ಐಪಿಎಲ್ ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಹಣಕ್ಕಿಂತ ಸ್ಟಾರ್ಕ್ ಸಂಭಾವನೆ ಜಾಸ್ತಿ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್
ಐಪಿಎಲ್‌ನ 2024ರ ಮಿನಿ ಹರಾಜಿನಲ್ಲಿ ಹಣದ ಹೊಳೆಯೇ ಹರಿದಿದೆ. ಆಸೀಸ್ ಆಟಗಾರ ಮಿಚೆಲ್ ಸ್ಟಾರ್ಕ್ ಅತಿ ದುಬಾರಿ ಆಟಗಾರ ಎನಿಸಿಕೊಂಡರು. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿರುವುದು ಹೀಗೆ…
ಐಪಿಎಲ್ ಹರಾಜು (IPL Auction) ಇತಿಹಾಸದಲ್ಲೇ ಇದೇ ಮೊದಲ ಸಲ ದುಬಾರಿ ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ದಾಖಲೆಗೆ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಭಾಜನರಾದರು. 2024 ನೇ ಸಾಲಿನ ಐಪಿಎಲ್ ಹರಾಜು ಪೂರ್ಣಗೊಂಡಿದ್ದು, ಮಿಚೆಲ್ ಸ್ಟಾರ್ಕ್ ಹರಾಜು ಮೊತ್ತ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.
ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತನ್ನ ಬಳಿ ಮೀಸಲಿದ್ದ ಆಟಗಾರರ ಖರೀದಿಯ ಒಟ್ಟು ಮೊತ್ತದಲ್ಲಿ ಶೇಕಡ 75 ಹಣವನ್ನು ಮಿಚೆಲ್ ಸ್ಟಾರ್ಕ್ ಮೇಲೆ ಸುರಿದಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ನಡುವೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡೆಸಿದ ಬಿಡ್ ಸಾಕಷ್ಟು ಅಚ್ಚರಿ ಮೂಡಿಸಿತ್ತು. ತನ್ನ ಬಳಿ ಕೇವಲ 23.25 ಕೋಟಿ ರೂಪಾಯಿ ಇಟ್ಟುಕೊಂಡು ಆಟಗಾರನ ಮೇಲೆ 20.25 ಕೋಟಿ ರೂಪಾಯಿವರೆಗೂ ಆರ್‌ಸಿಬಿ ಬಿಡ್ ನಡೆಸಿತ್ತು.
ಈ ಬಿಡ್ಡಿಂಗ್ ಪ್ರಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದು, ಟ್ರೋಲ್‌ಗೆ ಕೂಡ ಸಿಲುಕಿದೆ. ಸೋಷಿಯಲ್ ಮೀಡಿಯಾ ಟ್ರೋಲ್ ಕಡೆಗೊಂದು ನೋಟ ಬೀರಿದರೆ ಹಲವು ವಿಚಾರಗಳು ಗಮನಸೆಳೆಯುತ್ತವೆ. ಆಯ್ದ ವಿಚಾರಗಳ ವಿವರ ಇಲ್ಲಿವೆ ಗಮನಿಸಿ..
ಐಪಿಎಲ್ ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಹಣಕ್ಕಿಂತ ಸ್ಟಾರ್ಕ್ ಸಂಭಾವನೆ ಜಾಸ್ತಿ- ಪ್ರದೀಪ್ ಪಡುಕೆರೆ
ಕಮಿನ್ಸ್ 20ಕೋಟಿಗೆ ಸೇಲ್ ಆಗಿದ್ದಕ್ಕೆ ಲಭೊ ಲಭೊ ಅನ್ನಬೇಡಿ, ಅದೆ ದೇಶದ ಮಿಚೆಲ್ ಸ್ಟಾರ್ಕ್ 24 ಪ್ಲಸ್ ಮುಕ್ಕಾಲು ಕೋಟಿಗೆ ಕೋಲ್ಕತ್ತಾಗೆ ಹರಾಜ್..! ದುಡ್ಡಲ್ಲು ದಾಖಲೆಗಳು ನೆಲಸಮ. ಐಪಿಎಲ್ ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಹಣಕ್ಕಿಂತ ಸ್ಟಾರ್ಕ್ ಸಂಭಾವನೆ ಜಾಸ್ತಿ.. ಎಂದು ಪ್ರದೀಪ್ ಪಡುಕೆರೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.
ಮಿಚೆಲ್ ಸ್ಟಾರ್ಕ್ ಕುರಿತು ಪ್ರದೀಪ್ ಪಡುಕೆರೆ ಅವರು ಅಕ್ಟೋಬರ್ 1 ರಂದು ಮಾಡಿದ್ದ ಪೋಸ್ಟ್ ಕೂಡ ಈಗ ಗಮನಸೆಳೆದಿದೆ. ಅದು ಹೀಗಿದೆ -
"ಸ್ಟಾರ್ಕ್ ಈ ದುಡ್ಡಿನ ಕ್ರಿಕೆಟ್ ದುನಿಯಾದಲ್ಲಿ ನಿಜವಾದ ದುಬಾರಿ ಆಟಗಾರ..!
ಸ್ಟಾರ್ಕ್ ಕ್ರಿಕೆಟ್ ಜಗತ್ತು ಕಂಡ ಫಾಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ದೊಡ್ಡ ಹೆಸರು. ವಿಶ್ವಕಪ್ ಇತಿಹಾಸದಲ್ಲಿ ಕೇವಲ ಹದಿನೆಂಟು ಪಂದ್ಯವಾಡಿ 49 ವಿಕೆಟ್ ಪಡೆದ ಸಾಹಸಿ.ಆತ ಆಡಿದ್ದು ಕೇವಲ ಎರಡೆ ಎರಡು ವಿಶ್ವಕಪ್.
ಮೊದಲ ವಿಶ್ವಕಪ್ ಕ್ರಿಕೆಟ್ ಕೂಟದಲ್ಲೆ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಗೌರವ ಪಡೆದವ. ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಹಾಗೂ ಬ್ಯಾಟಿಂಗ್ ಯುಗದಲ್ಲಿ ಇದನ್ನು ಸಾಧಿಸಿದ ವಿಶೇಷ ಪ್ರತಿಭೆ.
ಅದೇ ಏಕದಿನ ವಿಶ್ವಕಪ್‌ನಲ್ಲಿ ಸರಣಿಯುದ್ದಕ್ಕೂ T-ಟ್ವಿಂಟಿ ಶೈಲಿಯಲ್ಲಿ ಬ್ಯಾಟ್ ಬೀಸಿ ಬೆಚ್ಚಿ ಬೀಳಿಸಿದ್ದ ಮೆಕ್ಕಲಂ ವಿಕೆಟನ್ನ ಕಿತ್ ಹಾರಿಸಿ ಮೊದಲ ಓವರಿನಲ್ಲೆ ಅರ್ಧ ಫೈನಲ್ ಮುಗಿಸಿದ್ದು ಇದೆ ಸ್ಟಾರ್ಕ್.
ನಂತರ ಮುಂದಿನ 2019 ವಿಶ್ವಕಪ್‌ನಲ್ಲು ರೆಡ್ ಹಾಟ್ ಫಾರ್ಮ್ ಮುಂದುವರಿಸಿ ಈತ ಬೀಳಿಸಿದ್ದು 27 ಹುದ್ದರಿಗಳು. ಮೆಕ್‌ಗ್ರಾತ್, ಮುರುಳಿಧರನ್‌ನಂತ ಗ್ರೇಟ್ ಬೌಲರ್‌ಗಳು ವಿಶ್ವಕಪ್‌ನಲ್ಲಿ ಸ್ಟಾರ್ಕ್‌ಗಿಂತ ಅತಿ ಹೆಚ್ವು ವಿಕೆಟ್ ಪಡೆದರು ಸಹ ಜಾಗತಿಕ ಸರಣಿಯಲ್ಲಿ ಸ್ಟ್ರೈಕ್ ರೇಟ್, ಸರಾಸರಿಯಲ್ಲಿ ಎಲ್ಲರನ್ನು ಮೀರಿಸಿದವ ಮಿಚ್ಚೆಲ್.
ಮಿಚ್ಚೆಲ್ ಯಾರ್ಕರ್‌ಗಳೆದುರು ನಿತ್ತು ಆಡಲು ಗಂಡೆದೆ ಬೇಕು.!
ಇವೆಲ್ಲಕ್ಕಿಂತ ಹೆಚ್ವು ಸ್ಟಾರ್ಕ್ ಇಷ್ಟವಾಗುವುದು ಆಸ್ಟ್ರೇಲಿಯಾದ ಹಳದಿ ದಿರಿಸು ತೊಟ್ಟಾಡುವುದಕ್ಕೆ ಹಂಬಲಿಸುವುವ ಅವನ ರಾಷ್ಟ್ರ ಪ್ರೇಮ ಮತ್ತು ಕ್ರೀಡಾ ಮನೋಭಾವ.
ಐಪಿಎಲ್ ಅಂದ್ರೆ ರಾಷ್ಟ್ರೀಯ ಪಂದ್ಯಗಳನ್ನೆ ತ್ಯಜಿಸಿ, ಇಲ್ಲಿನ ಕೋಟಿ ಕೋಟಿಗಾಗಿ ಬಂದು ಸಿಕ್ಕಾಪಟ್ಟೆ ಮಿಂಚುವ ವಿದೇಶಿ ಆಟಗಾರರು ಮತ್ತು ನಮ್ಮದೆ ಕೆಲವು ಭಾರತೀಯ ಪ್ಲೇಯರ್‌ಗಳ ನಡುವೆ ಈ ಸ್ಟಾರ್ಕ್ ತುಂಬಾ ಎತ್ತರದಲ್ಲಿ ನಿಲ್ಲುತ್ತಾರೆ.
ಆಸ್ಟ್ರೇಲಿಯಾ ಪರ ವಿಶ್ವ ಸರಣಿಯಲ್ಲಿ, ಅವರ ಪ್ರತಿಷ್ಠೆಯ ಆ್ಯಷಸ್‌ನಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ಗಾಯಾಳು ಆಗಬಾರದೆಂಬ ಇರಾದೆಯಿಂದ ದುಬಾರಿ ಪ್ರಾಂಚೈಸಿ ಲೀಗ್‌ಗಳಿಗೆ ಕ್ಯಾರೆ ಅನ್ನದೆ ಹರಾಜಿಗೆ ಹೆಸರನ್ನು ಕ್ವಿಟ್ ಮಾಡಿದ ಕಾಂಗರೂ ಲೆಜೆಂಡ್ ಈ ಸ್ಟಾರ್ಕ್.
ಐಪಿಎಲ್‌ನಲ್ಲಿ ಕೊಡುವ ರಾಶಿ ಖಾಸಿಗೆ ಪ್ರಾಮುಖ್ಯತೆ ಕೊಡದೆ ದೇಶಕ್ಕಾಗಿ ಆಡುವ ಅಪರೂಪದ ಆಟಗಾರ ಮಿಚೆಲ್ ಸ್ಟಾರ್ಕ್"
ಇಂಡಿಯನ್ ಪೈಸಾ ಲೀಗ್ ಅಂತ ಗೊತ್ತಿಲ್ಲದ ಅಮಾಯಕರು ಯಾರಾದ್ರೂ ಇದ್ದೀರಾ- ದೀಪಾ ಹಿರೇಗುತ್ತಿ
ಮಜವೆಂದರೆ ಇಡೀ ಐಪಿಎಲ್ ಆಡಿ ಗೆದ್ದ ತಂಡಕ್ಕೆ ಸಿಗುವ ಹಣಕ್ಕಿಂತ ಒಬ್ಬ ಆಟಗಾರನಿಗೆ ಸಿಕ್ಕ ಹಣ ಜಾಸ್ತಿ ಅಂತ ಎಲ್ಲರೂ ತಲೆಬಿಸಿ ಮಾಡುತ್ತಿರುವುದು! ಈ ಐಪಿಎಲ್ ಅಂದರೇ ಇಂಡಿಯನ್ ಪೈಸಾ ಲೀಗ್ ಅಂತ ಗೊತ್ತಿಲ್ಲದ ಅಮಾಯಕರು ಯಾರಾದ್ರೂ ಇದ್ದೀರಾ? ಎಂದು ಲೇಖಕಿ ದೀಪಾ ಹಿರೇಗುತ್ತಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಕೂಡ ವೈರಲ್ ಆಗಿದ್ದು, ಬಹಳ ಜನ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಮಿಚೆಲ್ ಸ್ಟಾರ್ಕ್ ಎಸೆತ ಒಂದರ ಮೌಲ್ಯ 7.36 ಲಕ್ಷ ರೂಪಾಯಿ!
ಸಿಂಹ ಎಸ್‌ಎನ್ ಎಂಬುವವರು ಫೇಸ್‌ಬುಕ್ ಪೋಸ್ಟ್‌ನಲ್ಲಿ, 24.70 ಕೋಟಿ ರೂಪಾಯಿಗೆ ಹರಾಜಾದ ಮಿಚೆನ್ ಸ್ಟಾರ್ಕ್ ಅವರ ಎಸೆತ ಒಂದರ ಮೌಲ್ಯವನ್ನು ಅಂದಾಜಿಸಿದ್ದಾರೆ. ಮಿಚೆಲ್ ಸ್ಟಾರ್ಕ್ ಐಪಿಎಲ್‌ನ ಎಲ್ಲ 14 ಪಂದ್ಯಗಳಲ್ಲಿ ಆಡಿ, ಪ್ರತಿ ಪಂದ್ಯದಲ್ಲಿ 4 ಓವರ್ ಪೂರ್ತಿಯಾಗಿ ಎಸೆದರೆ… ಉಸಿರು ಬಿಗಿ ಹಿಡಿಯಿರಿ. ಪ್ರತಿ ಎಸೆತದ ಕೂಲಿ 7, 36,607 ರೂಪಾಯಿ ಎಂದು ಲೆಕ್ಕಹಾಕಿ ಹೇಳಿದ್ದಾರೆ.