ಗ್ರೀನ್ ಔಟ್, ವಿಲ್ ಜ್ಯಾಕ್ಸ್ ಇನ್; ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ
MI vs RCB: ಸತತ ಸೋಲಿನಿಂದಾಗಿ ಗೆಲುವಿನ ಕನಡು ಕಾಣುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಮುಂಬೈ ಇಂಡಿಯನ್ಸ್ ವಿರುದ್ಧ ತಂಡದಲ್ಲಿ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ವಿದೇಶಿ ಆಲ್‌ರೌಂಡರ್‌ಗೆ ಆಡುವ ಬಳಗದಲ್ಲಿ ಅವಕಾಶ ನೀಡಲು ಎಲ್ಲೆಡೆಯಿಂದ ಒತ್ತಾಯ ಕೇಳಿ ಬರುತ್ತಿದೆ.

ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಏಪ್ರಿಲ್ 11ರ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ (Mumbai Indians vs Royal Challengers Bangalore) ತಂಡದ ವಿರುದ್ಧ ಸೆಣಸಲಿದೆ. ಅತ್ತ ಹ್ಯಾಟ್ರಿಕ್ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಪಡೆಯು ಕೊನೆಯ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಿದೆ. ಇದೀಗ ತವರು ನೆಲದಲ್ಲಿ ಸತತ ಎರಡನೇ ಜಯ ಸಾಧಿಸುವ ನಿರೀಕ್ಷೆಯಲ್ಲಿದೆ. ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿರುವ ಉಭಯ ತಂಡಗಳ ನಡುವಿನ ಕದನ ಕುತೂಹಲ ಮೂಡಿಸಿದ್ದು, ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ಹಾಗೂ ರೋಹಿತ್ ಶರ್ಮಾ ಆಟ ಭಾರಿ ನಿರೀಕ್ಷೆ ಮೂಡಿಸಿದೆ.
ಉಭಯ ತಂಡಗಳು ಪ್ರಸಕ್ತ ಋತುವಿನಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಲಿವೆ. ಆರ್‌ಸಿಬಿ ತಂಡವು ಕೊನೆಯ ಮೂರು ಪಂದ್ಯಗಳಲ್ಲಿ ಕೆಕೆಆರ್, ಲಕ್ನೋ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿದೆ. ತಂಡವು ಟೂರ್ನಿಯಲ್ಲಿ ಸಂಪಾದಿಸಿದ ಏಕೈಕ ಗೆಲುವು ತವರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಒಲಿದಿದೆ. ತಂಡದ ಪರ ವಿರಾಟ್ ಕೊಹ್ಲಿ ಒಬ್ಬರೇ ಪ್ರಚಂಡ ಫಾರ್ಮ್‌ನಲ್ಲಿದ್ದು, ರಾಯಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಅವರು ತಮ್ಮ ಎಂಟನೇ ಐಪಿಎಲ್ ಶತಕ ಗಳಿಸಿದ್ದರು. ಆದರೂ ತಂಡ ಸೋಲು ಅನುಭವಿಸಿತ್ತು.
ತಂಡವು ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ಮೇಲೆ ಅತಿಯಾಗಿ ಅವಲಂಬಿಸಿದೆ. ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರೂನ್ ಗ್ರೀನ್ ಅವರಂಥ ಅನುಭವಿ ಹಾಗೂ ಸ್ಫೋಟಕ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಕಳಪೆ ಫಾರ್ಮ್‌ನಲ್ಲಿರುವ ಮ್ಯಾಕ್ಸಿ ಸ್ಥಾನವನ್ನು ಪ್ರಶ್ನಿಸಲಾಗುತ್ತಿದೆ. ಇದರೊಂದಿಗೆ ರಜತ್ ಪಾಟೀದಾರ್ ವೈಫಲ್ಯ ಕೂಡಾ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣವಾಗುತ್ತಿದೆ. ಸದ್ಯ ಮುಬೈ ವಿರುದ್ಧದ ಪಂದ್ಯಕ್ಕೆ ಗ್ರೀನ್ ಕೈಬಿಟ್ಟು ಮತ್ತೋರ್ವ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಕರೆತರುವ ಸಾಧ್ಯತೆ ಇದೆ.
ಬೌಲಿಂಗ್ ವಿಭಾಗ ಸಂಪೂರ್ಣ ಬಲಹೀನ
ತಂಡದ ಬೌಲಿಂಗ್ ವಿಭಾಗದಲ್ಲಿ ಆಳವಿಲ್ಲ. ದುಬಾರಿ ಆಟಗಾರ ಅಲ್ಜಾರಿ ಜೋಸೆಫ್ ಕಳಪೆ ಬೌಲಿಂಗ್ ಹಿನ್ನೆಲೆಯಲ್ಲಿ ಕೊನೆಯ ಎರಡು ಪಂದ್ಯಗಳಿಂದ ಅವರನ್ನು ಹೊರಗಿಡಲಾಗಿದೆ. ರೀಸ್ ಟೋಪ್ಲಿ ತಂಡದಲ್ಲಿದ್ದು ಇದು ಮುಂದುವರೆಯುವ ಸಾಧ್ಯತೆ ಇದೆ. ಇಂಗ್ಲೆಂಡ್‌ನ ಆಲ್‌ರೌಂಡರ್ ವಿಲ್ ಜಾಕ್ಸ್ ಮತ್ತು ಕಿವೀಸ್ ವೇಗಿ ಲಾಕಿ ಫರ್ಗುಸನ್, ಇನ್ನೂ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈ ಇಬ್ಬರನ್ನೂ ಆಡುವ ಬಳಗಕ್ಕೆ ಕರೆಸಿಕೊಳ್ಳಲು ಎಲ್ಲೆಡೆಯಿಂದ ಭಾರಿ ಒತ್ತಾಯ ಕೇಳಿ ಬರುತ್ತಿದೆ. ಹೀಗಾಗಿ ಫ್ರಾಂಚೈಸಿ ಹಾಗೂ ಮ್ಯಾನೇಜ್‌ಮೆಂಟ್ ಮುಂದಿನ ನಿರ್ಧಾರಗಳು ಕುತೂಹಲ ಮೂಡಿಸಿವೆ.
ಇದನ್ನೂ ಓದಿ | ಐಪಿಎಲ್ 2025ರಲ್ಲಿ ಲಕ್ನೋ ಪರ ಆಡ್ತಾರಾ ರೋಹಿತ್ ಶರ್ಮಾ? ಅವರನ್ನು ಮುಂಬೈನಿಂದ ಕರೆತರಲಿದ್ದೇವೆ ಅಂದ್ರು ಜಸ್ಟಿನ್ ಲ್ಯಾಂಗರ್
ಆರ್‌ಸಿಬಿ ಸಂಭಾವ್ಯ ಆಡುವ ಬಳಗ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜ್ಯಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮ್ರರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸೌರವ್ ಚೌಹಾಣ್, ರೀಸ್ ಟೋಪ್ಲಿ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್.
ಮುಂಬೈ ಇಂಡಿಯನ್ಸ್ ಸಂಭಾವ್ಯ ಆಡುವ ಬಳಗ
ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ | ಐಪಿಎಲ್ 2025ರಲ್ಲಿ ಲಕ್ನೋ ಪರ ಆಡ್ತಾರಾ ರೋಹಿತ್ ಶರ್ಮಾ? ಅವರನ್ನು ಮುಂಬೈನಿಂದ ಕರೆತರಲಿದ್ದೇವೆ ಅಂದ್ರು ಜಸ್ಟಿನ್ ಲ್ಯಾಂಗರ್
ಐಪಿಎಲ್ 2024 ಪಾಯಿಂಟ್ಸ್ ಟೇಬಲ್
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
