IPL 2024: ಅಲ್ಜಾರಿ ಜೋಸೆಫ್‌ ಔಟ್, ಫರ್ಗ್ಯುಸನ್ ಇನ್; ಲಕ್ನೋ ವಿರುದ್ಧ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024: ಅಲ್ಜಾರಿ ಜೋಸೆಫ್‌ ಔಟ್, ಫರ್ಗ್ಯುಸನ್ ಇನ್; ಲಕ್ನೋ ವಿರುದ್ಧ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ

IPL 2024: ಅಲ್ಜಾರಿ ಜೋಸೆಫ್‌ ಔಟ್, ಫರ್ಗ್ಯುಸನ್ ಇನ್; ಲಕ್ನೋ ವಿರುದ್ಧ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ

RCB vs LSG: ಆರ್‌ಸಿಬಿ ತಂಡವು, ಐಪಿಎಲ್‌ 2024ರಲ್ಲಿ ಈವರೆಗೆ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಲಕ್ನೋ ತಂಡದ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕಣಕ್ಕಿಳಿಯುತ್ತಿರುವ ತಂಡವು, ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡುವ ನಿರೀಕ್ಷೆ ಇದೆ.

ಲಕ್ನೋ ವಿರುದ್ಧ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ
ಲಕ್ನೋ ವಿರುದ್ಧ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ (PTI)

ತವರು ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸತತ ಮೂರನೇ ಪಂದ್ಯವನ್ನಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಜ್ಜಾಗಿದೆ. ಐಪಿಎಲ್ 2024ರ ಆವೃತ್ತಿಯ 15ನೇ ಪಂದ್ಯದಲ್ಲಿ ಆರ್‌ಸಿಬಿಯ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್‌ (RCB vs LSG). ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಹೀನಾಯವಾಗಿ ಸೋತ ಫಾಪ್‌ ಡುಪ್ಲೆಸಿಸ್‌ ಪಡೆಯು, ಇದೀಗ ಮತ್ತೆ ಗೆಲುವಿನ ಲಯ ಕಂಡುಕೊಳ್ಳುವ ಗುರಿ ಹಾಕಿಕೊಂಡಿದೆ. ಅತ್ತ, ಪಂಜಾಬ್ ಕಿಂಗ್ಸ್ ತಂಡವನ್ನು ತಮ್ಮದೇ ತವರಿನಲ್ಲಿ 21 ರನ್‌ಗಳಿಂದ ಮಣಿಸಿದ ಕೆಎಲ್‌ ರಾಹುಲ್‌ ನಾಯಕತ್ವದ ಲಕ್ನೋ ತಂಡವು ಆರ್‌ಸಿಬಿ ವಿರುದ್ಧ ಗೆದ್ದು ಜಯದ ಓಟ ಮುಂದುವರೆಸುವ ವಿಶ್ವಾಸದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಟೂರ್ನಿಯಲ್ಲಿ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದು ಎರಡು ಅಂಕ ಪಡೆದಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ತಂಡಕ್ಕೆ ತನ್ನ ಬೌಲಿಂಗ್‌ ದೊಡ್ಡ ಚಿಂತೆಯಾಗಿದೆ. ಇದೇ ವೇಳೆ, ವಿರಾಟ್‌ ಕೊಹ್ಲಿ ಹಾಗೂ ದಿನೇಶ್‌ ಕಾರ್ತಿಕ್‌ ಹೊರತಾಗಿ ಇತರರಿಂದ ಸ್ಥಿರ ಪ್ರದರ್ಶನ ಹೊರಬರದೇ ಇರುವುದು ದೊಡ್ಡ ಕಾಳಜಿಯಾಗಿ ಪರಿಣಮಿಸಿದೆ.

ಬಲಿಷ್ಠ ಬ್ಯಾಟಿಂಗ್‌ ಲೈನಪ್‌ ಹೊಂದಿರುವ ಬೆಂಗಳೂರು ತಂಡದಲ್ಲಿ, ಯಾರೂ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಭರವಸೆಯ ಬ್ಯಾಟರ್ ವಿರಾಟ್ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಬಾರಿ ಅರ್ಧ ಶತಕ ಸಿಡಿಸಿದ್ದಾರೆ. ಅದರಲ್ಲೂ ಕೊನೆಯ ಪಂದ್ಯದಲ್ಲಿ ಅಜೇಯ ಆಟವಾಡಿದ್ದರು. ಅಗ್ರ ಕ್ರಮಾಂಕದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್, ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್ ಮತ್ತು ಕ್ಯಾಮರೂನ್ ಗ್ರೀನ್ ಅಬ್ಬರಿಸಬೇಕಿದೆ.

ಇದನ್ನೂ ಓದಿ | ವೈಜಾಗ್ ಮೈದಾನ ಸಿಬ್ಬಂದಿ ಜೊತೆ ಫೋಟೋಗೆ ಪೋಸ್, ಕುಂಟುತ್ತಾ ನಡೆದ ಧೋನಿ; ಸ್ಫೋಟಕ ಬ್ಯಾಟಿಂಗ್ ಬಳಿಕ ಮಾಹಿಗೇನಾಯ್ತು?

ಈವರೆಗೆ ಆಡಿದ ಮೂರು ಪಂದ್ಯಗಳಿಲ್ಲಿ ಅತಿ ಹೆಚ್ಚು ರನ್‌ (181) ಗಳಿಸಿರುವ ವಿರಾಟ್‌ ಆರೆಂಜ್‌ ಕ್ಯಾಪ್‌ ಗೆದ್ದಿದ್ದಾರೆ. ಇದೇ ವೇಳೆ ಡು ಪ್ಲೆಸಿಸ್ 46, ಮ್ಯಾಕ್ಸ್‌ವೆಲ್ 31, ಗ್ರೀನ್ 54 ಹಾಗೂ ಪಾಟೀದಾರ್ 21 ರನ್‌ ಮಾತ್ರ ಗಳಿಸಿದ್ದಾರೆ. ಕೆಳ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಅನುಜ್ ರಾವತ್ ಹಾಗೂ ಮಹಿಪಾಲ್ ಲೊಮ್ರರ್; ಸಿಕ್ಕ ಅವಕಾಶಗಳಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಪಾಟೀದಾರ್‌ ಸತತ ವಿಫಲವಾದ ಹಿನ್ನೆಲೆಯಲ್ಲಿ ಸುಯಶ್ ಪ್ರಭುದೇಸಾಯಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.

ಬ್ಯಾಟಿಂಗ್‌ ಒಂದೆಡೆಯಾದರೆ, ತಂಡಕ್ಕೆ ಬೌಲರ್‌ಗಳ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ. ಡೇಂಜರಸ್‌ ಬೌಲರ್‌ ಮೊಹಮ್ಮದ್ ಸಿರಾಜ್ ಮೂರು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್‌ ಮಾತ್ರ ಪಡೆದಿದ್ದಾರೆ. ಓವರ್‌ಗೆ 10ರಂತೆ ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದಾರೆ. ಅತ್ತ ದುಬಾರಿ ಬೌಲರ್‌ ಅಲ್ಜಾರಿ ಜೋಸೆಫ್‌ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ವಿದೇಶಿ ಬೌಲರ್‌ ಆಯ್ಕೆಯಲ್ಲಿ ಲಾಕಿ ಫರ್ಗ್ಯುಸನ್‌ ಕಣಕ್ಕಿಳಿಸಲು ತಂಡ ಚಿಂತಿಸಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಆಡುವ ಬಳಗ

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಮಯಾಂಕ್ ಡಾಗರ್, ಲಾಕಿ ಫರ್ಗ್ಯುಸನ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

ಇಂಪ್ಯಾಕ್ಟ್ ಆಟಗಾರರು:‌ ಮಹಿಪಾಲ್‌ ಲೋಮ್ರರ್, ಸುಯಶ್ ಪ್ರಭುದೇಸಾಯಿ, ಕರ್ಣ್ ಶರ್ಮಾ, ವಿಜಯ್‌ಕುಮಾರ್ ವೈಶಾಕ್‌, ಸ್ವಪ್ನಿಲ್ ಸಿಂಗ್.

ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ತಂಡ

ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ನವೀನ್-ಉಲ್-ಹಕ್, ಮಯಾಂಕ್ ಯಾದವ್.

Whats_app_banner