Ireland vs India: ಮಳೆಯಿಂದಾಗಿ ಭಾರತ vs ಐರ್ಲೆಂಡ್ 3ನೇ ಟಿ20 ಟಾಸ್ ಪ್ರಕ್ರಿಯೆ ವಿಳಂಬ
Ireland vs India 3rd T20I: ಮಳೆಯಿಂದಾಗಿ ಭಾರತ ಮತ್ತು ಐರ್ಲೆಂಡ್ ನಡುವಣ ಮೂರನೇ ಪಂದ್ಯದ ಟಾಸ್ ಪ್ರಕ್ರಿಯೆ ವಿಳಂಬವಾಗಿದ್ದು, ಪಂದ್ಯ ಕೂಡಾ ತಡವಾಗಿ ಆರಂಭವಾಗಲಿದೆ.
ಭಾರತ ಮತ್ತು ಐರ್ಲೆಂಡ್ (Ireland vs India) ನಡುವಿನ ಟಿ20 ಸರಣಿಯ ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ಡಬ್ಲಿನ್‌ನಲ್ಲಿ ನಡೆಯುತ್ತಿದ್ದು, ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಟಾಸ್ ಪ್ರಕ್ರಿಯೆ ವಿಳಂಬವಾಗಿದೆ.
ಅತ್ತ ಭಾರತದ ಚಂದ್ರಯಾನವು ಯಶಸ್ವಿಯಾಗಿದ್ದು, ಟೀಮ್ ಇಂಡಿಯಾ ಆಟಗಾರರು ಡಬ್ಲಿನ್‌ನಲ್ಲಿ ಈ ಸಂಭ್ರಮವನ್ನು ಆಚರಿಸಿದ್ದಾರೆ. ಇಸ್ರೋದ ಚಂದ್ರಯಾನ 3ರ ಸಾಫ್ಟ್ ಲ್ಯಾಂಡಿಂಗ್ ನಿರೀಕ್ಷೆಯಂತೆ ಯಶಸ್ವಿಯಾಗಿ ನಡೆದಿದೆ. ಲ್ಯಾಂಡರ್ ಮಾಡ್ಯೂಲ್ ನಿಧಾನವಾಗಿ ಇಳಿದು ಚಂದ್ರನ ನೆಲವನ್ನು ಸ್ಪರ್ಶಿಸಿದೆ. ಸಂಪೂರ್ಣ ಜಗತ್ತೇ ಕುತೂಹಲದಿಂದ ಈ ಕ್ಷಣಕ್ಕಾಗಿ ಕಾಯುತ್ತಿತ್ತು. ಇದೇ ವೇಳೆ ಐರ್ಲೆಂಡ್‌ನಲ್ಲಿರುವ ಭಾರತ ಕ್ರಿಕೆಟ್ ತಂಡದ ಆಟಗಾರರು ಕೂಡಾ ಸಾಫ್ಟ್ ಲ್ಯಾಂಡಿಂಗ್‌ನ ನೇರಪ್ರಸಾರವನ್ನು ಕಣ್ತುಂಬಿಕೊಂಡಿದ್ದಾರೆ.
ಮಳೆಯಿಂದಾಗಿ ಮೂರನೇ ಪಂದ್ಯದ ಟಾಸ್ ಪ್ರಕ್ರಿಯೆ ವಿಳಂಬವಾಗಿದ್ದು, ಪಂದ್ಯ ಕೂಡಾ ತಡವಾಗಿ ಆರಂಭವಾಗಲಿದೆ. ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡವು ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಇದೀಗ ಇಂದಿನ ಪಂದ್ಯವನ್ನು ಕೂಡಾ ಗೆದ್ದು ಸರಣಿ ಕ್ಲೀನ್‌ಸ್ವೀಪ್ ಮಾಡಲು ಭಾರತ ಹೋರಾಡಲಿದೆ.
ಮಳೆ ಅಡ್ಡಿಪಡಿಸಿದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಡಿಎಲ್‌ಎಸ್ ನಿಯಮದ ಪ್ರಕಾರ 2 ರನ್‌ಗಳ ಗೆಲುವು ಸಾಧಿಸಿತ್ತು. ಆ ಬಳಿಕ ನಡೆದ ಎರಡನೇ ಪಂದ್ಯದಲ್ಲಿ 33 ರನ್‌ಗಳಿಂದ ರೋಚಕವಾಗಿ ಗೆದ್ದುಕೊಂಡಿತ್ತು. ಪಂದ್ಯದ ಮೂಲಕ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ರಿಂಕು ಸಿಂಗ್, ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು. 21 ಎಸೆತಗಳಿಂದ 2 ಬೌಂಡರಿ ಮೂರು ಸಿಕ್ಸರ್ ಸೇರಿ 38 ರನ್ ಗಳಿಸಿದರು. ರುತುರಾಜ್ ಗಾಯಕ್ವಾಡ್ 58, ಸಂಜು ಸ್ಯಾಮ್ಸನ್ 26 ಎಸೆತಗಳಿಂದ 5 ಬೌಂಡರಿ ಹಾಗೂ 1 ಸಿಕ್ಸರ್ 40 ರನ್‌ಗಳ ಗಳಿಸಿದ್ದರು. ಶಿವಂ ದುಬೆ 22 ರನ್ ಗಳಿಸಿದರು.
ಮತ್ತೊಂದೆಡೆ ಸತತವಾಗಿ ಎರಡು ಪಂದ್ಯಗಳನ್ನು ಸೋತಿರುವ ಐರ್ಲೆಂಡ್ ಇವತ್ತಿನ ಪಂದ್ಯವನ್ನು ಗೆದ್ದು ಕ್ಲೀನ್‌ಸ್ವೀಪ್‌ನಿಂದ ಪಾರಾಗಲು ತಂತ್ರಗಳನ್ನು ರೂಪಿಸುತ್ತಿದೆ. ಅದು ಎಷ್ಟರ ಮಟ್ಟಿಗೆ ಫಲಿಸಲಿದೆ ಎಂಬುದನ್ನು ಕಾದು ನೋಡಬೇಕು.
ಭಾರತ ಸಂಭಾವ್ಯ ತಂಡ
ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ (ನಾಯಕ), ರವಿ ಬಿಷ್ಣೋಯ್, ಮುಕೇಶ್ ಕುಮಾರ್, ಶಹಬಾಜ್ ಅಹ್ಮದ್, ಜಿತೇಶ್ ಶರ್ಮಾ ಮತ್ತು ಅವೇಶ್ ಖಾನ್,
ಐರ್ಲೆಂಡ್ ಸಂಭಾವ್ಯ ತಂಡ
ಪೌಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್ (ವಿಕೆಟ್ ಕೀಪರ್) ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶ್ವಾ ಲಿಟಲ್, ಬೆಂಬಮಿನ್ ವೈಟ್, ಗರೆಥ್ ಡೆಲಾನಿ, ಫಿಯಾನ್ ಹ್ಯಾಂಡ್, ರಾಸ್ ಅಡೈರ್, ಥಿಯೋ ವ್ಯಾನ್ ವೋರ್ಕಾಮ್