ಸನ್‌ರೈಸರ್ಸ್‌ ಹೈದರಾಬಾದ್‌ vs ಮುಂಬೈ ಇಂಡಿಯನ್ಸ್‌ ಸೇಡಿನ ಸಮರ; ನಾಳಿನ ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಸನ್‌ರೈಸರ್ಸ್‌ ಹೈದರಾಬಾದ್‌ Vs ಮುಂಬೈ ಇಂಡಿಯನ್ಸ್‌ ಸೇಡಿನ ಸಮರ; ನಾಳಿನ ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು

ಸನ್‌ರೈಸರ್ಸ್‌ ಹೈದರಾಬಾದ್‌ vs ಮುಂಬೈ ಇಂಡಿಯನ್ಸ್‌ ಸೇಡಿನ ಸಮರ; ನಾಳಿನ ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು

ಎಸ್‌ಆರ್‌ಎಚ್‌ ವಿರುದ್ಧ ಎಂಐ: ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಎದುರಿಸಿದ ಸೋಲಿಗೆ, ತವರಿನಲ್ಲಿ ಸೇಡು ತೀರಿಸಿಕೊಳ್ಳಲು ಪ್ಯಾಟ್‌ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಸಜ್ಜಾಗಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ vs ಮುಂಬೈ ಇಂಡಿಯನ್ಸ್‌; ನಾಳಿನ ಐಪಿಎಲ್‌ ಪಂದ್ಯದ 10 ಅಂಶಗಳು
ಸನ್‌ರೈಸರ್ಸ್‌ ಹೈದರಾಬಾದ್‌ vs ಮುಂಬೈ ಇಂಡಿಯನ್ಸ್‌; ನಾಳಿನ ಐಪಿಎಲ್‌ ಪಂದ್ಯದ 10 ಅಂಶಗಳು (Reuters)

ಐಪಿಎಲ್ 2025ರ 42ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಲಿವೆ. ನಾಳೆ (ಏ.23ರ ಬುಧವಾರ) ನಡೆಯಲಿರುವ ಪಂದ್ಯವು ಎಸ್‌ಆರ್‌ಎಚ್‌ ತವರು ಮೈದಾನ ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಪ್ರಸಕ್ತ ಆವೃತ್ತಿಯಲ್ಲಿ ಒಂದು ಬಾರಿ ಮುಖಾಮುಖಿಯಾಗಿವೆ. ವಾಂಖೆಡೆಯಲ್ಲಿ ಅನುಭವಿಸಿದ ಸೋಲಿಗೆ, ಇದೀಗ ತಮ್ಮ ತವರಿನಲ್ಲಿ ಸೇಡು ತೀರಿಸಿಕೊಳ್ಳಲು ಪ್ಯಾಟ್‌ ಕಮಿನ್ಸ್ ಬಳಗ ಎದುರು ನೋಡುತ್ತದೆ. ಮುಂಬೈ ತಂಡವು ಆಡಿದ ಕೊನೆಯ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದರೆ, ಎಸ್‌ಆರ್‌ಎಚ್‌ ತಂಡ ಇಡೀ ಋತುವಿನಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದು ಕಳಪೆ ಫಾರ್ಮ್‌ನಲ್ಲಿದೆ. ಮಹತ್ವದ ಪಂದ್ಯಕ್ಕೆ ಸಂಬಂಧಿಸಿದಂತೆ 10 ಪ್ರಮುಖ ಅಂಶಗಳನ್ನು‌ ನೋಡೋಣ.

  1. ಉಭಯ ತಂಡಗಳ ನಡುವಿನ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:30 ಕ್ಕೆ ಆರಂಭವಾಗಲಿದೆ. ಪಂದ್ಯ ಸ್ಟಾರ್‌ ಸ್ಪೋರ್ಟ್‌ ನೆಟ್ವರ್ಕ್‌ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ಇರಲಿದೆ.
  2. ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ತಂಡ ಇದುವರೆಗೆ ಆಡಿದ 24 ಪಂದ್ಯಗಳಲ್ಲಿ 10ರಲ್ಲಿ ಗೆದ್ದರೆ, ಉಳಿದ 14 ಪಂದ್ಯಗಳಲ್ಲಿ ಸೋಲು ಕಂಡಿದೆ.
  3. ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿರುವುದು ಎಂಐ ತಂಡಕ್ಕೆ ಆನೆಬಲ ಬಂದಂತಾಗಿದೆ. ಕೊನೆಯ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದ ಹಿಟ್‌ಮ್ಯಾನ್‌, ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆದರೆ, ರೋಹಿತ್‌ಗೆ ಪ್ಯಾಟ್ ಕಮಿನ್ಸ್ ಭೀತಿ ಶುರುವಾಗಿದೆ. ಐಪಿಎಲ್‌ನಲ್ಲಿ ಕಮಿನ್ಸ್ ಅವರ ಬೌಲಿಂಗ್‌ ಎದುರಿಸಿದ ಏಳು ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಕೇವಲ 40 ರನ್ ಮಾತ್ರವೇ ಗಳಿಸಿದ್ದಾರೆ. ನಾಲ್ಕು ಬಾರಿ ಕಮಿನ್ಸ್‌ ಬೌಲಿಂಗ್‌ನಲ್ಲಿ ಔಟಾಗಿದ್ದಾರೆ.
  4. ಸನ್‌ರೈಸರ್ಸ್‌ ಬ್ಯಾಟಿಂಗ್‌ ಮುಖ್ಯವಾಗಿ 3 ಆಟಗಾರರ ಮೇಲೆ ಅವಲಂಬಿಸಿದೆ. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೆನ್ ಹೈದರಾಬಾದ್‌ ಮೈದಾನದಲ್ಲಿ ಎಸ್‌ಆರ್‌ಹೆಚ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಭಿಷೇಕ್ ಹೈದರಾಬಾದ್ ಪರ 18 ಇನ್ನಿಂಗ್ಸ್‌ಗಳಲ್ಲಿ 32.1ರ ಸರಾಸರಿ ಮತ್ತು 208 ಸ್ಟ್ರೈಕ್ ರೇಟ್‌ನಲ್ಲಿ 513 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ.
  5. ಟ್ರಾವಿಸ್‌ ಹೆಡ್ 11 ಇನ್ನಿಂಗ್ಸ್‌ಗಳಲ್ಲಿ 45.9ರ ಸರಾಸರಿ ಮತ್ತು 184 ಸ್ಟ್ರೈಕ್ ರೇಟ್‌ನೊಂದಿಗೆ ಐದು ಅರ್ಧಶತಕ ಸಹಿತ 459 ರನ್ ಸಿಡಿಸಿದ್ದಾರೆ. ಇದೇ ವೇಳೆ ಕ್ಲಾಸೆನ್ 14 ಇನ್ನಿಂಗ್ಸ್‌ಗಳಲ್ಲಿ 54.3ರ ಆಕರ್ಷಕ ಸರಾಸರಿ ಮತ್ತು 186 ಸ್ಟ್ರೈಕ್ ರೇಟ್‌ನೊಂದಿಗೆ 543 ರನ್ ಗಳಿಸಿದ್ದಾರೆ.
  6. ಸನ್‌ರೈಸರ್ಸ್‌ ತಂಡದ ಯಶಸ್ಸು ಮೂವರು ಬ್ಯಾಟರ್‌ಗಳು ಹಾಗೂ ಪವರ್‌ಪ್ಲೇ ಪ್ರದರ್ಶನವನ್ನು ಅವಲಂಬಿಸಿದೆ. ಮೊದಲ ಆರು ಓವರ್‌ಗಳಲ್ಲಿ ಎಸ್‌ಆರ್‌ಹೆಚ್ ಅಬ್ಬರಿಸಿದರೆ, ಗೆಲುವು ಖಚಿತ. ಪವರ್‌ಪ್ಲೇನಲ್ಲಿ 65ಕ್ಕಿಂತ ಹೆಚ್ಚು ರನ್ ಗಳಿಸಿದ ಎರಡೂ ಪಂದ್ಯಗಳನ್ನು ಹೈದರಾಬಾದ್‌ ತಂಡ ಗೆದ್ದಿದೆ. ಹೀಗಾಗಿ ಆರಂಭಿಕರ ಫಾರ್ಮ್ ತಂಡದ ಫಲಿತಾಂಶ ನಿರ್ಧರಿಸುತ್ತದೆ.
  7. ಮುಂಬೈ ವಿರುದ್ಧದ ಕೊನೆಯ ಪಂದ್ಯದಲ್ಲಿ ಅಭಿಷೇಕ್ 40 ರನ್‌ ಗಳಿಸಿದ್ದರು. ಅಭಿಷೇಕ್‌ಗೆ ಟ್ರೆಂಟ್ ಬೌಲ್ಟ್ ಕಂಟಕವಾಗುವ ಸಾಧ್ಯತೆಯಿದೆ. ಬೌಲ್ಟ್ ವಿರುದ್ಧ ಅಭಿಷೇಕ್ ದಾಖಲೆ ಉತ್ತಮವಾಗಿಲ್ಲ. ಐಪಿಎಲ್‌ನಲ್ಲಿ ಬೌಲ್ಟ್ ಎದುರಿಸಿದ ಏಳು ಇನ್ನಿಂಗ್ಸ್‌ಗಳಲ್ಲಿ ಅಭಿ ಕೇವಲ 30 ರನ್ ಗಳಿಸಿದ್ದಾರೆ. ಮುಖ್ಯವಾಗಿ ಎರಡು ಬಾರಿ ಔಟಾಗಿದ್ದಾರೆ. ಈ ಆವೃತ್ತಿಯಲ್ಲಿ ಬೌಲ್ಟ್‌ ಪವರ್‌ಪ್ಲೇನಲ್ಲಿ ಹೆಚ್ಚು ಬೌಲಿಂಗ್‌ ಮಾಡುತ್ತಿಲ್ಲ. ಹೀಗಾಗಿ ಪಂದ್ಯ ಹೇಗಿರಲಿದೆ ಎಂಬುದು ಆಸಕ್ತಿ ಮೂಡಿಸಿದೆ.
  8. ಸನ್‌ರೈಸರ್ಸ್‌ ತಂಡವು ರನ್‌ ಹರಿಯುವ ಪಿಚ್‌ನಲ್ಲಿ ಮಾತ್ರವೇ ಅಬ್ಬರಿಸುತ್ತಿದೆ. ನಿಧಾನ ಮತ್ತು ತಿರುವು ಪಡೆಯುವ ಪಿಚ್‌ಗಳಲ್ಲಿ ಬ್ಯಾಟ್‌ ಬೀಸಲು ಪರದಾಡಿದೆ. ಇದರ ನಡುವೆ ತವರಿನಲ್ಲೇ ಆಡಿದ 2 ಪಂದ್ಯಗಳಲ್ಲಿ ಸೋತಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ ಪಂದ್ಯದಲ್ಲಿಯೂ ಮುಂಬೈ ತಂಡ ಸೋಲಿಸಿತ್ತು.
  9. ಮುಂಬೈ ತಂಡದ ಪ್ರಮುಖ ಬೌಲರ್‌ ಜಸ್ಪ್ರೀತ್ ಬುಮ್ರಾ ತಮ್ಮ ಪ್ರಚಂಡ ಫಾರ್ಮ್‌ ಇದುವರೆಗೆ ಪ್ರದರ್ಶಿಸಿಲ್ಲ. ನಿರೀಕ್ಷೆಯಂತೆ ವಿಕೆಟ್‌ಗಳನ್ನು ಪಡೆಯುವಲ್ಲಿ ಅವರು ಯಶಸ್ವಿಯಾಗಿಲ್ಲ. ಆದರೆ, ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್‌ ಮಾಡುತ್ತಿದ್ದಾರೆ. ಇದು ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳಿಗೆ ಎಚ್ಚರಿಕೆಯಾಗಬಹುದು.
  10. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದ ಪಿಚ್, ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಬ್ಯಾಟಿಂಗ್‌ಗೆ ಸ್ವರ್ಗವಾಗಿದೆ. ಇಲ್ಲಿ 200ಕ್ಕೂ ಹೆಚ್ಚು ರನ್‌ಗಳು ಹರಿದು ಬರುತ್ತಿವೆ. ಆಕ್ರಮಣಕಾರಿ ಬ್ಯಾಟರ್‌‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಚೇಸಿಂಗ್‌ ವೇಳೆ ಇಬ್ಬನಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಚೇಸಿಂಗ್ ಉತ್ತಮ ಆಯ್ಕೆ. ಆದರೂ ಈ ಬಾರಿ ಇಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ, ಮೊದಲು ಬ್ಯಾಟ್ ಮಾಡಿದ ತಂಡಗಳು 3 ಪಂದ್ಯಗಳಲ್ಲಿ ಜಯಗಳಿಸಿವೆ.

ಇದನ್ನೂ ಓದಿ | ಹೋರಾಟವೇ ತೋರದೆ ಶರಣಾದ ಹಾಲಿ ಚಾಂಪಿಯನ್; ಕೆಕೆಆರ್ ವಿರುದ್ಧ ಗುಜರಾತ್​​ಗೆ 39 ರನ್ನುಗಳ ಭರ್ಜರಿ ಗೆಲುವು

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.