪಂದ್ಯ ರದ್ದಾದರೂ ಪ್ಲೇಆಫ್‌ ಪ್ರವೇಶಿಸಲಿದೆ. ಒಂದು ವೇಳೆ ಎರಡೂ ಪಂದ್ಯಗಳಲ್ಲಿ ಸೋತರೆ, ಸಿಎಸ್‌ಕೆ ಹಾಗೂ ಆರ್‌ಸಿಬಿ ಫಲಿತಾಂಶದ ಮೇಲೆ ಅವಲಂಬಿಸಬೇಕಾಗುತ್ತದೆ. ತಂಡದ ನೆಟ್‌ ರನ್ ರೇಟ್ ಉತ್ತಮವಾಗಿರುವುದರಿಂದ ಹೆಚ್ಚು ಚಿಂತೆ ಇಲ್ಲ. ಒಂದು ವೇಳೆ ಎಸ್‌ಆರ್‌ಎಚ್‌ ಮುಂದಿನ ಎರಡೂ ಪಂದ್ಯಗಳಲ್ಲಿ ಗೆದ್ದರೆ, ಅಗ್ರ ಎರಡರಲ್ಲಿ ಒಂದು ಸ್ಥಾನ ಪಡೆಯುವ ಅವಕಾಶವೂ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆರ್‌ಸಿಬಿ ತಂಡವು ಸತತ ಐದು ಗೆಲುವು ಸೇರಿದಂತೆ ಆಡಿದ 13 ಪಂದ್ಯಗಳಿಂದ 12 ಅಂಕ ಪಡೆದಿದೆ. ತಂಡದ NRR: 0.387 ಇದ್ದು, ಡಿಸಿ ಹಾಗೂ ಲಕ್ನೋಗಿಂತ ಭಾರಿ ಉತ್ತಮವಾಗಿದೆ. ಇದು ತಂಡಕ್ಕೆ ಪ್ಲಸ್‌ ಪಾಯಿಂಟ್.‌ ತಂಡ ಮೇ 18ರಂದು ಸಿಎಸ್‌ಕೆಯನ್ನು ಎದುರಿಸುತ್ತಿದೆ.

ಅತ್ತ ಸನ್‌ರೈಸರ್ಸ್‌ ಎರಡೂ ಪಂದ್ಯಗಳಲ್ಲಿ ಸೋತರೆ, ಆರ್‌ಸಿಬಿಯು ಸಿಎಸ್‌ಕೆ ವಿರುದ್ಧ ಅಂತರದ ಲೆಕ್ಕವಿಲ್ಲದೆ ಗೆದ್ದರೆ ಸಾಕಾಗುತ್ತದೆ. ಒಂದು ವೇಳೆ ಸನ್‌ರೈಸರ್ಸ್‌ ಪ್ಲೇಆಫ್‌ಗೆ ಅರ್ಹತೆ ಪಡೆದರೆ, ಆಗ ಬೆಂಗಳೂರು ತಂಡ ಚೆನ್ನೈ ವಿರುದ್ಧ ದೊಡ್ಡ ಅಂತರದಿಂದ ಗೆಲ್ಲಬೇಕಾಗುತ್ತದೆ. ಆಗ ಅಂಕಪಟ್ಟಿಯಲ್ಲಿ ಸಿಎಸ್‌ಕೆಗಿಂತ ಒಂದು ಸ್ಥಾನ ಮುಂದೆ ಬರಬಹುದು. ಇದಕ್ಕಾಗಿ ಸಿಎಸ್‌ಕೆ ತಂಡವನ್ನು ಕನಿಷ್ಠ 18 ರನ್‌ಗಳ ಅಂತರದಿಂದ ಸೋಲಿಸಬೇಕಾಗುತ್ತದೆ (ಒಂದು ವೇಳೆ ಆರ್‌ಸಿಬಿಯು ಮೊದಲು ಬ್ಯಾಟಿಂಗ್‌ ಮಾಡಿ 200 ರನ್‌ ಗಳಿಸಿದರೆ). ಇದೇ ವೇಳೆ ಆರ್‌ಸಿಬಿಯು 200 ರನ್‌ ಚೇಸಿಂಗ್‌ ಮಾಡುತ್ತಿದೆ ಎಂದಾದಾಗ, ಸರಿಸುಮಾರು 18.1 ಓವರ್‌ಗಳಲ್ಲಿ ಚೇಸಿಂಗ್‌ ಪೂರ್ಣಗೊಳಿಸಬೇಕು. ಆಗ ರನ್‌ ರೇಟ್‌ ಲೆಕ್ಕಾಚಾರದಲ್ಲಿ ಆರ್‌ಸಿಬಿ ಪ್ಲೇಆಫ್‌ ಲಗ್ಗೆ ಹಾಕುತ್ತದೆ.

ಚೆನ್ನೈ ಸೂಪರ್ ಕಿಂಗ್ಸ್

ಸಿಎಸ್‌ಕೆ ಆಡಿದ 13 ಪಂದ್ಯಗಳಿಂದ 14 ಅಂಕಗಳನ್ನು ಪಡೆದಿದೆ. ತಂಡದ ನೆಟ್‌ ರನ್‌ ರೇಟ್‌ 0.528 ಆಗಿದ್ದು, ಮುಂದೆ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿ ಆಡಲಿದೆ.

ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಕನಿಷ್ಠ ಗೆಲುವು ಸಾಧಿಸಿದರೆ, ಪ್ಲೇಆಫ್ ಅರ್ಹತೆ ಪಡೆಯುವುದು ಖಚಿತವಾಗಿದೆ. ಒಂದು ವೇಳೆ ತಂಡವು 18 ರನ್‌ಗಳಿಗಿಂತ ಕಡಿಮೆ ಅಂತರದಿಂದ ಸೋತರೆ (ಮೇಲೆ ಹೇಳಿದ ಲೆಕ್ಕಾಚಾರದ ಪ್ರಕಾರ), ನೆಟ್‌ ರನ್‌ ರೇಟ್‌ ಲೆಕ್ಕದಲ್ಲಿ ಪ್ಲೇಆಫ್‌ನಿಂದ ಬಹುತೇಕ ಹಿಂದೆ ಬೀಳುತ್ತದೆ. ಆಗ, ಎಸ್‌ಆರ್‌ಎಚ್‌ ತಂಡ ಸೋಲಿನ ಮೇಲೆ ಚೆನ್ನೈ ಅವಲಂಬಿಸಬೇಕಾಗುತ್ತದೆ.

Whats_app_banner