ಲಕ್ನೋ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿ ಲಯಕ್ಕೆ ಮರಳಿದ ಡೆಲ್ಲಿ; ಕುಲ್ದೀಪ್-ಪ್ರೇಸರ್ ಆಟಕ್ಕೆ ಶರಣಾದ ರಾಹುಲ್ ಪಡೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಲಕ್ನೋ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿ ಲಯಕ್ಕೆ ಮರಳಿದ ಡೆಲ್ಲಿ; ಕುಲ್ದೀಪ್-ಪ್ರೇಸರ್ ಆಟಕ್ಕೆ ಶರಣಾದ ರಾಹುಲ್ ಪಡೆ

ಲಕ್ನೋ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿ ಲಯಕ್ಕೆ ಮರಳಿದ ಡೆಲ್ಲಿ; ಕುಲ್ದೀಪ್-ಪ್ರೇಸರ್ ಆಟಕ್ಕೆ ಶರಣಾದ ರಾಹುಲ್ ಪಡೆ

Lucknow Super Giants vs Delhi Capitals: 17ನೇ ಆವೃತ್ತಿಯ ಐಪಿಎಲ್​ನ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ದಾಖಲಿಸಿತು. ಇದು ಟೂರ್ನಿಯಲ್ಲಿ ಡೆಲ್ಲಿಗೆ ಸಿಕ್ಕ ಎರಡನೇ ಜಯ.

ಕುಲ್ದೀಪ್-ಪ್ರೇಸರ್ ಆಟಕ್ಕೆ ಶರಣಾದ ರಾಹುಲ್ ಪಡೆ
ಕುಲ್ದೀಪ್-ಪ್ರೇಸರ್ ಆಟಕ್ಕೆ ಶರಣಾದ ರಾಹುಲ್ ಪಡೆ

ಕುಲ್ದೀಪ್ ಯಾದವ್​ ಅವರ (20/3) ಖಡಕ್ ಬೌಲಿಂಗ್ ಮತ್ತು ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಅವರ (55) ಭರ್ಜರಿ ಬ್ಯಾಟಿಂಗ್​ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ 3 ಗೆಲುವು ದಾಖಲಿಸಿ ಅಮೋಘ ಲಯದಲ್ಲಿದ್ದ ಲಕ್ನೋ ಸೂಪರ್​ ಜೈಂಟ್ಸ್ ತಂಡವನ್ನು 6 ವಿಕೆಟ್​​ಗಳಿಂದ ಮಣಿಸಿತು. ಸತತ ಎರಡು ಪಂದ್ಯಗಳಿಂದ ಸೋತು ಕಂಗೆಟ್ಟಿದ್ದ ಡೆಲ್ಲಿ ಇದೀಗ ಗೆಲುವಿನೊಂದಿಗೆ ಲಯಕ್ಕೆ ಮರಳಿದೆ. ಅಲ್ಲದೆ, 6 ಪಂದ್ಯಗಳಲ್ಲಿ 2 ಜಯ ಸಾಧಿಸಿದ ಪಂತ್ ಪಡೆ, ಅಂಕಪಟ್ಟಿಯಲ್ಲಿ ಒಂದು ಸ್ಥಾನ ಏರಿ 9ನೇ ಸ್ಥಾನದಲ್ಲಿದೆ.

ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಅದರಂತೆ ಇನ್ನಿಂಗ್ಸ್​ ಆರಂಭಿಸಿದ ಎಲ್​ಎಸ್​ಜಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಆಯುಷ್ ಬದೋನಿ ಅಜೇಯ ಅರ್ಧಶತಕ (55) ಸಿಡಿಸಿ ಮಿಂಚಿದರು. ಪರಿಣಾಮ 20 ಓವರ್​​ಗಳಿಗೆ 7 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕಿತು. ಕುಲ್ದೀಪ್ ಯಾದವ್ 3 ವಿಕೆಟ್ ಪಡೆದು ಬೌಲಿಂಗ್​ನಲ್ಲಿ ಮಿಂಚಿದರು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಫ್ರೇಸರ್-ಮ್ಯಾಕ್‌ಗುರ್ಕ್ ಅರ್ಧಶತಕ ಸಿಡಿಸಿ ಗೆಲುವು ತಂದುಕೊಟ್ಟರು.

ಡೆಲ್ಲಿ ಬ್ಯಾಟಿಂಗ್

167 ರನ್ ಸವಾಲು ಬೆನ್ನಟ್ಟಿದ ಡೆಲ್ಲಿ, ಡೇವಿಡ್ ವಾರ್ನರ್​ ಅವರನ್ನು (8) ಬೇಗನೆ ಕಳೆದುಕೊಂಡಿತು. ಪೃಥ್ವಿ ಶಾ 32 ರನ್ ಬಾರಿಸಿ ನೆರವಾಗಿ ತಂಡಕ್ಕೆ ಚೇತರಿಕೆ ನೀಡಿದರು. ಪೃಥ್ವಿ ಔಟಾದ ಬಳಿಕ ಫ್ರೇಸರ್-ಮ್ಯಾಕ್‌ಗುರ್ಕ್ ವೇಗವಾಗಿ ರನ್ ಗಳಿಸಿ ತನ್ನ ಚೊಚ್ಚಲ ಐಪಿಎಲ್​​​ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದರು. ನಾಯಕ ರಿಷಭ್ ಪಂತ್ ಕೂಡ ಆತನಿಗೆ ಸಖತ್ ಸಾಥ್ ನೀಡಿದರು. ಈ ಜೋಡಿ, 46 ಎಸೆತಗಳಲ್ಲಿ 77 ರನ್​ಗಳ ಅಮೋಘ ಪಾಲುದಾರಿಕೆ ನೀಡಿತು. ಈ ಜೊತೆಯಾಟ ತಂಡದ ಗೆಲುವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವಹಿಸಿತು.

ಒಂದೆಡೆ ಫ್ರೇಸರ್ 35 ಎಸೆತಗಳಲ್ಲಿ 5 ಸಿಕ್ಸರ್​, 2 ಬೌಂಡರಿ ಸಹಿತ 55 ರನ್ ಚಚ್ಚಿದರೆ, ಮತ್ತೊಂದೆಡೆ ರಿಷಭ್ ಪಂತ್ 24 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ ಸಹಿತ 41 ರನ್ ಕಲೆ ಹಾಕಿದರು. ಇವರಿಬ್ಬರು ಔಟಾದರೂ ಡೆಲ್ಲಿ ತಂಡ ಮೇಲೆ ಹೊಡೆತ ಬಿದ್ದಿಲ್ಲ. ಅದಾಗಲೇ ಗೆಲುವಿನ ಸನಿಹಕ್ಕೆ ಬಂದು ನಿಂತಿತು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ 15, ಶೈ ಹೋಪ್ 11 ರನ್ ಗಳಿಸಿ ಅಜೇಯರಾಗಿ ಉಳಿದು ಗೆಲುವು ತಂದುಕೊಟ್ಟರು. 18.1 ಓವರ್​​ಗಳಲ್ಲಿ ಜಯದ ನಗೆ ಬೀರಿತು. ರವಿ ಬಿಷ್ಣೋಯ್​ 2 ವಿಕೆಟ್ ಪಡೆದರೂ ಉಳಿದವರಿಂದ ಸಾಥ್ ಸಿಗಕ ಕಾರಣ ಗೆಲುವು ಡೆಲ್ಲಿ ಗೆಲುವು ಕಸಿಯಲು ಸಾಧ್ಯವಾಗಲಿಲ್ಲ.

ಲಕ್ನೋ ಬ್ಯಾಟಿಂಗ್​

ಮೊದಲು ಬ್ಯಾಟಿಂಗ್​ ನಡೆಸಿದ ಲಕ್ನೋ ಬ್ಯಾಟರ್​ಗಳು ಅತ್ಯಂತ ಕೆಟ್ಟ ಪ್ರದರ್ಶನ ನೀಡಿದರು. ಆಯುಷ್ ಬದೋನಿ 35 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್​ ಸಹಿತ ಅಜೇಯ 55 ರನ್ ಗಳಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಕೆಎಲ್ ರಾಹುಲ್ 39, ಡಿಕಾಕ್ 19, ದೇವದತ್ ಪಡಿಕ್ಕಲ್ 3, ಮಾರ್ಕಸ್ ಸ್ಟೋಯ್ನಿಸ್ 8, ದೀಪಕ್ ಹೂಡಾ 10, ನಿಕೋಲಸ್ ಪೂರನ್ 0, ಕೃನಾಲ್ ಪಾಂಡ್ಯ 3 ರನ್ ಗಳಿಸಿ ನಿರಾಸೆ ಮೂಡಿಸಿದರು. ಅರ್ಷದ್ ಖಾನ್ ಅಜೇಯ 20 ರನ್ ಗಳಿಸಿ 8ನೇ ವಿಕೆಟ್​ಗೆ 73 ರನ್​​ಗಳ ಪಾಲುದಾರಿ ನೀಡಲು ನೆರವಾಗಿದರು. ಲಕ್ನೋ ಬ್ಯಾಟಿಂಗ್​ ಓಟಕ್ಕೆ ಕುಲ್ದೀಪ್ 3 ವಿಕೆಟ್ ಪಡೆದು ಬ್ರೇಕ್ ಹಾಕಿದರು.

Whats_app_banner