ಫಿಕ್ಸರ್ ಎಂದು ಕೂಗಿದ ಪ್ರೇಕ್ಷಕರು; ಕೆಣಕಿದ ಫ್ಯಾನ್ಸ್ ಜತೆ ಜಗಳಕ್ಕಿಳಿದು ‘ಇದೇನಾ ನಿಮ್ಮನೇಲಿ ಕಲ್ತಿದ್ದು’ ಎಂದ ಅಮೀರ್
Mohammad Amir : ಮೈದಾನಕ್ಕೆ ಹೋಗುತ್ತಿದ್ದ ಅವಧಿಯಲ್ಲಿ ಫಿಕ್ಸರ್.. ಫಿಕ್ಸರ್ ಎಂದು ಕೂಗುತ್ತಿದ್ದ ಪ್ರೇಕ್ಷಕನ ಜೊತೆ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಮಾತಿನ ಚಕಮಕಿ ನಡೆಸಿದ್ದಾರೆ.
ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ 2024ರ ಪಾಕಿಸ್ತಾನ್ ಸೂಪರ್ ಲೀಗ್ನ ಲಾಹೋರ್ ಖಲಂದರ್ಸ್ ವಿರುದ್ಧದ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಬೌಲರ್ ಹಾಗೂ ಪಾಕ್ ಮಾಜಿ ಬೌಲರ್ ಮೊಹಮ್ಮದ್ ಅಮೀರ್ (Mohammad Amir), ಅಭಿಮಾನಿಗಳ ಜತೆ ವಾಗ್ವಾದ ನಡೆಸಿದ್ದಾರೆ. ಕೆಣಕಿದ ಫ್ಯಾನ್ಸ್ ಜತೆ ಜಗಳಕ್ಕಿಳಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಮೀರ್ ಮೈದಾನಕ್ಕೆ ತೆರಳುತ್ತಿದ್ದಾಗ ಪ್ರೇಕ್ಷಕರ ಒಂದು ವಿಭಾಗವು ಫಿಕ್ಸರ್.. ಫಿಕ್ಸರ್.. ಎಂದು ಘೋಷಣೆಗಳನ್ನು ಕೂಗಿದರು. 2010ರಲ್ಲಿ ಕ್ರಿಕೆಟಿಗನನ್ನು ಇಕ್ಕಟ್ಟಿಗೆ ಸಿಲುಕಿಸಿದ ಸ್ಪಾಟ್ ಫಿಕ್ಸಿಂಗ್ ಹಗರಣವನ್ನು ಉಲ್ಲೇಖಿಸಿದ ಪ್ರೇಕ್ಷಕರು ಫಿಕ್ಸರ್.. ಫಿಕ್ಸರ್ ಎಂದು ಕೂಗಿದ್ದಾರೆ. ಪ್ರೇಕ್ಷಕರ ವರ್ತನೆಯು ಮೊಹಮ್ಮದ್ ಅಮೀರ್‌ಗೆ ಸರಿ ಎನಿಸಲಿಲ್ಲ. ಇದು ಮಾತಿನ ಚಕಮಕಿಗೆ ಕಾರಣವಾಯಿತು.
ಇದೇನಾ ಕಲಿಯೋದು ಎಂದ ಅಮೀರ್
ಅಭಿಮಾನಿಗಳೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದ ಅಮೀರ್, "ಘರ್ ಸೆ ಯೇಹಿ ಸೀಖ್ ಕೆ ಆತೇ ಹೋ" (ನಿಮ್ಮ ಮನೆಯಲ್ಲಿ ಇದನ್ನೇನಾ ಕಲಿಯೋದು) ಎಂದು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. 2010ರಲ್ಲಿ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಇಂಗ್ಲೆಂಡ್ - ಪಾಕಿಸ್ತಾನದ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಒಳಗಾದ ನಂತರ 5 ವರ್ಷಗಳ ಕಾಲ ಅವರನ್ನು ನಿಷೇಧಿಸಲಾಯಿತು.
ಫಿಕ್ಸಿಂಗ್ನಲ್ಲಿ ಮೂವರು ಭಾಗಿ
ಅಮೀರ್ ಜೊತೆಗೆ ಆಟಗಾರರಾದ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಅವರು ಸಹ ಫಿಕ್ಸಿಂಗ್ ಆರೋಪದಲ್ಲಿ ಭಾಗಿಯಾಗಿದ್ದರು. ಅವರನ್ನು ಸಹ ನಿಷೇಧ ಮಾಡಲಾಯಿತು. ಈ ಮೂವರು ನಿರ್ದಿಷ್ಟ ಆನ್-ಫೀಲ್ಡ್ ಕ್ರಮಗಳನ್ನು ಕೈಗೊಳ್ಳಲು ಬುಕ್ಕಿಯಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಉದ್ದೇಶಪೂರ್ವಕವಾಗಿ ನೋ-ಬಾಲ್‌ಗಳನ್ನು ಹಾಕಲಾಗಿತ್ತು.
ಇಡೀ ಘಟನೆಯು ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿತ್ತು. ಮೈದಾನದಲ್ಲಿ ವ್ಯವಸ್ಥಿತವಾಗಿ ನೈತಿಕ ನಡವಳಿಕೆಯ ಉಲ್ಲಂಘನೆಯ ಪ್ರಕರಣವನ್ನು ಎತ್ತಿ ತೋರಿಸಿತ್ತು. ಅಮೀರ್ 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನವನ್ನು ಮಾಡಿದರೂ, ಬಟ್ ಮತ್ತು ಆಸಿಫ್ ಅದೇ ಮಟ್ಟದಲ್ಲಿ ಆಡಲು ಹಿಂತಿರುಗಲು ಸಾಧ್ಯವಾಗಲಿಲ್ಲ.
2016ರಲ್ಲಿ ಕಂಬ್ಯಾಕ್ ಮಾಡಿದ್ದ ಅಮೀರ್
ಸ್ಪಾಟ್ ಫಿಕ್ಸಿಂಗ್ ಆರೋಪ ಹೊತ್ತಿದ್ದ ಅಮೀರ್, 5 ವರ್ಷಗಳ ಬಳಿಕ 2016ರಲ್ಲಿ ತಂಡಕ್ಕೆ ಕಂಬ್ಯಾಕ್ ಮಾಡಿದ್ದರು. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರನ್ನು ಔಟ್ ಮಾಡಿದ್ದ ಅಮೀರ್, ಪಿಸಿಬಿ ಅಧಿಕಾರಿಗಳೊಂದಿಗಿನ ಸಂಘರ್ಷದ ನಂತರ 2020ರ ಡಿಸೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ಅಂದು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 3-1 ರಿಂದ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು. ಆಗಿನ ಪಾಕಿಸ್ತಾನದ ನಾಯಕ ಸಲ್ಮಾನ್ ಬಟ್ ಬುಕ್ಕಿ ಮಝರ್ ಮಜೀದ್ ಜೊತೆ ಸಂಪರ್ಕ ಹೊಂದಿದ್ದ ಆಡಿಯೋ ಟೇಪ್‌ಗಳು ಸಿಕ್ಕಿದ್ದವು. ಪಾಕ್ ಪರ 36 ಟೆಸ್ಟ್, 61 ಏಕದಿನ ಹಾಗೂ 50 ಟಿ20 ಪಂದ್ಯಗಳನ್ನಾಡಿರುವ ಅಮೀರ್, ಒಟ್ಟು 259 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ.