Explained: ಸುನಿಲ್ ನರೈನ್ ಹಿಟ್ ವಿಕೆಟ್ಗೆ ಔಟ್ ಕೊಡಲಿಲ್ಲವೇಕೆ, ಎಂಸಿಸಿ ನಿಯಮ 35ರಲ್ಲಿ ಏನಿದೆ?
Hit Wicket Controversy: ಕೆಕೆಆರ್ ಬ್ಯಾಟರ್ ಸುನಿಲ್ ನರೈನ್ ಅವರ ಹಿಟ್ ವಿಕೆಟ್ ಏಕೆ ನೀಡಲಿಲ್ಲ? ಆದರೆ ಅದರ ಬಗ್ಗೆ ನಿಯಮಗಳು ಏನು ಹೇಳುತ್ತವೆ ಎಂದು ತಿಳಿಯಿರಿ.

ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ 18ನೇ ಆವೃತ್ತಿಯ ಐಪಿಎಲ್ಗೆ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ 7 ವಿಕೆಟ್ಗಳ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2025ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಭಿಯಾನ ಆರಂಭಿಸಿದೆ. ಕೆಕೆಆರ್ ನೀಡಿದ್ದ 175 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡಿದ ಆರ್‌ಸಿಬಿ, 22 ಎಸೆತಗಳು ಬಾಕಿ ಇರುವಂತೆ ಗೆಲುವಿನ ಕೇಕೆ ಹಾಕಿತು. ಆದರೆ ಈ ಪಂದ್ಯದಲ್ಲಿನ ಹಿಟ್ ವಿಕೆಟ್ ವಿವಾದ ಹೆಚ್ಚು ಸದ್ದು ಮಾಡುತ್ತಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಕೆಕೆಆರ್ ಇನ್ನಿಂಗ್ಸ್ ಆರಂಭಿಸಿತು. ಇನ್ನಿಂಗ್ಸ್ ಮೊದಲ ಓವರ್ನಲ್ಲೇ ಕ್ವಿಂಟನ್ ಡಿ ಕಾಕ್ರನ್ನ ಕಳೆದುಕೊಂಡ ಕೆಕೆಆರ್ಗೆ ಅಜಿಂಕ್ಯ ರಹಾನೆ ಮತ್ತು ಸುನಿಲ್ ನರೈನ್ ಬಿರುಸಿನ ಆಟದ ಮೂಲಕ ಆಸರೆಯಾದರು. 7ನೇ ಓವರ್ ಆಗಿದ್ದಾಗ ವಿವಾದವೊಂದು ಸೃಷ್ಟಿಯಾಯಿತು. ಈ ಓವರ್ನ 4ನೇ ಎಸೆತದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೆಸ್ಟ್ ಇಂಡೀಸ್ ಆಟಗಾರ, ಶಾರ್ಟ್ ಬಾಲ್ ಆಡಲು ಯತ್ನಿಸಿದರು. ಆದರೆ ವಿಫಲರಾದರು.
ಜಿತೇಶ್ಗೆ ಕೇಳಿದ ಕೊಹ್ಲಿ
ಈ ಎಸೆತ ಡಾಟ್ ಮಾಡಿದ ಬೆನ್ನಲ್ಲೇ ನರೈನ್ ಅವರ ಬ್ಯಾಟ್ ಸ್ಟಂಪ್ಸ್ಗೆ ತಾಗಿದೆ. ಅದು ಕೂಡ ವೈಡ್ ಆಗಿತ್ತು. ಈ ವೇಳೆ ಬೇಲ್ಸ್ ಇದ್ದಕ್ಕಿದ್ದಂತೆ ಬೀಳುತ್ತಿದ್ದಂತೆ ಹಿಟ್-ವಿಕೆಟ್ ತೀರ್ಪಿಗೆ ಕೇಳಲಾಯಿತು. ಆದರೆ ಅಂಪೈರ್ ಔಟ್ ಎಂದು ನೀಡಿರಲಿಲ್ಲ. ಇದನ್ನು ತಕ್ಷಣವೇ ಗಮನಿಸಿದ ಟಿಮ್ ಡೇವಿಡ್ ಹಿಟ್ ವಿಕೆಟ್ಗೆ ಮನವಿ ಮಾಡುವಂತೆ ಸೂಚಿಸಿದರು. ಬಳಿಕ ವಿರಾಟ್ ಕೊಹ್ಲಿ ಅವರು ಜಿತೇಶ್ ಶರ್ಮಾ ಅವರನ್ನು ಏನು ಆಯಿತು, ಬೇಲ್ಸ್ ಹೇಗೆ ಬಿದ್ದವು ಎಂದು ಕೇಳಿದರು.
ಆಗ ಉತ್ತರಿಸಿದ ಜಿತೇಶ್ ಶರ್ಮಾ, 'ನನಗೆ ಗೊತ್ತಿಲ್ಲ, ನಾನು ಗಮನ ಹರಿಸುತ್ತಿರಲಿಲ್ಲ. ನಾನು ಚೆಂಡನ್ನು ನೋಡುತ್ತಿದ್ದೆ ಎಂದರು. ಆರ್‌ಸಿಬಿ ಹೊಸ ನಾಯಕ ರಜತ್ ಪಾಟೀದಾರ್ ಅವರು ಮನವಿ ಮಾಡಲು ಅರೆಮನಸ್ಸಿನಿಂದ ಬಂದಂತೆ ಕಂಡು ಬಂದರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಹಿಟ್ ವಿಕೆಟ್ ಆಗಿದ್ದರೂ ಔಟ್ ನೀಡದೇ ಇರಲು ಕಾರಣ ಏನೆಂದರೆ ಅದರ ನಿಯಮ. ಹಿಟ್ ವಿಕೆಟ್ ಏಕೆ ನೀಡಲಿಲ್ಲ? ಈ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿದೆ. ಆದರೆ ಅದರ ಬಗ್ಗೆ ನಿಯಮಗಳು ಏನು ಹೇಳುತ್ತವೆ ಎಂದು ತಿಳಿಯಿರಿ.
ಹಿಟ್ ವಿಕೆಟ್ ನಿಯಮ 35 ಹೇಳುವುದೇನು?
ಹಿಟ್ ವಿಕೆಟ್ ಔಟ್ ಆಗಬೇಕು ಅಂದರೆ ಚೆಂಡು ಚಾಲ್ತಿಯಲ್ಲಿ ಇರಬೇಕು. ಅಂದರೆ ಚೆಂಡು ಬೌಲರ್ ಕೈಯಿಂದ ಬಿಡುಗಡೆಯಾದ ಬಳಿಕ ಬ್ಯಾಟರ್ ಹೊಡೆಯಲು ಯತ್ನಿಸುವಾಗ ಮತ್ತು ರನ್ ಗಳಿಸಲು ಹೊರಟಾಗ ಬ್ಯಾಟ್ ಅಥವಾ ತನ್ನ ದೇಹದ ಯಾವುದೇ ಭಾಗ ಸ್ಟಂಪ್ಸ್ಗೆ ತಾಗಿ ಬೇಲ್ಸ್ ಕೆಳಕ್ಕೆ ಬಿದ್ದರೆ ಅದನ್ನು ಹಿಟ್ ವಿಕೆಟ್ ರನ್ನುತ್ತೇವೆ. ಅಲ್ಲದೆ, ಚೆಂಡು ಬರುತ್ತಿದ್ದಾಗ ಮತ್ತದೇ ರೀತಿ ಜರುಗಿದರೆ ಅದಕ್ಕೆ ಔಟೆಂದು ನೀಡಲಾಗುತ್ತದೆ. ಆದರೆ ರಾತ್ರಿ ಚೆಂಡು ವಿಕೆಟ್ ಕೀಪರ್ ಕೈ ಸೇರಿದ ಬಳಿಕ ಮತ್ತು ಅಂಪೈರ್ ವೈಡ್ ನೀಡಿದ ಬಳಿಕ ಸ್ಟಂಪ್ಸ್ಗೆ ಬ್ಯಾಟ್ ತಾಗಿಸಿದರು. ಹೀಗಂತ ಕ್ರಿಕೆಟ್ ನಿಯಮಗಳನ್ನು ರೂಪಿಸುವ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಹಿಟ್ ವಿಕೆಟ್ ನಿಯಮ 35ರಲ್ಲಿ ತಿಳಿಸಲಾಗಿದೆ.
ಆರ್ಸಿಬಿಗೆ ಗೆಲುವು
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಅಜಿಂಕ್ಯ ರಹಾನೆ ಅವರ ಸ್ಫೋಟಕ ಅರ್ಧಶತಕದ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 174 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಕೃನಾಲ್ ಪಾಂಡ್ಯ 3, ಜೋಶ್ ಹೇಜಲ್ವುಡ್ 2 ವಿಕೆಟ್ ಕಿತ್ತು ಮಿಂಚಿದರು. 175 ರನ್ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ, 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಇನ್ನೂ 22 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ದಡ ಸೇರಿತು. ವಿರಾಟ್ ಕೊಹ್ಲಿ 59 (ಅಜೇಯ) ರನ್, ಫಿಲ್ ಸಾಲ್ಟ್ 55 ರನ್, ರಜತ್ ಪಾಟೀದಾರ್ 35 ರನ್ ಸಿಡಿಸಿ ಮಿಂಚಿದರು. ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
