ಮಳೆಯಿಂದಾಗಿ ಐರ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯ ರದ್ದು;ಭಾರತಕ್ಕೆ 2-0 ಅಂತರದ ಸರಣಿ ಗೆಲುವು
ಕನ್ನಡ ಸುದ್ದಿ  /  ಕ್ರಿಕೆಟ್  /  ಮಳೆಯಿಂದಾಗಿ ಐರ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯ ರದ್ದು;ಭಾರತಕ್ಕೆ 2-0 ಅಂತರದ ಸರಣಿ ಗೆಲುವು

ಮಳೆಯಿಂದಾಗಿ ಐರ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯ ರದ್ದು;ಭಾರತಕ್ಕೆ 2-0 ಅಂತರದ ಸರಣಿ ಗೆಲುವು

Ireland vs India 3rd T20I: ಭಾರತ ಮತ್ತು ಐರ್ಲೆಂಡ್‌ ನಡುವಿನ ಮೂರನೇ ಟಿ20 ಪಂದ್ಯವು ಮಳೆಯಿಂದಾಗಿ ಒಂದೇ ಒಂದು ಎಸೆತ ಕಾಣದೆ ರದ್ದಾಗಿದೆ. ಹೀಗಾಗಿ ಭಾರತ ತಂಡವು ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

ಮೈದಾನದ ಪಿಚ್‌ ಪರಿಶೀಲನೆ ನಡೆಸುತ್ತಿರುವ ಅಂಪೈರ್‌ಗಳು
ಮೈದಾನದ ಪಿಚ್‌ ಪರಿಶೀಲನೆ ನಡೆಸುತ್ತಿರುವ ಅಂಪೈರ್‌ಗಳು (Twitter/cricketireland)

ಭಾರತ ಮತ್ತು ಐರ್ಲೆಂಡ್ (Ireland vs India) ನಡುವಿನ ಟಿ20 ಸರಣಿಯ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವು ಮಳೆ ಪಾಲಾಗಿದೆ. ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣದಿಂದಾಗಿ ಆರಂಭದಲ್ಲಿ ಟಾಸ್‌ ಪ್ರಕ್ರಿಯೆ ವಿಳಂಬ ಮಾಡಲಾಯ್ತು. ಆದರೆ ಸತತ ಮೂರು ಗಂಟೆಗಳ ಕಾಲ ಕಾದರೂ ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಟಾಸ್‌ ಪ್ರಕ್ರಿಯೆಯನ್ನೂ ನಡೆಸದೆ, ಒಂದೇ ಒಂದು ಎಸೆತವನ್ನೂ ಕಾಣದೆ ಪಂದ್ಯ ರದ್ದಾಗಿದೆ. ಹೀಗಾಗಿ ಭಾರತ ತಂಡವು ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಅತ್ತ, ಕೊನೆಯ ಪಂದ್ಯವನ್ನು ಗೆದ್ದು ಸರಣಿ ವೈಟ್‌ವಾಶ್‌ ತಪ್ಪಿಸಿಕೊಳ್ಳುವ ಐರ್ಲೆಂಡ್‌ ಪ್ರಯತ್ನಕ್ಕೆ ವರುಣ ಅಡ್ಡಿಪಡಿಸಿದ್ದಾನೆ. ಹೀಗಾಗಿ ಭಾರತವು ಸರಣಿ ಗೆಲುವಿನೊಂದಿಗೆ ತವರಿಗೆ ವಾಪಸಾಗಲಿದೆ.

ಮಳೆ ಅಡ್ಡಿಪಡಿಸಿದ ಕಾರಣದಿಂದಾಗಿ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಡಿಎಲ್‌ಎಸ್ ನಿಯಮದ ಪ್ರಕಾರ 2 ರನ್‌ಗಳ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲಿ ಭಾರತದ ಚೇಸಿಂಗ್‌ ವೇಳೆ ಮಳೆ ಬಂದ ಕಾರಣ, ಭಾರತದ ಇನ್ನಿಂಗ್ಸ್‌ ಅನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಆ ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಭಾರತವು 33 ರನ್‌ಗಳಿಂದ ರೋಚಕವಾಗಿ ಗೆದ್ದುಕೊಂಡಿತ್ತು.

ರುತುರಾಜ್ ಗಾಯಕ್ವಾಡ್ 58, ಸಂಜು ಸ್ಯಾಮ್ಸನ್ 26 ಎಸೆತಗಳಿಂದ 5 ಬೌಂಡರಿ ಹಾಗೂ 1 ಸಿಕ್ಸರ್ 40 ರನ್‌ಗಳ ಗಳಿಸಿದ್ದರು. ಶಿವಂ ದುಬೆ 22 ರನ್ ಗಳಿಸಿದರು. ಪಂದ್ಯದ ಮೂಲಕ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ರಿಂಕು ಸಿಂಗ್, ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು. 21 ಎಸೆತಗಳಿಂದ 2 ಬೌಂಡರಿ ಮೂರು ಸಿಕ್ಸರ್ ಸೇರಿ 38 ರನ್‌ ಗಳಿಸಿದ್ದರು.

ಅತ್ತ ಭಾರತದ ಚಂದ್ರಯಾನವು ಯಶಸ್ವಿಯಾಗಿದ್ದು, ಟೀಮ್‌ ಇಂಡಿಯಾ ಆಟಗಾರರು ಡಬ್ಲಿನ್‌ನಲ್ಲಿ ಈ ಸಂಭ್ರಮವನ್ನು ಆಚರಿಸಿದ್ದಾರೆ. ಇಸ್ರೋದ ಚಂದ್ರಯಾನ 3ರ ಸಾಫ್ಟ್ ಲ್ಯಾಂಡಿಂಗ್ ನಿರೀಕ್ಷೆಯಂತೆ ಯಶಸ್ವಿಯಾಗಿ ನಡೆದಿದೆ. ಲ್ಯಾಂಡರ್ ಮಾಡ್ಯೂಲ್ ನಿಧಾನವಾಗಿ ಇಳಿದು ಚಂದ್ರನ ನೆಲವನ್ನು ಸ್ಪರ್ಶಿಸಿದೆ. ಸಂಪೂರ್ಣ ಜಗತ್ತೇ ಕುತೂಹಲದಿಂದ ಈ ಕ್ಷಣಕ್ಕಾಗಿ ಕಾಯುತ್ತಿತ್ತು. ಇದೇ ವೇಳೆ ಐರ್ಲೆಂಡ್‌ನಲ್ಲಿರುವ ಭಾರತ ಕ್ರಿಕೆಟ್‌ ತಂಡದ ಆಟಗಾರರು ಕೂಡಾ ಸಾಫ್ಟ್‌ ಲ್ಯಾಂಡಿಂಗ್‌ನ ನೇರಪ್ರಸಾರವನ್ನು ಕಣ್ತುಂಬಿಕೊಂಡಿದ್ದಾರೆ.

Whats_app_banner