ಐಪಿಎಲ್ 2025 ಮೆಗಾ ಹರಾಜು ಯಾವಾಗ; ದಿನಾಂಕ, ಸಮಯ ಮತ್ತು ನೇರಪ್ರಸಾರ ಸೇರಿದಂತೆ ಇನ್ನಷ್ಟು ವಿವರ
ಐಪಿಎಲ್ 2025ರ ಹರಾಜು ಪ್ರಕ್ರಿಯೆಯು ನವೆಂಬರ್ 24 ಮತ್ತು 25ರಂದು ನಡೆಯಲಿದೆ. ಸೌದಿ ಅರೇಬಿಯಾದ ಜೆದ್ದಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಪ್ರಕ್ರಿಯೆಯ ಸಮಯ, ನೇರಪ್ರಸಾರ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ.
ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಆಡುವ ನಿರೀಕ್ಷೆಯೊಂದಿಗೆ ಹರಾಜಿಗೆ ಹೆಸರು ನೋಂದಾಯಿಸಿರುವ ಆಟಗಾರರು ಕೂಡಾ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ನವೆಂಬರ್ 24 ಮತ್ತು 25ರಂದು ಎರಡು ದಿನಗಳ ಕಾಲ ಸೌದಿ ಅರೇಬಿಯಾದಲ್ಲಿ ಐಪಿಎಲ್ 2024ರ ಹರಾಜು ಪ್ರಕ್ರಿಯೆ ನಡೆಯಲಿದೆ. ವಿವಿಧ ಫ್ರಾಂಚೈಸಿಗಳು ಬಲಿಷ್ಠ ಆಟಗಾರರನ್ನು ಖರೀದಿಸಲು ಲೆಕ್ಕಾಚಾರ ಹಾಕಿದ್ದು, ಇದಕ್ಕಾಗಿ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ.
ಈ ಬಾರಿ ಆಕ್ಷನ್‌ಗೆ ಒಟ್ಟು 574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 366 ಕ್ರಿಕೆಟಿಗರು ಭಾರತೀಯರಾಗಿದ್ದರೆ, ಉಳಿದ 208 ಆಟಗಾರರು ವಿದೇಶಿಗರು. ದಕ್ಷಿಣ ಆಫ್ರಿಕಾದಿಂದ ದಾಖಲೆ ಸಂಖ್ಯೆಯ ಆಟಗಾರರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. 318 ಅನ್‌ಕ್ಯಾಪ್ಡ್ ಭಾರತೀಯ ಮತ್ತು 12 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಕೂಡಾ ಐಪಿಎಲ್ ಆಡುವ ಉತ್ಸಾಹದಲ್ಲಿದ್ದಾರೆ.
ಕಳೆದ ಆವೃತ್ತಿಯಲ್ಲಿ ಆಟಗಾರರನ್ನು ಹರಾಜು ಕೂಗಿದ್ದ ಮಲ್ಲಿಕಾ ಸಾಗರ್ ಅವರು, ಈ ಬಾರಿಯೂ ಅಧಿಕೃತ ಹರಾಜುದಾರರಾಗಿ ಮುಂದುರೆಯಲಿದ್ದಾರೆ. ಎಲ್ಲಾ 10 ಫ್ರಾಂಚೈಸಿಗಳು ಸೇರಿ ಒಟ್ಟಾರೆಯಾಗಿ ತಮ್ಮ ಪರ್ಸ್‌ನಲ್ಲಿ ಸುಮಾರು 641.5 ಕೋಟಿ ರೂ. ಮೊತ್ತವನ್ನು ಬಳಸಿಕೊಂಡು ಒಟ್ಟು 204 ಸ್ಲಾಟ್‌ಗಳನ್ನು ತುಂಬಿಸಬೇಕಾಗಿದೆ. ಇವುಗಳಲ್ಲಿ ಸುಮಾರು 70 ಸ್ಲಾಟ್‌ಗಳನ್ನು ವಿದೇಶಿ ಆಟಗಾರರಿಗಾಗಿ ಮೀಸಲಿಡಲಾಗಿದೆ.
ಮೂವರು ಆಟಗಾರರ ಮೇಲೆ ಭಾರಿ ನಿರೀಕ್ಷೆ
ಐಪಿಎಲ್ 2025ರಲ್ಲಿ ರಿಟೆನ್ಷನ್ ಆಗದ ಹೆಸರುಗಳಲ್ಲಿ ಮೂರು ಹೆಸರು ಪ್ರಮುಖವು. ಕಳೆದ ಆವೃತ್ತಿಯಲ್ಲಿ ವಿವಿಧ ತಂಡಗಳ ನಾಯಕರಾಗಿದ್ದ ರಿಷಬ್ ಪಂತ್, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಅವರ ತಂಡಗಳು ಕೈಬಿಟ್ಟಿವೆ. ಹೀಗಾಗಿ ಹರಾಜಿನಲ್ಲಿ ಈ ಮೂವರಿಗೆ ಭಾರಿ ಬೆಲೆ ಸಿಗುವ ನಿರೀಕ್ಷೆ ಇದೆ. ಹೆಚ್ಚಿನ ತಂಡಗಳು ರಾಹುಲ್ ಅವರ ಖರೀದಿಗೆ ಮುಗಿಬೀಳಲಿವೆ. ಅದರಲ್ಲೂ ಕರ್ನಾಟಕದವರಾದ ರಾಹುಲ್ ಅವರ ಖರೀದಿಗೆ ಆರ್‌ಸಿಬಿ ಹೆಚ್ಚು ಸಿದ್ಧತೆ ಮಾಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದ ಪಂತ್ ಖರೀದಿಗೂ ಫೈಟ್ ಶುರವಾಗಿದೆ. ಸಿಎಸ್‌ಕೆ ಈ ಪಟ್ಟಿಯಲ್ಲಿ ಮುಂದಿದೆ. ಹರಾಜಿನಲ್ಲಿ ಇವರಿಗೂ ಭಾರಿ ಬೆಲೆ ಸಿಗುವ ನಿರೀಕ್ಷೆಯಿದೆ. ಅತ್ತ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಶ್ರೇಯಸ್ ಅಯ್ಯರ್ ಕೂಡಾ ಭಾರಿ ಬೆಲೆ ಪಡೆಯುವುದು ಖಚಿತ.
ಐಪಿಎಲ್ ಹರಾಜು 2025 ಯಾವಾಗ ನಡೆಯಲಿದೆ?
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25ರಂದು ನಡೆಯಲಿದೆ. ಸೌದಿ ಅರೇಬಿಯಾದ ಜೆದ್ದಾದಲ್ಲಿರುವ ಅಬಾಡಿ ಅಲ್-ಜೋಹರ್ ಅರೆನಾದಲ್ಲಿ ಎರಡು ದಿನ ನಡೆಯಲಿದೆ.
ಐಪಿಎಲ್ ಹರಾಜು ಪ್ರಕ್ರಿಯೆ ಯಾವ ಸಮಯಕ್ಕೆ ಆರಂಭವಾಗುತ್ತದೆ?
ಐಪಿಎಲ್ 2025ರ ಹರಾಜು ಪ್ರಕ್ರಿಯೆಯು, ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.
ಐಪಿಎಲ್ 2025ರ ಹರಾಜು ಪ್ರಕ್ರಿಯೆಯನ್ನು ಯಾವ ಟಿವಿ ಚಾನೆಲ್ ಮೂಲಕ ನೇರಪ್ರಸಾರ ವೀಕ್ಷಿಸಬಹುದು?
ಭಾರತದಲ್ಲಿ ಸ್ಟಾರ್ಸ್ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕ ಹರಾಜು ನೇರಪ್ರಸಾರ ನೋಡಬಹುದು.
ಲೈವ್ ಸ್ಟ್ರೀಮಿಂಗ್ ವೀಕ್ಷಣೆ ಹೇಗೆ?
ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಭಾರತದಲ್ಲಿ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.