ಐಪಿಎಲ್ 2025 ಆರಂಭದ ದಿನಾಂಕ ಪರಿಷ್ಕರಣೆ, ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ vs ಕೆಕೆಆರ್ ಫೈಟ್, ಸ್ಥಳಗಳೂ ಅಂತಿಮ
IPL 2025 schedule: 18ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಮಿಲಿಯನ್ ಡಾಲರ್ ಟೂರ್ನಿಯ ಆರಂಭಿಕ ದಿನಾಂಕವನ್ನೂ ಪರಿಷ್ಕರಿಸಲಾಗಿದೆ ಎಂದು ಕ್ರಿಕ್ಬಜ್ ವರದಿ ಮಾಡಿದೆ.

ನವದೆಹಲಿ (ಫೆ 1): ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಆವೃತ್ತಿಯು ಮಾರ್ಚ್ 22ರಂದು ಪ್ರಾರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಕೆಕೆಆರ್ ತವರು ಮೈದಾನ ಈಡನ್ ಗಾರ್ಡರ್ನ್ಸ್ನಲ್ಲಿ ಈ ಪಂದ್ಯ ನಡೆಯಲಿದೆ. ಮೇ 25ರಂದು ಫೈನಲ್ ಪಂದ್ಯವೂ ಇಲ್ಲೇ ಜರುಗಲಿದೆ ಎಂದು ಕ್ರಿಕ್ಬಜ್ ವರದಿ ಮಾಡಿದೆ. ಸಂಪೂರ್ಣ ವೇಳಾಪಟ್ಟಿಯ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
2024ರ ಐಪಿಎಲ್ ಫೈನಲ್ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಮೂರನೇ ಟ್ರೋಫಿಗೆ ಮುತ್ತಿಕ್ಕಿತ್ತು. ಕಪ್ ಗೆದ್ದುಕೊಟ್ಟಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ. ಅವರನ್ನು 26.75 ಕೋಟಿ ರೂಪಾಯಿಗೆ ಪಿಬಿಕೆಎಸ್ ಖರೀದಿಸಿದೆ. ಹೀಗಾಗಿ ಕೆಕೆಆರ್ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಮತ್ತೊಂದೆಡೆ ಇದರ ಎದುರಾಳಿ ಆರ್ಸಿಬಿ ನೂತನ ನಾಯಕನನ್ನು ಘೋಷಿಸಿದ್ದು, 18ನೇ ಆವೃತ್ತಿಯಲ್ಲಿ ರಜತ್ ಪಾಟೀದಾರ್ ಮುನ್ನಡೆಸಲಿದ್ದಾರೆ.
ರಜತ್ ಪಾಟಿದಾರ್ ಅವರನ್ನು ತಮ್ಮ ಹೊಸ ನಾಯಕನಾಗಿ ಘೋಷಿಸಿದ ಆರ್ಸಿಬಿ, ಹಾಲಿ ಚಾಂಪಿಯನ್ಸ್ ವಿರುದ್ಧ ಸೆಣಸುವುದರಿಂದ ತಮ್ಮ ಹೊಸ ಯುಗಕ್ಕೆ ಬಲವಾದ ಆರಂಭ ನೀಡಲು ಎದುರು ನೋಡುತ್ತಿದೆ. ಕಳೆದ ಆವೃತ್ತಿಯ ರನ್ನರ್ಅಪ್ ಸನ್ರೈಸರ್ಸ್ ಹೈದರಾಬಾದ್ (SRH) ಉದ್ಘಾಟನಾ ಪಂದ್ಯದ ಮರುದಿನ ಹೈದರಾಬಾದ್ನ ಉಪ್ಪಲ್ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ದಿನಾಂಕ ಪರಿಷ್ಕರಣೆ
ಜನವರಿ 12 ರಂದು ಮುಂಬೈನಲ್ಲಿ ನಡೆಯಲಿರುವ ಮಂಡಳಿಯ ಸಭೆಯ ನಂತರ ಮಾರ್ಚ್ 23 ರಂದು ಪ್ರಾರಂಭವಾಗುವ ಬಗ್ಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಹಿಂದೆ ಸುಳಿವು ನೀಡಿದ್ದರು. ಆದಾಗ್ಯೂ, ಪ್ರಾರಂಭದ ದಿನಾಂಕ ಪರಿಷ್ಕರಿಸಲಾಗಿದೆ. ಟೂರ್ನಿಯನ್ನು ಒಂದು ದಿನ ಮುಂದಕ್ಕೆ ಹಾಕಲಾಗಿದೆ. ಸಂಪೂರ್ಣ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.
12 ಸ್ಥಳಗಳಲ್ಲಿ ಪಂದ್ಯಗಳು
ಅಹ್ಮದಾಬಾದ್, ಮುಂಬೈ, ಚೆನ್ನೈ, ಬೆಂಗಳೂರು, ಲಕ್ನೋ, ಮುಲ್ಲಾನ್ಪುರ್ (ಪಂಜಾಬ್), ದೆಹಲಿ, ಜೈಪುರ, ಕೋಲ್ಕತಾ ಮತ್ತು ಹೈದರಾಬಾದ್ 10 ನಿಯಮಿತ ಸ್ಥಳಗಳ ಜೊತೆಗೆ ಗುವಾಹಟಿ ಮತ್ತು ಧರ್ಮಶಾಲಾದಲ್ಲಿಯೂ ಪಂದ್ಯಗಳು ನಡೆಯಲಿವೆ. ಅಂದರೆ 12 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ವರದಿಯಾಗಿದೆ. ರಾಜಸ್ಥಾನ ತಂಡವು ಗುವಾಹಟಿಯನ್ನು ತಮ್ಮ ಎರಡನೇ ತವರು ಸ್ಥಳವಾಗಿ ಆಯ್ಕೆ ಮಾಡಿಕೊಂಡಿದ್ದು, ಅಲ್ಲಿ ಎರಡು ಪಂದ್ಯಗಳನ್ನು ಆಡಲಿದೆ. ಮಾರ್ಚ್ 26 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮಾರ್ಚ್ 30 ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಎದುರಿಸಲಿದೆ. ಎರಡೂ ಪಂದ್ಯಗಳು ಸಂಜೆಯ ಪಂದ್ಯಗಳಾಗಲಿವೆ.
ಪ್ಲೇಆಫ್ ಪಂದ್ಯಗಳು ಎಲ್ಲಿ ನಡೆಯಲಿವೆ?
ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ನ ಎರಡು ತವರು ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಧರ್ಮಶಾಲಾ ಈ ಬಾರಿ ಕನಿಷ್ಠ ಎರಡು ಮತ್ತು ಮೂರು ಪಂದ್ಯಗಳನ್ನು ಆಯೋಜಿಸುವ ನಿರೀಕ್ಷೆಯಿದೆ. ನಾಕೌಟ್ ಹಂತದಲ್ಲಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ಹೈದರಾಬಾದ್ನಲ್ಲಿ ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ರಜತ್ ಪಾಟೀದಾರ್ (ನಾಯಕ), ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ರಸಿಕ್ ದಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಮನೋಜ್ ಭಂಡಗೆ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಛಿಕರಾ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಥೀ, ಸುಯಾಶ್ ಶರ್ಮಾ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ, ರಮಣದೀಪ್ ಸಿಂಗ್, ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿ ಕಾಕ್, ರಹಮಾನಲ್ಲಾ ಗುರ್ಬಾಜ್, ಆನ್ರಿಚ್ ನೋಕಿಯಾ, ಅಂಗ್ಕ್ರಿಶ್ ರಘುವಂಶಿ, ವೈಭವ್ ಅರೋರಾ, ಮಯಾಂಕ್ ಮಾರ್ಕಂಡೆ, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ಸ್ಪೆನ್ಸರ್ ಜಾನ್ಸನ್, ಲುವ್ನಿತ್ ಸಿಸೋಡಿಯಾ, ಅಜಿಂಕ್ಯ ರಹಾನೆ, ಅನುಕುಲ್ ರಾಯ್, ಮೊಯಿನ್ ಅಲಿ, ಉಮ್ರಾನ್ ಮಲಿಕ್.
