ಕನ್ನಡ ಸುದ್ದಿ  /  Cricket  /  Ipl 2024 Rajasthan Royals Riyan Parag Back To Form With Third Half Century In Ipl Career Against Delhi Capitals Jra

ಟ್ರೋಲ್‌​​ಗಳಿಂದ ಸುದ್ದಿಯಾಗಿದ್ದ ರಿಯಾನ್ ಪರಾಗ್​ ಪವರ್‌ಫುಲ್ ಪ್ರದರ್ಶನ; ಡೆಲ್ಲಿ ವಿರುದ್ಧ ಅಬ್ಬರಿಸಿದ‌ ರಾಜಸ್ಥಾನ ರಾಯಲ್ಸ್ ಬ್ಯಾಟರ್

‌Riyan Parag: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಜಸ್ಥಾನ ರಾಯಲ್ಸ್‌ ತಂಡದ ಭರವಸೆಯ ಆಟಗಾರ ರಿಯಾನ್ ಪರಾಗ್ ಕೇವಲ 45 ಎಸೆತಗಳಲ್ಲಿ ಅಜೇಯ 84 ರನ್ ಸಿಡಿಸಿದರು. ಐಪಿಎಲ್‌ ವೃತ್ತಿಬದುಕಿನಲ್ಲಿ ತಮ್ಮ ಮೂರನೇ ಅರ್ಧಶತಕ ಸಿಡಿಸಿದರು.

 ಡೆಲ್ಲಿ ವಿರುದ್ಧ  ರಿಯಾನ್ ಪರಾಗ್​ ಪವರ್‌ಫುಲ್ ಪ್ರದರ್ಶನ
ಡೆಲ್ಲಿ ವಿರುದ್ಧ ರಿಯಾನ್ ಪರಾಗ್​ ಪವರ್‌ಫುಲ್ ಪ್ರದರ್ಶನ

ರಾಜಸ್ಥಾನ್ ರಾಯಲ್ಸ್‌ ತಂಡವು ಹಲವು ವರ್ಷಗಳಿಂದ ಮಧ್ಯಮ ಕ್ರಮಾಂಕದ ಆಟಗಾರ ರಿಯಾನ್ ಪರಾಗ್ (Riyan Parag) ಅವರನ್ನು ಸಮರ್ಥನೆ ಮಾಡುತ್ತಾ ಬಂದಿದೆ. ಆದರೆ, ಪರಾಗ್ ಅಬ್ಬರಿಸಿದ್ದಕ್ಕಿಂತ ಟೀಕೆಗಳಿಗೆ ಗುರಿಯಾಗಿದ್ದೇ ಹೆಚ್ಚು.‌ ಇದುವರೆಗೆ ಐಪಿಎಲ್‌ ಇನ್ನಿಂಗ್ಸ್‌ನಲ್ಲಿ ಪರಾಗ್‌ ಅವರಿಂದ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ಬಂದಿದ್ದು ಕಡಿಮೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸಿಡಿದೆದ್ದ ಯುವ ಆಟಗಾರ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ಸಿಡಿದಿದ್ದ ಅಸ್ಸಾಂ ಮೂಲದ ಕ್ರಿಕೆಟಿಗ, ಮಾರ್ಚ್‌ 28ರ ಶುಕ್ರವಾರದ ಪಂದ್ಯದಲ್ಲಿ ರಾಜಸ್ಥಾನ ತಂಡದ ಪರ ಪ್ರಚಂಡ ಆಟವಾಡಿದ್ದಾರೆ. ಆ ಮೂಲಕ ಎಲ್ಲಾ ಟೀಕೆಗಳಿಗೂ ಬ್ಯಾಟ್‌ನಿಂದಲೇ ಉತ್ತರಿಸಿದ್ದಾರೆ.

ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಡೆಲ್ಲಿ ವಿರುದ್ಧ 22 ವರ್ಷದ ಬ್ಯಾಟರ್‌ ರಿಯಾನ್‌ ಪರಾಗ್ ಕೇವಲ 45 ಎಸೆತಗಳಲ್ಲಿ ಅಜೇಯ 84 ರನ್ ಬಾರಿಸಿದ್ದಾರೆ. ಆ ಮೂಲಕ ರಾಯಲ್ಸ್ ತಂಡವು ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದಾರೆ. ಪರಾಗ್‌ ಅಜೇಯ ಆಟದ ನೆರವಿಂದ ಪಂದ್ಯದಲ್ಲಿ ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.

ಟಾಸ್‌ ಸೋತು ಪಂದ್ಯದಲ್ಲಿ ಬ್ಯಾಟಿಂಗ್ ನಡೆಸಿದ ರಾಜಸ್ಥಾನಕ್ಕೆ ಆರಂಭದಿಂದೇ ಮೇಲಿಂದ ಮೇಲೆ ಆಘಾತ ಎದುರಾಯ್ತು. ಪವರ್‌ರ್ಪ್ಲೇ ಒಳಗಡೆ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅಲ್ಪ ಮೊತ್ತಕ್ಕೆ ಔಟಾದರು. ಕೆಲವೇ ಹೊತ್ತಿನಲ್ಲಿ ಬಟ್ಲರ್‌ ಕೂಡಾ ವಿಕೆಟ್‌ ಒಪ್ಪಿಸಿದರು. ಅಗ್ರ ಕ್ರಮಾಂಕದ ಅನುಭವಿ ಆಟಗಾರರೇ ವಿಫಲರಾಗಿ ತಂಡ ಸಂಕಷ್ಟದಲ್ಲಿದ್ದಾಗ ಮೈದಾನಕ್ಕೆ ಎಂಟ್ರಿಕೊಟ್ಟ ಪರಾಗ್, ಸ್ಫೋಟಕ ಇನ್ನಿಂಗ್ಸ್‌ ಆಡಿದರು. ಆರಂಭದಲ್ಲಿ ರವಿಚಂದ್ರನ್ ಅಶ್ವಿನ್ ಜೊತೆಗೂಡಿ ಅರ್ಧಶತಕದ ಜೊತೆಯಾಟಕ್ಕೆ ನೆರವಾದ ಪರಾಗ್‌, ಇನ್ನಿಂಗ್ಸ್‌ನ ಕೊನೆಯವರೆಗೂ ತಂಡದಲ್ಲಿ ಉಳಿದು ಇನ್ನಿಂಗ್ಸ್‌ ಮುನ್ನಡೆಸಿದರು.

ಇದನ್ನೂ ಓದಿ | ಇನ್ನೂ ಫಿಟ್‌ ಆಗದ ಸೂರ್ಯಕುಮಾರ್‌ ಯಾದವ್;‌ ಮುಂಬೈ ಇಂಡಿಯನ್ಸ್‌ಗೆ ಸೂರ್ಯೋದಯ ಇನ್ನಷ್ಟು ತಡ

ಒಟ್ಟು 45 ಎಸೆತಗಳನ್ನು ಎದುರಿಸಿದ ಅವರು, ಆರು ಸ್ಫೋಟಕ ಸಿಕ್ಸರ್‌ ಮತ್ತು ಏಳು ಬೌಂಡರಿ ಬಾರಿಸಿದರು. ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಅನ್ರಿಚ್ ನಾರ್ಟ್ಜೆ ಅವರ ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್‌ ಸಹಿತ 25 ರನ್ ಗಳಿಸಿದರು.

2019ರಿಂದ ಒಂದೇ ತಂಡ, ಕೇವಲ 3 ಅರ್ಧಶತಕ

2018ರ ಅಂಡರ್‌ 19 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಪರಾಗ್‌, 2019ರ ಐಪಿಎಲ್‌ ಆವೃತ್ತಿ ವೇಳೆ ರಾಜಸ್ಥಾನ ರಾಯಲ್ಸ್‌ ತಂಡ ಸೇರಿಕೊಂಡರು. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಐಪಿಎಲ್‌ ಪದಾರ್ಪಣೆ ಮಾಡಿದ ಪರಾಗ್‌, ಈವರೆಗೆ ಅಷ್ಟೇನೂ ಅಬ್ಬರಿಸಿಲ್ಲ. ಇದುವರೆಗೆ 56 (ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಇಂದಿನ ಪಂದ್ಯ ಸೇರಿ) ಐಪಿಎಲ್‌ ಪಂದ್ಯಗಳನ್ನಾಡಿರುವ ಪರಾಗ್‌, ಡೆಲ್ಲಿ ವಿರುದ್ಧದ ಅರ್ಧಶತಕ ಸೇರಿ ಈವರೆಗೆ ಸಿಡಿಸಿರುವುದು ಮೂರು ಅರ್ಧಶತಕ ಮಾತ್ರ. ಅಷ್ಟೇನೂ ಉತ್ತಮ ಪ್ರದರ್ಶನ ನೀಡದಿದ್ದರೂ, ಫ್ರಾಂಚೈಸ್‌ ಮಾತ್ರ ಅವರಿಗೆ ಬೆಂಬಲ ನೀಡುತ್ತಾ ಬಂದಿತ್ತು. ಸಾಲು ಸಾಲು ಟೀಕೆಗಳ ನಡುವೆಯೂ ಪರಾಗ್‌ಗೆ ಅವಕಾಶ ನೀಡಿತ್ತು. ಈ ಬಾರಿ ಕ್ರಮಾಂಕದಲ್ಲಿ ಬಡ್ತಿ ನೀಡಿದ್ದ ತಂಡವು, ಯಶಸ್ಸು ಕಂಡಿದೆ.

ಗುರುವಾರದ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಜೀವಂತವಾಗಿ ಉಳಿಸಿದ್ದೇ ಪರಾಗ್.‌ ಅವರ ಬ್ಯಾಟ್‌ನಿಂದ ಸ್ಫೋಟಕ ಇನ್ನಿಂಗ್ಸ್‌ ಹೊರಬರುತ್ತಿದ್ದಂತೆಯೇ, ಜೈಪುರ ಕ್ರೀಡಾಂಗಣದ ದೊಡ್ಡ ಎಲ್‌ಇಡಿ ಪರದೆಯಲ್ಲಿ “ಪ್ರತಿಭೆಯೊಂದು ಹುಟ್ಟಿತು” ಎಂಬ ಬರಹ ಕಾಣಿಸಿಕೊಂಡಿತು. ಪರಾಗ್‌ ವಯಸ್ಸು ಇನ್ನೂ 22 ಮಾತ್ರ. ಯುವ ಆಟಗಾರನಿಗೆ ಇನ್ನೂ ಸಾಕಷ್ಟು ಅವಕಾಶಗಳು ಸಿಗಬೇಕಿದೆ. ಮುಂದೆ ಭಾರತದ ಪರ ಆಡುವ ಕನಸು ಕೂಡಾ ಶೀಘ್ರದಲ್ಲೇ ನನಸಾದರೂ ಅಚ್ಚರಿಯಿಲ್ಲ.