ಡೆಲ್ಲಿ ಕ್ಯಾಪಿಟಲ್ಸ್ಗೆ ನೂತನ ಕ್ಯಾಪ್ಟನ್ ನೇಮಕ; 6 ವರ್ಷದಿಂದ ಫ್ರಾಂಚೈಸಿಗೆ ದುಡಿದ ಅಕ್ಷರ್ ಪಟೇಲ್ಗೆ ಪಟ್ಟ
Axar Patel, IPL 2025: ಐಪಿಎಲ್ 2025ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನನ್ನು ಘೋಷಿಸಿದೆ. ತಂಡದ ಕ್ಯಾಪ್ಟನ್ ಆಗಿ ಅಕ್ಷರ್ ಪಟೇಲ್ ಅವರನ್ನು ನೇಮಿಸಲಾಗಿದೆ.

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಡೆಲ್ಲಿ ಕ್ಯಾಪಿಟಲ್ಸ್ ನೂತನ ನಾಯಕನನ್ನು ಘೋಷಿಸಿದೆ. ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ನಾಯಕನಾಗಿರುವ ರಿಷಭ್ ಪಂತ್ ಅವರಿಂದ ತೆರವಾದ ಸ್ಥಾನಕ್ಕೆ ಎಡಗೈ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಇದೇ ಮೊದಲ ಬಾರಿಗೆ ಐಪಿಎಲ್ ನಾಯಕತ್ವ ಪಡೆದ ಅಕ್ಷರ್, ಡೆಲ್ಲಿಗೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಡುವ ವಿಶ್ವಾಸದಲ್ಲಿದ್ದಾರೆ.
ತಂಡದ ನಾಯಕನಾಗಿ ಅಕ್ಷರ್ ಪಟೇಲ್ ಆಯ್ಕೆಯಾಗಿರುವ ಕುರಿತು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದೆ. ಡೆಲ್ಲಿ ತಂಡದ ನಾಯಕತ್ವಕ್ಕಾಗಿ ಅಕ್ಷರ್ ಅವರೊಂದಿಗೆ ಕೆಎಲ್ ರಾಹುಲ್ ಕೂಡ ಸ್ಪರ್ಧೆಯಲ್ಲಿದ್ದರು. ಕೆಎಲ್ಗೆ ನಾಯಕತ್ವ ನೀಡಲಾಗುವುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ರಾಹುಲ್ ಫ್ರಾಂಚೈಸಿ ಆಫರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಅಕ್ಷರ್ ಪಟೇಲ್ ಮೇಲೆ ನಂಬಿಕೆ ಇಟ್ಟು ಸಾರಥ್ಯ ವಹಿಸಿದೆ.
ಕಳೆದ ಋತುವಿನಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಸ್ತುವಾರಿ ವಹಿಸಿಕೊಂಡಿದ್ದರು. ಆದರೆ, ತಂಡವನ್ನು ತೊರೆದ ಪಂತ್ ಹರಾಜಿನಲ್ಲಿ ಐಪಿಎಲ್ ಇತಿಹಾಸದ ದಾಖಲೆಯ ಬೆಲೆಗೆ (27 ಕೋಟಿ ರೂ) ಲಕ್ನೋ ಪಾಲಾದರು. ಇದೀಗ ಎಲ್ಎಸ್ಜಿ ಪಂತ್ರನ್ನೇ ಕ್ಯಾಪ್ಟನ್ ಆಗಿ ಘೋಷಿಸಿದೆ. 2019 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿರುವ ಅಕ್ಷರ್ ಪಟೇಲ್ ಅವರನ್ನು ಕಳೆದ ವರ್ಷ ನವೆಂಬರ್ನಲ್ಲಿ ನಡೆದ ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಮ್ಯಾನೇಜ್ಮೆಂಟ್ 16.50 ಕೋಟಿ ರೂ.ಗೆ ಉಳಿಸಿಕೊಂಡಿತ್ತು.
ಅಕ್ಷರ್ ಪಟೇಲ್ ಪ್ರದರ್ಶನ
ಅಕ್ಷರ್ ಪಟೇಲ್ ಡೆಲ್ಲಿ ತಂಡದ ಅತ್ಯಂತ ಅನುಭವಿ ಆಟಗಾರ. ಆರು ಆವೃತ್ತಿಗಳಿಂದ ತಂಡದ ಪರ ಒಟ್ಟು 82 ಪಂದ್ಯಗಳನ್ನು ಆಡಿದ್ದಾರೆ. ಕಳೆದ ಋತುವಿನಲ್ಲಿ ಸುಮಾರು 30 ಸರಾಸರಿಯಲ್ಲಿ 235 ರನ್ ಗಳಿಸಿರುವ ಅಕ್ಷರ್, 7.65 ಎಕಾನಮಿಯಲ್ಲಿ 11 ವಿಕೆಟ್ಗಳನ್ನೂ ಪಡೆದಿದ್ದರು. ನಿಧಾನಗತಿಯ ಓವರ್ ರೇಟ್ನಿಂದಾಗಿ ರಿಷಭ್ ಪಂತ್ ನಿಷೇಧಕ್ಕೊಳಗಾದಾಗ ಅಕ್ಷರ್ ಡೆಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದಾಗ್ಯೂ, ದೆಹಲಿ ತಂಡವು ಪಂದ್ಯವನ್ನು ಕಳೆದುಕೊಂಡಿತು.
ಅಂದಹಾಗೆ, ಅಕ್ಷರ್ಗೆ ನಾಯಕತ್ವದ ಬಗ್ಗೆ ಹೆಚ್ಚಿನ ಅನುಭವವಿಲ್ಲ. ಈ ವರ್ಷದ ಜನವರಿಯಲ್ಲಿ ಅವರನ್ನು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾದ ಉಪನಾಯಕರನ್ನಾಗಿ ನೇಮಿಸಲಾಗಿತ್ತು. 31ರ ಹರೆಯದ ಅಕ್ಷರ್ 23 ಪಂದ್ಯಗಳಲ್ಲಿ ಗುಜರಾತ್ ತಂಡವನ್ನು ಮುನ್ನಡೆಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ತಮ್ಮ ತಂಡದ ನಾಯಕರಾಗಿದ್ದರು.
ನಾಯಕತ್ವ ಪಡೆದು ಸಂತಸ ವ್ಯಕ್ತಪಡಿಸಿದ ಅಕ್ಷರ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡ ಬಗ್ಗೆ ಮಾತನಾಡಿದ ಅಕ್ಷರ್, ‘ಇದು ನನಗೆ ದೊಡ್ಡ ಗೌರವವಾಗಿದೆ. ನನ್ನ ಮೇಲೆ ತುಂಬಾ ನಂಬಿಕೆ ತೋರಿಸಿದ ಮಾಲೀಕರು ಮತ್ತು ಸಹಾಯಕ ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಕ್ಯಾಪಿಟಲ್ಸ್ನಲ್ಲಿದ್ದಾಗ ಕ್ರಿಕೆಟಿಗ ಮತ್ತು ಮನುಷ್ಯನಾಗಿ ವಿಕಸನಗೊಂಡಿದ್ದೇನೆ. ಈಗ ನಾನು ಈ ತಂಡದ ನಾಯಕನಾಗಲು ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅನುಭವಿ ಆಟಗಾರರ ದಂಡೇ ಇದೆ. ಕೆಎಲ್ ರಾಹುಲ್ ಮತ್ತು ಫಾಫ್ ಡು ಪ್ಲೆಸಿಸ್ ಅವರಂತಹ ಆಟಗಾರರು ನಾಯಕತ್ವದ ಅನುಭವ ಹೊಂದಿದ್ದು, ಅಕ್ಷರ್ ಪಟೇಲ್ಗೆ ನೆರವಾಗುವ ಸಾಧ್ಯತೆ ಇದೆ. ಇದಲ್ಲದೆ, ಮಿಚೆಲ್ ಸ್ಟಾರ್ಕ್ ಅವರಂತಹ ಬೌಲರ್ಗಳನ್ನೂ ಹೊಂದಿದೆ. ಅಕ್ಷರ್ ಪಟೇಲ್ ಕೂಡ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಅದ್ಭುತ ಫಾರ್ಮ್ನಲ್ಲಿದ್ದು, ಡೆಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.
