Rajat Patidar: ಆರ್​ಸಿಬಿ ನಾಯಕನಾಗಿ ರಜತ್ ಪಾಟೀದಾರ್ ನೇಮಿಸುವ ಹಿಂದಿದೆ ಮೂರು ಬಲವಾದ ಕಾರಣಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  Rajat Patidar: ಆರ್​ಸಿಬಿ ನಾಯಕನಾಗಿ ರಜತ್ ಪಾಟೀದಾರ್ ನೇಮಿಸುವ ಹಿಂದಿದೆ ಮೂರು ಬಲವಾದ ಕಾರಣಗಳು

Rajat Patidar: ಆರ್​ಸಿಬಿ ನಾಯಕನಾಗಿ ರಜತ್ ಪಾಟೀದಾರ್ ನೇಮಿಸುವ ಹಿಂದಿದೆ ಮೂರು ಬಲವಾದ ಕಾರಣಗಳು

Rajat Patidar: ಆರ್​​ಸಿಬಿ ನೂತನ ನಾಯಕನಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತೆ ನಾಯಕತ್ವವನ್ನು ವಹಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೆ ಅದಕ್ಕೆ ಅವರು ಒಪ್ಪದ ಕಾರಣ ರಜತ್​ಗೆ ಪಟ್ಟ ಕಟ್ಟಿ ಅಚ್ಚರಿ ಮೂಡಿಸಿದೆ.

ಆರ್​ಸಿಬಿ ನಾಯಕನಾಗಿ ರಜತ್ ಪಾಟೀದಾರ್ ನೇಮಿಸುವ ಹಿಂದಿದೆ ಮೂರು ಬಲವಾದ ಕಾರಣಗಳು
ಆರ್​ಸಿಬಿ ನಾಯಕನಾಗಿ ರಜತ್ ಪಾಟೀದಾರ್ ನೇಮಿಸುವ ಹಿಂದಿದೆ ಮೂರು ಬಲವಾದ ಕಾರಣಗಳು

ಮಾರ್ಚ್​ 23ರಿಂದ ಶುರುವಾಗುವ 18ನೇ ಆವೃತ್ತಿಯ ಐಪಿಎಲ್​ನಲ್ಲಿ ಮಧ್ಯ ಪ್ರದೇಶದ ಆಟಗಾರ ರಜತ್ ಪಾಟೀದಾರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮುನ್ನಡೆಸಲಿದ್ದಾರೆ. ಆರ್​ಸಿಬಿ ಗುರುವಾರ ವಿಶೇಷ ಕಾರ್ಯಕ್ರಮದಲ್ಲಿ 31 ವರ್ಷದ ಪಾಟೀದಾರ್ ಅವರನ್ನು ನಾಯಕನನ್ನಾಗಿ ಘೋಷಿಸಿತು. ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಫಾಫ್ ಡು ಪ್ಲೆಸಿಸ್ ಅವರನ್ನು ಉಳಿಸಿಕೊಳ್ಳದ ಕಾರಣ ಆರ್​​ಸಿಬಿ ಹೊಸ ನಾಯಕನ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದವು. ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತೆ ನಾಯಕನಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಈ ಬಗ್ಗೆ ಕೊಹ್ಲಿ ಜೊತೆಗೂ ಮಾತುಕತೆಯನ್ನೂ ನಡೆಸಿತ್ತು. ಆದರೆ ಮತ್ತೆ ನಾಯಕತ್ವಕ್ಕೆ ಒಪ್ಪಲಿಲ್ಲ. ಕೊಹ್ಲಿ ಅಥವಾ ಮತ್ತೊಬ್ಬರ ಬದಲಿಗೆ ಪಾಟೀದಾರ್ ಆರ್​ಸಿಬಿ ನಾಯಕನಾಗಲು ಕಾರಣವೇನು? ಅದಕ್ಕಿದೆ ಮೂರು ಕಾರಣಗಳು.

ರಜತ್ ಪಾಟೀದಾರ್ 2021ರಿಂದ ಆರ್​ಸಿಬಿಯ ಅವಿಭಾಜ್ಯ ಅಂಗವಾಗಿದ್ದಾರೆ. 31 ವರ್ಷದ ರಜತ್ ಇದುವರೆಗೂ 27 ಐಪಿಎಲ್​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ ಬ್ಯಾಟ್ ಬೀಸಿರೋದು 24 ಇನ್ನಿಂಗ್ಸ್​ಗಳಲ್ಲಿ. 158.85ರ ಸ್ಟ್ರೈಕ್​ರೇಟ್​ನಲ್ಲಿ ರನ್ ಗಳಿಸಿರುವ ರಜತ್, 1 ಶತಕ, 7 ಅರ್ಧಶತಕ ಸಹಿತ 799 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 34.74. ಗರಿಷ್ಠ ಸ್ಕೋರ್ 112. ಅವರು 2021ರಲ್ಲಿ ಆರ್​ಸಿಬಿ ಪರ ಐಪಿಎಲ್​​ಗೆ ಪದಾರ್ಪಣೆ ಮಾಡಿದರು. ಆದಾಗ್ಯೂ, 2022ರ ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಟೂರ್ನಿ ಮಧ್ಯೆ ಲವ್​ನೀತ್ ಸಿಸೋಡಿಯಾ ಗಾಯಗೊಂಡ ಕಾರಣ ಅವರ ಬದಲಿಗೆ ಆರ್​ಸಿಬಿ ಮತ್ತೆ ರಜತ್ ಪಾಟೀದಾರ್​ ಮೇಲೆ ನಂಬಿಕೆ ಇಟ್ಟು ಮಣೆ ಹಾಕಿತ್ತು. ಆದರೆ 2023ರಲ್ಲಿ ಇಂಜುರಿ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದರು. ಬಳಿಕ 2024ರಲ್ಲಿ ಕಂಬ್ಯಾಕ್ ಮಾಡಿದ ಮಧ್ಯ ಪ್ರದೇಶದ ಆಟಗಾರ ಅದ್ಭುತ ಪ್ರದರ್ಶನ ನೀಡಿದ್ದರು. ವಿರಾಟ್ ಕೊಹ್ಲಿ ಮತ್ತು ಯಶ್ ದಯಾಳ್ ಜೊತೆಗೆ 2025ರ ಐಪಿಎಲ್​ಗೂ ಮುನ್ನ 11 ಕೋಟಿ ರೂಪಾಯಿಗೆ ರಜತ್​​ರನ್ನು ಉಳಿಸಿಕೊಳ್ಳಲಾಗಿತ್ತು.

ದೇಶೀಯ ಕ್ರಿಕೆಟ್‌ನಲ್ಲಿ ನಾಯಕತ್ವ

ರಜತ್ ಪಾಟೀದಾರ್​ಗೆ ನಾಯಕತ್ವ ನೀಡಲು ಪ್ರಮುಖ ಕಾರಣ ದೇಶೀಯ ಕ್ರಿಕೆಟ್​​ನಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸುವ ಅನುಭವದಿಂದ. ದೇಶೀಯ ಕ್ರಿಕೆಟ್​​ನಲ್ಲಿ ನಾಯಕನಾಗಿ ಸಾಕಷ್ಟು ಪ್ರಭಾವ ಬೀರಿರುವ ಪಾಟೀದಾರ್, ಸೀಮಿತ ಓವರ್​​​ಗಳಲ್ಲಿ ಮಧ್ಯಪ್ರದೇಶದ ಉಸ್ತುವಾರಿ ವಹಿಸಿಕೊಂಡು ಸಾಮರ್ಥ್ಯ ತೋರಿಸಿದ್ದರು. ಬ್ಯಾಟ್​ನಲ್ಲೂ ಅಬ್ಬರಿಸಿದ್ದರು. ಅವರ ಸಾರಥ್ಯದಲ್ಲಿ ಮಧ್ಯಪ್ರದೇಶ ತಂಡವು ದೇಶೀಯ ಟಿ20 ಪಂದ್ಯಾವಳಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024ರ ಫೈನಲ್​​ಗೂ ಪ್ರವೇಶಿಸಿತ್ತು. ಆದರೆ ಫೈನಲ್​​ನಲ್ಲಿ ಮುಂಬೈ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಏಕದಿನ ಮಾದರಿಯ ವಿಜಯ್ ಹಜಾರೆ ಟ್ರೋಫಿಯಲ್ಲೂ ಮಧ್ಯಪ್ರದೇಶ ಮುನ್ನಡೆಸಿದ್ದ ಅನುಭವ ಹೊಂದಿದ್ದಾರೆ. ನಾಯಕತ್ವ ಅನುಭವ ಹೊಂದಿರುವ ಕಾರಣ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಲಾಗಿದೆ.

ಹೊಸ ನಾಯಕತ್ವದಿಂದ ಹೊಸ ಭರವಸೆ

17 ವರ್ಷಗಳಿಂದಲೂ ಟ್ರೋಫಿ ಗೆಲ್ಲದ ಆರ್​ಸಿಬಿ 18ನೇ ಆವೃತ್ತಿಗೂ ಮುನ್ನ ಹೊಸ ಹೊಸ ನಾಯಕತ್ವದಲ್ಲಿ ವಿಶ್ವಾಸ ತೋರಿಸುವ ಭರವಸೆಯಲ್ಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅನುಭವವೂ ಇಲ್ಲದ ರಜತ್​ ದೊಡ್ಡ ತಂಡವೊಂದಕ್ಕೆ ಇದೇ ಮೊದಲ ಬಾರಿಗೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ತನ್ನ ನಾಯಕತ್ವದ ಸಾಮರ್ಥ್ಯ ಜಗತ್ತಿನ ಮುಂದೆ ಪ್ರದರ್ಶಿಸಲು ಅವರಿಗೆ ಇದೊಂದು ಸುವರ್ಣಾವಕಾಶವೂ ಹೌದು. ಅನಾನುಭವಿ ನಾಯಕನಿಂದ ತಂಡಕ್ಕೆ ಹೊಸ ಮೆರುಗುವ ಸಿಗುವ ಭರವಸೆಯಿಂದ ಫ್ರಾಂಚೈಸಿ 31 ವರ್ಷದ ಆಟಗಾರನಿಗೆ ಮಣೆ ಹಾಕಿದೆ ಎಂದು ಹೇಳಬಹುದು. ಏಕೆಂದರೆ ಅವರ ಕಾರ್ಯತಂತ್ರಗಳು, ತಂಡವನ್ನು ಮುನ್ನಡೆಸುವ ವಿಧಾನ, ಸಂಕಷ್ಟದಲ್ಲಿ ತಂಡವನ್ನು ನಿರ್ವಹಿಸುವ ರೀತಿ, ಆಟಗಾರರನ್ನು ಹಿಡಿದಿಟ್ಟುಕೊಳ್ಳುವ ರೀತಿ ಮತ್ತು ಎದುರಾಳಿ ತಂಡಗಳ ಕಾರ್ಯತಂತ್ರಗಳ ಮರ್ಮ ಅರಿಯುವ ಸಾಮರ್ಥ್ಯ ಅವರಲ್ಲಿರುವ ಕಾರಣ ನಾಯಕತ್ವ ವಹಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ನಾಯಕನಾಗಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ ರಜತ್

3ನೇ ಅಥವಾ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ರಜತ್, ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿ. ವಿಶ್ವದ ಘಟಾನುಘಟಿಗಳ ಎದುರೇ ನಿರಾಂತಕವಾಗಿ ಬ್ಯಾಟ್ ಬೀಸಿ ಲೀಲಾಜಾಲವಾಗಿ ರನ್ ಗಳಿಸುವ ರಜತ್, ಏಕಾಂಗಿಯಾಗಿ ಅನೇಕ ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಆದರೆ ಕೆಲವರು ನಾಯಕತ್ವ ವಹಿಸಿದ ಬಳಿಕ ಒತ್ತಡಕ್ಕೆ ಒಳಗಾಗಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಾರೆ. ಆದರೆ ರಜತ್ ಒತ್ತಡವನ್ನು ಅದ್ಭುತವಾಗಿ ನಿಭಾಯಿಸಿ ತಂಡವನ್ನೂ ಮುನ್ನಡೆಸಿ ಬ್ಯಾಟಿಂಗ್​ನಲ್ಲೂ ಸದ್ದು ಮಾಡಿದ್ದರು. ಅದಕ್ಕೆ ಕಳೆದ ವರ್ಷ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯೇ ಕಾರಣ. ಟೂರ್ನಿಯಲ್ಲಿ ಆಡಿದ 10 ಪಂದ್ಯಗಳ 9 ಇನ್ನಿಂಗ್ಸ್​​ಗಳಲ್ಲಿ 5 ಅರ್ಧಶತಕ ಸಹಿತ 428 ರನ್ ಬಾರಿಸಿದ್ದರು. ಅವರ ಸ್ಟ್ರೈಕ್​ರೇಟ್​ 186.08. ಫೈನಲ್​ನಲ್ಲೂ ಹಾಫ್ ಸೆಂಚುರಿ ಬಾರಿಸಿ ಏಕಾಂಗಿ ಹೋರಾಟ ನಡೆಸಿದ್ದರು. 32 ಬೌಂಡರಿ, 27 ಸಿಕ್ಸರ್. ನಾಯಕನಾಗಿಯೂ ಉತ್ತಮ ಪ್ರದರ್ಶನ ನೀಡಿರುವ ಹಾಗೂ ನಾಯಕತ್ವದ ಕೌಶಲಗಳು ಅತ್ಯುತ್ತಮವಾಗಿದ್ದ ಹಿನ್ನೆಲೆ ರಜತ್​ಗೆ ಮಣೆ ಹಾಕಲಾಗಿದೆ ಎನ್ನಬಹುದು.

ಐಪಿಎಲ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಮತ್ತು ಉತ್ಸಾಹದಿಂದ ಬೆಂಬಲಿತ ತಂಡಗಳಲ್ಲಿ ಒಂದಾಗಿದ್ದರೂ ಆರ್‌ಸಿಬಿ ಇನ್ನೂ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿಲ್ಲ. 3 ಬಾರಿ 2009, 2011 ಮತ್ತು 2016ರಲ್ಲಿ ಫೈನಲ್ ತಲುಪಿದೆ. ಆದರೆ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಕಳೆದ ಕೆಲವು ಋತುಗಳಲ್ಲಿ ಮಿಶ್ರ ಪ್ರದರ್ಶನ ನೀಡಲಾಗಿದ್ದು, ಕಳೆದ 5 ಆವೃತ್ತಿಗಳಲ್ಲಿ 4ರಲ್ಲಿ ಆರ್‌ಸಿಬಿ ಪ್ಲೇಆಫ್‌ಗೆ ತಲುಪಿದೆ. ಆದರೆ ರಜತ್ ನಾಯಕತ್ವದಲ್ಲಿ ಈ ಸಲವಾದರೂ ಕಪ್ ಗೆಲ್ಲುತ್ತಾ ಎಂಬುದನ್ನು ಕಾದುನೋಡೋಣ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner