ಆರ್ಸಿಬಿ ಚಾಂಪಿಯನ್ ಜಯೋತ್ಸವ, ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಬೆಂಗಳೂರು; ಪಂಜಾಬ್ ಕಿಂಗ್ಸ್ ಕನಸು ಮತ್ತೆ ಭಗ್ನ
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ.

ಹೌದು.. ನಾವು ಚಾಂಪಿಯನ್..! ಈ ಸಲ ಕಪ್ ನಮ್ದು.! 18 ವರ್ಷಗಳ ವನವಾಸ ಕೊನೆಗೂ ಕೊನೆಗೊಂಡಿತು.! 18ನೇ ಆವೃತ್ತಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ರೋಚಕ ಗೆಲುವಿನೊಂದಿಗೆ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ ಚರಿತ್ರೆ ಸೃಷ್ಟಿಸಿದೆ. 132,000 ಪ್ರೇಕ್ಷಕರು ಐತಿಹಾಸಿಕ ಗೆಲುವಿಗೆ ಸಾಕ್ಷಿಯಾದರು. ಕೋಟ್ಯಂತರ ಅಭಿಮಾನಿಗಳ ಕನಸು ಕೊನೆಗೂ ಈಡೇರಿತು. ದೇಶ-ವಿದೇಶದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಈ ಗೆಲುವನ್ನು ವಿರಾಟ್ ಕೊಹ್ಲಿಗೆ ಅರ್ಪಿಸಲಾಗಿದೆ. 2016ರ ನಂತರ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ, ಈ ಹಿಂದೆ ಮೂರು ಸಲ ರನ್ನರ್ಅಪ್ ಆಗಿತ್ತು. ಮತ್ತೊಂದೆಡೆ ಪಂಜಾಬ್ ಕನಸು ಮತ್ತೆ ಭಗ್ನಗೊಂಡಿತು. ಇದು ಕೊನೆಯದಾಗಿ 2014ರಲ್ಲಿ ಫೈನಲ್ ಆಡಿ ರನ್ನರ್ಅಪ್ ಆಗಿತ್ತು.
18ರ ನಂಟು, ಟ್ರೋಫಿ ಗೆದ್ದ 8ನೇ ತಂಡ
ಆರ್ಸಿಬಿ ಸಂಘಟಿತ ಪ್ರದರ್ಶನಕ್ಕೆ ಒಲಿದ ಐತಿಹಾಸಿಕ ಗೆಲುವು ಇದಾಗಿದೆ. ಜತೆಗೆ 18ರ ನಂಟು ಇದಾಗಿದೆ. ಇದು 18ನೇ ಆವೃತ್ತಿಯ ಸೀಸನ್ ಜೊತೆಗೆ ವಿರಾಟ್ ಕೊಹ್ಲಿ ಜೆರ್ಸಿ ಸಂಖ್ಯೆಯೂ 18 ಆಗಿದೆ. ಐಪಿಎಲ್ ಇತಿಹಾಸದಲ್ಲಿ ಪ್ರಶಸ್ತಿ ಜಯಿಸಿದ 8ನೇ ತಂಡ ಎಂಬ ಹೆಗ್ಗಳಿಕೆಗೆ ಆರ್ಸಿಬಿ ಪಾತ್ರವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ತಲಾ 5 ಪ್ರಶಸ್ತಿ ಜಯಿಸಿದ್ದರೆ, ಕೆಕೆಆರ್ 3 ಟ್ರೋಫಿ ಗೆದ್ದಿವೆ. ಉಳಿದಂತೆ ಸನ್ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್, ಡೆಕ್ಕನ್ ಚಾರ್ಜರ್ಸ್ ಮತ್ತು ಆರ್ಸಿಬಿ ತಲಾ ಒಂದು ಪ್ರಶಸ್ತಿಗೆ ಮುತ್ತಿಕ್ಕಿವೆ. ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ 6 ರನ್ನಿಂದ ಚೊಚ್ಚಲ ಟ್ರೋಫಿ ಗೆಲ್ಲಲು ವಿಫಲವಾಯಿತು.
191 ರನ್‌ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆಯಿತು. ಆದರೆ ಜೋಶ್ ಹೇಜಲ್ವುಡ್ ಬ್ರೇಕ್ ಥ್ರೂ ಕೊಟ್ಟರು. ಉತ್ತಮ ಲಯದಲ್ಲಿದ್ದ ಪ್ರಿಯಾಂಶ್ ಆರ್ಯ (24) ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಬಳಿಕ ಹಳಿ ತಪ್ಪುತ್ತಿದ್ದ ಆರ್ಸಿಬಿಗೆ ಕೃನಾಲ್ ಪಾಂಡ್ಯ (17/2) ಪಂದ್ಯದ ಚಿತ್ರಣ ಬದಲಿಸಿದರು. ಅದ್ಭುತ ಸ್ಪೆಲ್ನೊಂದಿಗೆ ಪಂಜಾಬ್ ಕಿಂಗ್ಸ್ ಅನ್ನು ಕಾಡಿದರು. ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಪ್ರಭುಸಿಮ್ರಾನ್ ಸಿಂಗ್ (26) ಮತ್ತು ಜೋಸ್ ಇಂಗ್ಲಿಸ್ (39) ಅವರನ್ನು ಕೃನಾಲ್ ಹೊರದಬ್ಬಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ನಾಯಕ ಶ್ರೇಯಸ್ ಅಯ್ಯರ್ 1 ರನ್ಗೆ ಔಟಾದರು.
ಹೀಗಿದ್ದಾಗ, ಒತ್ತಡಕ್ಕೆ ಸಿಲುಕಿದ್ದ ಪಂಜಾಬ್ಗೆ ಶಶಾಂಕ್ ಸಿಂಗ್ ಮತ್ತು ನೇಹಾಲ್ ವಧೇರಾ ಆಸರೆಯಾದರು. ಆದರೆ ನೇಹಾಲ್ 15 ರನ್ ಗಳಿಸಿ ಭುವನೇಶ್ವರ್ ಎಸೆದ 17ನೇ ಓವರ್ನಲ್ಲಿ ಔಟಾದರೆ, ಅದೇ ಓವರ್ನಲ್ಲಿ ಮಾರ್ಕಸ್ ಸ್ಟೋಯ್ನಿಸ್ ಸಿಕ್ಸರ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದು ತಂಡದ ಚಿತ್ರಣವೇ ಬದಲಿಸಿತು. ಈ ಹಂತದಲ್ಲಿ ಪಂಜಾಬ್ ಗೆಲ್ಲಲು ಕೊನೆಯ 18 ಎಸೆತಗಳಲ್ಲಿ 47 ರನ್ ಬೇಕಿತ್ತು. ಶಶಾಂಕ್ ಸಿಂಗ್ ಮತ್ತು ಅಜ್ಮತ್ತುಲ್ಲಾ ಒಮರ್ಜಾಯ್ ಇನ್ನೂ ಕ್ರೀಸ್ನಲ್ಲಿದ್ದರು. ಆದರೆ ಮರು ಓವರ್ನಲ್ಲೇ ಒಮರ್ಜಾಯ್ ಔಟಾಗಿ ತಂಡವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದರು.
ಆರ್ಸಿಬಿ ಬ್ಯಾಟಿಂಗ್ ಹೇಗಿತ್ತು?
ಫೈನಲ್ನಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆರ್ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ಸಿಡಿಲಬ್ಬರದ ಆರಂಭ ಒದಗಿಸಿದರೂ ಫಿಲ್ ಸಾಲ್ಟ್ 16 ರನ್ಗೆ ವಿಕೆಟ್ ಒಪ್ಪಿಸಿದರು. ಇದರ ನಂತರ, ವಿರಾಟ್ ಕೊಹ್ಲಿ ಅವರೊಂದಿಗೆ ಮಯಾಂಕ್ ಅಗರ್ವಾಲ್ (24) 2ನೇ ವಿಕೆಟ್‌ಗೆ 38 ರನ್‌ಗಳ ಪಾಲುದಾರಿಕೆ ಒದಗಿಸಿದರು. ನಾಯಕ ರಜತ್ ಪಾಟೀದಾರ್ ಕೂಡ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಕೊಹ್ಲಿಯೊಂದಿಗೆ 40 ರನ್‌ಗಳ ಜೊತೆಯಾಟ ಆಡಿದರೂ ತಾನು ಗಳಿಸಿದ್ದು 26 ರನ್. ಪಂಜಾಬ್ ಬೌಲರ್ಸ್ ಅಗತ್ಯ ಇದ್ದಾಗಲೆಲ್ಲಾ ವಿಕೆಟ್ ಕಿತ್ತು ಮಿಂಚಿದರು.
ಮತ್ತೊಂದೆಡೆ, ವಿಕೆಟ್ ಕಾಪಾಡುತ್ತಾ ಸ್ಕೋರ್ ಏರಿಸುತ್ತಿದ್ದ ವಿರಾಟ್ ಕೊಹ್ಲಿ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ತಂಡದ ಮೊತ್ತವೂ 200ರ ಗಡಿ ದಾಟುತ್ತದೆ ಎಂಬ ಭರವಸೆಯೂ ಇತ್ತು. ಆದರೆ, 15ನೇ ಓವರ್ನಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಬೌಲಿಂಗ್ನಲ್ಲಿ ಕೊಹ್ಲಿ ಕ್ಯಾಚ್ ನೀಡಿದರು. 4ನೇ ವಿಕೆಟ್‌ಗೆ ಲಿಯಾಮ್ ಲಿವಿಂಗ್‌ಸ್ಟೋನ್ (25) ಜತೆ 35 ರನ್ ಸೇರಿಸಿದರು. ಜಿತೇಶ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದರೂ 24 ರನ್ಗೆ ಆಟ ಮುಗಿಸಿದರು. ಇನ್ನೇನು ಆರ್ಸಿಬಿ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದೆ ಎನ್ನುವಾಗ ಪಿಬಿಕೆಎಸ್ ಬೌಲರ್ಗಳು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದರು.
ಕೊಹ್ಲಿ ನಿರ್ಗಮನದ ನಂತರ, ಲಿವಿಂಗ್‌ಸ್ಟೋನ್, ಜಿತೇಶ್ ಜೊತೆಗೆ 5ನೇ ವಿಕೆಟ್‌ಗೆ 36 ರನ್‌ಗಳ ಪಾಲುದಾರಿಕೆ ಹಂಚಿಕೊಂಡರು. ಜಿತೇಶ್ 24 ರನ್ ಸಿಡಿಸಿದರು. ರೊಮಾರಿಯೊ ಶೆಫರ್ಡ್ 9 ಎಸೆತಗಳಲ್ಲಿ 17 ರನ್, ಕೃನಾಲ್ ಪಾಂಡ್ಯ 4 ರನ್ ಗಳಿಸಿ ಕೊನೆಯಲ್ಲಿ ನಿರಾಸೆ ಮೂಡಿಸಿದರು. ಕೊನೆಯ ಓವರ್ಗಳಲ್ಲಿ ಆರ್ಸಿಬಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಟೂರ್ನಿಯುದ್ದಕ್ಕೂ ಮಿಂಚಿದ ಆರ್ಸಿಬಿ ಬ್ಯಾಟರ್ಸ್ ಕೊನೆಯ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಪಂಜಾಬ್ ಪರ ಕೈಲ್ ಜೆಮಿಸನ್, ಅರ್ಷದೀಪ್ ಸಿಂಗ್ ತಲಾ 3 ವಿಕೆಟ್, ಚಹಲ್, ವಿಜಯಕುಮಾರ್ ವೈಶಾಕ್, ಒಮರ್ಜಾಯ್ ತಲಾ 1 ವಿಕೆಟ್ ಪಡೆದರು.