ಶಶಾಂಕ್ ಸಿಂಗ್, ಅಶುತೋಷ್ ಮತ್ತೊಂದು ವೀರೋಚಿತ ಹೋರಾಟಕ್ಕೆ ದಕ್ಕದ ಜಯ; ಕೇವಲ 2 ರನ್‌ಗಳಿಂದ ಪಂದ್ಯ ಗೆದ್ದ ಹೈದರಾಬಾದ್
Indian Premier League 2024 Updates: ಐಪಿಎಲ್ 17ರ ಆವೃತ್ತಿಯ 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 2 ರನ್‌ಗಳ ರೋಚಕ ಜಯ ಸಾಧಿಸಿದೆ. ಮುಲ್ಲಾನ್‌ಪುರದಲ್ಲಿ ನಡೆದ ಪಂದ್ಯವು ಕೊನೆಯ ಎಸೆತದವರೆಗೂ ರೋಚಕವಾಗಿ ಸಾಗಿತು. ಅಂತಿಮವಾಗಿ ಪ್ಯಾಟ್ ಕಮಿನ್ಸ್ ಪಡೆ ಗೆಲುವಿನ ನಗೆ ಬೀರಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 2024ರ ಆವೃತ್ತಿಯಲ್ಲಿ ತವರಿನ ಹೊರಗೆ ಮೊದಲ ಗೆಲುವು ಒಲಿಸಿಕೊಂಡಿದೆ. ಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧದ ಅತಿ ರೋಚಕ ಕದನದಲ್ಲಿ ಕೇವಲ 2 ರನ್‌ಗಳಿಂದ ಕಮಿನ್ಸ್ ಪಡೆ ಗೆದ್ದು ಬೀಗಿದೆ. ಕೊನೆಯ ಪಂದ್ಯದಂತೆಯೇ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಪಂಜಾಬ್ ಗೆಲುವಿಗೆ ತಮ್ಮಿಂದ ಸಾಧ್ಯವಾದ ಎಲ್ಲಾ ರೀತಿಯ ಪ್ರಯತ್ನ ಮಾಡಿದರು. ಆದರೆ, ತಂಡದ ಗೆಲುವಿಗೆ ಕೇವಲ 2 ರನ್‌ಗಳ ಕೊರತೆಯಾಯ್ತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್‌ಆರ್‌ಎಚ್ 9 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಚೇಸಿಂಗ್ ನಡೆಸಿದ ಪಂಜಾಬ್ 6 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತು. ಹೀಗಾಗಿ 2 ರನ್‌ಗಳಿಂದ ಸನ್‌ರೈಸರ್ಸ್ ಗೆಲುವಿನ ಕೇಕೆ ಹಾಕಿತು.
ಹೈದರಾಬಾದ್ ಸ್ಪರ್ಧಾತ್ಮಕ ಮೊತ್ತ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಪವರ್‌ಪ್ಲೇ ಓಳಗಡೆ ತಂಡವು 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಟ್ರಾವಿಸ್ ಹೆಡ್ 21, ಐಡೆನ್ ಮರ್ಕ್ರಾಮ್ 0 ಹಾಗೂ ಅಭಿಷೇಕ್ ಶರ್ಮಾ 16 ರನ್ ಗಳಿಸಿ ಔಟಾದರು. ಸತತ ಎರಡು ವಿಕೆಟ್ ಕಬಳಿಸಿದ ಅರ್ಷದೀಪ್ ತಂಡಕ್ಕೆ ಆರಂಭದಲ್ಲೇ ಮುನ್ನಡೆ ತಂಡದುಕೊಟ್ಟರು.
ಇದನ್ನೂ ಓದಿ | ಚೆಪಾಕ್ ಅಭಿಮಾನಿಗಳಿಗೆ ಪ್ರಾಂಕ್ ಮಾಡಿದ ಜಡೇಜಾ; ಕ್ಷಣಮಾತ್ರದಲ್ಲೇ ಬ್ಯಾಟ್ ಹಿಡಿದು ಮೈದಾನಕ್ಕಿಳಿದ್ರು ತಲಾ, Video
ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ರನ್ ಹರಿದುಬರುತ್ತಿತ್ತು. ಭರ್ಜರಿ ಆಟ ಪ್ರದರ್ಶಿಸಿದ ನಿತೀಶ್ ರೆಡ್ಡಿ, ಆರಂಭದಲ್ಲಿ ವಿಕೆಟ್ ಉಳಿಸಿಕೊಂಡರು. ಆ ಬಳಿಕ ಅಬ್ಬರಿಸಿ ಕೇವಲ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸ್ಫೋಟಕ ಸಿಕ್ಸರ್ ಸಹಾಯದಿಂದ 64 ರನ್ ಸಿಡಿಸಿದರು. ತ್ರಿಪಾಠಿ ಆಟ 11 ರನ್‌ಗೆ ಅಂತ್ಯವಾದರೆ, ಡೇಂಜರಸ್ ಬ್ಯಾಟರ್ ಕ್ಲಾಸೆನ್ 9 ರನ್ ಗಳಿಸಿದ್ದಾಗ ಹರ್ಷಲ್ ಪಟೇಲ್ ಎಸೆತದಲ್ಲಿ ಸ್ಯಾಮ್ ಕರನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಸಮದ್ 25 ರನ್ ಗಳಿಸಿದರೆ, ಡೆತ್ ಓವರ್‌ಗಳಲ್ಲಿ ಸಿಡಿದ ಶಹಬಾಜ್ ಅಹ್ಮದ್ ಅಜೇಯ 14 ರನ್ ಕಲೆ ಹಾಕಿದರು.
ಕಿಂಗ್ಸ್ ಪರ ಬೌಲಿಂಗ್‌ನಲ್ಲಿ ಅಬ್ಬರಿಸಿದ ಅರ್ಷದೀಪ್ ಸಿಂಗ್ 4 ವಿಕೆಟ್ ಪಡೆದರೆ, ಸ್ಯಾಮ್ ಕರನ್ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಕಿಂಗ್ಸ್
ಬೃಹತ್ ಗುರಿ ಬೆನ್ನಟ್ಟಿದ ಆತಿಥೇಯ ಪಂಜಾಬ್ ಕೂಡಾ ಆರಂಭದಲ್ಲೇ ಬಲಿಷ್ಠರ ವಿಕೆಟ್ ಕಳೆದುಕೊಂಡಿತು. ಕಮಿನ್ಸ್ ಎಸೆತದಲ್ಲಿ ಜಾನಿ ಬೇರ್‌ಸ್ಟೋ ಡಕೌಟ್ ಆದರೆ, ಪ್ರಭ್‌ಸಿಮ್ರಾನ್ ಸಿಂಗ್ 4 ರನ್ ಗಳಿಸಿ ನಿರ್ಗಮಿಸಿದರು. ನಾಯಕ ಶಿಖರ್ ಧವನ್14 ರನ್ ಗಳಿಸಿದ್ದಾಗ ಸ್ಟಂಪ್ ಔಟ್ ಆದರು. ಪವರ್‌ಪ್ಲೇ ಒಳಗಡೆ ತಂಡದ ಮೂರು ಪ್ರಮುಖ ವಿಕೆಟ್ ಪತನಗೊಂಡಿತು.
ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಬೊಂಬಾಟ್ ಬ್ಯಾಟಿಂಗ್
ಈ ವೇಳೆ ಅಬ್ಬರಿಸಿದ ಸ್ಯಾಮ್ ಕರನ್ ಆಕರ್ಷಕ 29 ರನ್ ಗಳಿಸಿದರು. ಇವರಿಗೆ ಜೊತೆಯಾದ ಸಿಕಂದರ್ ರಜಾ 28 ರನ್ ಗಳಿಸಿದ್ದಾಗ ಔಟಾದರು. ಮೇಲಿಂದ ಮೇಲೆ ವಿಕೆಟ್ ಪತನವಾಗುತ್ತಿದ್ದಾಗ, ಜಿತೇಶ್ ಶರ್ಮಾ ಕೂಡಾ ದೊಡ್ಡ ಹೊಡೆತಕ್ಕೆ ಕೈ ಹಾಕಿ 19 ರನ್ ವೇಳೆಗೆ ಔಟಾದರು. ಕಳೆದ ಪಂದ್ಯದಂತೆ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಒಟ್ಟಾಗಿ ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ನಡೆಸಿದರು. ದೊಡ್ಡ ಹೊಡೆತಗಳೊಂದಿಗೆ ತಂಡದ ರನ್ ಹೆಚ್ಚಿಸಿ ಗೆಲ್ಲಿಸುವ ಎಲ್ಲಾ ರೀತಿಯ ಶ್ರಮ ಹಾಕಿದರು. ಕೊನೆಯ ಒಂದು ಓವರ್‌ನಲ್ಲಿ ತಂಡದ ಗೆಲುವಿಗೆ 29 ರನ್‌ಗಳ ಅಗತ್ಯವಿತ್ತು. ಈ ನಡುವೆಯೂ ಈ ಇಬ್ಬರು ಆಟಗಾರರು ಸೇರಿ 26 ರನ್ ಕಲೆ ಹಾಕಿದರು. ಆದರೆ ಕೇವಲ ಕೇವಲ 2 ರನ್ ಕೊರತೆಯಾಯ್ತು.