ಐಪಿಎಲ್ 2025 ಉದ್ಘಾಟನಾ ಸಮಾರಂಭದಲ್ಲಿ ತಾರಾ ಮೆರುಗು: ಶ್ರೇಯಾ ಸಂಗೀತ, ದಿಶಾ ಪಟಾನಿ ಡಾನ್ಸ್; ಸಮಯ-ನೇರಪ್ರಸಾರ ವಿವರ ಹೀಗಿದೆ
ಐಪಿಎಲ್ 2025ರ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುತ್ತಿರುವ ಸ್ಟಾರ್‌ಗಳ ಪಟ್ಟಿಯನ್ನು ಐಪಿಎಲ್ ಒಂದೊಂದಾಗಿ ಬಹಿರಂಗಪಡಿಸುತ್ತಿದೆ. ಅತಿಥಿಗಳ ಪಟ್ಟಿಯಲ್ಲಿ ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಅನನ್ಯಾ ಪಾಂಡೆ ಮತ್ತು ಮಾಧುರಿ ದೀಕ್ಷಿತ್ ಸೇರಿದ್ದಾರೆ. ಪ್ರದರ್ಶಕರ ಪೈಕಿ ಶ್ರೇಯಾ ಘೋಷಾಲ್, ದಿಶಾ ಪಟಾನಿ ಸೇರಿದಂತೆ ಹಲವರು ಇರಲಿದ್ದಾರೆ.

ಐಪಿಎಲ್ ಸೀಸನ್ 18ರ ಅದ್ಧೂರಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಐಪಿಎಲ್ 2025ರ ಅದ್ಧೂರಿ ಆವೃತ್ತಿಗೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಲಿವೆ. ಅದಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ಇರಲಿದ್ದು, ತಾರೆಗಳ ಸಮಾಗಮವಾಗಲಿದೆ. ಬಾಲಿವುಡ್ ಐಕಾನ್‌ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್, ವಿಕ್ಕಿ ಕೌಶಲ್ ಮತ್ತು ಶ್ರದ್ಧಾ ಕಪೂರ್ ಸೇರಿದಂತೆ ಹಲವರು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಸ್ಟಾರ್‌ಗಳ ಉಪಸ್ಥಿತಿಯು ಬಹು ನಿರೀಕ್ಷಿತ ಟೂರ್ನಿಗೆ ಮತ್ತಷ್ಟು ಮೆರುಗು ನೀಡಲಿದೆ. ಇದೇ ವೇಳೆ ತಮ್ಮ ತಂಡವು ಆರಂಭಿಕ ಪಂದ್ಯವನ್ನು ಆಡುತ್ತಿರುವುದರಿಂದ ಶಾರುಖ್ ಖಾನ್ ಕೂಡಾ ಭಾಗವಹಿಸುವ ನಿರೀಕ್ಷೆಯಿದೆ. ಸಲ್ಮಾನ್ ಖಾನ್ ಕೂಡಾ ತಮ್ಮ ಮುಂಬರುವ ಚಿತ್ರ ಸಿಕಂದರ್ ಪ್ರಚಾರಕ್ಕಾಗಿ ಕಾಣಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
“ಶ್ರೇಯಾ ಘೋಷಾಲ್, ದಿಶಾ ಪಟಾನಿ, ಕರಣ್ ಔಜ್ಲಾ, ಅರಿಜಿತ್ ಸಿಂಗ್, ಶ್ರದ್ಧಾ ಕಪೂರ್ ಮತ್ತು ವರುಣ್ ಧವನ್ ಪ್ರದರ್ಶನ ನೀಡಲಿದ್ದಾರೆ. ಇದಲ್ಲದೆ, ಇತ್ತೀಚೆಗೆ ಟೆಲ್ ಮಿ ಚಿತ್ರಕ್ಕಾಗಿ ಕರಣ್ ಔಜ್ಲಾ ಮತ್ತು ದಿಶಾ ಪಟಾನಿ ಅವರೊಂದಿಗೆ ಸಾಥ್ ನೀಡಿದ ಪಾಪ್ ಬ್ಯಾಂಡ್ ಒನ್ ರಿಪಬ್ಲಿಕ್ ಅವರನ್ನು ಕೂಡಾ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನಕ್ಕಾಗಿ ಸಂಪರ್ಕಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳ ಪಟ್ಟಿಯಲ್ಲಿ ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ, ಅನನ್ಯಾ ಪಾಂಡೆ, ಮಾಧುರಿ ದೀಕ್ಷಿತ್, ಜಾನ್ವಿ ಕಪೂರ್, ಊರ್ವಶಿ ರೌಟೆಲಾ, ಪೂಜಾ ಹೆಗ್ಡೆ, ಕರೀನಾ ಕಪೂರ್, ಆಯುಷ್ಮಾನ್ ಖುರಾನಾ ಮತ್ತು ಸಾರಾ ಅಲಿ ಖಾನ್ ಸೇರಿದ್ದಾರೆ.
ಐಪಿಎಲ್ 2025 ಉದ್ಘಾಟನಾ ಸಮಾರಂಭದ ಪ್ರದರ್ಶಕರ ಪಟ್ಟಿ
- ಶ್ರದ್ಧಾ ಕಪೂರ್ (ನೃತ್ಯ)
- ವರುಣ್ ಧವನ್ (ನೃತ್ಯ)
- ದಿಶಾ ಪಟಾನಿ (ನೃತ್ಯ)
- ಶ್ರೇಯಾ ಘೋಷಾಲ್ (ಸಂಗೀತ)
- ಅರಿಜಿತ್ ಸಿಂಗ್ (ಸಂಗೀತ)
- ಕರಣ್ ಔಜ್ಲಾ (ವಿಶೇಷ ನಟನೆ) ಹಾಗೂ ಇನ್ನಷ್ಟು
ಸಮಯ ಮತ್ತು ಲೈವ್ ಸ್ಟ್ರೀಮಿಗ್ ವಿವರ
ಐಪಿಎಲ್ 2025 ಉದ್ಘಾಟನಾ ಸಮಾರಂಭವು ಮಾರ್ಚ್ 22ರ ಸಂಜೆ 6:00 ಗಂಟೆಗೆ ಪ್ರಾರಂಭವಾಗುತ್ತದೆ. ಉದ್ಘಾಟನಾ ಸಮಾರಂಭವನ್ನು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಇದೇ ವೇಳೆ JioHotstar ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ಈ ಬಾರಿ ಐಪಿಎಲ್ ಪಂದ್ಯಗಳು ಮತ್ತು ಉದ್ಘಾಟನಾ ಸಮಾರಂಭವನ್ನು ಮೊಬೈಲ್ ಮೂಲಕ ವೀಕ್ಷಿಸಲು ಹಣ ಪಾವತಿಸಿ ಚಂದಾದಾರಿಕೆ ಪಡೆಯಬೇಕಾಗುತ್ತದೆ.
13 ಸ್ಥಳಗಳಲ್ಲಿ ಉದ್ಘಾಟನಾ ಸಮಾರಂಭ
ಈ ವರ್ಷ ಉದ್ಘಾಟನಾ ಸಮಾರಂಭವು ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಐಪಿಎಲ್ ಪಂದ್ಯಗಳು ನಡೆಯುವ ಎಲ್ಲಾ 13 ಸ್ಥಳಗಳಲ್ಲಿ ಉದ್ಘಾಟನಾ ಸಮಾರಂಭಗಳನ್ನು ನಡೆಸಲು ಯೋಜಿಸಿದೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಡೆಯಲಿದೆ.
18ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 22ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ 25ರಂದು ನಡೆಯಲಿದೆ. ಎರಡು ತಿಂಗಳ ಕಾಲ 13 ಸ್ಥಳಗಳಲ್ಲಿ ನಡೆಯುವ ಟೂರ್ನಿಯು 74 ಪಂದ್ಯಗಳನ್ನು ಒಳಗೊಂಡಿದೆ. ಇದರಲ್ಲಿ 12 ಡಬಲ್ ಹೆಡರ್ ಪಂದ್ಯಗಳು ಸೇರಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ.
