700 ವಿಕೆಟ್, 187 ಪಂದ್ಯ; ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ವಿಶ್ವಶ್ರೇಷ್ಠ ವೇಗಿ ಜೇಮ್ಸ್ ಆಂಡರ್ಸನ್
James Anderson: ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಪಡೆದಿರುವ ಇಂಗ್ಲೆಂಡ್ ತಂಡದ ವಿಶ್ವಶ್ರೇಷ್ಠ ವೇಗಿ ಜೇಮ್ಸ್ ಆಂಡರ್ಸನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.

ವಿಶ್ವ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾಗಿರುವ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ (James Anderson), ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ (International Cricket) ವಿದಾಯ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಪಡೆದಿರುವ ಆಂಡರ್ಸನ್ ಅವರು ತಮ್ಮ ಸುದೀರ್ಘ ಕ್ರಿಕೆಟ್ ಕರಿಯರ್ಗೆ ನಿವೃತ್ತಿ ಘೋಷಿಸಿದ್ದಾರೆ. 41ನೇ ವರ್ಷದ ಅನುಭವಿ ಆಟಗಾರ ಲಾರ್ಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಬೇಸಿಗೆಯಲ್ಲಿ ನಡೆಯುವ ಇಂಗ್ಲೆಂಡ್‌ನ ಮೊದಲ ಟೆಸ್ಟ್ ಪಂದ್ಯದ ನಂತರ ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದಾರೆ.
ಆಂಡರ್ಸನ್ ತನ್ನ ನಿವೃತ್ತಿಯನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಅಧಿಕೃತಗೊಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಒಂದು ಟಿಪ್ಪಣಿ ಹಾಕಿದ್ದಾರೆ. ಫೆಬ್ರವರಿ-ಮಾರ್ಚ್ನಲ್ಲಿ ಭಾರತದ ಪ್ರವಾಸ ಕೈಗೊಂಡಿದ್ದ ಅವಧಿಯಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ಗಳ ಸಾಧನೆ ಮಾಡಿದ್ದರು. ಇದರೊಂದಿಗೆ ಟೆಸ್ಟ್ನಲ್ಲಿ ಈ ಸಾಧನೆಗೈದ ವಿಶ್ವದ ಮೊದಲ ವೇಗಿ ಎನಿಸಿಕೊಂಡಿದ್ದರು. ಆದರೆ, ಸ್ಟುವರ್ಟ್ ಬ್ರಾಡ್ ನಿವೃತ್ತಿ ಘೋಷಿಸಿದಾಲೇ ಆಂಡರ್ಸನ್ ಕೂಡ ವಿದಾಯ ಹೇಳ್ತಾರೆ ಎಂದು ಹೇಳಲಾಗಿತ್ತು. ಕೊನೆಗೂ ನಿವೃತ್ತಿ ಹೇಳಿದ್ದಾರೆ.
ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಜೇಮ್ಸ್ ಆಂಡರ್ಸನ್
ಎಲ್ಲರಿಗೂ ನಮಸ್ಕಾರ. ಇದು ಲಾರ್ಡ್ಸ್‌ನಲ್ಲಿ ಬೇಸಿಗೆಯ ಮೊದಲ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಎಂದು ಹೇಳಲು ಕೇವಲ ಒಂದು ಟಿಪ್ಪಣಿ. ನಾನು ನನ್ನ ದೇಶವನ್ನು ನಂಬಲಾಗದ 20 ವರ್ಷಗಳ ಕಾಲ ಪ್ರತಿನಿಧಿಸಿದ್ದೇನೆ. ನಾನು ಬಾಲ್ಯದಿಂದಲೂ ನಾನು ಇಷ್ಟಪಟ್ಟ ಆಟವನ್ನು ಆಡುತ್ತಿದ್ದೇನೆ. ಇಂಗ್ಲೆಂಡ್ ತಂಡದಿಂದ ಹೊರನಡೆದರೆ ತುಂಬಾ ಕಳೆದುಕೊಳ್ಳಲಿದ್ದೇನೆ. ಆದರೆ, ನಿವೃತ್ತಿ ಹೇಳಲು ಇದೇ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಪಡೆದಂತೆಯೇ ಇತರರು ತಮ್ಮ ಕನಸುಗಳನ್ನು ನನಸಾಗಿಸಲು ಅವಕಾಶ ಮಾಡಿಕೊಡಿ ಎಂದು ಇಸಿಬಿಗೆ ಹೇಳಿದ್ದಾರೆ.
ಡೇನಿಯೆಲ್ಲಾ, ಲೋಲಾ, ರೂಬಿ ಮತ್ತು ನನ್ನ ಹೆತ್ತವರ ಪ್ರೀತಿ ಮತ್ತು ಬೆಂಬಲವಿಲ್ಲದೆ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಒಂದು ದೊಡ್ಡ ಧನ್ಯವಾದಗಳು. ಅಲ್ಲದೆ, ವೃತ್ತಿ ಜೀವನದಲ್ಲಿ ನನಗೆ ಬೆಂಬಲ ನೀಡಿದ ಆಟಗಾರರು ಮತ್ತು ತರಬೇತುದಾರರಿಗೆ ವಿಶೇಷ ಧನ್ಯವಾದಗಳು. ನಿವೃತ್ತಿಯ ನಂತರ ತನ್ನ ಮುಂದಿರುವ ಹೊಸ ಸವಾಲುಗಳಿಗೆ ನಾನು ಉತ್ಸುಕನಾಗಿದ್ದೇನೆ. ವರ್ಷಗಳಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
700 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್
ಆಂಡರ್ಸನ್ ಅವರು ಆಡಿದ 187 ಟೆಸ್ಟ್ ಪಂದ್ಯಗಳಲ್ಲಿ 700 ವಿಕೆಟ್ಗಳ ಸಾಧನೆ ಮಾಡಿದ್ದಾರೆ. 2003ರಲ್ಲಿ ಚೊಚ್ಚಲ ಟೆಸ್ಟ್ ಕ್ರಿಕೆಟ್ ಪಂದ್ಯವನ್ನಾಡಿದ ವೇಗಿ, ಸಚಿನ್ ತೆಂಡೂಲ್ಕರ್ ನಂತರ ಅತ್ಯಧಿಕ ಟೆಸ್ಟ್ ಆಡಿರುವ ದಾಖಲೆಗೆ ಒಳಗಾಗಿದ್ದಾರೆ. ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಉರುಳಿಸಿದ ವಿಶ್ವದ ಮೂರನೇ ಬೌಲರ್ ಆಗಿದ್ದಾರೆ. ಸ್ಪಿನ್ನರ್‌ಗಳಾದ ಮುತ್ತಯ್ಯ ಮುರಳೀಧರನ್ (800) ಮತ್ತು ಶೇನ್ ವಾರ್ನ್ (108) ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದಿದ್ದಾರೆ.
ಜುಲೈನಲ್ಲಿ 42ನೇ ವರ್ಷಕ್ಕೆ ಕಾಲಿಡುವ ಆಂಡರ್ಸನ್, ತಮ್ಮ ಕೊನೆಯ ಎಂಟು ಟೆಸ್ಟ್‌ಗಳಲ್ಲಿ 50.8 ಸರಾಸರಿಯಲ್ಲಿ ಕೇವಲ 15 ವಿಕೆಟ್‌ಗಳನ್ನು ಪಡೆದಿದ್ದಾರೆ. 21 ವರ್ಷಗಳ ಕ್ರಿಕೆಟ್ ಆಡಿರುವ ಆಂಡರ್ಸನ್ ಅವರು ಏಕದಿನ ಕ್ರಿಕೆಟ್ನಲ್ಲೂ 194 ಪಂದ್ಯಗಳನ್ನಾಡಿದ್ದಾರೆ. ಈ ಫಾರ್ಮೆಟ್ನಲ್ಲಿ 269 ವಿಕೆಟ್ ಉರುಳಿಸಿದ್ದಾರೆ. 2002ರಲ್ಲೇ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. 19 ಟಿ20ಐ ಪಂದ್ಯಗಳಲ್ಲಿ 18 ವಿಕೆಟ್ ಸಹ ಪಡೆದಿದ್ದಾರೆ. 2007ರಲ್ಲಿ ಟಿ20ಐಗೆ ಡೆಬ್ಯೂ ಮಾಡಿದ್ದರು.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
