ಕೆಕೆಆರ್‌ vs ಸಿಎಸ್‌ಕೆ ಪಂದ್ಯಕ್ಕೆ ಮಳೆ ಆತಂಕ; ಈಡನ್‌ ಗಾರ್ಡನ್ಸ್‌ ಪಿಚ್‌ ಹಾಗೂ ಸಂಭಾವ್ಯ ಆಡುವ ಬಳಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಕೆಆರ್‌ Vs ಸಿಎಸ್‌ಕೆ ಪಂದ್ಯಕ್ಕೆ ಮಳೆ ಆತಂಕ; ಈಡನ್‌ ಗಾರ್ಡನ್ಸ್‌ ಪಿಚ್‌ ಹಾಗೂ ಸಂಭಾವ್ಯ ಆಡುವ ಬಳಗ

ಕೆಕೆಆರ್‌ vs ಸಿಎಸ್‌ಕೆ ಪಂದ್ಯಕ್ಕೆ ಮಳೆ ಆತಂಕ; ಈಡನ್‌ ಗಾರ್ಡನ್ಸ್‌ ಪಿಚ್‌ ಹಾಗೂ ಸಂಭಾವ್ಯ ಆಡುವ ಬಳಗ

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಈವರೆಗೆ ಆಡಿದ 99 ಐಪಿಎಲ್ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡ 42 ಪಂದ್ಯಗಳನ್ನು ಗೆದ್ದಿದೆ. ಚೇಸಿಂಗ್ ಮಾಡಿದ ತಂಡ 56 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಕೆಕೆಆರ್‌ vs ಸಿಎಸ್‌ಕೆ ಪಂದ್ಯಕ್ಕೆ ಮಳೆ ಆತಂಕ; ಈಡನ್‌ ಗಾರ್ಡನ್ಸ್‌ ಪಿಚ್‌ ಹಾಗೂ ಸಂಭಾವ್ಯ ತಂಡ
ಕೆಕೆಆರ್‌ vs ಸಿಎಸ್‌ಕೆ ಪಂದ್ಯಕ್ಕೆ ಮಳೆ ಆತಂಕ; ಈಡನ್‌ ಗಾರ್ಡನ್ಸ್‌ ಪಿಚ್‌ ಹಾಗೂ ಸಂಭಾವ್ಯ ತಂಡ (PTI)

ಐಪಿಎಲ್ 2025ರ 57ನೇ ಪಂದ್ಯದಲ್ಲಿ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ (KKR vs CSK) ಸವಾಲು ಹಾಕಲು ಸಜ್ಜಾಗಿದೆ. ಪಂದ್ಯವು ಕೆಕೆಆರ್‌ ತವರು ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆಯಲಿದೆ. ಸಿಎಸ್‌ಕೆ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಈ ಪಂದ್ಯದಲ್ಲಿ ಸೋಲು ಗೆಲುವು ತಂಡಕ್ಕೆ ದೊಡ್ಡ ವಿಷಯವೇನೂ ಆಗುವುದಿಲ್ಲ. ಆದರೆ ಪ್ರತಿಷ್ಠೆಗಾಗಿ ಗೆಲ್ಲಬೇಕಾಗಿದೆ. ಅತ್ತ ಕೆಕೆಆರ್‌ ತಂಡವು ಪ್ಲೇಆಫ್‌ ಪ್ರವೇಶಿಸಲು ಮಾಡು ಇಲ್ಲವೇ ಮಡಿ ಎಂದೇ ಹೋರಾಡಬೇಕಿದೆ. ಒಂದು ಪಂದ್ಯದಲ್ಲಿ ಸೋತರೂ, ತಂಡ ಟೂರ್ನಿಯಿಂದ ಹೊರಬಿದ್ದಂತೆ.

ಪಂದ್ಯವು ಕೋಲ್ಕತ್ತಾದಲ್ಲಿ ನಡೆಯುವುದರಿಂದ ಪಂದ್ಯಕ್ಕೆ ಸಂಬಂಧಿಸಿದಂತೆ ಪಿಚ್‌ ಹಾಗೂ ಹವಾಮಾನ ವರದಿ ಇಲ್ಲಿದೆ.

ಈಡನ್ ಗಾರ್ಡನ್ಸ್ ಪಿಚ್ ವರದಿ

ಈಡನ್ ಗಾರ್ಡನ್ಸ್‌ನ ಪಿಚ್‌ನಲ್ಲಿ ಚೆಂಡು ಹಳೆಯದಾದ ನಂತರ ವೇಗದ ಬೌಲರ್‌ಗಳ ಜೊತೆಗೆ ಸ್ಪಿನ್ನರ್‌ಗಳಿಗೂ ನೆರವಾಗುತ್ತಿದೆ. ಇದೇ ಮೈದಾನದಲ್ಲಿ 2024ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಕೆಕೆಆರ್‌ ವಿರುದ್ಧ 262 ರನ್‌ ಗಳಿಸಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಯಶಸ್ವಿ ಚೇಸಿಂಗ್ ಮಾಡಿತ್ತು. ಐಪಿಎಲ್ 2025ರಲ್ಲಿ ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 203 ಆಗಿದೆ. ಹೀಗಾಗಿ ಕೋಲ್ಕತ್ತಾದಲ್ಲಿ ಮತ್ತೊಂದು ಹೆಚ್ಚಿನ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು.

ಪ್ರಸಕ್ತ ಋತುವಿನಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಸುಮಾರು 60 ಶೇ. ವಿಕೆಟ್‌ಗಳನ್ನು ವೇಗಿಗಳು ಪಡೆದಿದ್ದಾರೆ. ವೇಗದ ಬೌಲರ್‌ಗಳು 10.6ರ ಎಕಾನಮಿ ರೇಟ್‌ನಲ್ಲಿ ರನ್‌ ಸೋರಿಕೆ ಮಾಡಿದರೆ, ಸ್ಪಿನ್ನರ್‌ಗಳು ಕಡಿಮೆ ವಿಕೆಟ್‌ ಪಡೆದರೂ ಕೇವಲ 8.7ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

ಕೆಕೆಆರ್ ಮತ್ತು ಆರ್‌ಆರ್ ನಡುವಿನ ಕೊನೆಯ ಪಂದ್ಯಕ್ಕೆ ಬಳಸಲಾದ ಪಿಚ್‌, ಸ್ಪಿನ್ನರ್‌ಗಳಿಗೆ ನೆರವಾಗಿತ್ತು. ಎರಡೂ ತಂಡಗಳ ನಿಧಾನಗತಿಯ ಬೌಲರ್‌ಗಳು ಪಿಚ್‌ ಅನ್ನು ಸದುಪಯೋಗಪಡಿಸಿಕೊಂಡರು. ಇದೀಗ ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಪಿಚ್‌ನಲ್ಲಿ ಬದಲಾಗುವ ಸಾಧ್ಯತೆ ಇಲ್ಲ.

ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಆಡಲಾದ ಒಟ್ಟು 99 ಐಪಿಎಲ್ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 42 ಪಂದ್ಯಗಳನ್ನು ಗೆದ್ದಿದೆ. ಇದೇ ವೇಳೆ ಚೇಸಿಂಗ್ ಮಾಡಿದ ತಂಡ 56 ಪಂದ್ಯಗಳನ್ನು ಗೆದ್ದಿದೆ. ಅಂಕಿ-ಅಂಶಗಳನ್ನು ನೋಡಿದರೆ ಇಲ್ಲಿ ಚೇಸಿಂಗ್‌ ಮಾಡುವುದು ಉತ್ತಮವಾಗಿದೆ.

ಕೋಲ್ಕತ್ತಾದ ಹವಾಮಾನ ವರದಿ

ಕೋಲ್ಕತ್ತಾದಲ್ಲಿ ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಹವಾಮಾನ ವರದಿ ಪ್ರಕಾರ, ಶೇ. 55ರಷ್ಟು ಮಳೆಯಾಗಲಿದೆ. ತಾಪಮಾನವು ಗರಿಷ್ಠ 36 ಡಿಗ್ರಿ ಮತ್ತು ಕನಿಷ್ಠ 27 ಡಿಗ್ರಿ ಇರುತ್ತದೆ ಎಂದು ಅಂದಾಜಿಸಲಾಗಿದೆ. ಕೊನೆಯದಾಗಿ ಹೈದರಾಬಾದ್‌ನಲ್ಲಿ ಮಳೆ ಬಂದ ಕಾರಣದಿಂದ ಡೆಲ್ಲಿ ಹಾಗೂ ಹೈದರಾಬಾದ್‌ ನಡುವಿನ ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿತ್ತು.

ಕೆಕೆಆರ್‌ ಸಂಭಾವ್ಯ ತಂಡ

ಸುನಿಲ್ ನರೈನ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್), ಅಜಿಂಕ್ಯ ರಹಾನೆ (ನಾಯಕ), ಆಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರೋವ್ಮನ್ ಪೊವೆಲ್, ಅನುಕುಲ್ ರಾಯ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.

ಸಿಎಸ್‌ಕೆ ಸಂಭಾವ್ಯ ತಂಡ

ಶೇಕ್ ರಶೀದ್, ಆಯುಷ್ ಮ್ಹಾತ್ರೆ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ದೀಪಕ್ ಹೂಡಾ/ಉರ್ವಿಲ್ ಪಟೇಲ್, ಎಂಎಸ್ ಧೋನಿ (ನಾಯಕ & ವಿಕೆಟ್‌ ಕೀಪರ್), ಮಥೀಶ ಪತಿರಾನ, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.