ಕಾಲ ಬಳಿಯೇ ಇದ್ದ ಚೆಂಡು ಹುಡುಕಲು ಒದ್ದಾಡಿದ ಇಶಾನ್ ಕಿಶನ್; ಫೀಲ್ಡಿಂಗ್ ಪರಿ ನೋಡಿ ತಲೆ ಕೆರೆದುಕೊಂಡ ಕಮಿನ್ಸ್ -Video
ಐಪಿಎಲ್ 2025: ಇಶಾನ್ ಕಿಶನ್ ಫೀಲ್ಡಿಂಗ್ ನೋಡಿ, ಎಸ್‌ಆರ್‌ಎಚ್ ನಾಯಕ ಪ್ಯಾಟ್ ಕಮಿನ್ಸ್ ತಲೆ ಕೆರೆದುಕೊಂಡಿದ್ದಾರೆ. ಕಾಲ ಬಳಿಯೇ ಚೆಂಡು ಬಿದ್ದಿದ್ದರೂ, ಅದನ್ನು ಹುಡುಕಲು ಕಿಶನ್ ತಡಬಡಾಯಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ (ಏಪ್ರಿಲ್ 12) ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad vs Punjab Kings) ತಂಡಗಳ ನಡುವೆ ಐಪಿಎಲ್ (IPL 2025) ಪಂದ್ಯ ನಡೆಯುತ್ತಿದೆ. ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಎಸ್‌ಆರ್‌ಎಚ್ ತಂಡದ ಆಟಗಾರ ಇಶಾನ್ ಕಿಶನ್, ಚೆಂಡು ಹುಡುಕಿದ ಪರಿಗೆ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಲೆ ಕೆರೆದುಕೊಳ್ಳುವಂತಾಗಿದೆ. ವಿಲಕ್ಷಣ ಫೀಲ್ಡಿಂಗ್‌ನಿಂದ ಖುದ್ದು ಇಶಾನ್ ಕಿಶನ್ ಅವರಿಗೂ ಮುಜುಗರವಾಗಿದೆ.
ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ ಅವರು, ಮೊದಲ ಓವರ್‌ನ ಎರಡನೇ ಎಸೆತವನ್ನು ಡ್ರೈವ್ ಮಾಡಿದರು. ಈ ವೇಳೆ ಇಶಾನ್ ಕಿಶನ್ ಅವರತ್ತ ಚೆಂಡು ಬಂತು. ಕಿಶನ್ ಕಳಪೆ ಫೀಲ್ಡಿಂಗ್‌ನಿಂದಾಗಿ ಚೆಂಡು ಹಿಡಿಯಲು ಅವರಿಂದ ಸಾಧ್ಯವಾಗಲಿಲ್ಲ. ಮೊದಲ ಪ್ರಯತ್ನವದಲ್ಲಿ ಅವರ ಕೈಗೆ ಚೆಂಡು ಸಿಗಲಿಲ್ಲ. ಒಂದು ರೋಲ್ ಆಗಿ ಎದ್ದ ಕಿಶನ್, ಚೆಂಡನ್ನು ಹುಡುಕಲು ಮುಂದಾದರು. ಹಾಗಂತಾ ಚೆಂಡೇನೂ ಬೌಂಡರಿ ಲೈನ್ ಗಡಿ ದಾಟಿರಲಿಲ್ಲ. ಮೈದಾನದಲ್ಲೇ ಬಿದ್ದ ಚೆಂಡು ಕಿಶನ್ ಕಣ್ಣಿಗೆ ಕಾಣಿಸಲಿಲ್ಲ. ತಾನು ನಿಂತ ನಾಲ್ಕೂ ದಿಕ್ಕುಗಳಿಗೂ ಕಣ್ಣಾಡಿಸಿ ತರಾತುರಿಯಿಂದ ಚೆಂಡು ಹುಡುಕಲು ಮುಂದಾದರು. ತನ್ನ ಪಕ್ಕದಲ್ಲಿಯೇ ಚೆಂಡು ಇದ್ದರೂ, ಅವರಿಗೆ ಸಿಗಲೇ ಇಲ್ಲ.
ಈ ವೇಳೆ ಎಸ್‌ಆರ್‌ಎಚ್ ನಾಯಕ ಪ್ಯಾಟ್ ಕಮಿನ್ಸ್ ಬಂದು ಚೆಂಡನ್ನು ಎತ್ತಿಕೊಂಡು ಕೀಪರ್ ಹೆನ್ರಿಚ್ ಕ್ಲಾಸೆನ್ ಕಡೆಗೆ ಎಸೆಯಬೇಕಾಯಿತು. ಕಿಶನ್ ಚೆಂಡು ಹುಡುಕಿದ ಪರಿ ನೋಡಿ ಸನ್‌ರೈಸರ್ಸ್ ಹೈದರಾಬಾದ್ ನಾಯಕನಿಗೆ ಸರಿ ಅನಿಸಲಿಲ್ಲ. ಅವರು ತಮ್ಮ ಕೈಸನ್ನೆ ಮೂಲಕ ಕಿಶನ್ ಪ್ರಯತ್ನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿದೆ ವಿಡಿಯೋ
ಕಿಶನ್‌ಗೆ ಚೆಂಡು ಸಿಗದಿರಲು ಕಾರಣವೂ ಇದೆ. ಮೈದಾನದಲ್ಲಿ ಅಲ್ಲಲ್ಲಿ ಜಾಹೀರಾತು ಬರಹ ಹಾಗೂ ಚಿತ್ರಗಳಿರುತ್ತವೆ. ಕೆಲವು ಟೂರ್ನಿಗಳ ಸಮಯದಲ್ಲಿ ಗ್ರಾಫಿಕ್ಸ್ ಮೂಲಕ ಜಾಹೀರಾತು ಪ್ರದರ್ಶಿಸುವುದರಿಂದಾಗಿ ಮೈದಾನದಲ್ಲಿ ಯಾವುದೇ ಅಡೆತಡೆಗಳಿರುವುದಿಲ್ಲ. ಆದರೆ ಈ ಪಂದ್ಯದ ಸಮಯದಲ್ಲಿ ಕಿಶನ್ ಫೀಲ್ಡಿಂಗ್ ಮಾಡುತ್ತಿದ್ದ ಸ್ಥಳದಲ್ಲೇ ಬಿಳಿ ಬಣ್ಣದ ಜಾಹೀರಾತು ಇತ್ತು. ಅದರ ಮೇಲೆ ಚೆಂಡು ನಿಂತಿದ್ದರಿಂದ, ತಕ್ಷಣಕ್ಕೆ ಗುರುತಿಸಲು ಕಿಶನ್ ಅವರಿಂದ ಸಾಧ್ಯವಾಗಲಿಲ್ಲ. ಚೆಂಡು ಹಾಗೂ ಜಾಹೀರಾತು ಬಣ್ಣ ಒಂದೇ ಆಗಿತ್ತು. ಹೀಗಾಗಿ ಚೆಂಡು ಹುಡುಕಲು ತಡಬಡಾಯಿಸಿದರು.
ಈ ನಾಟಕೀಯ ಬೆಳವಣಿಗೆ ಅಲ್ಲಿಗೆ ನಿಲ್ಲಲಿಲ್ಲ. ಬ್ಯಾಟಿಂಗ್ ಮಾಡುತ್ತಿದ್ದ ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ಆ ಎಸೆತದಲ್ಲಿ ಒಂದು ರನ್ ಓಡುವವರಿದ್ದರು. ಆದರೆ, ಕಿಶನ್ ಮಿಸ್‌ಫೀಲ್ಡ್ ಮಾಡಿದ್ದರಿಂದ ಇನ್ನೊಂದು ಹೆಚ್ಚುವರಿ ರನ್ ಓಡಲು ಪ್ರಯತ್ನಿಸಿದರು. ಆದರೆ, ಅಂಪೈರ್ ಶಾರ್ಟ್ ರನ್ ಸಂಕೇತ ನೀಡಿದರು. ಏಕೆಂದರೆ ಒಬ್ಬ ಬ್ಯಾಟರ್ ಎರಡನೇ ರನ್ ಓಡುವ ಭರದಲ್ಲಿ ಪಾಪಿಂಗ್ ಕ್ರೀಸ್‌ಗೆ ಬ್ಯಾಟ್ ಮುಟ್ಟಿಸಿರಲಿಲ್ಲ. ಹೀಗಾಗಿ ಪಂಜಾಬ್ ಕಿಂಗ್ಸ್ ಅಂತಿಮವಾಗಿ ಒಂದು ರನ್ ಮಾತ್ರ ಗಳಿಸಿತು.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಮಾರ್ಕೊ ಜಾನ್ಸೆನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಲಾಕಿ ಫರ್ಗುಸನ್.
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್
ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜೀಶನ್ ಅನ್ಸಾರಿ, ಮೊಹಮ್ಮದ್ ಶಮಿ, ಇಶಾನ್ ಮಾಲಿಂಗ.
