IPL Auction 2025: ಕ್ರಿಕೆಟ್ ಲೋಕದಲ್ಲಿ ಹೆಸರು ಮಾಡಿದರೂ ಐಪಿಎಲ್ ಹರಾಜಿನಲ್ಲಿ ಖರೀದಿಯಾಗದ ಅಗ್ರ ಆಟಗಾರರು ಇವರೇ
2025ರ ಐಪಿಎಲ್ ಹರಾಜು ಪ್ರಕ್ರಿಯೆ ಕೆಲ ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ್ದ ಕೆಲವೊಂದು ಆಟಗಾರರು ಯಾವುದೇ ತಂಡಕ್ಕೆ ಬೇಡವಾದರು. ಅನ್ ಸೋಲ್ಡ್ ಆಟಗಾರರ ಪಟ್ಟಿ ಇಲ್ಲಿದೆ. ಯಾಕೆ ಈ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಮುಂದೆ ಬರಲಿಲ್ಲ ಅನ್ನೋದಿಕ್ಕೆ ಏನೆಲ್ಲಾ ಕಾರಣಗಳು ಇರಬಹುದು ನೋಡಿ.
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ, ಟೀಂ ಇಂಡಿಯಾದ ಆಟಗಾರರು ದೊಡ್ಡ ಮಟ್ಟದ ಮೊತ್ತಕ್ಕೆ ಫ್ರಾಂಚೈಸಿಗಳ ಪಾಲಾಗಿದ್ದಾರೆ. ಕೆಲವು ಖ್ಯಾತ ಆಟಗಾರರು ಅನ್ ಸೋಲ್ಡ್ ಆಗಿದ್ದಾರೆ. ಫಿಟ್ನೆಸ್, ಫಾರ್ಮ್, ಸ್ಥಿರತೆಯ ಕಾರಣದಿಂದಾಗಿ ಫ್ರಾಂಚೈಸಿಗಳು ಹಲವು ಆಟಗಾರರನ್ನು ತಂಡಗಳಿಗೆ ಸೇರಿಸಿಕೊಳ್ಳಲು ಮನಸು ಮಾಡಲಿಲ್ಲ. ಕಡಿಮೆ ಬೆಲೆಗೆ ಬಂದರೂ ಅನ್ ಸೋಲ್ಡ್ ಆಗಿ ಉಳಿದಿದ್ದಾರೆ. ಭಾರತ ಹಾಗೂ ವಿದೇಶಿ ಆಟಗಾರರ ಪೈಕಿ ಯಾರೆಲ್ಲಾ ಅನ್ ಸೋಲ್ಡ್ ಆದರು, ಇದಕ್ಕೆ ಪ್ರಮುಖ ಕಾರಣಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಡೇವಿಡ್ ವಾರ್ನರ್: ಐಪಿಎಲ್ ಲೆಜೆಂಡರಿ ಎನಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ 2025ರ ಐಪಿಎಲ್ ಹರಾಜಿನಲ್ಲಿ ಯಾವ ತಂಡಕ್ಕೂ ಬೇಡವಾದರು. ಫಾರ್ಮ್ ಸಮಸ್ಯೆ ಜೊತೆಗೆ ವಯಸ್ಸಿನ ಕಾರಣ ಅವರನ್ನು ಯಾವುದೇ ತಂಡ ಖರೀದಿಗೆ ಮನಸು ಮಾಡಿಲ್ಲ ಎನ್ನಲಾಗಿದೆ. ಡೇವಿಡ್ ವಾರ್ನರ್ ಗೆ 2 ಕೋಟಿ ಮೂಲ ಬೆಲೆಯನ್ನು ನಿಗದಿ ಮಾಡಲಾಗಿತ್ತು.
ಶಾರ್ದೂಲ್ ಠಾಕೂರ್: ಟೀಂ ಇಂಡಿಯಾದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ 2 ಕೋಟಿ ರೂ.ಗೆ ಹರಾಜಿಗೆ ಬಂದಾಗ ಯಾರೂ ಅವರತ್ತ ಗಮನ ಹರಿಸಲಿಲ್ಲ. ಅನ್ ಸೋಲ್ಡ್ ಆಗಿ ಉಳಿದರು.
ಜಾನಿ ಬೈರ್ಸ್ಟೋ: ಇಂಗ್ಲೆಂಡ್ ನ ಸ್ಫೋಟಕ ಬ್ಯಾಟರ್ ಜಾನಿ ಬೈರ್ಸ್ಟೋ ಐಪಿಎಲ್ ಹರಾಜಿನಲ್ಲಿ ಖರೀದಿಯಾಗದೆ ಉಳಿದಿದ್ದಾರೆ. ಉತ್ತಮ ಪ್ರದರ್ಶನದ ಕೊರತೆ ಹಾಗೂ ಪದೇ ಪದೆ ಗಾಯಗೊಳ್ಳುತ್ತಿರುವುದು ಅನ್ ಸೋಲ್ಡ್ ಗೆ ಕಾರಣ ಇರಬಹುದು ಎನ್ನಲಾಗಿದೆ
ಕೇನ್ ವಿಲಿಯಮ್ಸನ್: ಟಿ20 ಕ್ರಿಕೆಟ್ ನಲ್ಲಿ ಅದ್ಭುತ ಬ್ಯಾಟಿಂಗ್ ದಾಖಲೆಗಳನ್ನು ಹೊಂದಿರುವ ಕೇನ್ ವಿಲಿಯಮ್ಸನ್ ಅನ್ ಸೋಲ್ಡ್ ಆಗಿ ಉಳಿದಿದ್ದಾರೆ. ಫ್ರಾಂಚೈಸಿಗಳನ್ನು ಮತ್ತಷ್ಟು ಅಗ್ರೆಸೀವ್ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಹಿರಿಯ ಬ್ಯಾಟರ್ ಕೇನ್ ವಿಲಿಯಮ್ಸನ್ ಅವರನ್ನು ಕೈ ಬಿಟ್ಟಿರಬಹುದು.
ಉಮೇಶ್ ಯಾದವ್: ಇತ್ತೀಚಿನ ಟಿ20 ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಉಮೇಶ್ ಯಾದವ್ ವಿಫಲವಾಗಿದ್ದಾರೆ. ಇದೇ ಕಾರಣಕ್ಕಾಗಿ ಅವರನ್ನು ಯಾವುದೇ ತಂಡ ಐಪಿಎಲ್ ಹರಾಜಿನಲ್ಲಿ ಖರೀದಿಸಿಲ್ಲ ಎನಿಸುತ್ತೆ. ಯುವಕರಿಗೆ ಆದ್ಯತೆ ನೀಡುವ ಸಲುವಾಗಿ ಹಿರಿಯ ಬೌಲರ್ ಖರೀದಿಗೆ ಮನಸ್ಸು ಮಾಡಿಲ್ಲ ಎನ್ನಲಾಗಿದೆ.
ಪೃಥ್ವಿ ಶಾ: ಐಪಿಎಲ್ ಹರಾಜಿನಲ್ಲಿ ಪೃಥ್ವಿ ಶಾ ಅವರನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ. ಆಟದಲ್ಲಿ ಸ್ಥಿರತೆ ಮತ್ತು ಫಿಟ್ನೆಸ್ ಕೊರತೆಯಿಂದಾಗಿ ಶಾಗೆ ಯಾರೂ ಮಣೆಹಾಕಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಮಯಾಂಕ್ ಅಗರ್ವಾಲ್: ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಯಾವ ತಂಡಕ್ಕೂ ಬೇಡವಾದರು. ಹಿಂದಿನ ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯಗಳಲ್ಲಿನ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲವಾದ ಕಾರಣ ಈ ಬಾರಿ ಯಾವ ತಂಡವೂ ಇವರನ್ನು ಖರೀದಿಸಲು ಮುಂದಾಗಲಿಲ್ಲ ಎನ್ನಲಾಗುತ್ತಿದೆ.
ಮುಸ್ತಾಫಿಜುರ್ ರೆಹಮಾನ್: ಹಿಂದಿನ ಪಂದ್ಯಗಳಲ್ಲಿ ಮುಸ್ತಾಫಿಜುರ್ ರೆಹಮಾನ್ ಹೇಳಿಕೊಳ್ಳುವಂತಹ ಪ್ರದರ್ಶನಗಳನ್ನು ನೀಡಿರಲಿಲ್ಲ. ಈ ಪೇಸರ್ ಭಾರತೀಯ ಪಿಚ್ ಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ರೆಹಮಾನ್ ಅವರನ್ನು ಯಾರು ಖರೀದಿ ಮಾಡಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಅಂಜಿಕ್ಯಾ ರಹಾನೆ ಅವರಿಗೆ ಮೂಲಕ ಬೆಲೆ 1.50 ಕೋಟಿ ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ ರಹಾನೆ ಖರೀದಿಗೂ ಯಾವ ಫ್ರಾಂಚೈಸಿ ಮನಸು ಮಾಡಲಿಲ್ಲ. ಅದೇ ರೀತಿಯಾಗಿದೆ ಸರ್ಫರಾಜ್ ಖಾನ್, ಫಿನ್ ಅಲೆನ್ , ಡೆವಾಲ್ಡ್ ಬ್ರೆವಿಸ್, ಪಾತುಮ್ ನಿಸ್ಸಾಂಕ ಸೇರಿದಂತೆ ಹಲವು ಆಟಗಾರರು ಮಾರಾಟವಾಗದೆ ಉಳಿದರು.