ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024: ಪಂಜಾಬ್ ಕಿಂಗ್ಸ್ Vs ಗುಜರಾತ್ ಟೈಟಾನ್ಸ್; ಸಂಭಾವ್ಯ ತಂಡ, ಪಿಚ್ ಹಾಗೂ ಹವಾಮಾನ ವರದಿ

IPL 2024: ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್; ಸಂಭಾವ್ಯ ತಂಡ, ಪಿಚ್ ಹಾಗೂ ಹವಾಮಾನ ವರದಿ

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿಯೂ ಪಂಜಾಬ್ ಕಿಂಗ್ಸ್ ತಂಡ ನಾಯಕ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ಸ್ಯಾಮ್‌ ಕರನ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್
ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್

ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಪ್ರಿಲ್ 21ರಂದು ನಡೆಯುತ್ತಿರುವ ಐಪಿಎಲ್‌ (IPL 2024) ಪಂದ್ಯದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ (Punjab Kings vs Gujarat Titans) ತಂಡಗಳು ಮುಖಾಮುಖಿಯಾಗುತ್ತಿವೆ. ಏಪ್ರಿಲ್‌ 21ರ ಭಾನುವಾರ ಎರಡೆರಡು ಪಂದ್ಯಗಳು ನಡೆಯುತ್ತಿದ್ದು, ದಿನದ ಎರಡನೇ ಪಂದ್ಯವು ಸಂಜೆ 7.30ಕ್ಕೆ ಆರಂಭವಾಗುತ್ತಿದೆ. ಉಭಯ ತಂಡಗಳು ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿದ್ದು, ಪ್ಲೇ ಆಫ್ ಹಂತಕ್ಕೇರಲು ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿವೆ.

ಟ್ರೆಂಡಿಂಗ್​ ಸುದ್ದಿ

ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆವೃತ್ತಿಯಲ್ಲಿ ಈವರೆಗೆ ಆಡಿದ 7 ಪಂದ್ಯಗಳಲ್ಲಿ‌ ಸ್ಯಾಮ್‌ ಕರನ್‌ ನಾಯಕತ್ವದ ಪಿಬಿಕೆಎಸ್ ತಂಡ 2ರಲ್ಲಿ ಮಾತ್ರ ಗೆದ್ದಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಶುಭ್ಮನ್‌ ಗಿಲ್ ನೇತೃತ್ವದ ಜಿಟಿ ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಗೆಲುವಿನ ಸಮಾನ ಹುಡುಕಾಟದಲ್ಲಿವೆ.

ಪಿಬಿಕೆಎಸ್ ಮತ್ತು ಜಿಟಿ ಮುಖಾಮುಖಿ ದಾಖಲೆ

ಪಂಜಾಬ್ ಮತ್ತು ಗುಜರಾತ್ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 4 ಪಂದ್ಯಗಳಲ್ಲಿ ಮಾತ್ರವೇ ಆಡಿವೆ. ಇದರಲ್ಲಿ ಉಭಯ ತಂಡಗಳು ಸಮಾನ ದಾಖಲೆ ಹೊಂದಿವೆ. ಪಂಜಾಬ್ 2 ಪಂದ್ಯಗಳಲಿ ಗೆದ್ದರೆ, ಗುಜರಾತ್‌ ಕೂಡಾ 2 ಪಂದ್ಯದಲ್ಲಿ ಗೆದ್ದಿದೆ. ಈ ಬಾರಿಯ ಐಪಿಎಲ್‌ನಲ್ಲಿ ಈಗಾಗಲೇ ಈ ತಂಡಗಳು ಒಂದು ಬಾರಿ ಎದುರಾಗಿವೆ. ಅದರಲ್ಲಿ ಪಂಜಾಬ್ ತಂಡವು 200 ರನ್‌ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತ್ತು.

ಮುಲ್ಲನ್‌ಪುರ ಸ್ಟೇಡಿಯಂ ಪಿಚ್ ವರದಿ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್ ಸ್ನೇಹಿಯಾಗಿದೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಈ ಮೈದಾನದಲ್ಲಿ ಸಿಡಿದ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 187 ರನ್. ಮೈದಾನದಲ್ಲಿ ಬೌಲರ್‌ಗಳ ವಿಚಾರಕ್ಕೆ ಬಂದರೆ, ವೇಗದ ಬೌಲರ್‌ಗಳು 47 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇದನ್ನೂ ಓದಿ | ಮೊದಲು ಲಕ್ನೋ ತಂಡಕ್ಕೆ ಐಪಿಎಲ್ ಪ್ರಶಸ್ತಿ ಗೆಲ್ಲು; ಟಿ20 ವಿಶ್ವಕಪ್​ ತಂಡದ ಭಾಗವಾಗಲು ಕೆಎಲ್ ರಾಹುಲ್​ಗೆ ಗಿಲ್ಲಿ ಟಿಪ್ಸ್

ಚಂಡೀಗಢ ಹವಾಮಾನ ವರದಿ

ಪಂದ್ಯದ ಸಮಯದಲ್ಲಿ ಮೊಹಾಲಿ ತಾಪಮಾನವು ಸುಮಾರು 25 ಡಿಗ್ರಿಗಳಷ್ಟಿರುವ ಸಾಧ್ಯತೆ ಇದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ.

ಗುಜರಾತ್‌ ಟೈಟಾನ್ಸ್‌ ಸಂಭಾವ್ಯ ತಂಡ

ವೃದ್ಧಿಮಾನ್ ಸಹಾ (ವಿಕೆಟ್‌ ಕೀಪರ್), ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ಅಜ್ಮತುಲ್ಲಾ ಒಮರ್ಜಾಯ್/ಜೋಶ್ ಲಿಟಲ್, ಸ್ಪೆನ್ಸರ್ ಜಾನ್ಸನ್, ಸಂದೀಪ್ ವಾರಿಯರ್, ಆರ್ ಸಾಯಿ ಕಿಶೋರ್/ಶಾರುಖ್ ಖಾನ್ (ಇಂಪ್ಯಾಕ್ಟ್‌ ಪ್ಲೇಯರ್)

ಪಂಜಾಬ್‌ ಕಿಂಗ್ಸ್ ಸಂಭಾವ್ಯ‌ ತಂಡ

ಸ್ಯಾಮ್ ಕರನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ರಿಲೀ ರೊಸೊವ್, ಲಿಯಾಮ್ ಲಿವಿಂಗ್‌ಸ್ಟನ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡಾ, ಅರ್ಷದೀಪ್ ಸಿಂಗ್, ಹರ್ಪ್ರೀತ್ ಸಿಂಗ್ (ಇಂಪ್ಯಾಕ್ಟ್‌ ಪ್ಲೇಯರ್).

IPL_Entry_Point