ಮೇ 17 ರಿಂದ ಐಪಿಎಲ್ ಮತ್ತೆ​​ ಆರಂಭ, ಜೂನ್ 3ರಂದು ಫೈನಲ್; ಆರ್​​ಸಿಬಿ ಸೇರಿ ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಮೇ 17 ರಿಂದ ಐಪಿಎಲ್ ಮತ್ತೆ​​ ಆರಂಭ, ಜೂನ್ 3ರಂದು ಫೈನಲ್; ಆರ್​​ಸಿಬಿ ಸೇರಿ ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ

ಮೇ 17 ರಿಂದ ಐಪಿಎಲ್ ಮತ್ತೆ​​ ಆರಂಭ, ಜೂನ್ 3ರಂದು ಫೈನಲ್; ಆರ್​​ಸಿಬಿ ಸೇರಿ ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ

ಮೇ 17 ರಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗುವುದರೊಂದಿಗೆ ಐಪಿಎಲ್ ಪಂದ್ಯಾವಳಿ ಪುನರಾರಂಭಗೊಳ್ಳಲಿದೆ.

ಮೇ 17 ರಿಂದ ಐಪಿಎಲ್ ಪುನರ್​​ ಆರಂಭ, ಜೂನ್ 3ರಂದು ಫೈನಲ್; ಆರ್​​ಸಿಬಿ ಸೇರಿ ಉಳಿದ ಪಂದ್ಯಗಳ ವೇಳಾಪಟ್ಟಿ ಇಂತಿದೆ
ಮೇ 17 ರಿಂದ ಐಪಿಎಲ್ ಪುನರ್​​ ಆರಂಭ, ಜೂನ್ 3ರಂದು ಫೈನಲ್; ಆರ್​​ಸಿಬಿ ಸೇರಿ ಉಳಿದ ಪಂದ್ಯಗಳ ವೇಳಾಪಟ್ಟಿ ಇಂತಿದೆ

ಭಾರತ-ಪಾಕಿಸ್ತಾನ ಸಂಘರ್ಷದ ಕಾರಣ ಒಂದು ವಾರ ತಾತ್ಕಾಲಿಕ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪುನರ್ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಮೇ 17ರಿಂದ ಐಪಿಎಲ್ ಮತ್ತೆ​ ಆರಂಭಗೊಳ್ಳಲಿದ್ದು, ಜೂನ್ 3 ರಂದು ಫೈನಲ್ ನಡೆಯಲಿದೆ. ಲೀಗ್ ಮತ್ತು ಪ್ಲೇಆಫ್ ಸೇರಿ ಉಳಿದ ಪಂದ್ಯಗಳು ಮೇ 17 ರಿಂದ ಜೂನ್ 3 ರವರೆಗೆ 6 ವಿಭಿನ್ನ ಸ್ಥಳಗಳಲ್ಲಿ ನಡೆಯಲಿವೆ. ಮೇ 17 ರಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಪುನರಾರಂಭಗೊಳ್ಳಲಿದೆ.

ಗಡಿ ಭಾಗದ ರಾಜ್ಯಗಳಲ್ಲಿ ಪಾಕಿಸ್ತಾನ ದಾಳಿ ನಡೆಸಿದ ಹಿನ್ನೆಲೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಈ ಪಂದ್ಯವನ್ನು ಈಗ ಮೇ 24ರಂದು ಜೈಪುರದಲ್ಲಿ ಮತ್ತೆ ನಡೆಸಲಾಗುವುದು. ಮೊದಲ ಕ್ವಾಲಿಫೈಯರ್​ ಮೇ 29ರಂದು, ಎಲಿಮಿನೇಟರ್​ ಮೇ 30ರಂದು ನಡೆಯಲಿದೆ. 2ನೇ ಕ್ವಾಲಿಫೈಯರ್​ ಪಂದ್ಯ ಜೂನ್ 1ರಂದು, ಫೈನಲ್ ಜೂನ್ 3ರಂದು ನಡೆಯಲಿದೆ. ಮೇ 9ರಂದು ಆರ್​ಸಿಬಿ ಮತ್ತು ಎಲ್​ಎಸ್​ಜಿ ಪಂದ್ಯ ನಡೆಯುವುದಕ್ಕೂ ಮುನ್ನ ಬಿಸಿಸಿಐ ಐಪಿಎಲ್ ಸ್ಥಗಿತಗೊಳಿಸಿತ್ತು.

ಆರ್​ಸಿಬಿ ವೇಳಾಪಟ್ಟಿ ಹೀಗಿದೆ

ಆರ್​​ಸಿಬಿ ತನ್ನ ಮುಂದಿನ ಪಂದ್ಯಗಳನ್ನು ಮೇ 17ರಂದು ಕೆಕೆಆರ್ ವಿರುದ್ಧ, ಮೇ 23 ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ, ಮೇ 27 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಆರ್​​ಸಿಬಿ ಎರಡನೇ ಸ್ಥಾನ ಪಡೆದಿದ್ದು, ಇನ್ನೊಂದು ಗೆಲುವು ಸಾಧಿಸಿದರೆ ಪ್ಲೇಆಫ್​ಗೆ ಅರ್ಹತೆ ಪಡೆದುಕೊಳ್ಳಲಿದೆ.

ಆರು ಸ್ಥಳಗಳ ಆಯ್ಕೆ

ಬಿಸಿಸಿಐ ಟೂರ್ನಿಗೆ 6 ​​ಸ್ಥಳಗಳನ್ನು ಆಯ್ಕೆ ಮಾಡಿದೆ. ಮುಖ್ಯವಾಗಿ ಅಹಮದಾಬಾದ್, ಜೈಪುರ, ಡೆಲ್ಲಿ, ಬೆಂಗಳೂರು, ಲಕ್ನೋ ಮತ್ತು ಮುಂಬೈ. ಆದರೆ ಈ ಹಿಂದಿನ ವರದಿಗಳ ಪ್ರಕಾರ ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಸ್ಥಳಗಳಲ್ಲಿ ಉಳಿದ ಪಂದ್ಯಗಳ ಆಯೋಜನೆ ಮಾಡಬಹುದು ಎನ್ನಲಾಗಿತ್ತು. ಆದರೀಗ ಮಂಡಳಿಯು ಪರ್ಯಾಯ ಮಾರ್ಗವನ್ನು ತೆಗೆದುಕೊಂಡಿದೆ.

7 ತಂಡಗಳು ಪ್ಲೇಆಫ್ ರೇಸ್​​ನಲ್ಲಿ

10 ತಂಡಗಳಲ್ಲಿ 7 ತಂಡಗಳು ಇನ್ನೂ ಪ್ಲೇಆಫ್ ರೇಸ್‌ನಲ್ಲಿವೆ. ಸಿಎಸ್​ಕೆ, ಎಸ್​ಆರ್​​ಹೆಚ್​​, ಆರ್​ಆರ್​ ಈಗಾಗಲೇ ಸ್ಪರ್ಧೆಯಿಂದ ಹೊರಗುಳಿದಿವೆ. 7 ತಂಡಗಳು ಮತ್ತೊಮ್ಮೆ ಪ್ಲೇಆಫ್ ಪ್ರವೇಶಿಸಲು ಹೋರಾಡಲಿವೆ. ಜಿಟಿ 11 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರ ಆರ್​ಸಿಬಿ 16 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಪಂಜಾಬ್, ಎಂಐ ಕ್ರಮವಾಗಿ 15 ಮತ್ತು 14 ಅಂಕಗಳೊಂದಿಗೆ 3 ನೇ ಮತ್ತು 4 ನೇ ಸ್ಥಾನವನ್ನು ಪಡೆದುಕೊಂಡಿವೆ.

ಪರಿಷ್ಕೃತ ವೇಳಾಪಟ್ಟಿಯ ಭಾಗವಾಗಿ, ಮೊಹಾಲಿ ಅಥವಾ ಧರ್ಮಶಾಲಾದಲ್ಲಿ ಯಾವುದೇ ಪಂದ್ಯಗಳನ್ನು ನಡೆಸಲಾಗುವುದಿಲ್ಲ. ಈ ಹಿಂದೆ ಅಹಮದಾಬಾದ್‌ಗೆ ಸ್ಥಳಾಂತರಗೊಂಡಿದ್ದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು ಈಗ ಮೇ 26 ರಂದು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳು ಮತ್ತು ಎಲ್ಲಾ ಪ್ರಮುಖ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆಗಳ ನಂತರ, ಮಂಡಳಿಯು ಋತುವಿನ ಉಳಿದ ಭಾಗವನ್ನು ಮುಂದುವರಿಸಲು ನಿರ್ಧರಿಸಿದೆ.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.