ಇಶಾನ್ ಕಿಶನ್, ಸೂರ್ಯಕುಮಾರ್ ಆರ್ಭಟಕ್ಕೆ ತತ್ತರಿಸಿದ ಆರ್ಸಿಬಿ; ಸತತ ಎರಡನೇ ಜಯದ ನಗೆ ಬೀರಿದ ಮುಂಬೈ ಇಂಡಿಯನ್ಸ್
Mumbai Indians v Royal Challengers Bangalore : 17ನೇ ಆವೃತ್ತಿಯ 25ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.

ಫಾಫ್ ಡು ಪ್ಲೆಸಿಸ್ (61), ರಜತ್ ಪಾಟೀದಾರ್ (50) ಮತ್ತು ದಿನೇಶ್ ಕಾರ್ತಿಕ್ (53*) ಅವರ ಹೋರಾಟಕ್ಕೂ ಜಗ್ಗದ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಮುಂಬೈ ಪರ ಇಶಾನ್ ಕಿಶನ್ (69), ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಆರ್ಭಟಕ್ಕೆ ಆರ್ಸಿಬಿ ನೀಡಿದ್ದ 197 ರನ್ ಕೋಟೆ ಧ್ವಂಸಗೊಂಡಿತು. ಆರ್ಸಿಬಿ 5ನೇ ಸೋಲಿಗೆ ಶರಣಾದರೆ, ಮುಂಬೈ ಸತತ ಎರಡನೇ ಜಯದ ನಗೆ ಬೀರಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಟಾಸ್ ಜಯಿಸಿ ಚೇಸಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೂವರು ಅರ್ಧಶತಕ ಸಿಡಿಸಿ ಸವಾಲಿನ ಮೊತ್ತ ಪೇರಿಸಲು ನೆರವಾದರು. ಇದರ ನಡುವೆಯೂ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸಿ 200ರ ಗಡಿ ದಾಟಬೇಕಿದ್ದ ಮೊತ್ತಕ್ಕೆ ಕಡಿವಾಣ ಹಾಕಿದರು. ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಕಲೆ ಹಾಕಿತು.
ಆರ್ಸಿಬಿ ನೀಡಿದ್ದ 197 ರನ್ಗಳ ಸವಾಲಿಗೆ ಪ್ರತಿ ಸವಾಲೆಸೆದ ಮುಂಬೈ ಇಂಡಿಯನ್ಸ್ ಖಡಕ್ ಬ್ಯಾಟಿಂಗ್ ನಡೆಸಿತು. ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಆಕ್ರಮಣಕಾರಿ ಆಟದ ಮುಂದೆ ರಾಯಲ್ ಚಾಲೆಂಜರ್ಸ್ ಥಂಡಾ ಹೊಡೆಯಿತು. ಬ್ಯಾಟರ್ಗಳು ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈಯುತ್ತಿದ್ದರೆ, ಬೌಲರ್ಗಳು ವಿಕೆಟ್ಗಾಗಿ ಪರದಾಟ ನಡೆಸಿದರು. ವಿಲ್ ಜಾಕ್ಸ್, ವಿಜಯ್ ಕುಮಾರ್ ವೈಶಾಕ್, ಆಕಾಶ್ ದೀಪ್ ಒಂದೊಂದು ವಿಕೆಟ್ ಪಡೆದರಾದರೂ ಮುಂಬೈ ಗೆಲುವಿಗೆ ಅಡ್ಡಿಪಡಿಸಲು ಸಾಧ್ಯವಾಗಲಿಲ್ಲ. 15.3 ಓವರ್ಗಳಲ್ಲೇ ಗೆಲುವಿನ ನಗೆ ಬೀರಿತು.
ಫಾರ್ಮ್ಗೆ ಮರಳಿದ ಡು ಪ್ಲೆಸಿಸ್, ಪಾಟೀದಾರ್
ಎಂಐ ವಿರುದ್ಧದ ಪಂದ್ಯಕ್ಕೂ ಮುನ್ನ ತೀವ್ರ ಕಳಪೆ ಫಾರ್ಮ್ನಲ್ಲಿದ್ದ ಡು ಪ್ಲೆಸಿಸ್ ಮತ್ತು ರಜತ್ ಪಾಟೀದಾರ್ ಕೊನೆಗೂ ಲಯಕ್ಕೆ ಮರಳಿದ್ದಾರೆ. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದರೆ, ಪ್ಲೆಸಿಸ್ 40 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 61 ರನ್ ಗಳಿಸಿದರು. ಕ್ಯಾಮರೂನ್ ಗ್ರೀನ್ ಜಾಗದಲ್ಲಿ ತಂಡವನ್ನು ಸೇರಿದ ವಿಲ್ ಜಾಕ್ಸ್ 2 ಬೌಂಡರಿ ಗಳಿಸಿ ಔಟಾದರು. ಪಾಟೀದಾರ್ 26 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಿತ 50 ರನ್ ಗಳಿಸಿದರು. ಆದರೆ ಗ್ಲೆನ್ ಮ್ಯಾಕ್ಸ್ವೆಲ್, ಮತ್ತೊಮ್ಮೆ ಡಕೌಟ್ ಆಗಿ ನಿರಾಸೆ ಮೂಡಿಸಿದರು.
ಕೊನೆಯಲ್ಲಿ ಡಿಕೆ ಅಬ್ಬರ
ಕೊನೆಯಲ್ಲಿ ಬುಮ್ರಾ 5 ವಿಕೆಟ್ ಉರುಳಿಸಿ ಆರ್ಸಿಬಿಗೆ ಕಡಿವಾಣ ಹಾಕಿದ್ದರ ನಡುವೆಯೂ ಅಬ್ಬರಿಸಿದ ದಿನೇಶ್ ಕಾರ್ತಿಕ್ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. 23 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದರು. 5 ಬೌಂಡರಿ, 4 ಸಿಕ್ಸರ್ಗಳು ಅವರ ಇನ್ನಿಂಗ್ಸ್ನಲ್ಲಿದ್ದವು. ಮಹಿಪಾಲ್ ಲೊಮ್ರೋರ್ 0, ಸೌರಭ್ ಚೌಹಾಣ್ 9, ವಿಜಯ್ ಕುಮಾರ್ 0, ಆಕಾಶ್ ದೀಪ್ 2 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ 4 ಓವರ್ಗಳಲ್ಲಿ 21 ರನ್ ನೀಡಿ 5 ವಿಕೆಟ್ ಪಡೆದರು. ಜೆರಾಲ್ಡ್ ಕೊಯೆಟ್ಜಿ, ಆಕಾಶ್ ಮಧ್ವಾಲ್, ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದರು.
ಚೇಸ್ ಮಾಡಿದ ಮುಂಬೈ ಪರ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ ಶತಕದ ಜೊತೆಯಾಟವಾಡಿದರು. ಈ ಸ್ಕೋರ್ನಲ್ಲೇ ಇಶಾನ್ ಕಿಶನ್ 69 ರನ್ ಚಚ್ಚಿದ್ದರು. 7 ಬೌಂಡರಿ, 5 ಸಿಕ್ಸರ್ ಅವರ ಇನ್ನಿಂಗ್ಸ್ನಲ್ಲಿದ್ದವು. ರೋಹಿತ್ 38 ರನ್ ಚಚ್ಚಿದರೆ, ಸೂರ್ಯಕುಮಾರ್ ಕೇವಲ 19 ಎಸೆತಗಳಲ್ಲೇ 5 ಬೌಂಡರಿ, 4 ಸಿಕ್ಸರ್ ಸಹಿತ 52 ರನ್ ಬಾರಿಸಿದರು. ಕೊನೆಯಲ್ಲಿ ಹಾರ್ದಿಕ್ 6 ಎಸೆತಗಳಲ್ಲಿ 21 ರನ್ (3 ಸಿಕ್ಸರ್) ಗಳಿಸಿದರೆ, 10 ಎಸೆತಗಳಲ್ಲಿ 16 ರನ್ ಗಳಿಸಿದ್ದಾರೆ.
