ಭಾರತ ವಿಶ್ವಕಪ್‌ ಗೆಲ್ಲದಿರುವುದು ಒಳ್ಳೇಯದಾಯಿತು, ಇಲ್ಲವಾದಲ್ಲಿ ಮೋದಿಯೇ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ರಾ? ರಾಜೀವ್ ಹೆಗಡೆ ಬರಹ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ವಿಶ್ವಕಪ್‌ ಗೆಲ್ಲದಿರುವುದು ಒಳ್ಳೇಯದಾಯಿತು, ಇಲ್ಲವಾದಲ್ಲಿ ಮೋದಿಯೇ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ರಾ? ರಾಜೀವ್ ಹೆಗಡೆ ಬರಹ

ಭಾರತ ವಿಶ್ವಕಪ್‌ ಗೆಲ್ಲದಿರುವುದು ಒಳ್ಳೇಯದಾಯಿತು, ಇಲ್ಲವಾದಲ್ಲಿ ಮೋದಿಯೇ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ರಾ? ರಾಜೀವ್ ಹೆಗಡೆ ಬರಹ

ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತ ಬಳಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದಿಷ್ಟು ವಿಷಯಗಳಿಗೆ ಪತ್ರಕರ್ತ ರಾಜೀವ್ ಹೆಗಡೆ ಪ್ರತಿಕ್ರಿಯಿಸಿದ್ದಾರೆ. ಅವರ ಬರಹ ಇಲ್ಲಿದೆ.

ವಿಶ್ವಕಪ್ ಫೈನಲ್ ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಯಕ ರೋಹಿಶ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಸಮಾಧಾನ ಮಾಡಿದ್ದಾರೆ.
ವಿಶ್ವಕಪ್ ಫೈನಲ್ ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಯಕ ರೋಹಿಶ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಸಮಾಧಾನ ಮಾಡಿದ್ದಾರೆ.

ವಿಶ್ವಕಪ್‌ ಫೈನಲ್‌ ಪಂದ್ಯದ ಬಗ್ಗೆ ಏನೂ ಬರೆಯಬಾರದು ಎಂದುಕೊಂಡಿದ್ದೆ. ಆದರೆ ಅರ್ಧಸತ್ಯಗಳು ತುಂಬಾ ರಾರಾಜಿಸುತ್ತಿರುವಾಗ ಒಂದಿಷ್ಟು ವಿಷಯ ಹೇಳಲೇಬೇಕು ಎನಿಸುತ್ತಿದೆ.

1. ಅಹ್ಮದಾಬಾದ್‌ ಪಿಚ್‌ ಫೈನಲ್‌ ಪಂದ್ಯಕ್ಕೆ ಯೋಗ್ಯವಾಗಿರಲಿಲ್ಲ. ಅದಕ್ಕಾಗಿಯೇ ಭಾರತ ಸೋತಿತು.

2. ಟಾಸ್‌ ಸೋತಿದ್ದರಿಂದ ಭಾರತಕ್ಕೆ ವಿಶ್ವಕಪ್‌ ಕೈ ತಪ್ಪಿತು.

3. ಭಾರತ ವಿಶ್ವಕಪ್‌ ಗೆಲ್ಲದಿರುವುದು ಒಳ್ಳೇಯದಾಯಿತು. ಇಲ್ಲವಾದಲ್ಲಿ ಮೋದಿಯೇ ಈ ಕ್ರೆಡಿಟ್‌ ತೆಗೆದುಕೊಂಡು ಮೆರವಣಿಗೆ ಮಾಡುತ್ತಿದ್ದರು.

ಅಹ್ಮದಾಬಾದ್‌ ಪಿಚ್‌: ಈ ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನ ವಿರುದ್ಧ ಇದೇ ಮೈದಾನದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಿಚ್‌ನಲ್ಲಿ ಆಡಿದ ಯಾವುದೇ ತಂಡಗಳು ಇಲ್ಲಿಯವರೆಗೆ ಪಿಚ್‌ ಬಗ್ಗೆ ಆಕ್ಷೇಪವನ್ನು ಎತ್ತಿಲ್ಲ. ಅಂದ್ಹಾಗೆ ಭಾರತವು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಮಾಡಿರುವ ಪಿಚ್‌ನಲ್ಲಿಯೇ ಆಸ್ಟ್ರೇಲಿಯಾ ತಂಡವು ಅದ್ಭುತವಾಗಿ ಆಟವಾಡಿ ಗೆದ್ದಿದೆ.

ನಿನ್ನೆಯ ದಿನವೂ ಭಾರತ ತಂಡದ್ದಾಗಿರಲಿಲ್ಲ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ನಾವು ಅತ್ಯುತ್ತಮರಾಗಿರಲಿಲ್ಲ. ಫೈನಲ್‌ಗೂ ಮುನ್ನ ಆಡಿದ್ದ ಹತ್ತು ಪಂದ್ಯಗಳಲ್ಲಿ ಬಂದಿದ್ದ ಶ್ರೇಷ್ಠ ಆಟ ನಿನ್ನೆ ಇರಲಿಲ್ಲ. ಕ್ರೀಡೆಯಲ್ಲಿ ಉತ್ತಮವಾಗಿ ಆ ದಿನ ಉತ್ತಮವಾಗಿ ಆಡಿದ ತಂಡ ಗೆಲ್ಲುತ್ತದೆ ಹಾಗೂ ಅದನ್ನು ನಿಜವಾದ ಕ್ರೀಡಾಭಿಮಾನಿಗಳು ಸ್ವಾಗತಿಸಬೇಕು. ಫೈನಲ್‌ ಪಂದ್ಯಗಳಿಗೆ ಜಯ್‌ ಶಾ ಇದ್ದಾಗ ಅಹ್ಮದಾಬಾದ್‌, ದಾಲ್ಮಿಯಾ ಇದ್ದಾಗ ಕೋಲ್ಕತ, ಪವಾರ್‌ ಇದ್ದಾಗ ಮುಂಬೈ ಪಿಚ್‌ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ ತವರು ಪ್ರೇಮ. ಆದರೆ ಪಿಚ್‌ ಬಗ್ಗೆ ರಾಜಕೀಯ ಬದಿಗಿಟ್ಟು ವಿಮರ್ಶೆ ಮಾಡಿ. ಹಾಗೆಯೇ ಉಭಯ ತಂಡಗಳ ಪ್ರದರ್ಶನ ಆಧರಿಸಿ ನಿಲುವು ತಾಳಿ. ಎರಡೂ ತಂಡಗಳು ಒಂದೇ ಪಿಚ್‌ನಲ್ಲಿ ಆಡುತ್ತವೆ ಎನ್ನುವುದನ್ನು ಮರೆಯಬೇಡಿ.

ಟಾಸ್‌ ಹಾಗೂ ಫಲಿತಾಂಶ: 2003ರಲ್ಲಿ ಭಾರತ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಲಿಲ್ಲ. ಇದೇ ಕಾರಣದಿಂದ ವಿಶ್ವಕಪ್‌ ಕೈ ತಪ್ಪಿತು ಎಂದು ಬಹುತೇಕರು ಹೇಳುತ್ತಾರೆ. ಏಕೆಂದರೆ ದೊಡ್ಡ ಪಂದ್ಯಗಳಲ್ಲಿ ಚೇಸಿಂಗ್‌ಗಿಂತ ದೊಡ್ಡ ಸ್ಕೋರ್‌ ಕೊಡುವುದು ಉತ್ತಮ ಎನ್ನುವುದು ಸಾಂಪ್ರದಾಯಿಕವಾಗಿ ಬಂದ ಮಾತು. ಗಂಗೂಲಿ ಉದಾಹರಣೆಯನ್ನು ಇರಿಸಿಕೊಂಡೇ ಸಾಕಷ್ಟು ಜನ ಮೊದಲು ಬ್ಯಾಟಿಂಗ್‌ ಮಾಡಬೇಕು ಎನ್ನುವುದನ್ನು ಬಯಸಿದ್ದರು.

ಹೀಗಾಗಿಯೇ ಕಮ್ಮಿನ್ಸ್‌ ಅವರು ಟಾಸ್‌ ಗೆದ್ದಾಗ ಮೈದಾನದಲ್ಲಿ ನೀರವ ಮೌನ ಏರ್ಪಟ್ಟಿತ್ತು. ಆದರೆ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದಾಗ ನೆರೆದ ಜನರೆಲ್ಲ ಖುಷಿಯಿಂದ ಸಂಭ್ರಮಿಸಿದ್ದರು. ಅದಲ್ಲದೇ ಟಾಸ್‌ ಸಂದರ್ಭದಲ್ಲಿ ಮಾತನಾಡಿದ್ದ ರೋಹಿತ್‌ ಶರ್ಮಾ ಕೂಡ, ಭಾರತವು ಟಾಸ್‌ ಗೆದ್ದಿದ್ದರೆ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡುತ್ತಿದ್ದೆ ಎಂದಿದ್ದರು. ಅಂದರೆ ಟಾಸ್‌ ಸೋಲು ಅಥವಾ ಗೆಲುವು ಯಾವುದೇ ಬದಲಾವಣೆಯನ್ನು ಮಾಡುತ್ತಿರಲಿಲ್ಲ. ಏನಾದರೂ ಭಾರತವೇ ಮೊದಲು ಬ್ಯಾಟಿಂಗ್‌ ಮಾಡುತ್ತಿತ್ತು. ʼಹೀಗಾದರೆ ಹಾಗೆ, ಹಾಗಾದರೆ ಹೀಗೆʼ ಎನ್ನುವ ರೀತಿ ಸುಮ್ಮನೇ ಸೊಪ್ಪಿನ ಭೂತಗಳಂತೆ ವರ್ತಿಸಬೇಡಿ.

ಮೋದಿ ಕ್ರೆಡಿಟ್‌: ಚಂದ್ರಯಾನ ಯಶಸ್ವಿಯಾದ ಬಳಿಕ ಪ್ರಧಾನಿ ಮೋದಿ ಇಸ್ರೋ ಕಚೇರಿ ಬಳಿ ಜನರತ್ತ ಕೈ ಬೀಸಿದರು ಹಾಗೂ ಇಸ್ರೋ ವಿಜ್ಞಾನಿಗಳ ಕ್ರೆಡಿಟ್‌ನ್ನು ತಾವೇ ತೆಗೆದುಕೊಂಡರು ಎಂದು ಕೆಲವರು ಕಲ್ಪಿಸಿಕೊಂಡು, ಅದನ್ನು ವಿಶ್ವಕಪ್‌ಗೆ ನಂಟು ಬೆಸೆಯುವ ಪ್ರಯತ್ನ ಮಾಡಿದ್ದಾರೆ. ʼಭಾರತ ವಿಶ್ವಕಪ್‌ ಗೆಲ್ಲದಿರುವುದು ಒಳ್ಳೆಯದಾಯಿತು, ಇಲ್ಲವಾದಲ್ಲಿ ಮೋದಿಯೇ ಆ ಕ್ರೆಡಿಟ್‌ ತೆಗೆದುಕೊಂಡು ಮೆರವಣಿಗೆ ಮಾಡುತ್ತಿದ್ದರು.

ಭಾರತದ ಮಾಧ್ಯಮಗಳು ಮೋದಿಯ ಹೆಸರಲ್ಲಿ ವಿಶ್ವಕಪ್‌ ಗೆಲುವಿನ ಶೀರ್ಷಿಕೆ ಕೊಡುತ್ತಿದ್ದವುʼ ಎಂದೆಲ್ಲ ಕೆಲವರು ಹಲುಬಿದ್ದಾರೆ. ಇವರ ವಿಕೃತ ಮನಸ್ಸುಗಳೇ ಅರ್ಥವಾಗುವುದಿಲ್ಲ. ನೀರಜ್‌ ಚೋಪ್ರಾ ಒಲಿಂಪಿಕ್‌ ಪದಕ ಗೆದ್ದಾಗ ಅಥವಾ ವಿಶ್ವ ಚಾಂಪಿಯನ್‌ ಆದಾಗ ಮೋದಿ ಮೆರವಣಿಗೆ ಮಾಡಿದ್ದೇನು ನನಗೆ ನೆನಪಿಲ್ಲ. ಅವರ ಜೊತೆ ನಿಂತುಕೊಂಡು ಒಂದಿಷ್ಟು ಫೋಟೊ ತೆಗೆಸಿಕೊಂಡು ಎಲ್ಲೆಡೆ ಹಾಕಿಕೊಂಡಿರಬಹುದು.

ಕಿತ್ತೋದ ಲೂಟಿಕೋರ ರಾಜಕಾರಣಿಗಳ ಜತೆ ಡಿನ್ನರ್‌ ಪಾರ್ಟಿಯ ಸೆಲ್ಫಿ ತೆಗೆಸಿಕೊಳ್ಳುವರೆಲ್ಲ ಇಂತಹ ಮಾತುಗಳನ್ನಾಡಿದಾಗ ಅಯ್ಯೋ ಎನಿಸುತ್ತದೆ. ಅಂದ್ಹಾಗೆ ಭಾರತ ತಂಡದ ಆಟಗಾರರು ವಿಶ್ವಕಪ್‌ ಗೆಲ್ಲದೇ ಕಣ್ಣೀರು ಹಾಕುತ್ತಿದ್ದಾಗ, ಡ್ರೆಸ್ಸಿಂಗ್‌ ರೂಮ್‌ಗೆ ಹೋಗಿ ಅವರನ್ನು ಸಮಾದಾನ ಪಡಿಸುವ ಕೆಲಸವನ್ನೂ ರಾಷ್ಟ್ರದ ಪ್ರಧಾನಿಯಾಗಿ ಮಾಡಿದ್ದಾರೆ. ಆದರೆ ಮೋದಿ ಕ್ರೆಡಿಟ್‌ ತೆಗೆದುಕೊಳ್ಳುವುದನ್ನು ನೋಡಲಾಗುವುದಿಲ್ಲ, ಅದಕ್ಕಾಗಿ ಭಾರತ ಗೆಲ್ಲದಿರುವುದು ಒಳ್ಳೇಯದಾಯಿತು ಎನ್ನುವ ಅತೃಪ್ತ ಆತ್ಮಗಳಿಗೆ ಚಿರಶಾಂತಿ ದೊರೆಯಲಿ ಎಂದು ಬೇಡಿಕೊಳ್ಳುತ್ತೇನೆ. ಬರಹ: ರಾಜೀವ್ ಹೆಗಡೆ

Whats_app_banner