ಕನ್ನಡ ಸುದ್ದಿ  /  ಕ್ರಿಕೆಟ್  /  ಫಿಲ್‌ ಸಾಲ್ಟ್‌ ಔಟ್‌, ರಹಮಾನುಲ್ಲಾ ಗುರ್ಬಾಜ್ ಇನ್‌; ಎಸ್‌ಆರ್‌ಎಚ್ ವಿರುದ್ಧದ ಕ್ವಾಲಿಫೈಯರ್‌ ಪಂದ್ಯಕ್ಕೆ ಕೆಕೆಆರ್‌ ಸಂಭಾವ್ಯ ತಂಡ

ಫಿಲ್‌ ಸಾಲ್ಟ್‌ ಔಟ್‌, ರಹಮಾನುಲ್ಲಾ ಗುರ್ಬಾಜ್ ಇನ್‌; ಎಸ್‌ಆರ್‌ಎಚ್ ವಿರುದ್ಧದ ಕ್ವಾಲಿಫೈಯರ್‌ ಪಂದ್ಯಕ್ಕೆ ಕೆಕೆಆರ್‌ ಸಂಭಾವ್ಯ ತಂಡ

ಐಪಿಎಲ್‌ 2024ರ ಮೊದಲ ಕ್ವಾಲಿಫೈಯರ್‌ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ಮಾಜಿ ಚಾಂಪಿಯನ್‌ಗಳಾದ ಕೆಕೆಆರ್‌ ಮತ್ತು ಎಸ್‌ಆರ್‌ಎಚ್‌ ತಂಡಗಳು ರೋಚಕ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ. ಗೆದ್ದ ತಂಡವು ಫೈನಲ್‌ ಪ್ರವೇಶಿಸಲಿದೆ.

ಎಸ್‌ಆರ್‌ಎಚ್ ವಿರುದ್ಧದ ಕ್ವಾಲಿಫೈಯರ್‌ ಪಂದ್ಯಕ್ಕೆ ಕೆಕೆಆರ್‌ ಸಂಭಾವ್ಯ ತಂಡ
ಎಸ್‌ಆರ್‌ಎಚ್ ವಿರುದ್ಧದ ಕ್ವಾಲಿಫೈಯರ್‌ ಪಂದ್ಯಕ್ಕೆ ಕೆಕೆಆರ್‌ ಸಂಭಾವ್ಯ ತಂಡ (PTI)

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (KKR vs SRH) ತಂಡಗಳು ಐಪಿಎಲ್‌ 2024ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಮೇ 21ರ ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಭಯ ತಂಡಗಳ ಹಣಾಹಣಿಗೆ ಅಖಾಡ ಸಜ್ಜಾಗಿದೆ. ಪ್ರಸಕ್ತ ಆವೃತ್ತಿಯ ಪಂದ್ಯಾವಳಿಯ ಗುಂಪು ಹಂತದ ಪಂದ್ಯಗಳು ಅಂತ್ಯಗೊಂಡ ನಂತರ ಟೂರ್ನಿಯ ಅಗ್ರ ಎರಡು ತಂಡಗಳು ಈ ಪಂದ್ಯದಲ್ಲಿ ಆಡುತ್ತಿವೆ. ಹೀಗಾಗಿ ಸಹಜವಾಗಿಯೇ ಪಂದ್ಯ ಆಸಕ್ತಿ ಮೂಡಿಸಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಅತ್ತ ಸೋತ ತಂಡ ಕೂಡಾ ನಿರಾಶೆ ಅನುಭವಿಸಬೇಕಾಗಿಲ್ಲ. ಏಕೆಂದರೆ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಮತ್ತೊಂದು ಅವಕಾಶ ಪಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಮಹತ್ವದ ಪಂದ್ಯಕ್ಕೆ ಕೋಲ್ಕತ್ತಾ ತಂಡದ ಆಡುವ ಬಳಗ ಹೇಗಿರಲಿದೆ ಎಂಬುದನ್ನು ನೋಡೋಣ. ಟೂರ್ನಿಯು ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಐಪಿಎಲ್‌ನಲ್ಲಿ ಆಡುತ್ತಿದ್ದ ಇಂಗ್ಲೆಂಡ್‌ ಆಟಗಾರರೆಲ್ಲಾ ತಮ್ಮ ತಮ್ಮ ತಂಡ ತೊರೆದು ತವರಿಗೆ ಮರಳಿದ್ದಾರೆ. ಅದರಂತೆಯೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಕೂಡಾ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಹೀಗಾಗಿ ಸನ್‌ರೈಸರ್ಸ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೆಕೆಆರ್‌ ತಂಡ ಸಾಲ್ಟ್‌ ಇಲ್ಲದೆ ರುಚಿ ಕಳೆದುಕೊಳ್ಳಲಿದೆ.

ಟೂರ್ನಿಯಲ್ಲಿ ಸಾಲ್ಟ್‌ ಪ್ರಚಂಡ ಫಾರ್ಮ್‌ನಲ್ಲಿದ್ದರು. ಸುನಿಲ್‌ ನರೈನ್‌ ಜೊತೆಗೆ ಅಮೋಘ ಪ್ರದರ್ಶನ ನೀಡಿದ್ದರು. ಇದೀಗ ಅವರ ಅನುಪಸ್ಥಿತಿಯಲ್ಲಿ ರಹಮಾನುಲ್ಲಾ ಗುರ್ಬಾಜ್ ಆಡುವ ಬಳಗ ಸೇರಿಕೊಳ್ಳುವ ಸಾಧ್ಯತೆಯಿದೆ. ಸುನಿಲ್ ನರೈನ್ ಅವರೊಂದಿಗೆ ಬ್ಯಾಟಿಂಗ್ ತೆರೆಯುವ ನಿರೀಕ್ಷೆ ಇದೆ. ಉಳಿದಂತೆ ಕೆಕೆಆರ್‌ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಾಗುವ ಸಾಧ್ಯತೆ ಇಲ್ಲ.

ವೆಂಕಟೇಶ್ ಅಯ್ಯರ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದರೆ, ನಾಯಕ ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಸ್ಫೋಟಕ ಬ್ಯಾಟರ್‌ಗಳಾದ ರಿಂಕು ಸಿಂಗ್ ಹಾಗೂ ಆಂಡ್ರೆ ರಸೆಲ್ ಫೀನಿಶರ್‌ ಪಾತ್ರ ವಹಿಸಲಿದ್ದಾರೆ. ರಮಣದೀಪ್ ಸಿಂಗ್ ಕೂಡಾ ಬ್ಯಾಟಿಂಗ್‌ಗೆ ನೆರವಾಗಬಲ್ಲರು. ಮಿಚೆಲ್ ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾ ವೇಗಿಗಳು. ಇವರಿಗೆ ಸ್ಪಿನ್ನರ್‌ ಆಗಿ ವರುಣ್ ಚಕ್ರವರ್ತಿ ಸಾಥ್‌ ನೀಡಲಿದ್ದಾರೆ.

ಕೊನೆಯ ಎರಡು ಪಂದ್ಯಗಳು ರದ್ದು

ಗುಂಪು ಹಂತದಲ್ಲಿ ತಂಡದ ಕೊನೆಯ ಎರಡೂ ಪಂದ್ಯಗಳು ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಸುದೀರ್ಘ ಅಂತರದ ನಂತರ ತಂಡ ಮೈದಾನಕ್ಕಿಳಿಯುತ್ತಿದೆ. ಈ ವೇಳೆ ತಂಡದ ಸಂಯೋಜನೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಎರಡು ಬಾರಿಯ ಚಾಂಪಿಯನ್‌ ಆಗಿರುವ ಕೆಕೆಆರ್‌, ಕೊನೆಯ ಬಾರಿಗೆ 2014ರಲ್ಲಿ ಟ್ರೋಫಿ ಗೆದ್ದಿತ್ತು. ಎರಡು ಬಾರಿಯೂ ಗೌತಮ್‌ ಗಂಭೀರ್‌ ತಂಡದ ನಾಯಕನಾಗಿದ್ದರು. ಈ ಬಾರಿ ತಂಡ ಗೆದ್ದರೆ ಅದು ಮೂರನೇ ಪ್ರಶಸ್ತಿಯಾಗಲಿದೆ. ವಿಶೇಷವೆಂದರೆ ಈ ಬಾರಿ ಗೌತಮ್ ಗಂಭೀರ್‌ ಮತ್ತೆ ತಂಡಕ್ಕೆ ಮರಳಿದ್ದು ಮೆಂಟರ್‌ ಆಗಿದ್ದಾರೆ. ಈಗ ಮತ್ತೆ ಕಪ್‌ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ

ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಕೆಕೆಆರ್ ಇಂಪ್ಯಾಕ್ಟ್ ಆಟಗಾರ: ವೈಭವ್ ಅರೋರಾ.

ಇದನ್ನೂ ಓದಿ | ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024