ಸೋಲಿನ ಬೆನ್ನಲ್ಲೇ ಲಕ್ನೋ ತಂಡಕ್ಕೆ ಸಿಹಿ ಸುದ್ದಿ; 11 ಕೋಟಿ ಸ್ಪೀಡ್​ಸ್ಟರ್ ಮಯಾಂಕ್ ಈ ಪಂದ್ಯಕ್ಕೆ ಲಭ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಸೋಲಿನ ಬೆನ್ನಲ್ಲೇ ಲಕ್ನೋ ತಂಡಕ್ಕೆ ಸಿಹಿ ಸುದ್ದಿ; 11 ಕೋಟಿ ಸ್ಪೀಡ್​ಸ್ಟರ್ ಮಯಾಂಕ್ ಈ ಪಂದ್ಯಕ್ಕೆ ಲಭ್ಯ

ಸೋಲಿನ ಬೆನ್ನಲ್ಲೇ ಲಕ್ನೋ ತಂಡಕ್ಕೆ ಸಿಹಿ ಸುದ್ದಿ; 11 ಕೋಟಿ ಸ್ಪೀಡ್​ಸ್ಟರ್ ಮಯಾಂಕ್ ಈ ಪಂದ್ಯಕ್ಕೆ ಲಭ್ಯ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲಿನ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. 11 ಕೋಟಿ ರೂಪಾಯಿಗೆ ರಿಟೈನ್ ಆಗಿದ್ದ ವೇಗಿ ಮಯಾಂಕ್ ಯಾದವ್ ಫಿಟ್​ನೆಸ್ ಟೆಸ್ಟ್ ಪಾಸ್ ಆಗಿದ್ದಾರೆ.

ಸೋಲಿನ ಬೆನ್ನಲ್ಲೇ ಲಕ್ನೋ ತಂಡಕ್ಕೆ ಸಿಹಿ ಸುದ್ದಿ; 11 ಕೋಟಿ ಸ್ಪೀಡ್​ಸ್ಟರ್ ಮಯಾಂಕ್ ಈ ಪಂದ್ಯಕ್ಕೆ ಲಭ್ಯ
ಸೋಲಿನ ಬೆನ್ನಲ್ಲೇ ಲಕ್ನೋ ತಂಡಕ್ಕೆ ಸಿಹಿ ಸುದ್ದಿ; 11 ಕೋಟಿ ಸ್ಪೀಡ್​ಸ್ಟರ್ ಮಯಾಂಕ್ ಈ ಪಂದ್ಯಕ್ಕೆ ಲಭ್ಯ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್​ಗಳ ಸೋಲಿನಿಂದ ಕಂಗೆಟ್ಟಿರುವ ಲಕ್ನೋ ಸೂಪರ್ ಜೈಂಟ್ಸ್ (Lucknow Super Gaints) ತಂಡಕ್ಕೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಗಾಯದ ಕಾರಣ ಮೊದಲಾರ್ಧ ಐಪಿಎಲ್​ಗೆ (IPL) ದೂರವಾಗಿದ್ದ ​ವೇಗಿ ಮಯಾಂಕ್ ಯಾದವ್ (Mayank Yada) ಅವರು ಬೆನ್ನು ನೋವಿನಿಂದ ಸಂಪೂರ್ಣ ಚೇತರಿಕೊಂಡು ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಏಪ್ರಿಲ್ 19ರಂದು ನಡೆಯುವ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಬೆಂಗಳೂರಿನ ಸೆಂಟರ್ ಫಾರ್ ಎಕ್ಸಲೆನ್ಸ್ ವೈದ್ಯಕೀಯ ತಂಡವು ಭಾನುವಾರ ನಡೆಸಿದ ಫಿಟ್​ನೆಸ್ ಪರೀಕ್ಷೆಯಲ್ಲಿ ಅವರು ಪಾಸ್ ಆಗಿದ್ದು, ಐಪಿಎಲ್‌ನಲ್ಲಿ ಆಡಲು ಕ್ಲಿಯರೆನ್ಸ್ ಪ್ರಮಾಣಪತ್ರ ನೀಡಿದೆ.

ಬಾಂಗ್ಲಾದೇಶ ವಿರುದ್ಧ ಭಾರತ ಪರ ಆಡಿದ ಎರಡು ಟಿ20 ಪಂದ್ಯಗಳ ನಂತರ ಬೆನ್ನುನೋವಿನಿಂದಾಗಿ ಮಯಾಂಕ್ ಅಕ್ಟೋಬರ್ 2024ರಿಂದ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ಹೊರಗುಳಿದಿದ್ದರು. ಅಂದಿನಿಂದ ಚೇತರಿಸಿಕೊಳ್ಳಲು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ (CoE) ಚಿಕಿತ್ಸೆ ಪಡೆಯುತ್ತಿದ್ದಾರೆ. ಮಯಾಂಕ್ 90-95ರಷ್ಟು ಫಿಟ್ ಆಗಿದ್ದಾರೆ. ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಏಪ್ರಿಲ್ 4ರಂದು ಎಲ್​ಎಸ್​ಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಇತ್ತೀಚೆಗೆ​ ಹೇಳಿದ್ದರು. ಈ ಆವೃತ್ತಿಯ ಆರಂಭದಲ್ಲಿ ಭಾರತೀಯ ವೇಗಿಗಳ ಲಭ್ಯತೆ ಅಥವಾ ಅದರ ಕೊರತೆಯಿಂದ ಲಕ್ನೋ ತಂಡವು ಸಂಕಷ್ಟಕ್ಕೆ ಸಿಲುಕಿತ್ತು.

ಪ್ರಮುಖ ವೇಗಿಗಳೇ ಗಾಯಾಳುಗಳು

ಮಯಾಂಕ್ ಮಾತ್ರವಲ್ಲ, ಮೊಹ್ಸಿನ್ ಖಾನ್, ಆವೇಶ್ ಖಾನ್ ಮತ್ತು ಆಕಾಶ್ ದೀಪ್ ಕೂಡ ಗಾಯಗೊಂಡಿದ್ದರು. ಈಗ ಆವೇಶ್ ಮತ್ತು ಆಕಾಶ್ ಚೇತರಿಸಿಕೊಂಡು ಲಭ್ಯವಾಗಿದ್ದಾರೆ. ಆದರೆ ಮೊಹ್ಸಿನ್ ಖಾನ್ ಟೂರ್ನಿಯಿಂದಲೇ ಹೊರಬಿದ್ದರು. ಹೀಗಾಗಿ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಶಾರ್ದೂಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 11 ವಿಕೆಟ್​ಗಳೊಂದಿಗೆ ಜಂಟಿ 2ನೇ ಸ್ಥಾನ ಪಡೆದ ಬೌಲರ್​ ಆಗಿರುವ ಶಾರ್ದೂಲ್ ಪರ್ಪಲ್ ಕ್ಯಾಪ್ ರೇಸ್​ನಲ್ಲಿದ್ದಾರೆ. ಮತ್ತೊಂದೆಡೆ ಮಧ್ಯಮ ಓವರ್‌ಗಳಲ್ಲಿ ದಿಗ್ವೇಶ್ ರಾಠಿ ಕೂಡ ತನ್ನ ಅದ್ಭುತ ಸ್ಪಿನ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಸೆನ್​ಸೇಷನ್ ಮಯಾಂಕ್ ಯಾದವ್

2024ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮಯಾಂಕ್ ಆಡಿದ ಕೆಲವೇ ಪಂದ್ಯಗಳಲ್ಲಿ ಸಂಚಲನ ಸೃಷ್ಟಿಸಿದ್ದರು. 150 ಪ್ಲಸ್ ವೇಗದಲ್ಲಿ ಚೆಂಡು ಎಸೆಯುವ ಮಯಾಂಕ್, ಬ್ಯಾಟರ್​​ಗಳಿಗೆ ದುಸ್ವಪ್ನವಾಗಿ ಕಾಡಿದ್ದರು. ಓವರ್​​ನ ಆರೂ ಎಸೆತಗಳನ್ನು 150 ಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ವರ್ಷ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಮಯಾಂಕ್, ರಾತ್ರೋರಾತ್ರಿ ಸ್ಟಾರ್ ಆಗಿ ಬೆಳೆದರು. ಲೀಗ್​ನಲ್ಲಿ ಆಡಿರುವ ಕೇವಲ 4 ಪಂದ್ಯಗಳನ್ನು ಮಯಾಂಕ್, 7 ವಿಕೆಟ್‌ ಕಬಳಿಸಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ 4 ಪಂದ್ಯಗಳಲ್ಲಿ 2 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ.

2025ರ ಐಪಿಎಲ್​ನಲ್ಲಿ ಲಕ್ನೋ ಗೆಲುವಿನ ಹಾದಿಯಲ್ಲಿದ್ದರೂ ಬೌಲಿಂಗ್ ವಿಭಾಗದಲ್ಲಿ ಕೊಂಚ ದೌರ್ಬಲ್ಯ ಕಾಡಿತ್ತು. ಇದೀಗ ಮಯಾಂಕ್​ರ ಕಂಬ್ಯಾಕ್​ನಿಂದಾಗಿ ಎಲ್​ಎಸ್​ಜಿ ತಂಡದ ಬೌಲಿಂಗ್ ಶಕ್ತಿ ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಮಯಾಂಕ್ ಮೇಲೆ ನಂಬಿಕೆ ಇಟ್ಟು ಲಕ್ನೋ 11 ಕೋಟಿ ರೂಪಾಯಿಗೆ ಹರಾಜಿಗೂ ಮುನ್ನ ತಮ್ಮಲ್ಲೇ ಉಳಿಸಿಕೊಂಡಿತ್ತು. ಪ್ರಸ್ತುತ ಲಕ್ನೋ ಆಡಿರುವ 7 ಪಂದ್ಯಗಳಲ್ಲಿ 4 ಗೆಲುವು, 3 ಸೋಲು ಕಂಡಿದೆ. ಉಳಿದ 7 ಪಂದ್ಯಗಳಲ್ಲಿ 4 ಅಥವಾ 5 ಗೆದ್ದರೆ ಪ್ಲೇಆಫ್ ಸ್ಥಾನ ಖಚಿತಗೊಳ್ಳಲಿದೆ. ಮುಂದಿನ ಪಂದ್ಯಗಳಲ್ಲಿ ಮಯಾಂಕ್​ರ ಪಾತ್ರ ನಿರ್ಣಾಯಕವಾಗಿರಲಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner