ಬೆಂಗಳೂರು ಬೀದಿಗಳಲ್ಲಿ ರಾತ್ರಿ 1.30ಕ್ಕೂ ವಿರಾಟ್ ಫ್ಯಾನ್ಸ್ ಹರ್ಷೋದ್ಘಾರ; ವಿಡಿಯೋ ಹಂಚಿಕೊಂಡು ನೀವೇ ಬೆಸ್ಟ್ ಎಂದ ಆರ್‌ಸಿಬಿ
ಮಧ್ಯರಾತ್ರಿಯಾದರೂ ಅಭಿಮಾನಿಗಳ ಉತ್ಸಾಹ, ಬೆಂಬಲ ಕಂಡು ಆರ್‌ಸಿಬಿ ಆಟಗಾರರು ಹಾಗೂ ಫ್ರಾಂಚೈಸ್ ಫುಲ್ ಖಷ್ ಆಗಿದೆ. ಈ ಅಭಿಮಾನ ತುಂಬಾ ವಿಶೇಷ. ನಿಮ್ಮ ಬಗ್ಗೆ ಅತೀವ ಹೆಮ್ಮೆ ಇದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೇಳಿದೆ.
ಸಿಎಸ್‌ಕೆ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದ್ಧೂರಿಯಾಗಿ ಐಪಿಎಲ್ 2024ರ ಪ್ಲೇಆಫ್ ಪ್ರವೇಶಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿದ್ದ ಅಪಾರ ಅಭಿಮಾನಿಗಳ ಹರ್ಷೋದ್ಘಾರದ ಮುಂದೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗೆದ್ದು ಬೀಗಿದೆ. ಕೆಲವು ದಿನಗಳ ಹಿಂದಿನಿಂದಲೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂದ್ಯವು, ವರುಣನ ಆತಂಕವಿಲ್ಲದೆ ಫಲಿತಾಂಶ ಕಂಡಿದೆ. ಆರ್‌ಸಿಬಿಯ ಗೆಲುವಿನ ಬೆನ್ನಲ್ಲೇ ರಾಜಧಾನಿಯ ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿದೆ. ರಾತ್ರಿಯಿಡೀ ನಿದ್ದೆಗೆಟ್ಟ ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಮಧ್ಯರಾತ್ರಿ 1.30ರ ವೇಳೆಗೆ ಆರ್‌ಸಿಬಿ ತಂಡವು ಸ್ಟೇಡಿಯಂನಿಂದ ಹೊರಹೋಗುವಾಗಲೂ, ಬೆಂಗಳೂರು ಬೀದಿಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು.
ಶನಿವಾರ ಪಂದ್ಯದ ಆರಂಭಕ್ಕೂ ಮುನ್ನವೇ ಬೆಂಗಳೂರಿನ ರಸ್ತೆಗಳಲ್ಲಿ ಉಭಯ ತಂಡಗಳ ಅಭಿಮಾನಿಗಳು ಜಮಾಯಿಸಿದ್ದರು. ಆದರೆ, ಪಂದ್ಯ ಮುಗಿದ ಬಳಿಕ ಆರ್‌ಸಿಬಿ ಫ್ಯಾನ್ಸ್ ಅಬ್ಬರವೇ ಕಂಡುಬಂದಿತು. ಪಂದ್ಯ ಮುಗಿದ ಬಳಿಕ ಆರ್‌ಸಿಬಿ ತಂಡವು ಸ್ಟೇಡಿಯಂನಿಂದ ಹೊರಹೋಗುವಾಗ ತಡವಾಗಿತ್ತು. 1.30ರ ಸುಮಾರಿಗೆ ತಂಡದ ಆಟಗಾರರು ಬಸ್‌ನಲ್ಲಿ ಹೋಟೆಲ್‌ನತ್ತ ತೆರಳಿದರು. ಈ ವೇಳೆಯೂ ನಗರದ ಬೀದಿಗಳಲ್ಲಿ ನೆಚ್ಚಿನ ಆರ್‌ಸಿಬಿಗೆ ಅಭಿಮಾನಿಗಳ ಜೈಕಾರ ಮೊಳಗಿತು. ನಗರದ ರಾಜಭವನ ರಸ್ತೆ, ಕ್ವೀನ್ಸ್ ರಸ್ತೆ, ಎಂಜಿ ರೋಡ್, ಕಬ್ಬನ್ ಪಾರ್ಕ್ ಆಸುಪಾಸಿನಲ್ಲಿ ಟ್ವೆಲ್ತ್ ಮ್ಯಾನ್ ಆರ್ಮಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.
ಆಟಗಾರರ ಬಸ್ ಕಂಡ ವಿಶ್ವದ ಅತ್ಯುತ್ತಮ ಅಭಿಮಾನಿಗಳು, ಇನ್ನಷ್ಟು ಜೋರಾಗಿ ಆರ್‌ಸಿಬಿ, ಆರ್‌ಸಿಬಿ… ವಿರಾಟ್ ಕೊಹ್ಲಿ ಎಂದು ಘೋಷಣೆ ಕೂಗಿದರು. ಮಧ್ಯಾರಾತ್ರಿಯಾದರೂ ಅಭಿಮಾನಿಗಳ ಬೆಂಬಲ ಕಂಡು ಆರ್‌ಸಿಬಿ ಫ್ರಾಂಚೈಸ್ ಖುಷಿಯಾಗಿದೆ. ಅಭಿಮಾನಿಗಳ ಸಂಭ್ರಮಾಚರಣೆಯ ವಿಡಿಯೋವನ್ನು ಆರ್‌ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಇಲ್ಲಿದೆ ವಿಡಿಯೋ
ಇದು ರಾತ್ರಿ 1:30ರ ದೃಶ್ಯ. ಈ ಅಭಿಮಾನ ತುಂಬಾ ವಿಶೇಷ. ನಮಗೆ ವಿಶ್ವದ ಅತ್ಯುತ್ತಮ ಅಭಿಮಾನಿಗಳಿದ್ದಾರೆ. ನಮಗೆ ನಿಮ್ಮ ಬಗ್ಗೆ ಅತೀವ ಹೆಮ್ಮೆ ಇದೆ ಎಂದು ಫ್ರಾಂಚೈಸ್ ಬರೆದುಕೊಂಡಿದೆ. ಈ ವಿಡಿಯೋವನ್ನು ಕೂಡಾ ಅಪಾರ ಸಂಖ್ಯೆಯ ಅಭಿಮಾನಿಗಳು ವೀಕ್ಷಿಸಿದ್ದಾರೆ.
ನಾಲ್ಕು ತಂಡಗಳು ಅಂತಿಮ
ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಿದ್ದು ಒಂದೆಡೆಯಾದರೆ, ಸಿಎಸ್‌ಕೆ ಜೊತೆಗೆ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ತಂಡಗಳು ಟೂರ್ನಿಯಿಂದ ಎಲಿಮನೇಟ್ ಆಗಿವೆ. ಸದ್ಯ ಕೆಕೆಆರ್, ರಾಜಸ್ಥಾನ್ ರಾಯಲ್ಸ್, ಎಸ್‌ಆರ್‌ಎಚ್ ಹಾಗೂ ಆರ್‌ಸಿಬಿ ತಂಡಗಳು ಪ್ಲೇಆಫ್ ಪ್ರವೇಶಿಸಿವೆ. ಇದರಲ್ಲಿ ಆರ್‌ಸಿಬಿ ತಂಡ ಮೇ 22ರ ಬುಧವಾರ ಎಲಿಮನೇಟರ್ ಪಂದ್ಯ ಆಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಅಥವಾ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ | ಐಪಿಎಲ್ 2024: ಇಂದು ಲೀಗ್ ಹಂತದ ಕೊನೆಯ 2 ಪಂದ್ಯಗಳು; ಎಲಿಮನೇಟರ್‌ನಲ್ಲಿ ಆರ್‌ಸಿಬಿ ಎದುರಾಳಿಯಾಗೋರು ಯಾರು?
ಇದನ್ನೂ ಓದಿ | IPL 2024: ಆರ್‌ಸಿಬಿ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ? ಅಹಮದಾಬಾದ್‌ಗೆ ರಾಯಲ್ ಚಾಲೆಂಜರ್ಸ್ ಪಯಣ
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)