ಗುಜರಾತ್ ವಿರುದ್ಧ ಎಲಿಮಿನೇಟರ್​ ಜಯಿಸಿದ ಮುಂಬೈ; 2ನೇ ಕ್ವಾಲಿಫೈಯರ್​ಗೆ ಎಂಐ ಲಗ್ಗೆ, ಪಂಜಾಬ್ ಕಿಂಗ್ಸ್ ಎದುರಾಳಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಗುಜರಾತ್ ವಿರುದ್ಧ ಎಲಿಮಿನೇಟರ್​ ಜಯಿಸಿದ ಮುಂಬೈ; 2ನೇ ಕ್ವಾಲಿಫೈಯರ್​ಗೆ ಎಂಐ ಲಗ್ಗೆ, ಪಂಜಾಬ್ ಕಿಂಗ್ಸ್ ಎದುರಾಳಿ

ಗುಜರಾತ್ ವಿರುದ್ಧ ಎಲಿಮಿನೇಟರ್​ ಜಯಿಸಿದ ಮುಂಬೈ; 2ನೇ ಕ್ವಾಲಿಫೈಯರ್​ಗೆ ಎಂಐ ಲಗ್ಗೆ, ಪಂಜಾಬ್ ಕಿಂಗ್ಸ್ ಎದುರಾಳಿ

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ನ ಎಲಿಮಿನೇಟರ್​ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಜಯಿಸಿದ ಮುಂಬೈ ಇಂಡಿಯನ್ಸ್​ ಎರಡನೇ ಕ್ವಾಲಿಫೈಯರ್​​ಗೆ ಲಗ್ಗೆ ಇಟ್ಟಿದೆ.

ಗುಜರಾತ್ ವಿರುದ್ಧ ಎಲಿಮಿನೇಟರ್​ ಪಂದ್ಯ ಜಯಿಸಿದ ಮುಂಬೈ; 2ನೇ ಕ್ವಾಲಿಫೈಯರ್​ಗೆ ಎಂಐ ಲಗ್ಗೆ, ಪಂಜಾಬ್ ಕಿಂಗ್ಸ್ ಎದುರಾಳಿ
ಗುಜರಾತ್ ವಿರುದ್ಧ ಎಲಿಮಿನೇಟರ್​ ಪಂದ್ಯ ಜಯಿಸಿದ ಮುಂಬೈ; 2ನೇ ಕ್ವಾಲಿಫೈಯರ್​ಗೆ ಎಂಐ ಲಗ್ಗೆ, ಪಂಜಾಬ್ ಕಿಂಗ್ಸ್ ಎದುರಾಳಿ (PTI)

ರೋಹಿತ್​ ಶರ್ಮಾ (81) ಸಿಡಿಲಬ್ಬರದ ಬ್ಯಾಟಿಂಗ್​ ನೆರವಿನಿಂದ ಐಪಿಎಲ್ ಎಲಿಮಿನೇಟರ್​ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ 20 ರನ್​​ಗಳ ಅಮೋಘ ಗೆಲುವು ಸಾಧಿಸಿ 2ನೇ ಕ್ವಾಲಿಫೈಯರ್​​ಗೆ ಲಗ್ಗೆ ಇಟ್ಟಿದೆ. ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೋತಿದ್ದ ಪಂಜಾಬ್ ಕಿಂಗ್ಸ್​ ತಂಡವನ್ನು ಮುಂಬೈ ಎದುರಿಸಲಿದೆ. ಈ ಪಂದ್ಯ ಜೂನ್ 1ರಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಇಲ್ಲಿ ಗೆದ್ದ ತಂಡವು ಜೂನ್ 3ರಂದು ನಡೆಯಲಿರುವ ಫೈನಲ್​ಗೆ ಅರ್ಹತೆ ಪಡೆದುಕೊಳ್ಳಲಿದೆ.

ಮುಲ್ಲನ್​ಪುರದ ಮಹಾರಾಜ ಯಾದವೀಂದ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡವು ರೋಹಿತ್​ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ (81) ನಿಗದಿತ 20 ಓವರ್​​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಜಿಟಿ ತಂಡವು ಸಾಯಿ ಸುದರ್ಶನ್ (80) ಹೋರಾಟದ ಹೊರತಾಗಿಯೂ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. 2022ರ ಚಾಂಪಿಯನ್ ತಂಡವು ಎಲಿಮಿನೇಟರ್​​ನಲ್ಲೇ ತನ್ನ ಅಭಿಯಾನ ಕೊನೆಗೊಳಿಸಿತು.

ಸಾಯಿ ಸುದರ್ಶನ್ ಹೋರಾಟ ವ್ಯರ್ಥ

229 ರನ್​ಗಳ ಗುರಿ ಬೆನ್ನಟ್ಟಿದ ಜಿಟಿಗೆ ಸಾಯಿ ಸುದರ್ಶನ್ ನೆರವಾದರು. ಶುಭ್ಮನ್ ಗಿಲ್ (1) ಮೊದಲ ಓವರ್​​ನಲ್ಲೇ ಔಟಾದರೂ, ಅದರ ಒತ್ತಡದ ನಡುವೆಯೂ ಸುದರ್ಶನ್​ ಮುಂಬೈ ಬೌಲರ್​​​ಗಳ ಮೇಲೆ ದಂಡಯಾತ್ರೆ ನಡೆಸಿದರು.​ 20 ರನ್​​ಗಳ ಅಲ್ಪಕಾಣಿಕೆ ಒದಗಿಸಿದ ಕುಸಾಲ್ ಮೆಂಡೀಸ್, 2ನೇ ವಿಕೆಟ್​ಗೆ 64 ರನ್​ಗಳ ಪಾಲುದಾರಿಕೆಗೆ ಸಹಾಯ ಮಾಡಿದರು. ಇವರ ನಂತರ ವಾಷಿಂಗ್ಟನ್ ಸುಂದರ್​ ಎಂಐ ಬೌಲರ್​​ಗಳ ಮೇಲೆ ಸವಾರಿ ಆರಂಭಿಸಿದರು. ಸುದರ್ಶನ್-ಸುಂದರ್ 3ನೇ ವಿಕೆಟ್​ಗೆ 84 ರನ್ ಸೇರಿಸಿದರು. ಆದರೆ 48 ರನ್ (5 ಬೌಂಡರಿ, 3 ಸಿಕ್ಸರ್​) ಗಳಿಸಿದ್ದಾಗ ಸುಂದರ್ ಔಟಾದರು.

ಇದರ ಬಳಿಕ 49 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 80 ರನ್ ಸಿಡಿಸಿ ಸುದರ್ಶನ್ ಔಟಾದರು. ಇಲ್ಲಿಯತನಕ ಗೆಲ್ಲುವ ಭರವಸೆ ಮೂಡಿಸಿದ್ದ ಜಿಟಿ ಆತಂಕ ಸೃಷ್ಟಿಸಿತು. ಶರ್ಫಾನೆ ರುದರ್​ಫೋರ್ಡ್​ (24), ರಾಹುಲ್ ತೆವಾಟಿಯಾ (16) ಮತ್ತು ಶಾರೂಖ್ ಖಾನ್ (13) ಗೆಲುವಿಗಾಗಿ ಪ್ರಯತ್ನ ನಡೆಸಿದರಾದರೂ ಅದಕ್ಕೆ ಜಸ್ಪ್ರೀತ್ ಬುಮ್ರಾ ಅವಕಾಶ ನೀಡಲಿಲ್ಲ. ಕೊನೆಯ ಓವರ್​​ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಟ್ರೆಂಟ್ ಬೋಲ್ಟ್ 2, ಬುಮ್ರಾ, ಗ್ಲೀಸನ್, ಮಿಚೆಲ್ ಸ್ಯಾಂಟ್ನರ್, ಅಶ್ವಾನಿ ಕುಮಾರ್ ತಲಾ 1 ವಿಕೆಟ್ ಕಿತ್ತರು.

ರೋಹಿತ್​ ಶರ್ಮಾ ಪರಾಕ್ರಮ

ಮೊದಲು ಬ್ಯಾಟಿಂಗ್ ನಡೆಸಿದ ಎಂಐ, ಅದ್ಭುತ ಆರಂಭ ಪಡೆಯಿತು. ಮಹತ್ವದ ಪಂದ್ಯದಲ್ಲಿ ರೋಹಿತ್​ ಶರ್ಮಾ ಮಿಂಚಿನ ಅರ್ಧಶತಕ ಬಾರಿಸಿದರು. ಇವರಿಗೆ ಜಾನಿ ಬೈರ್​ಸ್ಟೋ ಭರ್ಜರಿ ಸಾಥ್ ಕೊಟ್ಟರು. ಮೊದಲ ವಿಕೆಟ್​​ಗೆ 84 ರನ್ ಹರಿದು ಬಂತು. ಬೈರ್​ಸ್ಟೋ 47 ರನ್ ಸಿಡಿಸಿ 3 ರನ್ನಿಂದ ಅರ್ಧಶತಕ ತಪ್ಪಿಸಿಕೊಂಡರು. ಬಳಿಕ ಕಣಕ್ಕೆ ಇಳಿದ ಸೂರ್ಯಕುಮಾರ್​ ಸತತ 15ನೇ 25+ ಸ್ಕೋರ್ ಸಿಡಿಸಿದರು. ರೋಹಿತ್​​ ಜತೆಗೆ 2ನೇ ವಿಕೆಟ್​ಗೆ 51 ರನ್ ಜೊತೆಯಾಟವಾಡಿದ ಸೂರ್ಯ, 33 ರನ್ ಸಿಡಿಸಿ ಔಟಾದರು.

ಮತ್ತೊಂದೆಡೆ ನಾಕೌಟ್​​ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ರೋಹಿತ್​ ಪರಾಕ್ರಮ ಮೆರೆದರು. 50 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಿತ 81 ರನ್ ಸಿಡಿಸಿ ಪ್ರಸಿದ್ಧ್ ಕೃಷ್ಣ ಬೌಲಿಂಗ್​​ನಲ್ಲಿ ಔಟಾದರು. ಅಗ್ರ ಕ್ರಮಾಂಕದ ಮೂವರ ಬಿರುಸಿನ ಬ್ಯಾಟಿಂಗ್ ಬಳಿಕ ತಿಲಕ್ ವರ್ಮಾ, ಹಾರ್ದಿಕ್​ ಪಾಂಡ್ಯ ಸ್ಕೋರ್​ ಕಾರ್ಡ್​​ನಲ್ಲಿ ತಂಡದ ಮೊತ್ತವನ್ನು 200 ಗಡಿ ದಾಟಿಸುವ ಮೂಲಕ ಗಮನ ಸೆಳೆದರು.

ಅದರಲ್ಲೂ ಹಾರ್ದಿಕ್ ಕೊನೆಯ ಓವರ್​​​ನಲ್ಲಿ 22 ರನ್ ಚಚ್ಚುವ ಮೂಲಕ ಗೆಲುವಿನಲ್ಲಿ ದೊಡ್ಡ ಮೊತ್ತ ಕಲೆ ಹಾಕಲು ನೆರವಾದರು. ತಿಲಕ್ 25 (3 ಸಿಕ್ಸರ್​), ಪಾಂಡ್ಯ ಅಜೇಯ 22 ರನ್ (3 ಸಿಕ್ಸರ್​) ಸಿಡಿಸಿದರು. ಗುಜರಾತ್ ಪರ ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಕಿಶೋರ್​ ತಲಾ 2 ವಿಕೆಟ್​ ಪಡೆದರು. ಮೊಹಮ್ಮದ್ ಸಿರಾಜ್ 1 ವಿಕೆಟ್ ಉರುಳಿಸಿದರು. ಆದರೆ ವಿಕೆಟ್ ಪಡೆದರೂ ಹೆಚ್ಚು ರನ್ ಬಿಟ್ಟುಕೊಟ್ಟರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.