ಕ್ರಿಕೆಟ್ ಪ್ರಿಯರಿಗೆ ಕಹಿಸುದ್ದಿ; ಲೋಕಸಭಾ ಚುನಾವಣೆ ಎಫೆಕ್ಟ್, ಐಪಿಎಲ್ ಎರಡನೇ ಹಂತ ದುಬೈಗೆ ಶಿಫ್ಟ್?
IPL 2024 : ಲೋಕಸಭಾ ಚುನಾವಣೆ-2024 ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಎರಡನೇ ಹಂತದ ಪಂದ್ಯಗಳನ್ನು ಯುಎಇಗೆ ಶಿಫ್ಟ್ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ.

ಲೋಕಸಭಾ ಚುನಾವಣೆಗೆ (General Elections 2024) ದಿನಾಂಕ ಪ್ರಕಟವಾಗಿದೆ. 543 ಸ್ಥಾನಗಳಿಗೆ ಏಪ್ರಿಲ್ 19ರಿಂದ ಏಳು ಹಂತಗಳಲ್ಲಿ ಚುನಾವಣೆ ಜರುಗಲಿದೆ. ಫಲಿತಾಂಶ ಜೂನ್ 4ರಂದು ಪ್ರಕಟಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಇದರ ನಡುವೆ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ (Indian Premier League) ದ್ವಿತೀಯಾರ್ಧವನ್ನು ಬೇರೆಡೆಗೆ ಸ್ಥಳಾಂತರಿಸಲು ಬಿಸಿಸಿಐ (BCCI) ಚಿಂತಿಸಿದೆ.
ಈಗಾಗಲೇ ಮೊದಲ ಹಂತದ ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮಾರ್ಚ್ 22ರಿಂದ ಏಪ್ರಿಲ್ 7ರ ತನಕ ಪಂದ್ಯಗಳು ನಡೆಯಲಿವೆ. ಆದರೆ ಚುನಾವಣೆ ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಜೂನ್ 1ರವರೆಗೂ ಜರುಗುವ ಕಾರಣ, ಐಪಿಎಲ್ ದ್ವಿತಿಯಾರ್ಧವನ್ನು ಯುಎಇಗೆ ಶಿಫ್ಟ್ ಮಾಡಲು ಬಿಸಿಸಿಐ ಯೋಚಿಸಿದೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭಾ ಚುನಾವಣಾ ಕಾರ್ಯಗಳು ನಡೆಯುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್-2024ರ ಋತುವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಸ್ಥಳಾಂತರಿಸಬಹುದು ಎಂದು ಹೇಳಲಾಗುತ್ತಿದೆ. ಲೀಗ್ನ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಸಿಸಿಐ ಪ್ರಕಟಿಸಿದೆ. ಶೀಘ್ರವೇ ಬಿಸಿಸಿಐ ಈ ಕುರಿತು ಮಾಹಿತಿ ನೀಡಲಿದೆ.
ಐಪಿಎಲ್ 2024ರ ದ್ವಿತೀಯಾರ್ಧವನ್ನು ಯುಎಇಗೆ ಸ್ಥಳಾಂತರಿಸುವ ಸಾಧ್ಯತೆಯನ್ನು ಅನ್ವೇಷಿಸಲು ಬಿಸಿಸಿಐ ಅಧಿಕಾರಿಗಳು ಪ್ರಸ್ತುತ ದುಬೈನಲ್ಲಿದ್ದಾರೆ. ಐಪಿಎಲ್ ತಂಡಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ಸಲ್ಲಿಸಲು ಆಟಗಾರರನ್ನು ಕೇಳಿಕೊಂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಕೋವಿಡ್ ಸಮಯದಲ್ಲಿ ದುಬೈನಲ್ಲಿ ಐಪಿಎಲ್ ಅನ್ನು ಆಯೋಜಿಸಲಾಗಿತ್ತು.
2014ರ ಸಾರ್ವತ್ರಿಕ ಚುನಾವಣೆ ಅವಧಿಯಲ್ಲೂ ಐಪಿಎಲ್ ಮೊದಲ ಭಾಗದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಿತ್ತು. 2020ರಲ್ಲೂ ಭಾರತದಲ್ಲಿ ಕೊರೊನಾ ಕಾರಣ ಇಡೀ ಟೂರ್ನಿಯನ್ನು ದುಬೈನಲ್ಲೇ ಆಯೋಜಿಸಿತ್ತು. ಸದ್ಯ 2024ರ ಐಪಿಎಲ್ ಅನ್ನು ದುಬೈನಲ್ಲೇ ನಡೆಸುವ ಬಗ್ಗೆ ಖಚಿತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಪ್ರಸ್ತುತ ಚುನಾವಣಾ ದಿನಾಂಕವನ್ನು ನೋಡಿಕೊಂಡು ಈ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ಭಾರತದಲ್ಲಿ ಭದ್ರತೆ ಸಮಸ್ಯೆ
ಏಪ್ರಿಲ್ 19ರಿಂದ ಏಳು ಹಂತದಲ್ಲಿ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಇದರ ಮಧ್ಯೆ ಐಪಿಎಲ್ ಅನ್ನು ಆಯೋಜಿಸಿದರೆ ಭದ್ರತೆ ಸಮಸ್ಯೆ ಕಾಣಲಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಯೋಜಿಸಲು ಕಷ್ಟಸಾಧ್ಯವಾಗಲಿದೆ. ಒಂದು ವೇಳೆ ಯುಎಇಗೆ ಐಪಿಎಲ್ ಶಿಫ್ಟ್ ಆದರೆ ಮೂರನೇ ಬಾರಿಗೆ ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ.
ಫೆಬ್ರವರಿ 22ರಂದು ಐಪಿಎಲ್ ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ದಿನಾಂಕ ಘೋಷಿಸಿದ ನಂತರ ಎರಡನೇ ಹಂತದ ವೇಳಾಪಟ್ಟಿ ಬಹಿರಂಗಪಡಿಸುವುದಾಗಿ ಬಿಸಿಸಿಐ ಹೇಳಿತ್ತು. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ.
ಐಪಿಎಲ್ ಟೂರ್ನಿಯನ್ನು ಬೇಗ ಮುಕ್ತಾಯಗೊಳಿಸಲು ಬಿಸಿಸಿಐ ಚಿಂತಿಸುತ್ತಿದೆ. ಏಕೆಂದರೆ ಜೂನ್ 1ರಿಂದ ಐಸಿಸಿ ಟಿ20 ವಿಶ್ವಕಪ್ ಜರುಗುವ ಕಾರಣ ಐಪಿಎಲ್ ಬೇಗ ಮುಗಿಸಲು ವಿದೇಶಕ್ಕೆ ಸ್ಥಳಾಂತರ ಮಾಡಬಹುದು ಎಂದು ಕೆಲವು ವರದಿಗಳು ತಿಳಿಸಿವೆ. ಆದರೆ ಬಿಸಿಸಿಐ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
