ಬಿಸಿಸಿಐ, ದ್ರಾವಿಡ್ ಮುಖಕ್ಕೆ ಕಪಾಳಮೋಕ್ಷ ಮಾಡಿದಂತಿದೆ ಈ ಶತಕ; ಇಶಾನ್ ಕಿಶನ್ ತಾತನ ಅತಿರೇಕದ ಹೇಳಿಕೆಗೆ ಆಕ್ರೋಶ
ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಿಡಿಸಿದ ಶತಕ ಬಿಸಿಸಿಐ, ರಾಹುಲ್ ದ್ರಾವಿಡ್ ಮುಖಕ್ಕೆ ಕಪಾಳಮೋಕ್ಷ ಮಾಡಿದಂತಿದೆ ಎಂದು ಇಶಾನ್ ಕಿಶನ್ ತಾತನ ಅತಿರೇಕದ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.

ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಬಿರುಗಾಳಿಯ ಶತಕ ಗಳಿಸಿದ ಇಶಾನ್ ಕಿಶನ್ ಮತ್ತೆ ಭಾರತ ತಂಡಕ್ಕೆ ಮರಳುವ ಭರವಸೆ ಮೂಡಿಸಿದ್ದಾರೆ. 2023ರಿಂದ ಭಾರತ ತಂಡದಿಂದ ದೂರ ಉಳಿದಿರುವ ಇಶಾನ್, ಬಿಸಿಸಿಐ ವಾರ್ಷಿಕ ಒಪ್ಪಂದಲ್ಲೂ ಅವಕಾಶ ಪಡೆಯುವ ನಿರೀಕ್ಷೆ ಇದೆ. ಆರ್ಆರ್ ಬೌಲರ್ಗಳ ವಿರುದ್ಧ ದಂಡಯಾತ್ರೆ ನಡೆಸಿದ ಇಶಾನ್, ಕೇವಲ 45 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆಯೊಂದನ್ನು ಬರೆದರು. ಇದು ವೇಗದ ಶತಕವೂ ಹೌದು.
ಇದೆಲ್ಲದರ ಮಧ್ಯೆ, ಕಿಶನ್ ಅವರ ಅಜ್ಜ, 'ಮಾಜಿ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಅನ್ನು ಟೀಕಿಸಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಬಿಹಾರದ ಔರಂಗಾಬಾದ್‌ನಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಇಶಾನ್ ಅವರ ಅಜ್ಜ ರಾಮುಗ್ರ ಪಾಂಡೆ ತನ್ನ ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದಾರೆ. 'ನನ್ನ ಮೊಮ್ಮಗನ ಶತಕವು ಬಿಸಿಸಿಐ ಮತ್ತು ರಾಹುಲ್ ದ್ರಾವಿಡ್‌ಗೆ ಬಲವಾಗಿ ಮುಖಕ್ಕೆ ಹೊಡೆದಂತೆ ಆಗಿದೆ ಎಂದು ಕಿಡಿಕಾರಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವಿವಾದ ಕಿಡಿ ಹೊತ್ತಿಸಿದೆ. ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಇಶಾನ್ ತಂದೆ ಪ್ರಣವ್ ಪಾಂಡೆ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಜಾಗರಣ್ ವರದಿ ಮಾಡಿದೆ.
'ಬಿಸಿಸಿಐ ನಿಯಮಗಳು ಮತ್ತು ನಿಯಮಗಳ ಪ್ರಕಾರ ನಡೆಯುತ್ತದೆ, ನಾವು ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಹೇಳುವ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಇಶಾನ್ ಅಜ್ಜ ನೀಡಿದ ಹೇಳಿಕೆಯು ಇಂಟರ್ನೆಟ್ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇಶಾನ್ ಕಿಶನ್ 2023ರ ನಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಬಿಸಿಸಿಐ ಆದೇಶ ಉಲ್ಲಂಘಿಸಿ ದೇಶೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ಹಾಗಾಗಿ, ಅವರನ್ನು ಕೇಂದ್ರೀಯ ಒಪ್ಪಂದದಿಂದ ಕೈಬಿಡಲಾಗಿತ್ತು.
ಕಿಶನ್ ತಾತ ಹೇಳಿದ್ದೇನು?
ಐಪಿಎಲ್ನಲ್ಲಿ ಸೆಂಚುರಿ ಬಾರಿಸುತ್ತಿದ್ದಂತೆ ಇಶಾನ್ಗೆ ನಾನು ಕರೆ ಮಾಡಿದ್ದೆ. ಬಿಸಿಸಿಐ ಮತ್ತು ರಾಹುಲ್ ದ್ರಾವಿಡ್‌ಗೆ ಇದು ಕಪಾಳ ಮೋಕ್ಷ ಮಾಡಿದಂತಿದೆ ಎಂದು ಹೇಳಿದ್ದೆ. ಇವರು ಒಂದು ವರ್ಷದಿಂದ ಭಾರತ ತಂಡದಿಂದ ಕೈಬಿಟ್ಟಿದ್ದಾರೆ. ಇದೇ ಮಾತನ್ನೇ ಇಶಾನ್ ತಾಯಿಗೂ ಹೇಳಿದೆ. ನಿನ್ನ ಮಗ ರಾಹುಲ್ಗೆ ಮುಟ್ಟಿನೋಡಿಕೊಳ್ಳುವಂತೆ ಹೊಡೆದಿದ್ದಾನೆ ಎಂದು ಹೇಳಿದೆ. ಅದಕ್ಕೆ ಅವರು ಯಾವ ರಾಹುಲ್ ಎಂದು ಕೇಳಿದರು. ಅವರೇ 'ರಾಹುಲ್ ದ್ರಾವಿಡ್. ಸದ್ಯ ರಾಜಸ್ಥಾನ್ ರಾಯಲ್ಸ್ ಕೋಚ್ ಅಂದೆ. ಇಶಾನ್ ಆಡುತ್ತಿದ್ದರೆ ದ್ರಾವಿಡ್ ಮುಖ ನೋಡಬೇಕಿತ್ತು, ದುಃಖದ ಮುಖದೊಂದಿಗೆ ಕುಳಿತಿದ್ದರು ಎಂದು ರಾಮುಗ್ರ ಹೇಳಿದ್ದಾರೆ.
ಪ್ರಣವ್ ಪಾಂಡೆ ಹೇಳಿದ್ದೇನು?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರೂಪಿಸಿರುವ ನೀತಿ-ನಿಯಮಗಳನ್ನು ಎಲ್ಲಾ ಆಟಗಾರರೂ ಗೌರವಿಸಬೇಕು ಮತ್ತು ಪಾಲಿಸಬೇಕು. ಆದರೆ ಇಶಾನ್ ಅವುಗಳನ್ನು ಪಾಲಿಸಿಲ್ಲ ಎನಿಸುತ್ತದೆ. ಭಾರತ ತಂಡದಿಂದ ಹೊರಗುಳಿದ ಬಳಿಕ ಇಶಾನ್ ತುಂಬಾ ಕಷ್ಟದ ದಿನಗಳನ್ನು ಎದುರಿಸಿದ. ಇದೀಗ ಆತನ ಐಪಿಎಲ್ ಶತಕ, ಆತ್ಮವಿಶ್ವಾಸ ಹೆಚ್ಚಿಸಿದೆ. ಇದಿನ್ನು ಆರಂಭ ಅಷ್ಟೆ. ಇನ್ನು 13 ಐಪಿಎಲ್ ಪಂದ್ಯಗಳು ಬಾಕಿ ಇವೆ. ಇಶಾನ್ ಇದೇ ರೀತಿ ಪ್ರದರ್ಶನ ಮುಂದುವರೆಸಿದರೆ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
