ಕನ್ನಡ ಸುದ್ದಿ  /  Cricket  /  Ipl 2024 Sunrisers Hyderabad Vs Mumbai Indians Pitch Report Srh Vs Mi Weather Forecast Hardik Pandya Pat Cummins Jra

ಪಾಂಡ್ಯ-ಕಮಿನ್ಸ್‌ ನಾಯಕತ್ವಕ್ಕೆ ಗೆಲುವಿನ ಸವಾಲು; ಎಸ್ಆರ್‌ಎಚ್ vs ಮುಂಬೈ ಇಂಡಿಯನ್ಸ್ ಪಂದ್ಯದ ಪಿಚ್, ಹವಾಮಾನ ವರದಿ

SRH vs MI: ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್‌ 2024ರ ಆವೃತ್ತಿಯಲ್ಲಿ ಎರಡನೇ ಪಂದ್ಯವನ್ನು ಆಡುತ್ತಿವೆ. ಮೊದಲ ಪಂದ್ಯದಲ್ಲಿ ಸೋತಿರುವ ಹಾರ್ದಿಕ್‌ ಪಾಂಡ್ಯ ಮತ್ತು ಪ್ಯಾಟ್‌ ಕಮಿನ್ಸ್‌ ಬಳಗ, ಇದೀಗ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

ಎಸ್ಆರ್‌ಎಚ್ vs ಮುಂಬೈ ಇಂಡಿಯನ್ಸ್ ಪಂದ್ಯದ ಪಿಚ್, ಹವಾಮಾನ ವರದಿ
ಎಸ್ಆರ್‌ಎಚ್ vs ಮುಂಬೈ ಇಂಡಿಯನ್ಸ್ ಪಂದ್ಯದ ಪಿಚ್, ಹವಾಮಾನ ವರದಿ

ಪ್ರಸಕ್ತ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಯ ಮೊದಲ ಪಂದ್ಯಗಳಲ್ಲಿ ಸೋಲು ಕಂಡ ಎರಡು ತಂಡಗಳು, ಇದೀಗ ಟೂರ್ನಿಯಲ್ಲಿ ಮೊದಲನೇ ಗೆಲುವಿಗಾಗಿ ಜಿದ್ದಿಗಿಳಿಯುತ್ತಿವೆ. ಮಾರ್ಚ್ 23ರಂದು ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಸೋಲಿನ ಅಭಿಯಾನ ಆರಂಭಿಸಿತು. ಅತ್ತ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು, ಗುಜರಾತ್ ಟೈಟಾನ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಮುಗ್ಗರಿಸಿತು. ಅಂತಿಮ ಓವರ್‌ನಲ್ಲಿ ಗೆಲ್ಲಲು 19 ರನ್‌ಗಳ ಗುರಿ ಪಡೆದ ಮುಂಬೈ, ಉಮೇಶ್‌ ಯಾದವ್‌ ಓವರ್‌ನ ಮೊದಲ ಎರಡು ಎಸೆತಗಳಲ್ಲಿ 10 ರನ್ ಗಳಿಸುವಲ್ಲಿ ಯಶಸ್ವಿಯಾದರೂ, ಅಂತಿಮವಾಗಿ 6 ರನ್‌ಗಳಿಂದ ಸೋತಿತು.

ಐಪಿಎಲ್‌ನ ಅತ್ಯಂತ ದುಬಾರಿ ನಾಯಕನಾದ ಪ್ಯಾಟ್‌ ಕಮಿನ್ಸ್‌ ನೇತೃತ್ವದ ಎಸ್‌ಆರ್‌ಎಚ್‌ ತಂಡವು, ಇದೀಗ ತನ್ನ ಎರಡನೇ ಪಂದ್ಯದಲ್ಲಿ ಗೆಲ್ಲೇಬೇಕಾದ ಒತ್ತಡದಲ್ಲಿದೆ. ಪಂದ್ಯವು ಹೈದರಾಬಾದ್‌ ತವರು ಮೈದಾನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಅತ್ತ ಗುಜರಾತ್‌ ತಂಡದಿಂದ ತಮ್ಮ ಹಳೆಯ ತಂಡಕ್ಕೆ ಮರಳಿ ನಾಯಕತ್ವ ವಹಿಸಿರುವ ಹಾರ್ದಿಕ್‌ ಪಾಂಡ್ಯ ಮುಂದೆ, ಹಲವು ಸವಾಲುಗಳಿವೆ. ಅಹಮದಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯಗೆ ಯಾವುದೇ ಬೆಂಬಲ ಸಿಗಲಿಲ್ಲ. ಹಾರ್ದಿಕ್‌ ನಾಯಕತ್ವ ಸ್ವೀಕರಿಸಲು ಅಭಿಮಾನಿಗಳು ಸಿದ್ಧರಿರಲಿಲ್ಲ. ಈ ನಡುವೆ ತಂಡದ ಸೋಲು ಮತ್ತಷ್ಟು ಸವಾಲುಗಳನ್ನು ಅವರ ಮುಂದಿಟ್ಟಿದೆ.

ಮುಖಾಮುಖಿ ದಾಖಲೆ

ಉಭಯ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 21 ಬಾರಿ ಪರಸ್ಪರ‌ ಮುಖಾಮುಖಿಯಾಗಿವೆ. ಇದರಲ್ಲಿ ಹೈದರಾಬಾದ್ 9 ಪಂದ್ಯಗಳಲ್ಲಿ ಗೆದ್ದರೆ, ಮುಂಬೈ 12 ಪಂದ್ಯಗಳನ್ನು ಗೆದ್ದಿದೆ. ಸನ್‌ರೈಸರ್ಸ್‌ ವಿರುದ್ಧ ಮುಂಬೈ ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಕಳೆದ ಐದು ಪಂದ್ಯಗಳಲ್ಲಿ ಮುಂಬೈ ನಾಲ್ಕು ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ರಾಜೀವ್‌ ಗಾಂಧಿ ಕ್ರೀಡಾಂಗಣ ಪಿಚ್ ವರದಿ

ಹೈದರಾಬಾದ್‌ ಪಿಚ್‌ ಸಮತಟ್ಟಾಗಿರುವುದರಿಂದ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತದೆ. ಹೀಗಾಗಿ ಇಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸುವುದು ಕಷ್ಟ. ಹೀಗಾಗಿ ಈ ಪಿಚ್‌ ಬೌಲರ್‌ಗಳಿಗೆ ಸವಾಲು. ಆದರೆ, 2019ರ ಐಪಿಎಲ್ ಆವೃತ್ತಿಯಲ್ಲಿ ಅಲ್ಜಾರಿ ಜೋಸೆಫ್ ಇದೇ ಮೈದಾನದಲ್ಲಿ ಕೇವಲ 12 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಕಬಳಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಅಂಕಿ-ಅಂಶವಾಗಿ ಉಳಿದಿದೆ. ಹೀಗಾಗಿ ಬೌಲರ್‌ಗಳ ಪ್ರಾಬಲ್ಯವನ್ನು ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ | ಶುಭ್ಮನ್ ಗಿಲ್ ಅತ್ಯಂತ ಪ್ರಾಮಾಣಿಕ ಆಟಗಾರ, ಕ್ರಿಕೆಟ್‌ನ ಉತ್ತಮ ಜ್ಞಾನವಿರುವ ಪ್ರತಿಭಾನ್ವಿತ ಕ್ರಿಕೆಟಿಗ: ಕೇನ್ ವಿಲಿಯಮ್ಸನ್

ಇದೇ ಮೈದಾನದಲ್ಲಿ ಐಪಿಎಲ್ 2019ರ ಆವೃತ್ತಿಯಲ್ಲಿ ಆತಿಥೇಯ ಎಸ್ಆರ್‌ಎಚ್ ತಂಡವು ಭರ್ಜರಿ 231 (2 ವಿಕೆಟ್‌ ಕಳೆದುಕೊಂಡು) ರನ್‌ ಗಳಿಸಿತ್ತು. ಈ ಮೈದಾನದಲ್ಲಿ ಇದು ತಂಡವೊಂದರ ಅತಿ ಹೆಚ್ಚು ಮೊತ್ತವಾಗಿದೆ. 2017ರ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಈ ಪಿಚ್‌ನಲ್ಲಿ ಸ್ಫೋಟಕ 127 ರನ್ ಸಿಡಿಸಿದ್ದರು.

ಹೈದರಾಬಾದ್‌ ಹವಾಮಾನ ವರದಿ

ಹೈದರಾಬಾದ್‌ನಲ್ಲಿ ಪಂದ್ಯದ ದಿನ ಮಳೆ ಸುರಿಯುವ ಸಾಧ್ಯತೆ ಇಲ್ಲ. ಪಂದ್ಯದ ಆರಂಭದಲ್ಲಿ ತಾಪಮಾನವು 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಸಂಜೆಯ ವೇಳೆ 29 ಡಿಗ್ರಿಗೆ ಇಳಿಯಲಿದೆ. ಹೀಗಾಗಿ ಸಂಪೂರ್ಣ ಪಂದ್ಯವನ್ನು ಅಭಿಮಾನಿಗಳು ಆನಂದಿಸಬಹುದು.

IPL_Entry_Point