2016ರ ನಂತರ ಐಪಿಎಲ್ ಫೈನಲ್ ಪ್ರವೇಶಿಸಿದ ಆರ್ಸಿಬಿ, ಕಪ್ ಗೆಲ್ಲಲು ಸುವರ್ಣಾವಕಾಶ; ಪಂಜಾಬ್ ಕಿಂಗ್ಸ್ಗೆ ಮತ್ತೊಂದು ಅವಕಾಶ
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಮೋಘ ಗೆಲುವಿನೊಂದಿಗೆ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಕನಸು ನನಸಾಗುವ ಸನಿಹಕ್ಕೆ ಬಂದಿದೆ. 18ನೇ ಆವೃತ್ತಿಯ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ 8 ವಿಕೆಟ್ಗಳ ಗೆಲುವು ಸಾಧಿಸಿದ ರಜತ್ ಪಾಟೀದಾರ್ ನೇತೃತ್ವದ ಆರ್ಸಿಬಿ, 2016ರ ನಂತರ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಜೂನ್ 3ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಫೈನಲ್ನಲ್ಲಿ ಕಣಕ್ಕಿಳಿಯಲಿದೆ.
ಐಪಿಎಲ್ನಲ್ಲಿ ಒಟ್ಟಾರೆ 4ನೇ ಬಾರಿಗೆ ಫೈನಲ್ (2009, 2011, 2016, 2025) ಪ್ರವೇಶಿಸಿದ ಬೆಂಗಳೂರು, ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿದೆ. ರಜತ್ ಪಾಟೀದಾರ್ ನಾಯಕತ್ವ ವಹಿಸಿಕೊಂಡ ಮೊದಲ ವರ್ಷವೇ ಆರ್ಸಿಬಿ ತಂಡವನ್ನು ಫೈನಲ್ಗೇರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 18 ವರ್ಷಗಳ ಟ್ರೋಫಿ ಬರ ನೀಗಿಸಲು ಇದೊಳ್ಳೆ ಸುವರ್ಣಾವಕಾಶವೂ ಹೌದು. ಪ್ರತಿ ಸಲ ಈ ಸಲ ಕಪ್ ನಮ್ದೆ ಎನ್ನುತ್ತಿರುವ ಆರ್ಸಿಬಿ ಫ್ಯಾನ್ಸ್ಗೆ ಟ್ರೋಫಿ ಗೆದ್ದುಕೊಟ್ಟು ಉಡುಗೊರೆ ನೀಡುವ ನಿರೀಕ್ಷೆಯಲ್ಲಿದೆ ತಂಡ. ಜತೆಗೆ ಸತತ 18 ವರ್ಷಗಳಿಂದ ಇದೇ ತಂಡದ ಪರ ಆಡುತ್ತಿರುವ ಕೊಹ್ಲಿಗೂ ಅರ್ಪಿಸಲು ಇದು ಉತ್ತಮ ಅವಕಾಶವೂ ಹೌದು.
ಮುಲ್ಲನ್ಪುರದಲ್ಲಿರುವ ಮಹಾರಾಜ ಯಾದವೀಂದ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮೊದಲ ಸೆಮಿಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡವು ಆರ್ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿತು. 14.1 ಓವರ್ಗಳಲ್ಲಿ 101 ರನ್ಗೆ ಆಲೌಟ್ ಆಯಿತು. ಆದರೆ, ಆರ್ಸಿಬಿ 10 ಓವರ್ಗಳಲ್ಲೇ ಗುರಿ ಬೆನ್ನಟ್ಟಿ ಗೆಲುವಿನ ನಗೆ ಬೀರಿತು. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಎದುರು ಸೋತ ಪಂಜಾಬ್ ಕಿಂಗ್ಸ್ಗೆ ಮತ್ತೊಂದು ಅವಕಾಶ ಇದೆ. ಮೇ 30ರಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಜೂನ್ 1ರಂದು ಪಂಜಾಬ್ ಕಣಕ್ಕಿಳಿಯಲಿದೆ. ಇಲ್ಲಿ ಗೆದ್ದರೆ ಪಂಜಾಬ್ ಫೈನಲ್ ಪ್ರವೇಶಿಸಲಿದೆ.
ಫಿಲ್ ಸಾಲ್ಟ್ ಅಬ್ಬರದ ಬ್ಯಾಟಿಂಗ್
102 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕನೇ ಓವರ್‌ನಲ್ಲಿ ಮೊದಲ ಹಿನ್ನಡೆಯನ್ನು ಅನುಭವಿಸಿತು. ವಿರಾಟ್ ಕೊಹ್ಲಿ 12 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. 13 ಎಸೆತಗಳಲ್ಲಿ 19 ರನ್ ಗಳಿಸಿ ಮಯಾಂಕ್ ಅಗರ್ವಾಲ್ ಔಟಾದರು. ಮುಶೀರ್ ಅವರಿಗೆ ಪೆವಿಲಿಯನ್‌ಗೆ ದಾರಿ ತೋರಿಸಿದರು. ಫಿಲ್ ಸಾಲ್ಟ್ 27 ಎಸೆತಗಳಲ್ಲಿ 56 ರನ್ ಗಳಿಸಿ ಅಜೇಯರಾಗಿ ಉಳಿದರು. ನಾಯಕ ರಜತ್ ಪಟಿದಾರ್ 8 ಎಸೆತಗಳಲ್ಲಿ 15 ರನ್ ಗಳಿಸಿದರು.
ಬ್ಯಾಟಿಂಗ್ ಮಾಡಲು ಇಳಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಎರಡನೇ ಓವರ್‌ನಲ್ಲಿ ಮೊದಲ ಹಿನ್ನಡೆ ಅನುಭವಿಸಿತು. ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 5 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು. ಯಶ್ ದಯಾಳ್ ಬೌಲಿಂಗ್ನಲ್ಲಿ ಕೃನಾಲ್ ಪಾಂಡ್ಯಗೆ ಕ್ಯಾಚ್ ನೀಡಿದರು. ಪ್ರಭುಸಿಮ್ರಾನ್ ಸಿಂಗ್ 10 ಎಸೆತಗಳಲ್ಲಿ 18 ರನ್ ಗಳಿಸಿ ಭುವನೇಶ್ವರ್ ಬೌಲಿಂಗ್ನಲ್ಲಿ ಔಟಾದರು. ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ಗೆ (2) ಜೋಶ್ ಹೇಜಲ್‌ವುಡ್ ಪೆವಿಲಿಯನ್ ದಾರಿ ತೋರಿಸಿದರು.
ಜೋಶ್ ಇಂಗ್ಲಿಸ್ (4), ನೇಹಾಲ್ ವಧೇರಾ (8), ಮುಶೀರ್ ಖಾನ್ (0), ಮಾರ್ಕಸ್ ಸ್ಟೊಯ್ನಿಸ್ (26), ಹರ್‌ಪ್ರೀತ್ ಬ್ರಾರ್ (4) ನಿರಾಸೆ ಮೂಡಿಸಿದರು. ಬೆಂಗಳೂರು ಪರ ಜೋಶ್ ಹೇಜಲ್‌ವುಡ್ ಮತ್ತು ಸುಯಾಶ್ ಶರ್ಮಾ ತಲಾ ಮೂರು ವಿಕೆಟ್ ಪಡೆದರೆ, ಯಶ್ ದಯಾಳ್ ಎರಡು ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.