ಕನ್ನಡ ಸುದ್ದಿ  /  ಕ್ರಿಕೆಟ್  /  ಬಲಿಷ್ಠ ಸನ್​ರೈಸರ್ಸ್​ಗೆ ಸವಾಲೊಡ್ಡಿ ಗೆಲುವಿನ ಹಳಿಗೆ ಮರಳೀತೇ ಆರ್​ಸಿಬಿ; ಚಿನ್ನಸ್ವಾಮಿ ಪಿಚ್ ಮತ್ತು ಹವಾಮಾನ ವರದಿ ಇಲ್ಲಿದೆ

ಬಲಿಷ್ಠ ಸನ್​ರೈಸರ್ಸ್​ಗೆ ಸವಾಲೊಡ್ಡಿ ಗೆಲುವಿನ ಹಳಿಗೆ ಮರಳೀತೇ ಆರ್​ಸಿಬಿ; ಚಿನ್ನಸ್ವಾಮಿ ಪಿಚ್ ಮತ್ತು ಹವಾಮಾನ ವರದಿ ಇಲ್ಲಿದೆ

RCB vs SRH: ಐಪಿಎಲ್‌ 2024ರ 30ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಏಪ್ರಿಲ್‌ 15ರ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಆರ್‌ಸಿಬಿ ತಂಡವು ಗೆಲುವಿನ ಹಳಿಗೆ ಮರಳುವುದು ಅನಿವಾರ್ಯವಾಗಿದೆ.

ಬೆಂಗಳೂರು ಪಿಚ್‌ ಹಾಗೂ ಹವಾಮಾನ ವರದಿ
ಬೆಂಗಳೂರು ಪಿಚ್‌ ಹಾಗೂ ಹವಾಮಾನ ವರದಿ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು, ಪ್ಲೇ ಆಫ್‌ ಕನಸನ್ನೇ ಕಳೆದುಕೊಂಡಿರುವಂತಿದೆ. ಕಳೆದ ಮೂರು ವರ್ಷಗಳಲ್ಲಿ ಸತತ ಎರಡು ಸೀಸನ್‌ಗಳಲ್ಲಿ ಪ್ಲೇಆಫ್‌ ಪ್ರವೇಶಿಸಿದ್ದ ತಂಡವು, ಕಳೆದ ವರ್ಷ ಸ್ವಲ್ಪವೇ ಅಂತರದಿಂದ ನಾಕೌಟ್‌ ಹಂತಕ್ಕೇರಲು ಸಾಧ್ಯವಾಗಿರಲಿಲ್ಲ. ಈ ಬಾರಿಯ ಟೂರ್ನಿಯಲ್ಲಿ ಫಾಫ್‌ ಡುಪ್ಲೆಸಿಸ್‌ ಬಳಗದ್ದು ತೀರಾ ಕಳಪೆ ಅಭಿಯಾನ. ಪಂದ್ಯಾವಳಿಯಲ್ಲಿ ಈವರೆಗೆ ಆಡಿದ ಮೊದಲ ಆರು ಪಂದ್ಯಗಳಲ್ಲಿ ಬರೋಬ್ಬರಿ ಐದರಲ್ಲಿ ಹೀನಾಯ ಸೋಲು ಕಂಡಿದೆ. ಪಂಜಾಬ್‌ ವಿರುದ್ಧ ಆಡಿದ ಒಂದು ಪಂದ್ಯದಲ್ಲಿ ಮಾತ್ರ ಚೇಸಿಂಗ್‌ ಮಾಡಿ ಗೆದ್ದಿದೆ. ಮೇಲ್ನೋಟಕ್ಕೆ ತಂಡದ ಬೌಲಿಂಗ್ ವಿಭಾಗ ತೀರಾ ಕಳಪೆಯಾಗಿದೆ. ಅದರಂತೆಯೇ, ತಂಡದಲ್ಲಿ ಬಲಿಷ್ಠ ಬ್ಯಾಟರ್‌ಗಳಿದ್ದರೂ ಸಂದರ್ಭಕ್ಕೆ ತಕ್ಕನಾಗಿ ಯಾರೂ ಅಬ್ಬರಿಸದಿರುವುದು ಕೂಡಾ ತಂಡದ ಸೋಲಿಗೆ ಕಾರಣವಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋಲು ಕಂಡ ಬಳಿಕ, ತಂಡದ ಬಲಿಂಗ್‌ ವಿಭಾಗ ಅಷ್ಟೊಂದು ಬಲಿಷ್ಟವಾಗಿಲ್ಲ ಎಂಬುದನ್ನು ನಾಯಕ ಫಾಫ್ ಡು ಪ್ಲೆಸಿಸ್ ಒಪ್ಪಿಕೊಂಡಿದ್ದರು. ಮುಂಬೈ ತಂಡವು ಕೇವಲ 16 ಓವರ್‌ಗಳಲ್ಲಿ 199 ರನ್‌ಗಳನ್ನು ಬೆನ್ನಟ್ಟಿ ಗೆದ್ದಿರುವುದು ಇದಕ್ಕೆ ಸಾಕ್ಷಿ.

ಪಂದ್ಯಾವಳಿಯ 30ನೇ ಪಂದ್ಯದಲ್ಲಿ ಆರ್‌ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಎದುರಿಸುತ್ತಿದೆ. ಏಪ್ರಿಲ್‌ 15ರ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಸನ್‌ರೈಸರ್ಸ್‌ ತಂಡವು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಬಲಿಷ್ಠವಿರುವ ಆಲ್‌ರೌಂಡ್‌ ತಂಡವಾಗಿದೆ. ದಾಖಲೆಯ ಮೊತ್ತ ಕಲೆಹಾಕಿ ಅಬ್ಬರಿಸುತ್ತಿದೆ. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಸ್ಫೋಟಿಸುತ್ತಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಐಡೆನ್ ಮಾರ್ಕ್ರಾಮ್ ಮತ್ತು ಹೆನ್ರಿಚ್ ಕ್ಲಾಸೆನ್ ಉತ್ತಮ ಸ್ಟ್ರೈಕ್‌ ರೇಟ್‌ನೊಂದಿಗೆ ಸಿಡಿಯುತ್ತಿದ್ದಾರೆ.

ಇದನ್ನೂ ಓದಿ | ಫಿಲ್ ಸಾಲ್ಟ್, ಶ್ರೇಯಸ್ ಅಯ್ಯರ್ ಶತಕದ ಜೊತೆಯಾಟ; ಐಪಿಎಲ್ ಇತಿಹಾಸದಲ್ಲೇ ಲಕ್ನೋ ವಿರುದ್ಧ ಮೊದಲ ಗೆಲುವು ದಾಖಲಿಸಿದ ಕೆಕೆಆರ್

ಮುಖಾಮುಖಿ ದಾಖಲೆ

ಬೆಂಗಳೂರು ಮತ್ತು ಹೈದರಾಬಾದ್ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 23 ಪಂದ್ಯಗಳಲ್ಲಿ ಆಡಿವೆ. ಇದರಲ್ಲಿ ಆರ್‌ಸಿಬಿ 10 ಪಂದ್ಯಗಳಲ್ಲಿ ಗೆದ್ದಿದ್ದರೆ, ಹೈದರಾಬಾದ್ 12‌ ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಚಿನ್ನಸ್ವಾಮಿ ಮೈದಾನದ ಪಿಚ್ ವರದಿ

ಸಾಂಪ್ರದಾಯಿಕವಾಗಿ ಬ್ಯಾಟರ್‌ಗಳ ಸ್ವರ್ಗ ಎಂದೇ ಹೆಸರು ಗಳಿಸಿರುವ ಚಿನ್ನಸ್ವಾಮಿ ಮೈದಾನವು, ಈ ಬಾರಿ ಬ್ಯಾಟಿಂಗ್‌ ಪಿಚ್‌ನಂತೆ ಕಾಣುತ್ತಿಲ್ಲ. ಈ ಹಿಂದಿನ ವರ್ಷಗಳಷ್ಟು ಬ್ಯಾಟರ್ ಸ್ನೇಹಿಯಾಗಿಲ್ಲ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ಗೆ ನೆರವಾಗುವ ಎರಡು ಸ್ವರೂಪದ ಪಿಚ್‌ನಂತೆ ವರ್ತಿಸುತ್ತಿದೆ. ಐಪಿಎಲ್‌ನ 2021ರ ಆವೃತ್ತಿಯಿಂದ ಕಳೆದ ಆವೃತ್ತಿವರೆಗೂ, ಈ ಮೈದಾನದಲ್ಲಿ ದಾಖಲಾದ ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 190.8 ರನ್. ಆದರೆ, ಈ ಋತುವಿನ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 180 ರನ್‌ ಮಾತ್ರ. ಮೈದಾನದ ಬೌಂಡರಿಗಳು ಸಣ್ಣದಾಗಿದ್ದು, ಚಾಣಾಕ್ಷ ಆಟದಿಂದ ಹೆಚ್ಚು ರನ್‌ ಕಲೆ ಹಾಕಬಹುದು.

ಬೆಂಗಳೂರು ಹವಾಮಾನ ವರದಿ

ಪಂದ್ಯದ ದಿನ ಉದ್ಯಾನ ನಗರಿಯ ತಾಪಮಾನವು ಸುಮಾರು 29.14 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷಿಸಲಾಗಿದೆ. ಪಂದ್ಯದ ಸಮಯದಲ್ಲಿ ಮೋಡ ಕಾಣುವ ಸಾಧ್ಯತೆ ಇದ್ದು,‌ ಆ ಸಂದರ್ಭದಲ್ಲಿ ಪಿಚ್ ವೇಗದ ಬೌಲರ್‌ಗಳಿಗೆ ಸಹಾಯ ಮಾಡಬಹುದು. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಮುನ್ಸೂಚನೆ ಇಲ್ಲ.‌

IPL_Entry_Point