ಮೊದಲು ಘೋಷಣೆ ಕೂಗುವುದನ್ನು ನಿಲ್ಲಿಸಿ, ಇಲ್ಲಿ ಹಾರ್ದಿಕ್ ಪಾಂಡ್ಯ ತಪ್ಪೇನಿಲ್ಲ; ಅಭಿಮಾನಿಗಳ ವರ್ತನೆ ಖಂಡಿಸಿದ ಸೌರವ್ ಗಂಗೂಲಿ
ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಿರುವುದರಲ್ಲಿ ಪಾಂಡ್ಯ ಅವರ ತಪ್ಪಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ನಾಯಕತ್ವ ನೀಡಿದ್ದು ಮುಂಬೈ ಇಂಡಿಯನ್ಸ್ ಫ್ರಾಂಚೈಸ್. ಅದನ್ನು ಅಭಿಮಾನಿಗಳು ಸ್ವೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಅವರ ವಿರುದ್ಧ ಘೋಷಣೆ ಕೂಗುವುದು ಸರಿಯಲ್ಲ ಎಂದು ಭಾರತದ ಮಾಜಿ ನಾಯಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹಾಲಿ ನಿರ್ದೇಶಕ ಸೌರವ್ ಗಂಗೂಲಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಫ್ರಾಂಚೈಸಿಯ ನಿರ್ಧಾರವನ್ನು ಗೌರವಿಸಬೇಕು ಎಂದಿರುವ ಅವರು, ಹಾರ್ದಿಕ್ ಅವರನ್ನು ಮುಂಬೈ ಇಂಡಿಯನ್ಸ್ ನಾಯಕನನ್ನಾಗಿ ನೇಮಿಸಿದ್ದು ಪಾಂಡ್ಯ ತಪ್ಪಲ್ಲ. ಹೀಗಾಗಿ, ಅಭಿಮಾನಿಗಳು ಅದನ್ನು ಒಪ್ಪಿಕೊಂಡು ಮುಂದೆ ಸಾಗುವ ಸಮಯ ಬಂದಿದೆ ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.
“ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ವಿರುದ್ಧ ಘೋಷಣೆ ಕೂಗುವುದು ಸರಿಯಲ್ಲ ಎಂದು ನನಗನಿಸುತ್ತಿದೆ. ಅವರನ್ನು ಫ್ರಾಂಚೈಸಿ ನಾಯಕನನ್ನಾಗಿ ನೇಮಿಸಿದೆ,” ಎಂದು ಗಂಗೂಲಿ ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಗಂಗೂಲಿ ಮುಂಬೈನಲ್ಲಿ ಮಾತನಾಡಿದ್ದಾರೆ.
ಪ್ರಸಕ್ತ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಈವರೆಗೆ ಆಡಿದ ಮೂರು ಪಂದ್ಯಗಳ ವೇಳೆಯೂ ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳು ಘೋಷಣೆ ಕೂಗಿದ್ದರು. ಮೈದಾನಗಳಲ್ಲಿ ರೋಹಿತ್ ಶರ್ಮಾ ಪರ ಬೆಂಬಲ ವ್ಯಕ್ತವಾದರೆ, ಹಾರ್ದಿಕ್ ನಾಯಕತ್ವವನ್ನು ಅಭಿಮಾನಿಗಳು ಸ್ವೀಕರಿಸಲು ಸಿದ್ಧರಿರಲಿಲ್ಲ. ತಂಡದ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿಯೂ, ಅಭಿಮಾನಿಗಳು ಹಾರ್ದಿಕ್ ವಿರುದ್ಧ ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ | ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ಬೌಲಿಂಗ್ ಆಯ್ಕೆ; ಬೆಂಗಳೂರು ತಂಡದಲ್ಲಿ ಅಚ್ಚರಿಯ ಬದಲಾವಣೆ
ಫ್ರಾಂಚೈಸಿಯ ನಾಯಕನಾಗಿ ಆಟಗಾರನೊಬ್ಬ ನೇಮಕಗೊಂಡಾಗ, ಅದು ಎಂದಿಗೂ ಆ ಆಟಗಾರನ ತಪ್ಪಲ್ಲ ಎಂದು ಗಂಗೂಲಿ ಅಭಿಮಾನಿಗಳಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಇದು ಆಯ್ಕೆದಾರರು ಮತ್ತು ತಂಡದ ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳುವ ನಿರ್ಧಾರ ಎಂದು ಅವರು ಹೇಳಿದ್ದಾರೆ.
2015ರಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡ ಪಾಂಡ್ಯ, ಫ್ರಾಂಚೈಸಿಯ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಎರಡು ವರ್ಷಗಳ ಹಿಂದೆ ಎಂಐ ತೊರೆದ ಆಲ್‌ರೌಂಡರ್, ನೂತನ ಫ್ರಾಂಚೈಸ್ ಗುಜರಾತ್ ಟೈಟಾನ್ಸ್ ನಾಯಕತ್ವ ವಹಿಸಿದರು. 2022ರಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಅವರು, ಮುಂದಿನ ಆವೃತ್ತಿಯಲ್ಲೂ ಫೈನಲ್ ಪ್ರವೇಶ ಮಾಡಿದರು. ಈ ಬಾರಿಯ ಆವೃತ್ತಿಯ ಹರಾಜಿಗೂ ಮುನ್ನ ಟ್ರೇಡಿಂಗ್ ಮೂಲಕ ಮತ್ತೆ ಮುಂಬೈಗೆ ಮರಳಿದ ಬಳಿಕ, ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಫ್ರಾಂಚೈಸಿಯು ಪಾಂಡ್ಯಗೆ ತಂಡದ ಸಾರಥ್ಯ ನೀಡಿತು.
ರೋಹಿತ್ ಶರ್ಮಾ ಕ್ಲಾಸ್ ಆಟಗಾರ ಹಾಗೂ ನಾಯಕ
ರೋಹಿತ್ ಶರ್ಮಾ ಒಬ್ಬ ನಾಯಕನಾಗಿ ಮತ್ತು ಆಟಗಾರನಾಗಿ ವಿಭಿನ್ನ ವರ್ಗಕ್ಕೆ ಸೇರಿದವರು. ಆದರೆ, ಅಭಿಮಾನಿಗಳು ಈಗ ಹಾರ್ದಿಕ್ ಅವರನ್ನು ಮುಂಬೈ ತಂಡದ ನೂತನ ನಾಯಕನಾಗಿ ಗೌರವಿಸಬೇಕಾಗಿದೆ ಎಂದು ಗಂಗೂಲಿ ಹೇಳಿದರು. “ರೋಹಿತ್ ಶರ್ಮಾ ವಿಭಿನ್ನ ವರ್ಗದ ಆಟಗಾರ ಎಂಬುವುದರಲ್ಲಿ ಸಂಶಯವಿಲ್ಲ. ಫ್ರಾಂಚೈಸ್ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ಮತ್ತು ಆಟಗಾರನಾಗಿ ಅವರ ಪ್ರದರ್ಶನವು ವಿಭಿನ್ನ ಮಟ್ಟದಲ್ಲಿದೆ. ಆದರೆ, ಈಗ ನಾಯಕನನ್ನಾಗಿ ನೇಮಿಸಿರುವುದು ಹಾರ್ದಿಕ್ ಅವರ ತಪ್ಪಲ್ಲ. ನಾವೆಲ್ಲರೂ ಅದನ್ನು ಅರ್ಥಮಾಡಿಕೊಳ್ಳಬೇಕು,” ಎಂದು ಗಂಗೂಲಿ ಹೇಳಿದ್ದಾರೆ.
“ಮುಂಬೈ ಉತ್ತಮ ತಂಡ. ತಂಡವು ಮುಂದೆ ಉತ್ತಮವಾಗಿ ಆಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಟಿ20 ಸ್ವರೂಪದಲ್ಲಿ 2-3 ಪಂದ್ಯಗಳನ್ನು ಸೋಲಬಹುದು. ಆದರೆ, ಮುಂಬೈ ಅವರ ತವರು ಮೈದಾನ. ಡೆಲ್ಲಿ ವಿರುದ್ಧ ಉತ್ತಮ ಪಂದ್ಯವಾಗಲಿದೆ,” ಎಂದು ಗಂಗೂಲಿ ಹೇಳಿದ್ದಾರೆ.