IPL Auction 2024: ಜಸ್ಪ್ರೀತ್​ ಬೂಮ್ರಾಗೆ ಭಲೆ ಜೋಡಿ ಹುಡುಕಿದ ಮುಂಬೈ ಇಂಡಿಯನ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  Ipl Auction 2024: ಜಸ್ಪ್ರೀತ್​ ಬೂಮ್ರಾಗೆ ಭಲೆ ಜೋಡಿ ಹುಡುಕಿದ ಮುಂಬೈ ಇಂಡಿಯನ್ಸ್

IPL Auction 2024: ಜಸ್ಪ್ರೀತ್​ ಬೂಮ್ರಾಗೆ ಭಲೆ ಜೋಡಿ ಹುಡುಕಿದ ಮುಂಬೈ ಇಂಡಿಯನ್ಸ್

IPL auction 2024 Gerald Coetzee: ಐಪಿಎಲ್ ಮಿನಿ ಹರಾಜಿನಲ್ಲಿ ಜಸ್ಪ್ರೀತ್​ ಬುಮ್ರಾ ಅವರಿಗೆ ಮುಂಬೈ ಇಂಡಿಯನ್ಸ್ ಭಲೆ ಜೋಡಿಯನ್ನು ಹುಡುಕಿದೆ. ಸೌತ್ ಆಫ್ರಿಕಾದ ಗೆರಾಲ್ಡ್ ಕೊಯೆಟ್ಜಿ ಅವರನ್ನು 5 ಕೋಟಿಗೆ ಖರೀದಿಸಿದೆ.

ಜಸ್ಪ್ರೀತ್​ ಬೂಮ್ರಾಗೆ ಭಲೆ ಜೋಡಿ ಹುಡುಕಿದ ಮುಂಬೈ ಇಂಡಿಯನ್ಸ್
ಜಸ್ಪ್ರೀತ್​ ಬೂಮ್ರಾಗೆ ಭಲೆ ಜೋಡಿ ಹುಡುಕಿದ ಮುಂಬೈ ಇಂಡಿಯನ್ಸ್

ಟೀಮ್ ಇಂಡಿಯಾ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾಗೆ (Jasprit Bumrah) ಭಲೆ ಜೋಡಿಯನ್ನು ಮುಂಬೈ ಇಂಡಿಯನ್ಸ್ (Mumbai Indians) ಖರೀದಿಸಿದೆ. ಡಿಸೆಂಬರ್ 19ರಂದು ನಡೆದ ಐಪಿಎಲ್ ಹರಾಜಿನಲ್ಲಿ ದಕ್ಷಿಣ ಆಫ್ರಿಕಾ ವೇಗದ ಬೌಲರ್ ಗೆರಾಲ್ಡ್ ಕೊಯೆಟ್ಜಿ ಅವರಿಗೆ ಮುಂಬೈ 5 ಕೋಟಿ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಕೊಯೆಟ್ಜಿಗೆ ಇದು ಚೊಚ್ಚಲ ಐಪಿಎಲ್ ಆವೃತ್ತಿಯಾಗಿದೆ. ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿದ್ದ ಕೊಯೆಟ್ಜಿ, ಸೌತ್ ಆಫ್ರಿಕಾ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೆ, ತಂಡವನ್ನು ಸೆಮಿಫೈನಲ್​ಗೆ ಕೊಂಡೊಯ್ಯಲು ಪ್ರಮುಖ ಪಾತ್ರ ವಹಿಸಿದ್ದರು. ತಾನಾಡಿದ 8 ಪಂದ್ಯಗಳ ಪೈಕಿ 20 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು.

ಉತ್ತಮ ಬೌಲರ್​ಗೆ ಗಾಳ ಹಾಕಿದ ಮುಂಬೈ

ಮಧ್ಯಮ ಓವರ್​​ಗಳಲ್ಲಿ ತಂಡದ ಆಸ್ತಿಯಾಗಿದ್ದ ಗೆರಾಲ್ಡ್, ಏಕದಿನ ವಿಶ್ವಕಪ್​ನಲ್ಲಿ ಅಧಿಕ ವಿಕೆಟ್ ಪಡೆದ 5ನೇ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಗೆರಾಲ್ಡ್ ಈಗಾಗಲೇ ಎಸ್​ಎ20 ಮತ್ತು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕತ್ವದ ತಂಡವನ್ನು ಪ್ರತಿನಿಧಿಸುತ್ತಿರುವ ಕೊಯೆಟ್ಜಿ ಮುಂಬೈಗೆ ಸಿಕ್ಕ ಉತ್ತಮ ಬೌಲರ್.​

23 ವರ್ಷದ ವೇಗಿ ಇತ್ತೀಚೆಗೆ ಭಾರತ ವಿರುದ್ಧದ 2ನೇ ಟಿ20ಯಲ್ಲೂ ಪರಿಣಾಮಕಾರಿ ಬೌಲಿಂಗ್ ನಡೆಸಿದ್ದರು. 32 ರನ್ ನೀಡಿ 2 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಲಿಸ್ಟ್ ಎ ಕ್ರಿಕೆಟ್​ನಲ್ಲಿ ಕೊಯೆಟ್ಜಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇತ್ತೀಚೆಗೆ ಪಲ್ಲೆಕೆಲೆಯಲ್ಲಿ ನಡೆದ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಅವರು ದಕ್ಷಿಣ ಆಫ್ರಿಕಾ ಎ ಪರ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದರು.

7 ವಿಕೆಟ್‌ಗೆ 42 ರನ್​ ಗಳಿಸಿದ್ದ ಸಂದರ್ಭದಲ್ಲಿ ಕಣಕ್ಕಿಳಿದಿದ್ದ ಕೊಯೆಟ್ಜಿ, 89 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ನಿರ್ಣಾಯಕ ಇನ್ನಿಂಗ್ಸ್ ಕಟ್ಟಿದ್ದರು. ದಿಲ್ಶಾನ್ ಮಧುಶಂಕ, ದುನಿತ್ ವೆಲ್ಲಲಾಗೆ ಮತ್ತು ಲಕ್ಷಣ್ ಸಂಡಕನ್ ಒಳಗೊಂಡ ಸವಾಲಿನ ಬೌಲಿಂಗ್ ದಾಳಿಯ ವಿರುದ್ಧ ಈ ಗಮನಾರ್ಹ ಪ್ರದರ್ಶನವು ಬಂದಿತು.

ಬುಮ್ರಾಗೆ ಭಲೆ ಜೋಡಿ

ಮುಂಬೈ ಇಂಡಿಯನ್ಸ್​ ಬೌಲಿಂಗ್ ಅಸ್ತ್ರ ಜಸ್ಪ್ರೀತ್​ ಬುಮ್ರಾ. ಆದರೆ ಕಳೆದ ವರ್ಷ ಅವರಿಗೆ ಸಾಥ್ ನೀಡುವ ಬೌಲರ್​​ ಇರದ ಕಾರಣ ತಂಡದ ಬೌಲಿಂಗ್ ವಿಭಾಗ ಕಳಪೆಯಾಗಿತ್ತು. ಇದೀಗ ಕೊಯೆಟ್ಜಿ ಆಗಮನದಿಂದ ಮುಂಬೈ ಬೌಲಿಂಗ್ ಮತ್ತಷ್ಟು ಬಲಿಷ್ಠಗೊಂಡಿದೆ. ಈ ಭಲೆ ಜೋಡಿಯು ತಮ್ಮ ಎದುರಾಳಿಗಳನ್ನು ಕಟ್ಟಿಹಾಕಲು ಸಿದ್ಧಗೊಂಡಿದೆ.

ಹರಾಜಿನಲ್ಲಿ ಖರೀದಿಸಿದ ಆಟಗಾರರು

ಜೆರಾಲ್ಡ್ ಕೋಟ್ಜಿ (5 ಕೋಟಿ ರೂ), ದಿಲ್ಶನ್ ಮಧುಶಂಕ (4.60 ಕೋಟಿ ರೂ.), ಶ್ರೇಯಸ್ ಗೋಪಾಲ್ (20 ಲಕ್ಷ ರೂ.), ನುವಾನ್ ತುಷಾರ (4.80 ಕೋಟಿ ರೂ.), ನಮನ್ ಧೀರ್ (20 ಲಕ್ಷ ರೂ.), ಅನ್ಶುಲ್ ಕಾಂಬೋಜ್ (20 ಲಕ್ಷ ರೂ.), ಮೊಹಮ್ಮದ್ ನಬಿ (1.5 ಕೋಟಿ ರೂ), ಶಿವಾಲಿಕ್ ಶರ್ಮಾ (20 ಲಕ್ಷ ರೂ.).

ಮುಂಬೈ ಉಳಿಸಿಕೊಂಡಿದ್ದ ಆಟಗಾರರು

ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್ ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್ (ರೊಮಾರಿಯೋ ಶೆಫರ್ಡ್, ಎಲ್‌ಎಸ್‌ಜಿಯಿಂದ ಟ್ರೇಡ್), ಹಾರ್ದಿಕ್ ಪಾಂಡ್ಯ (ನಾಯಕ, ಗುಜರಾತ್​ನಿಂದ ಟ್ರೇಡ್)

Whats_app_banner