Explainer: ಐಪಿಎಲ್ 2025ರ ಪ್ಲೇಆಫ್ ರೇಸ್‌ನಲ್ಲಿರುವ ತಂಡಗಳು ಯಾವುವು; ಎಲ್ಲಾ 10 ತಂಡಗಳ ಅರ್ಹತಾ ಮಾನದಂಡ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಐಪಿಎಲ್ 2025ರ ಪ್ಲೇಆಫ್ ರೇಸ್‌ನಲ್ಲಿರುವ ತಂಡಗಳು ಯಾವುವು; ಎಲ್ಲಾ 10 ತಂಡಗಳ ಅರ್ಹತಾ ಮಾನದಂಡ ಹೀಗಿದೆ

Explainer: ಐಪಿಎಲ್ 2025ರ ಪ್ಲೇಆಫ್ ರೇಸ್‌ನಲ್ಲಿರುವ ತಂಡಗಳು ಯಾವುವು; ಎಲ್ಲಾ 10 ತಂಡಗಳ ಅರ್ಹತಾ ಮಾನದಂಡ ಹೀಗಿದೆ

ಐಪಿಎಲ್‌ 18ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದ್ದು, ಪ್ಲೇಆಫ್‌ ಪ್ರವೇಶಿಸಲು ತಂಡಗಳು ಕಾಯುತ್ತಿವೆ. ಆದರೆ ನಾಲ್ಕು ತಂಡಗಳಿಗೆ ಮಾತ್ರ ಪ್ಲೇಆಫ್‌ ಬಾಗಲು ತೆರೆಯಲಿವೆ. ಈ ಅವಕಾಶವು ಯಾವ ತಂಡಗಳಿಗೆ ಎಷ್ಟಿದೆ ಎಂಬುದನ್ನು ನೋಡೋಣ.

ಐಪಿಎಲ್ 2025ರ ಪ್ಲೇಆಫ್ ರೇಸ್‌ನಲ್ಲಿರುವ ತಂಡಗಳು ಯಾವುವು; ತಂಡಗಳ ಅರ್ಹತಾ ಮಾನದಂಡ ಹೀಗಿದೆ
ಐಪಿಎಲ್ 2025ರ ಪ್ಲೇಆಫ್ ರೇಸ್‌ನಲ್ಲಿರುವ ತಂಡಗಳು ಯಾವುವು; ತಂಡಗಳ ಅರ್ಹತಾ ಮಾನದಂಡ ಹೀಗಿದೆ

2025ರ ಐಪಿಎಲ್‌ ಪಂದ್ಯಾವಳಿಯಲ್ಲಿ ಇನ್ನು ಕೆಲವೇ ಪಂದ್ಯಗಳು ಬಾಕಿ ಉಳಿದಿವೆ. ಇನ್ನು ಎರಡು ವಾರಗಳಲ್ಲಿ ಈ ಬಾರಿಯ ಚಾಂಪಿಯನ್‌ ತಂಡ ಯಾವುದು ಎಂಬುದು ಖಚಿತವಾಗುತ್ತದೆ. ಟೂರ್ನಿಯಲ್ಲಿ ನಡೆದ ಕೊನೆಯ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್‌ ತಂಡಗಳು ಗೆದ್ದು ಬೀಗಿದವು. ಸದ್ಯ ಟೂರ್ನಿಯ ಪ್ಲೇಆಫ್‌ ಲೆಕ್ಕಾಚಾರ ಜೋರಾಗಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್‌ ರಾಯಲ್ಸ್ ತಂಡಗಳು ಟೂರ್ನಿಯಿಂದ ಎಲಿಮನೇಟ್‌ ಆಗಿವೆ. ಹೀಗಾಗಿ ಅಗ್ರ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಲು ಇನ್ನೂ 8 ತಂಡಗಳು ಅವಕಾಶ ಹೊಂದಿವೆ.

ಎಲ್ಲಾ ತಂಡಗಳಿಗೆ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಲು ಸಾಧ್ಯವಿಲ್ಲ.‌ ಹೀಗಾಗಿ ಕೊನೆಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡಗಳು ಪ್ಲೇಆಫ್‌ ಪ್ರವೇಶಿಸಬಹುದು. ಈಗಾಗಲೇ ನಾಲ್ಕು ತಂಡಗಳು ಲೀಗ್‌ನಲ್ಲಿ 7 ಪಂದ್ಯಗಳನ್ನು ಗೆದ್ದು 14 ಅಂಕಗಳ ಗಡಿಯನ್ನು ತಲುಪಿವೆ. ಈ ನಾಲ್ಕು ತಂಡಗಳು ಹೆಚ್ಚು ಅವಕಾಶ ಹೊಂದಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ 16 ಅಂಕಗಳನ್ನು ಪಡೆದ ಮೊದಲ ತಂಡವಾಗಿದ್ದು, ಈಗಾಗಲೇ ಪ್ಲೇಆಫ್‌ ಅವಕಾಶವನ್ನು ಬಹುತೇಕ ಖಚಿತಪಡಿಸಿದೆ. ಇನ್ನೊಂದು ಪಂದ್ಯ ಗೆದ್ದರೆ ಅಧಿಕೃತವಾಗಿ ಪ್ಲೇಆಫ್‌ ಪ್ರವೇಶ ಖಚಿತಪಡಿಸಲಿದೆ.

ಎಲ್ಲಾ 10 ತಂಡಗಳ ಪ್ಲೇಆಫ್ ಅವಕಾಶಗಳನ್ನು ನೋಡೋಣ

ರಾಯಲ್ ಚಾಲೆಂಜರ್ಸ್ ಬೆಂಗಳೂರು (99 ಶೇ) -ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ, ಪ್ಲೇಆಫ್‌ ರೇಸ್‌ನಿಂದ ಒಂದು ಹೆಜ್ಜೆಯಷ್ಟೇ ಹಿಂದಿದೆ. ಇನ್ನು ಒಂದೇ ಒಂದು ಪಂದ್ಯ ಗೆದ್ದರೆ, ನಾಕೌಟ್‌ ಹಂತ ಖಚಿತ. ಒಂದು ವೇಳೆ ಗೆಲ್ಲದಿದ್ದರೂ, ಪ್ಲೇಆಫ್‌ ಪ್ರವೇಶಿಸುವ ಅವಕಾಶ ಹೆಚ್ಚಿದೆ.

ಪಂಜಾಬ್ ಕಿಂಗ್ಸ್ (90) -ಕಳೆದ 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ಲೇಆಫ್ ಹಂತಕ್ಕೇರುವ ಹಂತದಲ್ಲಿ ಪಂಜಾಬ್‌ ಉತ್ಸುಕವಾಗಿದೆ. ಇನ್ನೊಂದು ಪಂದ್ಯ ಗೆದ್ದರೆ ತಂಡದ ಪ್ಲೇಆಫ್‌ ಸ್ಥಾನ ಬಹುತೇಕ ಖಚಿತವಾಗಲಿದೆ. ನಿವ್ವಳ ರನ್ ದರ (NRR) ಕೂಡಾ ಶ್ರೇಯಸ್‌ ಅಯ್ಯರ್‌ ಪಡೆಗೆ ದೊಡ್ಡ ಸಮಸ್ಯೆ ಆಗುವುದಿಲ್ಲ.

ಮುಂಬೈ ಇಂಡಿಯನ್ಸ್ (85 ಶೇ) - ಮೇಲಿಂದ ಮೇಲೆ ಸತತ 6 ಪಂದ್ಯಗಳಲ್ಲಿ ಗೆದ್ದು ಕಂಬ್ಯಾಕ್‌ ಮಾಡಿರುವ ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌, ಸದ್ಯ ಅತ್ಯುತ್ತಮ ನೆಟ್‌ ರನ್‌ ರೇಟ್‌ ಹೊಂದಿದೆ. ತಂಡವು ಮುಂದೆ ಮೂರು ಪಂದ್ಯಗಳಲ್ಲಿ ಆಡಲಿದ್ದು, ಎರಡು ಗೆಲುವುಗಳು ತಂಡದ ಅರ್ಹತೆಯನ್ನು ದೃಢಪಡಿಸುತ್ತವೆ. ಇದೇ ವೇಳೆ ಇನ್ನೊಂದು ಗೆಲುವು ಕಂಡರೂ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ವಿಷಯ ಏನೆಂದರೆ ಮುಂಬೈನ ಮುಂದಿನ ಎದುರಾಳಿ ತಂಡಗಳು ಕೂಡಾ ಪ್ಲೇಆಫ್‌ ಹಂತಕ್ಕೇರುವ ಫೇವರೆಟ್‌ ತಂಡಗಳೇ ಆಗಿವೆ.

ಗುಜರಾತ್ ಟೈಟನ್ಸ್ (90 ಶೇ) - ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡ ಗುಜರಾತ್ ಟೈಟನ್ಸ್. ಈಗಾಗಲೇ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದಿದ್ದು, ಮುಂದಿನ ನಾಲ್ಕು ಪಂದ್ಯಗಳಲ್ಲಿ ಇನ್ನೆರಡು ಪಂದ್ಯಗಳನ್ನು ಗೆದ್ದರೆ ಸಾಕಾಗುತ್ತದೆ. ಆ ಮೂಲಕ ಮೂರನೇ ಬಾರಿ ಪ್ಲೇಆಫ್‌ಗೆ ಪ್ರವೇಶಿಸುವ ಹಾದಿಯಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ (60 ಶೇ) - ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದು ಬಳಿಕ ಮಂಕಾದ ಡೆಲ್ಲಿ ಕ್ಯಾಪಿಟಲ್ಸ್‌, ಸದ್ಯ ಎಂಟು ಪಂದ್ಯಗಳಲ್ಲಿ ಆರರಲ್ಲಿ ಗೆದ್ದ ನಂತರ ತುಸು ಚಿಂತೆಯಲ್ಲಿದೆ. ತಂಡಕ್ಕೆ ಮುಂದಿರುವುದು ಪ್ರಬಲ ಸ್ಪರ್ಧಿಗಳು. ಮುಂಬೈ, ಪಂಜಾಬ್‌, ಗುಜರಾತ್‌ ಹೀಗೆ ಪ್ಲೇಆಫ್‌ ರೇಸ್‌ನಲ್ಲಿರುವ ತಂಡದ ವಿರುದ್ಧವೇ ಆಡಲಿದೆ. ತಂಡಕ್ಕೆ ಕನಿಷ್ಠ ಎರಡು ಗೆಲುವುಗಳು ಬೇಕಿದ್ದು, ಮೂರು ಪಂದ್ಯಗಳಲ್ಲಿ ಗೆದ್ದರೆ ಪ್ಲೇ ಆಫ್‌ ಸ್ಥಾನ ಖಚಿತವಾಗಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ (10 ಶೇ) - ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡವು ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವಿನ ಹಳಿಗೆ ಮರಳಿರುವ ತಂಡವು, ಮುಂದಿನ ಮೂರೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾಗಿದೆ. ಆದರೂ ತಂಡದ ಪ್ಲೇಆಫ್‌ ಭವಿಷ್ಯ ಇತರ ತಂಡಗಳ ಸೋಲು-ಗೆಲುವಿನ ಮೇಲೆ ಅವಲಂಬಿತವಾಗಲಿದೆ.

ಲಕ್ನೋ ಸೂಪರ್ ಜೈಂಟ್ಸ್ (5 ಶೇ) -ಕೊನೆಯ ಮೂರು ಪಂದ್ಯಗಳಲ್ಲಿ ಸೋತಿರುವ ಎಲ್‌ಎಸ್‌ಜಿಯ ಹಾದಿ ದುರ್ಗಮವಾಗಿದೆ. 16 ಅಂಕಗಳನ್ನು ಪಡೆದು ಪ್ಲೇಆಫ್‌ ಅವಕಾಶ ಪಡೆಯಲು ಉಳಿದಿರುವ ಎಲ್ಲಾ ಮೂರು ಪಂದ್ಯಗಳಲ್ಲಿ ಗೆಲ್ಲಬೇಕಾಗಿದೆ. ಇದರೊಂದಿಗೆ ಅದೃಷ್ಟ ಕೈಹಿಡಿಯಬೇಕು.

ಸನ್‌ರೈಸರ್ಸ್ ಹೈದರಾಬಾದ್ (1 ಶೇ) -ಎಸ್‌ಆರ್‌ಎಚ್‌ ತಂಡವು ಪ್ಲೇಆಫ್ ಪೈಪೋಟಿಯಿಂದ ಬಹುತೇಕ ಹೊರಗುಳಿದಿದೆ. ತಂಡವು ಮುಂದೆ ಆಡಲಿರುವ ಎಲ್ಲಾ ಪಂದ್ಯಗಳನ್ನು ಗೆದ್ದರೂ ಗರಿಷ್ಠ 14 ಅಂಕಗಳನ್ನು ಪಡೆಯಬಹುದು. ಆದರೂ ಪ್ಲೇಆಫ್‌ ತಲುಪುವುದು ಕಷ್ಟಸಾಧ್ಯ. ಒಂದು ಪಂದ್ಯ ಸೋತರೂ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿವೆ.

ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (0 ಶೇ)- ರಾಜಸ್ಥಾನ ಮತ್ತು ಸಿಎಸ್‌ಕೆ ಈಗಾಗಲೇ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿವೆ. ಇವುಗಳಿಗೆ ಪ್ಲೇ ಆಫ್‌ ಪ್ರವೇಶೀಸುವ ಯಾವುದೇ ಅವಕಾಶಗಳಿಲ್ಲ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.