ಸಾಯಿ ಸುದರ್ಶನ್ ಮತ್ತೆ ಮಿಂಚು; ರಾಜಸ್ಥಾನ್ ವಿರುದ್ಧ 58 ರನ್ನಿಂದ ಗೆದ್ದು ಅಗ್ರಸ್ಥಾನಕ್ಕೇರಿದ ಗುಜರಾತ್
ಕನ್ನಡ ಸುದ್ದಿ  /  ಕ್ರಿಕೆಟ್  /  ಸಾಯಿ ಸುದರ್ಶನ್ ಮತ್ತೆ ಮಿಂಚು; ರಾಜಸ್ಥಾನ್ ವಿರುದ್ಧ 58 ರನ್ನಿಂದ ಗೆದ್ದು ಅಗ್ರಸ್ಥಾನಕ್ಕೇರಿದ ಗುಜರಾತ್

ಸಾಯಿ ಸುದರ್ಶನ್ ಮತ್ತೆ ಮಿಂಚು; ರಾಜಸ್ಥಾನ್ ವಿರುದ್ಧ 58 ರನ್ನಿಂದ ಗೆದ್ದು ಅಗ್ರಸ್ಥಾನಕ್ಕೇರಿದ ಗುಜರಾತ್

GT vs RR, IPL 2025: 18ನೇ ಆವೃತ್ತಿಯ ಐಪಿಎಲ್​ನ 23ನೇ ಲೀಗ್​ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 58 ರನ್​ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಸಾಯಿ ಸುದರ್ಶನ್ ಮತ್ತೆ ಮಿಂಚು; ರಾಜಸ್ಥಾನ್ ವಿರುದ್ಧ 58 ರನ್ನಿಂದ ಗೆದ್ದು ಅಗ್ರಸ್ಥಾನಕ್ಕೇರಿದ ಗುಜರಾತ್
ಸಾಯಿ ಸುದರ್ಶನ್ ಮತ್ತೆ ಮಿಂಚು; ರಾಜಸ್ಥಾನ್ ವಿರುದ್ಧ 58 ರನ್ನಿಂದ ಗೆದ್ದು ಅಗ್ರಸ್ಥಾನಕ್ಕೇರಿದ ಗುಜರಾತ್ (Surjeet )

ಸಾಯಿ ಸುದರ್ಶನ್​ (82) ಅವರ ಸೊಗಸಾದ ಆಟದ ಬಲದಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 58 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದು ಜಿಟಿ ತಂಡದ ಸತತ ನಾಲ್ಕನೇ ಗೆಲುವು. ಆದರೆ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದ ಆರ್​ಆರ್​ಗೆ ನಿರಾಸೆಯಾಗಿದೆ. ಈ ಜಯದೊಂದಿಗೆ ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ 8 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಗುಜರಾತ್, ಉತ್ತಮ ಆರಂಭ ಪಡೆಯದ ಹೊರತಾಗಿಯೂ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಸಾಯಿ ಸುದರ್ಶನ್ 82 ರನ್​ಗಳ ಅದ್ಭುತ ಕೊಡುಗೆ ನೀಡಿದರು. ಪರಿಣಾಮ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು.

ಬೌಲಿಂಗ್​ನಲ್ಲಿ ರನ್ ಸೋರಿಕೆ ಮಾಡಿದ ಗುಜರಾತ್ ಬೃಹತ್ ಮೊತ್ತವನ್ನು ಬೆನ್ನಟ್ಟಲು ಪರದಾಡಿತು. ಬ್ಯಾಟಿಂಗ್​ನಲ್ಲಿ ಪರಾಕ್ರಮ ಮೆರೆದ ಜಿಟಿ, ಬೌಲಿಂಗ್​ನಲ್ಲೂ ಮೇಲುಗೈ ಸಾಧಿಸಿತು. ಸಂಜು ಸ್ಯಾಮ್ಸನ್ (41) ಮತ್ತು ಶಿಮ್ರಾನ್ ಹೆಟ್ಮೆಯರ್ (52) ಹೋರಾಟದ ಹೊರತಾಗಿಯೂ ಆರ್​ಆರ್ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. 20 ಓವರ್​​ಗಳಲ್ಲಿ 19.2 ವಿಕೆಟ್ ನಷ್ಟಕ್ಕೆ 159 ರನ್​ಗೆ ಆಲೌಟ್ ಆಯಿತು. ಪ್ರಸಿದ್ಧ್ ಕೃಷ್ಣ 3 ವಿಕೆಟ್ ಪಡೆದರು.

ಸಾಯಿ ಸುದರ್ಶನ್ 3ನೇ ಅರ್ಧಶತಕ

ಜಿಟಿ ಎಡಗೈ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅವರು ಅದ್ಭುತ ಲಯದಲ್ಲಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ 3ನೇ ಆರ್ಧಶತಕ ಸಿಡಿಸಿ ಆರೆಂಜ್​ ರೇಸ್​ನಲ್ಲಿ 2ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಶುಭ್ಮನ್ ಗಿಲ್ (2) ಬೇಗನೇ ಔಟಾಗಿದ್ದರ ಹೊರತಾಗಿಯೂ ಸುದರ್ಶನ್, ಬಟ್ಲರ್ ಜೊತೆಗೂಡಿ 2ನೇ ವಿಕೆಟ್​ಗೆ 80 ರನ್​ಗಳ ಪಾಲುದಾರಿ ಒದಗಿಸಿದರು. ಬಟ್ಲರ್ 36 ರನ್​ಗೆ ಆಟ ಮುಗಿಸಿದರು. ಬಳಿಕ ಕಣಕ್ಕಿಳಿದ ಶಾರೂಖ್ ಕೂಡ ಅಬ್ಬರಿಸಿದರು.

ಶಾರೂಖ್ ಖಾನ್ ಅವರೊಂದಿಗೂ ಸಾಯಿ ಅರ್ಧಶತಕದ (62) ಜೊತೆಯಾಟವಾಡಿದರು. ವಿಕೆಟ್ ರಕ್ಷಿಸಿಕೊಳ್ಳುವುದರ ಜೊತೆಗೆ ಸ್ಕೋರ್​ ಬೊರ್ಡ್​ನಲ್ಲೂ ರನ್ ಏರಿಸುತ್ತಿದ್ದ ಸಾಯಿ, 53 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಿತ 82 ರನ್ ಬಾರಿಸಿ ಔಟಾದರು. ಕೊನೆಯಲ್ಲಿ ರಾಹುಲ್ ತೆವಾಟಿಯಾ ಅಜೇಯ 24, ರಶೀದ್ ಖಾನ್ 12 ರನ್​ಗಳ ಕಾಣಿಕೆ ಒದಗಿಸಿದರು. ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣಾ ತಲಾ 2 ವಿಕೆಟ್ ಪಡೆದರು.

ಬೌಲರ್​ಗಳ ದಾಳಿಗೆ ತತ್ತರಿಸಿದ ಆರ್​ಆರ್​​

ಬೌಲಿಂಗ್​ನಲ್ಲೂ ಎದುರಾಳಿ ತಂಡವನ್ನು ನಿಯಂತ್ರಿಸಲು ವಿಫಲವಾದ ಆರ್​ಆರ್, ಬ್ಯಾಟಿಂಗ್​ನಲ್ಲೂ ರನ್ ಗಳಿಸಲು ವಿಫಲವಾಯಿತು. ಆರಂಭದಲ್ಲೇ ಯಶಸ್ವಿ ಜೈಸ್ವಾಲ್ (6), ನಿತೀಶ್​ ರಾಣಾ (1) ಅವರನ್ನು ಕಳೆದುಕೊಂಡಿತು. ಇನ್ನೇನು ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ತಂಡಕ್ಕೆ ಚೇತರಿಕೆ ನೀಡುತ್ತಿದ್ದಾರೆ ಎನ್ನುವಷ್ಟರಲ್ಲಿ ಈ ಜೋಡಿಯನ್ನು ಕುಲ್ವಂತ್ ಖೇಜ್ಡೋಲಿಯಾ ಬೇರ್ಪಡಿಸಿದರು. ಪರಾಗ್ (26) ಔಟಾದ ಮರು ಓವರ್​ನಲ್ಲೇ ಧ್ರುವ್ ಜುರೆಲ್ (1) ಜಾಗ ಖಾಲಿ ಮಾಡಿದರು.

ಈ ಹಂತದಲ್ಲಿ ಸಂಜು ಮತ್ತು ಶಿಮ್ರಾನ್ ಹೆಟ್ಮೆಯರ್ ಜಿಟಿ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಆದರೆ, ಸಂಜು 41 ರನ್ ಗಳಿಸಿದ್ದಾಗ ಔಟಾಗುವುದರೊಂದಿಗೆ ಆರ್​ಆರ್ ಗೆಲುವಿನ ಕನಸು ಭಗ್ನಗೊಂಡಿತು. ಇದರ ಬೆನ್ನಲ್ಲೇ 52 ರನ್ ಚಚ್ಚಿದ್ದ ಹೆಟ್ಮೆಯರ್​ ಸಹ ಹೊರಬಿದ್ದರು. ಜೋಫ್ರಾ ಆರ್ಚರ್ (4), ತುಷಾರ್ ದೇಶಪಾಂಡೆ (3) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಇರಲಿಲ್ಲ. ಪ್ರಸಿದ್ಧ್ 3 ವಿಕೆಟ್ ಪಡೆದರೆ, ರಶೀದ್ ಖಾನ್, ಸಾಯಿ ಕಿಶೋರ್ 2 ವಿಕೆಟ್ ಕಿತ್ತರು. ಉಳಿದ ಬೌಲರ್ಸ್ ತಲಾ 1 ವಿಕೆಟ್ ಉರುಳಿಸುವ ಮೂಲಕ ಗಮನ ಸೆಳೆದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner