ವಿಜಯ್‌ ಶಂಕರ್‌, ವಿಲಿಯಮ್ಸನ್‌ ಔಟ್; ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಜಯ್‌ ಶಂಕರ್‌, ವಿಲಿಯಮ್ಸನ್‌ ಔಟ್; ರಾಜಸ್ಥಾನ್ ರಾಯಲ್ಸ್ Vs ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ

ವಿಜಯ್‌ ಶಂಕರ್‌, ವಿಲಿಯಮ್ಸನ್‌ ಔಟ್; ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ

RR vs GT: ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯಕ್ಕೆ ಎರಡೂ ತಂಡಗಳಲ್ಲಿ ಗಾಯದ ಸಮಸ್ಯೆ ಇದೆ. ಇದೇ ವೇಳೆ ಕೆಲವು ಆಟಗಾರರು ಇನ್ನೂ ಫಾರ್ಮ್‌ಗೆ ಬಂದಿಲ್ಲ. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಗುಜರಾತ್‌ ಟೈಟಾನ್ಸ್, ಪ್ರಸಕ್ತ ಆವೃತ್ತಿಯ ಅಜೇಯ ತಂಡ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಅಬ್ಬರಿಸುವ ಕಾತರದಲ್ಲಿದೆ.

ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ
ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ

ಐಪಿಎಲ್ 2024ರಲ್ಲಿ ಈವರೆಗೆ ನಡೆದ ಪಂದ್ಯಗಳಲ್ಲಿ ಏಕೈಕ ಅಜೇಯ ತಂಡ ರಾಜಸ್ಥಾನ್ ರಾಯಲ್ಸ್. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಘಟಾನುಘಟಿ ಆಟಗಾರರನ್ನು ಹೊಂದಿರುವ ತಂಡಕ್ಕೆ, ಒಬ್ಬರಲ್ಲದಿದ್ದರೆ ಇನ್ನೊಬ್ಬರು ಸೂಕ್ತ ಸಮಯದಲ್ಲಿ ನೆರವಾಗುತ್ತಿದ್ದಾರೆ. ಈವರೆಗೆ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಸಂಜು ಸ್ಯಾಮ್ಸನ್‌ ಪಡೆಯು, ಸತತ ಐದನೇ ಗೆಲುವಿಗೆ ತಂತ್ರ ರೂಪಿಸಿದೆ. ಆದರೆ, ಅಂಕಪಟ್ಟಿಯ ಅಗ್ರಸ್ಥಾನಿಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಶುಭ್ಮನ್‌ ಗಿಲ್‌ ನೇತೃತ್ವದ ಗುಜರಾತ್‌ ಟೈಟಾನ್ಸ್‌ ಸಜ್ಜಾಗಿದೆ. ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 24ನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳಲ್ಲೂ ಗಾಯದ ಸಮಸ್ಯೆ ಇದೆ. ಪ್ರಬಲ ಆಟಗಾರರು ಕೊನೆಯ ಪಂದ್ಯಗಳಿಂದ ಹೊರಬಿದ್ದಿದ್ದರು. ರಾಜಸ್ಥಾನ ತಂಡಕ್ಕೆ ಯಶಸ್ವಿ ಜೈಸ್ವಾಲ್‌ ಫಾರ್ಮ್‌‌ ಸಮಸ್ಯೆ ಮಾತ್ರವಾಗಿದ್ದರೆ, ಟೈಟಾನ್ಸ್‌ಗೆ ಘಟಾನುಘಟಿಗಳು ಅಬ್ಬರಿಸದಿರುವುದು ತಲೆನೋವಾಗಿದೆ. ಮಾಜಿ ಚಾಂಪಿಯನ್ ಟೈಟಾನ್ಸ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿದ್ದು, ಬಲಿಷ್ಠ ರಾಜಸ್ಥಾನ ವಿರುದ್ಧ ಗೆಲುವಿನ ಸ್ಥಿರತೆ ಕಾಪಾಡಲು ಪುಟಿದೇಳಬೇಕಾಗಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ಕೊನೆಯ ಎರಡು ಪಂದ್ಯಗಳಿಂದ ಸಂದೀಪ್ ಶರ್ಮಾ ಹೊರಗುಳಿದಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿರುವ ವೇಗಿ, ಆಡುವ ಬಳಗ ಸೇರಿಕೊಳ್ಳುವ ಸಾಧ್ಯತೆ ಇಲ್ಲ. ಗುಜರಾತ್‌ ವಿರುದ್ಧದ ಪಂದ್ಯದ ನಂತರ ಆಡುವ ಬಳಗದ ಆಯ್ಕೆಗೆ ಲಭ್ಯರಾಗಬಹುದು ಎಂದು ತಂಡದ ಸಹಾಯಕ ಕೋಚ್ ಟ್ರೆವರ್ ಪೆನ್ನಿ ಹೇಳಿದ್ದಾರೆ.

ಇದನ್ನೂ ಓದಿ | ಪಂದ್ಯದ ಮೊದಲ ಎಸೆತದಲ್ಲೇ ಔಟಾಗಿ ಕಳಪೆ ದಾಖಲೆಗೆ ಕಾರಣರಾದ ಫಿಲ್ ಸಾಲ್ಟ್; ಸಿಎಸ್‌ಕೆ ಪರ ತುಷಾರ್ ದೇಶಪಾಂಡೆ ರೆಕಾರ್ಡ್

ಅತ್ತ ಫಿಟ್ ಆಗಿರುವ ನವದೀಪ್ ಸೈನಿ ಕೂಡಾ ಎನ್‌ಸಿಎಯಿಂದ ಮರಳಿದ್ದಾರೆ. ಆದರೆ, ಆಡುವ ಬಳಗಕ್ಕೆ ಸೇರುವ ಸಾಧ್ಯತೆ ಇಲ್ಲ. ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ತಂಡ ಆಡಿದ ಕೊನೆಯ ಎರಡು ಪಂದ್ಯಗಳಲ್ಲಿ ಯುಜ್ವೇಂದ್ರ ಚಹಾಲ್‌ ಅವರ ಸ್ಥಾನಕ್ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಶುಭಂ ದುಬೆ ಆಡಿದ್ದರು. ಇದು ಈ ಪಂದ್ಯಕ್ಕೂ ಮುಂದುವರೆಯುವುದು ಬಹುತೇಕ ಖಚಿತ.

ಗುಜರಾತ್‌ಗೆ ಗಾಯದ ಬರೆ, ಫಾರ್ಮ್‌ ಸಮಸ್ಯೆ

ಬೆನ್ನು ನೋವಿನಿಂದಾಗಿ ಕೊನೆಯ ಪಂದ್ಯದಿಂದ ಹೊರಬಿದ್ದಿದ್ದ ವಿಕೆಟ್‌ ಕೀಪರ್‌ ವೃದ್ಧಿಮಾನ್ ಸಹಾ, ಈ ಪಂದ್ಯಕ್ಕೆ ಲಭ್ಯರಿದ್ದಾರಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಗುಜರಾತ್ ಟೈಟಾನ್ಸ್ ತಂಡದ ಸ್ಫೋಟಕ ಆಟಗಾರ ಡೇವಿಡ್ ಮಿಲ್ಲರ್ ಅನುಪಸ್ಥಿತಿ, ನಾಯಕ ಶುಭ್ಮನ್‌ ಗಿಲ್‌ಗೆ ದೊಡ್ಡ ತಲೆನೋವಾಗಿದೆ. ರಾಜಸ್ಥಾನ ವಿರುದ್ಧದ ಘರ್ಷಣೆಗೆ ಅವರು ಫಿಟ್ ಆಗುವ ಸಾಧ್ಯತೆ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ದಕ್ಷಿಣ ಆಫ್ರಿಕ ಬ್ಯಾಟರ್ ಮುಂದಿನ ಪಂದ್ಯದ ವೇಳೆಗೆ ಆಡುವ ಬಳಗಕ್ಕೆ ಮರುಳುವ ಸಾಧ್ಯತೆ ಇದೆ.

ವಿಜಯ್‌ ಶಂಕರ್‌, ವಿಲಿಯಮ್ಸನ್‌ ಹೊರಕ್ಕೆ?

ತಂಡದ ಪ್ರಮುಖ ಸದಸ್ಯ ವಿಜಯ್ ಶಂಕರ್ ಫಾರ್ಮ್‌ನಲ್ಲಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ತಂಡವು ಶಾರುಖ್ ಖಾನ್ ಅಥವಾ ಅಭಿನವ್ ಮನೋಹರ್ ಅವರನ್ನು ಆಡಿಸಬಹುದು. ಇದೇ ವೇಳೆ ವಿದೇಶಿ ಆಟಗಾರ ಕೇನ್ ವಿಲಿಯಮ್ಸನ್ ಬದಲಿಗೆ ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್ ಕೂಡಾ ಸ್ಥಾನ ಪಡೆಯುವ ಸಾಧ್ಯತೆ ಇದೆ. ಅತ್ತ ಸಾಹಾ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್‌ ಕೂಡಾ ಸಿಕ್ಕಂತಾಗುತ್ತದೆ. ಪಂದ್ಯಾವಳಿಯುದ್ದಕ್ಕೂ ವೇಗಿ ಮೋಹಿತ್ ಶರ್ಮಾ ಇಂಪ್ಯಾಕ್ಟ್ ಆಯ್ಕೆಯಾಗಿದ್ದು, ಈ ಸಂಪ್ರದಾಯ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.

ರಾಜಸ್ಥಾನ ರಾಯಲ್ಸ್‌ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್‌ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಹಾಲ್, ಶುಭಂ ದುಬೆ (ಇಂಪ್ಯಾಕ್ಟ್‌ ಆಟಗಾರ).

ಗುಜರಾತ್‌ ಟೈಟಾನ್ಸ್‌ ಸಂಭಾವ್ಯ ತಂಡ

ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಮ್ಯಾಥ್ಯೂ ವೇಡ್/ಕೇನ್ ವಿಲಿಯಮ್ಸನ್, ಬಿಆರ್‌ ಶರತ್ (ವಿಕೆಟ್‌ ಕೀಪರ್), 5 ವಿಜಯ್ ಶಂಕರ್/ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ದರ್ಶನ್ ನಲ್ಕಂಡೆ,ನೂರ್ ಅಹ್ಮದ್ , ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ಮೋಹಿತ್ ಶರ್ಮಾ (ಇಂಪ್ಯಾಕ್ಟ್‌ ಆಟಗಾರ).

Whats_app_banner