ಸೇಡು ತೀರಿಸಲು ವಿಫಲವಾದ ಲಕ್ನೋ; ಎಲ್‌ಎಸ್‌ಜಿ ವಿರುದ್ಧದ ಎರಡೂ ಪಂದ್ಯಗಳಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್
ಐಪಿಎಲ್ 18ನೇ ಆವೃತ್ತಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್, ಅಜೇಯ 57 ರನ್ ಸಿಡಿಸಿದರು. ಇದು ಐಪಿಎಲ್‌ನಲ್ಲಿ ರಾಹುಲ್ ಅವರ 40ನೇ ಅರ್ಧಶತಕ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ 5000 ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಐಪಿಎಲ್ 18ನೇ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಈ ಹಿಂದೆ ಮೊದಲ ಪಂದ್ಯವನ್ನು 1 ವಿಕೆಟ್‌ನಿಂದ ರೋಚಕವಾಗಿ ಗೆದ್ದಿದ್ದ ತಂಡವು, ಎರಡನೇ ಬಾರಿಯ ಮುಖಾಮುಖಿಯಲ್ಲಿ 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿದೆ. ಲಕ್ನೋ ತವರಿನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡದ ಸಾಂಘಿಕ ಹೋರಾಟ ಫಲ ಕೊಟ್ಟಿದೆ. ಈ ಗೆಲುವಿನೊಂದಿಗೆ ತಂಡವು ಟೂರ್ನಿಯಲ್ಲಿ 6ನೇ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಭದ್ರಪಡಿಸಿಕೊಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಲ್‌ಎಸ್‌ಜಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್ ನಡೆಸಿದ ಡೆಲ್ಲಿ, ನಿರ್ಭೀತಿಯಿಂದ ಚೇಸಿಂಗ್ ನಡೆಸಿ ಕೇವಲ 17.5 ಓವರ್‌ಗಳಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು ಗೆದ್ದು ಬೀಗಿದೆ.
ಮುಖೇಶ್ ಯಾದವ್ ನೇತೃತ್ವದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನದ ನಂತರ, ಬ್ಯಾಟಿಂಗ್‌ನಲ್ಲಿ ಕೆಎಲ್ ರಾಹುಲ್ ಮತ್ತು ಪೊರೆಲ್ ಆಕರ್ಷಕ ಅರ್ಧಶತಕ ಬಾರಿಸಿದರು. ಟೂರ್ನಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿರುವ ಕನ್ನಡಿಗ, ಅಜೇಯ 57 ರನ್ ಸಿಡಿಸುವ ಮೂಲಕ ಅಬ್ಬರಿಸಿದರು. ಇದು ಐಪಿಎಲ್‌ನಲ್ಲಿ ರಾಹುಲ್ ಅವರ 40ನೇ ಅರ್ಧಶತಕ. ಆ ಮೂಲಕ ಲೀಗ್ ಇತಿಹಾಸದಲ್ಲಿ ಅತಿ ವೇಗವಾಗಿ 5000 ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪೊರೆಲ್ - ರಾಹುಲ್ ಅರ್ಧಶತಕ
160 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಆರಂಭಿಕ ಜೋಡಿ ಕರುಣ್ ನಾಯರ್ ಹಾಗೂ ಅಭಿಷೇಕ್ ಪೊರೆಲ್ ಉತ್ತಮ ಆರಂಭ ಒದಗಿಸಿಕೊಟ್ಟರು. ನಾಯರ್ 15 ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ ಮತ್ತು ಪೊರೆಲ್ ಎರಡನೇ ವಿಕೆಟ್‌ಗೆ 69 ರನ್‌ಗಳ ಜೊತೆಯಾಟವಾಡಿದರು. 51 (36) ರನ್ ಗಳಿಸಿದ್ದ ಅಭಿಷೇಕ್ ಪೊರೆಲ್ ಮರ್ಕ್ರಾಮ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಕ್ರೀಸ್‌ಗೆ ಬಂದ ನಾಯಕ ಅಕ್ಷರ್ ಪಟೇಲ್, ರಾಹುಲ್ ಜೊತೆಗೂಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಕ್ಷರ್ ಅಜೇಯ 34 ರನ್ ಸಿಡಿಸಿದರು.
ಅಬ್ಬರಿಸಿ ಕುಸಿದ ಲಕ್ನೋ
ಮೊದಲು ಬ್ಯಾಟಿಂಗ್ ನಡೆಸಿದ ಎಲ್ಎಸ್‌ಜಿ ಕೂಡಾ ಉತ್ತಮ ಆರಂಭ ಪಡೆದಿತ್ತು. ಐಡೆನ್ ಮಾರ್ಕ್ರಮ್ ಮತ್ತು ಮಿಚೆಲ್ ಮಾರ್ಷ್ ಮೊದಲ ವಿಕೆಟ್‌ಗೆ 87 ರನ್‌ಗಳ ಜೊತೆಯಾಟವಾಡಿದರು. ಮಾರ್ಕ್ರಮ್ 33 ಎಸೆತಗಳಲ್ಲಿ 52 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರು. ಅದ್ಭುತ ಫಾರ್ಮ್‌ನಲ್ಲಿರುವ ನಿಕೋಲಸ್ ಪೂರನ್, 9 ರನ್ ಗಳಿಸಿದ್ದಾಗ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಬೌಲ್ಡ್ ಆದರು. ಅಬ್ದುಲ್ ಸಮದ್ 2 ರನ್ ಗಳಿಸಿದರು. ಅಬ್ಬರಿಸುತ್ತಿದ್ದ ಲಕ್ನೋ, ಏಕಾಏಕಿ ಕುಸಿಯಿತು. ಮಿಚೆಲ್ ಮಾರ್ಷ್ 45 ರನ್ ಗಳಿಗೆ ಔಟಾದರು. ನಾಯಕ ರಿಷಭ್ ಪಂತ್ ಮತ್ತೊಮ್ಮೆ ವಿಫಲರಾದರು. ಡೇವಿಡ್ ಮಿಲ್ಲರ್ ಮತ್ತು ಆಯುಷ್ ಬದೋನಿ 49 ರನ್‌ಗಳ ಜೊತೆಯಾಟದೊಂದಿಗೆ ಇನ್ನಿಂಗ್ಸ್‌ಗೆ ತುಸು ಚೇತರಿಕೆ ಕೊಟ್ಟರು.