Explainer: ವಿರಾಟ್ ಕೊಹ್ಲಿ ಪ್ರತಿಭಟಿಸಿದರೂ ಅಂಪೈರ್ ಔಟ್ ಎಂದು ಘೋಷಿಸಿದ್ದೇಕೆ? ನೋಬಾಲ್ ವಿವಾದಕ್ಕೆ ಕಾರಣವೇನು?
Virat Kohli: ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ, ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ವಿವಾದಾತ್ಮಕ ರೀತಿಯಲ್ಲಿ ಔಟ್ ಆದರು. ಆದರೆ, ಅಲ್ಲಿ ವಿವಾದವೇ ಆಗಿಲ್ಲ. ಸುಧಾರಿತ ತಂತ್ರಜ್ಞಾನದ ಸಹಾಯದೊಂದಿಗೆ ಟಿವಿ ಅಂಪೈರ್ ಆ ಎಸೆತವನ್ನು ನೋಬಾಲ್ ಎಂಬುದಾಗಿ ಘೋಷಿಸಿಲ್ಲ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 1 ರನ್‌ಗಳಿಂದ ವೀರೋಚಿತ ಸೋಲು ಕಂಡಿದೆ. ಗೆಲುವಿಗೆ 223 ರನ್‌ಗಳ ಬೃಹತ್ ಗುರಿ ಪಡೆದ ಆರ್‌ಸಿಬಿ, ನಾಟಕೀಯವಾಗಿ ಸಾಗಿದ ಪಂದ್ಯದಲ್ಲಿ ರೋಚಕವಾಗಿ ಮುಗ್ಗರಿಸಿತು. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದ ಪರಿ, ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಯ್ತು. ಆರಂಭಿಕನಾಗಿ ಕಣಕ್ಕಿಳಿದು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ, ಹರ್ಷಿತ್ ರಾಣಾ ಅವರ ಹೈ ಫುಲ್ ಟಾಸ್ ಎಸೆತಕ್ಕೆ ಕ್ಯಾಚ್ ನೀಡಿ ಔಟಾದರು. ಆ ಎಸೆತ ಕೊಹ್ಲಿಯ ಸೊಂಟದ ಮೇಲ್ಭಾಗದಲ್ಲಿ ಬ್ಯಾಟ್‌ಗೆ ಬಡಿದಿದ್ದು, ಗೊಂದಲಕ್ಕೆ ಕಾರಣವಾಯ್ತು.
ಕೊಹ್ಲಿ ಔಟಾದ ಆ ಎಸೆತವು ಮೇಲ್ನೋಟಕ್ಕೆ ಸೊಂಟಕ್ಕಿಂತ ಎತ್ತರದಲ್ಲಿ ಹಾದು ಹೋದಂತೆ ಕಾಣಿಸಿದೆ. ಕೊಹ್ಲಿ ಬ್ಯಾಟ್ ಹಿಡಿದಿದ್ದಾಗಲೂ ಅದು ಸ್ಪಷ್ಟವಾಗಿ ಕಾಣಿಸಿದೆ. ಕೊಹ್ಲಿ ತಮ್ಮ ಬ್ಯಾಟ್ ಮೇಲೆತ್ತಿ ಸೊಂಟಕ್ಕಿಂತ ಮೇಲ್ಭಾಗದಲ್ಲೇ ಚೆಂಡನ್ನು ಎದುರಿಸಿದ್ದಾರೆ. ಅದು ನೇರವಾಗಿ ಬೌಲರ್ ರಾಣಾ ಕೈ ಸೇರಿದೆ. ಔಟ್ ಅಥವಾ ನಾಟೌಟ್ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ, ಆನ್‌ಫೀಲ್ಡ್ ಅಂಪೈರ್ ಟಿವಿ ಅಂಪೈರ್ ಮೈಕೆಲ್ ಗೌಫ್ ಅವರಿಗೆ ಮೇಲ್ಮನವಿ ಕಳುಹಿಸಿದ್ದಾರೆ.
ಹಾಕ್-ಐ ತಂತ್ರಜ್ಞಾನ
ಕ್ರೀಸ್ ಬಳಿ ಕೊಹ್ಲಿಯ ಬ್ಯಾಟಿಂಗ್ ಸ್ಥಾನ ಹಾಗೂ ಚೆಂಡು ಸಾಗಿದ ಪಥವನ್ನು ವಿಶ್ಲೇಷಿಸಲು ಟಿವಿ ಅಂಪೈರ್ ಹಾಕ್-ಐ ತಂತ್ರಜ್ಞಾನದ ಮೊರೆ ಹೋದರು. ಆ ಎಸೆತವು ಕೊಹ್ಲಿಯ ಸೊಂಟಕ್ಕಿಂತ ಎತ್ತರದಲ್ಲಿ ಹಾದು ಹೋದಂತೆ ಕಂಡಿದೆ. ಆದರೆ, ವಿರಾಟ್ ಕೊಹ್ಲಿ ಕ್ರೀಸ್ ಬಿಟ್ಟು ಮುಂದೆ ಬಂದಿದ್ದರು. ಒಂದು ವೇಳೆ ಕೊಹ್ಲಿ ಕ್ರೀಸ್‌ನಲ್ಲಿಯೇ ಇದ್ದಿದ್ದರೆ ಅದು ಅವರ ಸೊಂಟದ ಕೆಳಗೆ ಹಾದುಹೋಗುತ್ತಿತ್ತು ಎಂದು ತಂತ್ರಜ್ಞಾನ ಕೊಟ್ಟ ಚಿತ್ರಣದಿಂದ ಸ್ಪಷ್ಟವಾಗಿದೆ. ರಾಣಾ ಎಸೆದ ಆ ಚೆಂಡು ಸ್ಲೋ ಬಾಲ್ ಆಗಿತ್ತು. ಚೆಂಡಿನ ನಿಧಾನಗತಿಯ ವೇಗದಿಂದಾಗಿ ಅದು ದೂರ ಸಾಗಿದಂತೆ ಕೆಳಕ್ಕೆ ಬರುವಂತೆ ಕಾಣಿಸಿದೆ. ಹೀಗಾಗಿ ಅದನ್ನು ಅಂಪೈರ್ ನೋ ಬಾಲ್ ಎಂದು ಘೋಷಿಸಿಲ್ಲ.
ಸುಧಾರಿತ ಕ್ಯಾಮರಾಗಳ ಬಳಕೆ
ಈ ಬಾರಿಯ ಐಪಿಎಲ್‌ನಲ್ಲಿ ಸುಧಾರಿತ ತತ್ರಜ್ಞಾನ ಹಾಗೂ ಕ್ಯಾಮರಾಗಳನ್ನು ಬಳಸಲಾಗಿದೆ. ಇದರಿಂದ ನೋ ಬಾಲ್ ಸೇರಿದಂತೆ ಚೆಂಡಿನ ಎತ್ತರದ ಮೌಲ್ಯಮಾಪನ ಮಾಡುವುದು ಮತ್ತಷ್ಟು ಸರಳವಾಗಿದೆ. ಸುಧಾರಿತ ತಂತ್ರಜ್ಞಾನದ ನೆರವಿನೊಂದಿಗೆ ಸೊಂಟದ ಮೇಲಿನ ಎತ್ತರದ ನೋ-ಬಾಲ್‌ಗಳನ್ನು ನಿರ್ಣಯಿಸುವುದು ಕೂಡಾ ಸುಲಭವಾಗಿದೆ. ಹೀಗಾಗಿ ವಸ್ತುನಿಷ್ಠತೆ ಕಾಪಾಡಲು ಲೀಗ್ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ.
ಇದನ್ನೂ ಓದಿ | ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರ್ಸ್ ಜೊತೆಗೆ ತೀವ್ರ ವಾಗ್ದಾದ, ಹತಾಶೆಯಿಂದ ಬ್ಯಾಟ್ ಹೊಡೆದ ಮಾಜಿ ನಾಯಕ, ವಿಡಿಯೋ
ಈ ಹೊಸ ವ್ಯವಸ್ಥೆಯು ಚೆಂಡಿನ ಎತ್ತರವನ್ನು ಸುಲಭವಾಗಿ ಅಳೆಯುತ್ತದೆ. ಏಕೆಂದರೆ ಚೆಂಡು ಪಾಪಿಂಗ್ ಕ್ರೀಸ್‌ನಲ್ಲಿ ಬ್ಯಾಟರ್ ಮೂಲವಾಗಿ ಹಾದುಹೋಗುತ್ತದೆ. ಕ್ರೀಸ್‌ನಲ್ಲಿರುವ ಬ್ಯಾಟರ್‌ನ ಕಾಲ್ಬೆರಳಿನಿಂದ ಸೊಂಟದ ಎತ್ತರಕ್ಕೆ ಚೆಂಡನ್ನು ಹೋಲಿಸಿ ನಿರ್ಧಾರ ಪ್ರಕಟಿಸಬಹುದಾಗಿದೆ. ಪಾಪಿಂಗ್ ಕ್ರೀಸ್ ಎಂದರೆ, ವಿಕೆಟ್‌ಗಿಂತ ಮುಂದೆ 4 ಫೀಟ್ ಎದುರು ಇರುವ ಗೆರೆ.
ಒಂದು ವೇಳೆ ಚೆಂಡು ಸಾಗುವ ಪಥವು ಬ್ಯಾಟರ್‌ನ ಸೊಂಟದ ಎತ್ತರವನ್ನು ಮೀರಿದರೆ, ಅದನ್ನು ಖಚಿತವಾಗಿ ನೋಬಾಲ್ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಚೆಂಡು ಸ್ಥಾಪಿತ ಸೊಂಟದ ಭಾಗದ ಎತ್ತರಕ್ಕಿಂತ ಕೆಳಗಿದ್ದರೆ, ಅದನ್ನು ಸರಿಯಾದ ಎಸೆತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಕೊಹ್ಲಿ ಎದುರಸಿದ ಎಸೆತ ಖಚಿತವಾಗಿ ನೋಬಾಲ್ ಎಂಬುದು ಸ್ಪಷ್ಟವಾಗುತ್ತದೆ.
ಪಂದ್ಯದಲ್ಲಿ ಆರ್‌ಸಿಬಿಯು ಕೇವಲ 1 ರನ್ ಅಂತರದಿಂದ ಸೋತಿತು. ಮಿಚೆಲ್ ಸ್ಟಾರ್ಕ್ ಎಸೆದ ಅಂತಿಮ ಓವರ್‌ನಲ್ಲಿ ಮೂರು ಸಿಕ್ಸರ್ ಸಹಿತ ಕರಣ್ ಶರ್ಮಾ ಸ್ಫೋಟಕ ಪ್ರದರ್ಶನ ನೀಡಿದರು. ಆದರೆ ಪಂದ್ಯದ ಕೊನೆಯ ಎಸೆತದಲ್ಲಿ ಮೂರು ರನ್ ಗಳಿಸಲಾಗದೆ ತಂಡ ಸೋಲೊಪ್ಪಿತು.