ಸಿಎಸ್ಕೆಗೆ ಧೋನಿ ಬಿಟ್ಟರೆ ಬೇರೆ ಯಾರಿಲ್ಲವೇ? ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಮಾಹಿ ಪುನರಾಗಮನ
ಋತುರಾಜ್ ಗಾಯಕ್ವಾಡ್ ಗಾಯಗೊಂಡ ಹಿನ್ನೆಲೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಎಂಎಸ್ ಧೋನಿ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಿದೆ. ತಂಡದಲ್ಲಿ ಬೇರೆ ಯಾರಿಲ್ಲವೇ?

ನಿಮಗೆ ನೆನಪಿರಬಹುದು, 2024ರ ಐಪಿಎಲ್ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳ ನಾಯಕರು ಫೋಟೋ ಸೆಷನ್ಗೆ ಬಂದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ನಾಯಕನನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಹೌದು, ಅವತ್ತು ಫೋಟೋ ಸೆಷನ್ಗೆ ಎಂಎಸ್ ಧೋನಿ ಬಂದಿರಲಿಲ್ಲ, ಬದಲಿಗೆ ಋತುರಾಜ್ ಗಾಯಕ್ವಾಡ್ ಆಗಮಿಸಿದ್ದರು. ಸಿಎಸ್ಕೆಗೆ ಐದು ಟ್ರೋಫಿ ಗೆದ್ದುಕೊಟ್ಟಿದ್ದ ಎಂಎಸ್ ಧೋನಿ ನಾಯಕತ್ವ ಹಸ್ತಾಂತರಿಸಿ ಹಿಂದಿನ ಸೀಟಿಗೆ ಹೋಗಿದ್ದರು. ಆ ದೃಶ್ಯಗಳು ಈಗಲೂ ನೆನಪಿವೆ. ಇನ್ಮುಂದೆ ಧೋನಿ ಕ್ಯಾಪ್ಟನ್ ಆಗಲ್ಲ ಎನ್ನುವ ಸುದ್ದಿ ಅಭಿಮಾನಿಗಳನ್ನು ಸಿಕ್ಕಾಪಟ್ಟೆ ಕಾಡಿತ್ತು!
ಇದೀಗ ಒಂದು ವರ್ಷದ ನಂತರ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದ್ದು, ಧೋನಿ ಮತ್ತೆ ಚೆನ್ನೈ ನಾಯಕತ್ವ ವಹಿಸಿದ್ದಾರೆ. ಹೌದು, ಗುರುವಾರ (ಏಪ್ರಿಲ್ 10) ಸಂಜೆ ಸಿಎಸ್ಕೆ ಅಧಿಕೃತವಾಗಿ ಘೋಷಣೆ ಮಾಡಿದೆ. ಗಾಯದ ಸಮಸ್ಯೆಯಿಂದ ಋತುರಾಜ್ ಗಾಯಕ್ವಾಡ್ ಐಪಿಎಲ್ನಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಎಂಎಸ್ ಧೋನಿ ಅವರನ್ನೇ ಮತ್ತೆ ನೇಮಿಸಿದೆ. ಮತ್ತೊಮ್ಮೆ ಸಾರಥ್ಯ ಪಡೆಯುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆದರೆ ಕೆಲವರು ಟೀಕೆಯನ್ನೂ ವ್ಯಕ್ತಪಡಿಸಿದ್ದಾರೆ. ಧೋನಿ ಬಿಟ್ಟರೆ ಬೇರೆ ಯಾರೂ ಸಿಗಲಿಲ್ಲವೇ ಎಂದು ಪ್ರಶ್ನೆಯೂ ಹಾಕಿದ್ದಾರೆ.
18ನೇ ಆವೃತ್ತಿಗೆ ಅನೇಕ ತಂಡಗಳು ಹೊಸ ನಾಯಕನನ್ನು ಆಯ್ಕೆ ಮಾಡಿವೆ. ಇದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ದೊಡ್ಡ ಉದಾಹರಣೆ. ಋತುವಿನ ಆರಂಭಕ್ಕೂ ಮುನ್ನ ಕೊಹ್ಲಿಗೆ ನಾಯಕತ್ವವನ್ನು ಹಸ್ತಾಂತರಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಆರ್ಸಿಬಿ ಯುವ ರಜತ್ ಪಾಟೀದಾರ್ಗೆ ನಾಯಕತ್ವ ಹಸ್ತಾಂತರಿಸಿತು. ಅದೇ ರೀತಿ ಮುಂಬೈ ಇಂಡಿಯನ್ಸ್ ಕಳೆದ ಋತುವಿನಲ್ಲಿ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಿ ಹಾರ್ದಿಕ್ ಪಾಂಡ್ಯಗೆ ಜವಾಬ್ದಾರಿ ನೀಡಿತ್ತು. ಇದು ದೊಡ್ಡ ಚರ್ಚೆಗೂ ಕಾರಣವಾಗಿತ್ತು. ಈಗ ಡೆಲ್ಲಿ, ಲಕ್ನೋ, ಪಂಜಾಬ್ ತಂಡಗಳೂ ನಾಯಕತ್ವ ಬದಲಿಸಿವೆ.
ಸಿಎಸ್ಕೆ ವಿರುದ್ದ ಆರೋಪ
2024ರಲ್ಲಿ ನಾಯಕತ್ವ ಬದಲಿಸಿದ್ದ ಸಿಎಸ್ಕೆ ಮತ್ತೆ ಧೋನಿಗೆ ನಾಯಕನಪಟ್ಟ ನೀಡಿದೆ. ಋತುರಾಜ್ ಸ್ಥಾನಕ್ಕೆ ಮತ್ತೊಬ್ಬ ಯುವ ಆಟಗಾರನಿಗೆ ಅವಕಾಶ ನೀಡಬಹುದಿತ್ತು. ಆದರೆ ಚೆನ್ನೈ ಧೋನಿ ಬಿಟ್ಟು ಬೇರೆ ಯಾರ ಮೇಲೆಯೂ ನಂಬಿಕೆ ಇಟ್ಟಿಲ್ಲ ಎನ್ನುವಂತಿದೆ ಸದ್ಯದ ನಿರ್ಧಾರ. ಈ ಹಿಂದಿನಿಂದಲೂ ತಂಡದಲ್ಲಿದ್ದ ಅನೇಕ ಆಟಗಾರರಿಗೆ ಅನ್ಯಾಯವಾಗಿದೆ. ದೀರ್ಘಕಾಲದವರೆಗೆ ಸುರೇಶ್ ರೈನಾ ತಂಡದಲ್ಲಿದ್ದರೂ ಆ ಸುವರ್ಣಾವಕಾಶ ಒದಗಿಯೇ ಬರಲಿಲ್ಲ ಎಂಬುದು ಹಲವರ ಆರೋಪ.
ಅಂತೆಯೇ, ಫಾಫ್ ಡು ಪ್ಲೆಸಿಸ್ ನಾಯಕತ್ವವನ್ನು ವಹಿಸಿಕೊಳ್ಳುವ ಅಧಿಕಾರವನ್ನು ಹೊಂದಿದ್ದರು. ಆದರೆ ಸಿಎಸ್ಕೆ ಅವರ ಬಗ್ಗೆ ಹೆಚ್ಚು ಆಸಕ್ತಿ ತೋರಿಸಲಿಲ್ಲ. ರವೀಂದ್ರ ಜಡೇಜಾ ಅವರನ್ನು 2022ರಲ್ಲಿ ಸಿಎಸ್ಕೆ ನಾಯಕರನ್ನಾಗಿ ಮಾಡಲಾಯಿತು. ಜಡ್ಡು ಅವರ ನಾಯಕತ್ವದಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಋತುವಿನ ಮಧ್ಯದಲ್ಲಿ ಧೋನಿಗೆ ಮತ್ತೆ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ಮತ್ತೆ ಯುವ ಆಟಗಾರರರಿಗೆ ನಾಯಕತ್ವ ವಹಿಸಿ ಬೆಳೆಸುವ ಕೆಲಸಕ್ಕೆ ಮುಂದಾಗುತ್ತಿಲ್ಲ ಎಂದು ಹಲವರು ಸಿಎಸ್ಕೆ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.
ಹೆಸರಿಗೆ ನಾಯಕನ ಬದಲಾವಣೆ, ನಿರ್ಧಾರ ತೆಗೆದುಕೊಳ್ಳುವುದೆಲ್ಲಾ ಧೋನಿ
ರವೀಂದ್ರ ಜಡೇಜಾ ನಾಯಕತ್ವದ ಯುಗ ನೆನಪಿಸಿಕೊಳ್ಳಿ. ಟಾಸ್ ಮತ್ತು ಪಂದ್ಯದ ನಂತರದ ಪ್ರಸ್ತುತಿ ಹೊರತುಪಡಿಸಿ ಸಂಪೂರ್ಣ ಧೋನಿಯೇ ನಾಯಕತ್ವ ಮಾಡುತ್ತಿದ್ದರು. ಮೈದಾನದಲ್ಲಿ ಜಡೇಜಾ ನಾಯಕತ್ವ ಮಾಡಿದ್ದು ಎಂದಿಗೂ ಕಾಣಲಿಲ್ಲ. ಋತುರಾಜ್ ಗಾಯಕ್ವಾಡ್ ಅವರ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆಯುತ್ತಿದೆ. ಎಲ್ಲಾ ನಿರ್ಧಾರಗಳಲ್ಲಿ ಧೋನಿ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ. ಜಡ್ಡು ಅಥವಾ ಋತು ಇಬ್ಬರಿಗೂ ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತಿಲ್ಲ. ಇದು ಹಿನ್ನಡೆಗೆ ಕಾರಣ ಎಂದರೂ ಹೇಳಬಹುದು.
ಆದರೆ ಸದ್ಯದ ಮಟ್ಟಿಗೆ ಧೋನಿ ಹೊರತುಪಡಿಸಿ ನಾಯಕತ್ವದ ಅನುಭವ ಹೊಂದಿರುವ ಆಟಗಾರರು ತಂಡದಲ್ಲಿಲ್ಲ. ಮೆಗಾ ಹರಾಜಿನಲ್ಲಿ ಕ್ಯಾಪ್ಟನ್ಸಿ ಲಕ್ಷಣಗಳಿರುವ ಆಟಗಾರನನ್ನೂ ಖರೀದಿಸಿಲ್ಲ.
