ಪಂಜಾಬ್‌ ಕಿಂಗ್ಸ್‌ vs ರಾಜಸ್ಥಾನ್‌ ರಾಯಲ್ಸ್; ಸಂಭಾವ್ಯ ತಂಡ, ಪಿಚ್‌ ಹಾಗೂ ಹವಾಮಾನ ವರದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಂಜಾಬ್‌ ಕಿಂಗ್ಸ್‌ Vs ರಾಜಸ್ಥಾನ್‌ ರಾಯಲ್ಸ್; ಸಂಭಾವ್ಯ ತಂಡ, ಪಿಚ್‌ ಹಾಗೂ ಹವಾಮಾನ ವರದಿ

ಪಂಜಾಬ್‌ ಕಿಂಗ್ಸ್‌ vs ರಾಜಸ್ಥಾನ್‌ ರಾಯಲ್ಸ್; ಸಂಭಾವ್ಯ ತಂಡ, ಪಿಚ್‌ ಹಾಗೂ ಹವಾಮಾನ ವರದಿ

ಐಪಿಎಲ್‌ 2024ರ ಪ್ಲೇಆಫ್‌ ಹಂತಕ್ಕೇರಿರುವ ರಾಜಸ್ಥಾನ್‌ ರಾಯಲ್ಸ್‌ ತಂಡವು, ಔಪಚಾರಿಕ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆಲ್ಲಲೇ ಬೇಕಿದೆ.

ಪಂಜಾಬ್‌ vs ರಾಜಸ್ಥಾನ್‌ ಸಂಭಾವ್ಯ ತಂಡ, ಪಿಚ್‌ ಹಾಗೂ ಹವಾಮಾನ ವರದಿ
ಪಂಜಾಬ್‌ vs ರಾಜಸ್ಥಾನ್‌ ಸಂಭಾವ್ಯ ತಂಡ, ಪಿಚ್‌ ಹಾಗೂ ಹವಾಮಾನ ವರದಿ

ಒಂದು ಹಂತದಲ್ಲಿ ಐಪಿಎಲ್‌ 2024ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್, ಆ ಬಳಿಕ ಸದ್ಯ ಎರಡನೇ ಸ್ಥಾನದಲ್ಲಿದೆ. ಮಂಗಳವಾರದ ಪಂದ್ಯದ ಬಳಿಕ ಅಧಿಕೃತವಾಗಿ ಪ್ಲೇಆಫ್‌ ಪ್ರವೇಶಿಸಿರುವ ಸಂಜು ಸ್ಯಾಮ್ಸನ್‌ ಪಡೆಯು, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆದ್ದು, ಅಗ್ರ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಉಳಿಸಿಕೊಳ್ಳುವ ತವಕದಲ್ಲಿದೆ. ಪಂದ್ಯಾವಳಿಯಲ್ಲಿ ಸತತ ಗೆಲುವುಗಳೊಂದಿಗೆ ಬೀಗುತ್ತಿದ್ದ ತಂಡವು, ಕೊನೆಯ ಮೂರು ಪಂದ್ಯಗಳಲ್ಲಿ ಸತತ ಸೋಲುಗಳೊಂದಿಗೆ ಮುಗ್ಗರಿಸಿದೆ. ಇದೀಗ ಗುವಾಹಟಿಯ ಬರ್ಸಪರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಜಸ್ಥಾನವು ಅದೃಷ್ಟ ಪರೀಕ್ಷೆಗಿಳಿದಿದೆ.

ಮಹತ್ವದ ಪಂದ್ಯಕ್ಕೂ ಮುನ್ನ ತಂಡವು ಪ್ರಬಲ ಆರಂಭಿಕ ಆಟಗಾರ ಜೋಸ್ ಬಟ್ಲರ್ ಸೇವೆಯನ್ನು ಕಳೆದುಕೊಂಡಿದೆ. ರಾಷ್ಟ್ರೀಯ ತಂಡ ಇಂಗ್ಲೆಂಡ್‌ ಪರ ಆಡುವ ಸಲುವಾಗಿ ಬಟ್ಲರ್‌ ತವರಿಗೆ ಮರಳಿದ್ದಾರೆ. ಇದು ತಂಡದ ಪ್ಲೇಆಫ್‌ ಹಾದಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಅತ್ತ ಗಾಯಾಳು ಶಿಮ್ರಾನ್ ಹೆಟ್ಮೆಯರ್ ಚೇತರಿಕೆ ಕುರಿತು ಮಾಹಿತಿ ಇಲ್ಲ. ಹೀಗಾಗಿ ರಾಜಸ್ಥಾನಕ್ಕೆ ತಲೆನೋವು ಶುರುವಾಗಿದೆ.

ಸದ್ಯ ಬಟ್ಲರ್‌ ಸ್ಥಾನ ತುಂಬುವ ಆಟಗಾರ ಯಾರು ಎಂಬುದು ದೊಡ್ಡ ಪ್ರಶ್ನೆ. ಟಾಮ್ ಕೊಹ್ಲರ್-ಕ್ಯಾಡ್ಮೋರ್ ಅವರು ಆಡುವ ಬಳಗಕ್ಕೆ ಮರಳುವ ನಿರೀಕ್ಷೆ ಇದೆ. ಭಾರತದಲ್ಲಿ ಇನ್ನೂ ಟಿ20 ಪಂದ್ಯ ಆಡಿದ ಅನುಭವ ಇವರಿಗಿಲ್ಲ. ಹೀಗಾಗಿ ಆರ್‌ಆರ್‌ ನಡೆ ಕುತೂಹಲ ಮೂಡಿಸಿದೆ. ಹೆಟ್ಮೆಯರ್ ಫಿಟ್ ಆಗಿದ್ದರೆ ಆಡುವ ಸಾಧ್ಯತೆ ಇದ್ದು, ಪಂದ್ಯದ ಪರಿಸ್ಥಿತಿಗಳಿಗೆ ಅನುಗುಣವಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ರೋವ್ಮನ್ ಪೊವೆಲ್ ಅಥವಾ ನಾಂಡ್ರೆ ಬರ್ಗರ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿ | ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಲಕ್ನೋ ಬೌಲಿಂಗ್‌ ಆಯ್ಕೆ;‌ ಉಭಯ ತಂಡಗಳಲ್ಲೂ ಬದಲಾವಣೆ, ನಾಯಕನಾಗಿ ಮರಳಿದ ಪಂತ್

ಪಂಜಾಬ್‌ ಕಿಂಗ್ಸ್‌ ಕ್ಯಾಂಪ್‌ ತೊರೆದು ಲಿಯಾಮ್ ಲಿವಿಂಗ್‌ಸ್ಟನ್ ತವರಿಗೆ ಮರಳಿದ್ದಾರೆ. ಇದೇ ವೇಳೆ ಸ್ಯಾಮ್ ಕರನ್ ಮತ್ತು ಜಾನಿ ಬೈರ್‌ಸ್ಟೋ ಸದ್ಯ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ಕರ್ನಾಟಕದ ಸ್ವಿಂಗ್ ಬೌಲರ್ ವಿದ್ವತ್ ಕಾವೇರಪ್ಪ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮತ್ತೊಮ್ಮೆ ಛಾಪು ಮೂಡಿಸುವ ನಿರೀಕ್ಷೆ ಇದೆ.

ಗುವಾಹಟಿ ಪಿಚ್‌ ವರದಿ

2024ರ ಐಪಿಎಲ್‌ನಲ್ಲಿ ಗುವಾಹಟಿಯಲ್ಲಿ ಮೊದಲ ಪಂದ್ಯ ನಡೆಯುತ್ತಿದೆ. 2021ರಿಂದ ಐಪಿಎಲ್‌ನಲ್ಲಿ ಈ ಮೈದಾನದಲ್ಲಿ ಕೇವಲ ಎರಡು ಪಂದ್ಯಗಳು ಮಾತ್ರ ನಡೆದಿವೆ. ಈ ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಟಾಸ್‌ ಗೆದ್ದ ತಂಡ ಬ್ಯಾಟಿಂಗ್‌ ಆಯ್ಕೆ ಮಾಡುವ ನಿರೀಕ್ಷೆ ಇದೆ.

ಗುವಾಹಟಿ ಹವಾಮಾನ ವರದಿ

ಪಂದ್ಯದ ದಿನ ಹಗಲಿನ ವೇಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಸಂಜೆಯ ನಂತರ ಸ್ವಚ್ಛಂದ ಆಕಾಶ ಕಾಣುವ ಸಾಧ್ಯತೆ ಇದೆ. ಮುನ್ಸೂಚನೆ ಪ್ರಕಾರ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ.

ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ ಮತ್ತ ವಿಕೆಟ್‌ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಾಲ್, ನಾಂದ್ರೆ ಬರ್ಗರ್/ ರೋವ್ಮನ್ ಪೊವೆಲ್ (ಇಂಪ್ಯಾಕ್ಟ್ ಪ್ಲೇಯರ್).

ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ

ಪ್ರಭಾಸಿಮ್ರಾನ್ ಸಿಂಗ್, ಜಾನಿ ಬೈರ್‌ಸ್ಟೋವ್ (ವಿಕೆಟ್‌ ಕೀಪರ್), ರಿಲೀ ರೊಸೊವ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ, ಅಶುತೋಷ್ ಶರ್ಮಾ, ಸ್ಯಾಮ್ ಕರನ್ (ನಾಯಕ), ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್ ಅರ್ಷದೀಪ್ ಸಿಂಗ್, ವಿದ್ವತ್ ಕಾವೇರಪ್ಪ/ ಹರ್ಪ್ರೀತ್ ಬ್ರಾರ್ (ಇಂಪ್ಯಾಕ್ಟ್ ಪ್ಲೇಯರ್).

Whats_app_banner