5 ವರ್ಷಕ್ಕೊಮ್ಮೆ ಐಪಿಎಲ್ ಮೆಗಾ ಹರಾಜು, 8 ಆರ್ಟಿಎಂ; ಬಿಸಿಸಿಐಗೆ ಹಲವು ಬೇಡಿಕೆಗಳನ್ನು ಮುಂದಿಟ್ಟ ಫ್ರಾಂಚೈಸಿಗಳು
IPL Mega Auction 2025: ಐಪಿಎಲ್ ಮೆಗಾ ಹರಾಜಿನ ಕುರಿತು ಚರ್ಚಿಸಲು ಬಿಸಿಸಿಐ ಜೊತೆ ಜುಲೈ ಅಂತ್ಯದಲ್ಲಿ ನಡೆಯುವ ಸಭೆಗೂ ಮುನ್ನ ಐಪಿಎಲ್ ಫ್ರಾಂಚೈಸಿಗಳ ತಮ್ಮ ಬೇಡಿಕೆಗಳನ್ನು ಸಲ್ಲಿಸಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೆಗಾ ಹರಾಜಿಗೆ (IPL Mega Auction 2025) ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಈ ವರ್ಷದ ಕೊನೆಯಲ್ಲಿ ಅಥವಾ ಜನವರಿ ಆರಂಭದಲ್ಲಿ ಆಕ್ಷನ್ ನಡೆಸುವ ಸಾಧ್ಯತೆ ಇದೆ. ಯಾರನ್ನು ಕೈಬಿಡಬೇಕು, ಉಳಿಸಿಕೊಳ್ಳಬೇಕು ಹರಾಜಿನಲ್ಲಿ ಯಾರನ್ನು ಖರೀದಿಸಬೇಕು ಎಂಬುದರ ಕುರಿತು ಹತ್ತೂ ಫ್ರಾಂಚೈಸಿಗಳು ಚರ್ಚೆಗಳು ನಡೆಸುತ್ತಿವೆ. 2022ರ ಮೆಗಾ ಹರಾಜಿನಂತೆ 2025ರ ಐಪಿಎಲ್ನಲ್ಲೂ ನಾಲ್ವರನ್ನು ರಿಟೇನ್ ಮಾಡಿಕೊಳ್ಳಲು ಅವಕಾಶ ಇದೆ ಎಂದು ಬಿಸಿಸಿಐ (BCCI) ಹೇಳಿತ್ತು.
ಇದೀಗ ಐಪಿಎಲ್ ಮೆಗಾ ಹರಾಜಿನ ಕುರಿತು ಚರ್ಚಿಸಲು ಜುಲೈ ಅಂತ್ಯದಲ್ಲಿ ಬಿಸಿಸಿಐ ಜೊತೆಗೆ ಸಭೆ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಫ್ರಾಂಚೈಸಿಗಳು ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಭೆಗೂ ಮುನ್ನವೇ ಬಿಸಿಸಿಐಗೆ ಸಲ್ಲಿಸಿವೆ. ಮೆಗಾ ಹರಾಜಿಗೆ ಮಾಡಬೇಕಾದ ಬದಲಾವಣೆಗಳ ಕುರಿತು ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಹಾಗಾಗಿ ಹರಾಜಿಗೂ ಮೊದಲು ಆಟಗಾರರ ರಿಟೇನ್, ಪರ್ಸ್ ಮೊತ್ತ ಮತ್ತು ಹರಾಜಿನ ಸ್ವರೂಪ-ನಿಯಮಗಳ ಬಗ್ಗೆ ಫ್ರಾಂಚೈಸಿಗಳ ಪಟ್ಟಿ ಸಲ್ಲಿಸಿವೆ. ಈ ಮಧ್ಯೆ, ವರದಿಯೊಂದು ಹೊರಬಿದ್ದಿದ್ದು, ಅದರಲ್ಲಿ ಫ್ರಾಂಚೈಸಿಗಳು ಮುಂದಿಟ್ಟಿರುವ ಬೇಡಿಕೆಗಳು ಬಹಿರಂಗಗೊಂಡಿವೆ.
ಮೂರು ವರ್ಷಕ್ಕಲ್ಲ, 5 ವರ್ಷಕ್ಕೊಮ್ಮೆ ಮೆಗಾ ಹರಾಜು
ಈ ಸಭೆಯಲ್ಲಿ ಫ್ರಾಂಚೈಸಿಯೊಂದರ ಅಧಿಕಾರಿ, ಐಪಿಎಲ್ ಹರಾಜುಗಳನ್ನು ಪ್ರತಿ ಮೂರು ವರ್ಷಕ್ಕೆ ನಡೆಸುವುದರ ಬದಲಿಗೆ ಐದು ವರ್ಷಗಳಿಗೊಮ್ಮೆ ಆಯೋಜಿಸಬೇಕು ಎಂದು ಸಲಹೆ ನೀಡಿದ್ದಾರೆ. ಅವರು ಹೀಗೆ ಪ್ರಮುಖ ಕಾರಣ ಇದೆ. ಇದು ಆಟಗಾರರಲ್ಲಿ ಹೂಡಿಕೆ ಮಾಡಲು ಮತ್ತು ಉತ್ತಮ ಮೂಲಸೌಕರ್ಯ ಒದಗಿಸಲು ಇದು ಅನುಕೂಲ ಮಾಡಿಕೊಡುತ್ತದೆ. ದೀರ್ಘ ಅಂತರದ ಕಾರಣ, ಯುವ ಆಟಗಾರರನ್ನು ಸಿದ್ಧಪಡಿಸಲು ತಂಡಗಳಿಗೆ ಸಮಯ ಸಿಗುತ್ತದೆ.
4 ರಿಂದ 6 ಆಟಗಾರರ ರಿಟೇನ್
ಪ್ರತಿ ಫ್ರಾಂಚೈಸಿಗೆ ಗರಿಷ್ಠ 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿದೆ ಎಂದು ಬಿಸಿಸಿಐ ಈ ಹಿಂದೆ ದೃಢಪಡಿಸಿತ್ತು. ಆದಾಗ್ಯೂ, ಕೆಲವು ತಂಡಗಳು ರಿಟೆನ್ಶನ್ ಸಂಖ್ಯೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿವೆ. ನಾಲ್ಕರ ಬದಲಿಗೆ ಎಂಟು ಆಟಗಾರರ ರಿಟೆನ್ಶನ್ಗೆ ಬೇಡಿಕೆ ಇಟ್ಟಿವೆ. ಇದಲ್ಲದೆ, 4 ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹಲವು ತಂಡಗಳು, ಬಿಸಿಸಿಐಗೆ ಸೂಚಿಸಿವೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. ಆದರೆ ಕೆಲವು ತಂಡಗಳು 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲು ಒತ್ತಾಯಿಸಿವೆ.
8 ಆರ್ಟಿಎಂ ಆಯ್ಕೆಗೆ ಒತ್ತಾಯ
ಫ್ರಾಂಚೈಸಿಗಳು ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಬೇಕು, ಅದು ಕೂಡ ನಾಯಕನಾಗಿರಬೇಕು. ಉಳಿದ ಆಟಗಾರರನ್ನು ಉಳಿಸಿಕೊಳ್ಳಲು ಆರ್ಟಿಎಂ ಅಂದರೆ ರೈಟ್ ಟು ಮ್ಯಾಚ್ ಆಯ್ಕೆಗೆ ಅನುಮತಿ ನೀಡಬೇಕು ಅವಕಾಶ ಕೊಡಬೇಕು. ಇದು ಫ್ರಾಂಚೈಸಿಗಳಿಗೆ ನೆರವಾಗಲಿದೆ ಎಂದು ಫ್ರಾಂಚೈಸಿಯೊಂದರ ಸಿಇಒ ಹೇಳಿದ್ದಾರೆ. 8 ಆರ್ಟಿಎಂ ಆಯ್ಕೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಆರ್ಟಿಎಂ ಅಂದರೆ ಪ್ಲೇಯರ್ಗಳನ್ನು ಆಯ್ಕೆ ಮಾಡಿ ಹರಾಜಿಗೆ ಬಿಡುವ ವಿಧಾನ ಇದಾಗಿದೆ.
ಉದಾಹರಣೆಗೆ ಆರ್ಸಿಬಿ ತಂಡವು, ವಿರಾಟ್ ಕೊಹ್ಲಿ ಅವರನ್ನು ಆರ್ಟಿಎಂನಲ್ಲಿ ಆಯ್ಕೆ ಮಾಡಿದೆ ಎಂದುಕೊಳ್ಳೋಣ. ಆದರೂ ಕೊಹ್ಲಿ ಹೆಸರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಅಲ್ಲದೆ, ಯಾವುದೇ ಫ್ರಾಂಚೈಸಿ ಎಷ್ಟು ಬೇಕಾದರೂ ಬಿಡ್ ಮಾಡಬಹುದು. ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಕೊಹ್ಲಿ 20 ಕೋಟಿಗೆ ಖರೀದಿಸಿದರೆ, ಅಷ್ಟೂ ಮೊತ್ತವನ್ನು ನಾವು ನೀಡುತ್ತೇವೆ ಎಂದು ಆರ್ಸಿಬಿ ತಂಡವೇ ವಿರಾಟ್ ಅವರನ್ನು ಉಳಿಸಿಕೊಳ್ಳಬಹುದು. ಇಂತಹ 8 ಆಯ್ಕೆಗಳಿಗೆ ಅವಕಾಶ ಕೊಡಲು ಫ್ರಾಂಚೈಸಿಗಳು ಬೇಡಿಕೆ ಇಟ್ಟಿವೆ.
